Updated at Wed,24th May, 2017 9:31AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ಆರೋಗ್ಯವು ಉದರ-ವಾತ ಭಾದೆಯಿಂದ ಹದಗೆಡಲಿದೆ. ಧನಾಗಮನ ವಿದ್ದರೂ ನಾನಾ ರೀತಿಯಲ್ಲಿ ಖರ್ಚು-ವೆಚ್ಚಗಳು ಆಕಸ್ಮಿಕ ರೂಪದಲ್ಲಿರುತ್ತವೆ.ಸಾಂಸಾರಿಕ ಸಮಸ್ಯೆಗಳು ಆಗಾಗ ತಲೆನೋವು ಹೆಚ್ಚಿಸಲಿವೆ. ಹಿರಿಯರ ಕಾಲೋಚಿತ ವರ್ತನೆ-ಸಲಹೆ-ಸಹಕಾರಗಳಿಂದ ಜಂಜಾಟದಿಂದ ಪಾರಾಗುವಿರಿ. ವಿದ್ಯಾರ್ಥಿ ಗಳಿಗೆ ಉದಾಸೀನತೆ ಕಾಡಲಿದೆ. ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಅನಿರೀಕ್ಷಿತ ವೈವಾಹಿಕ ಸುಖ ಪ್ರಾಪ್ತಿಯಾದೀತು. ದೂರಾಲೋಚನೆಯಿರದೆ ನಿವೇಶನ ಖರೀದಿ ನಡೆಯಲಿದೆ. ಜಾಗ್ರತೆ ಇರಲಿ. ದೇವರ ಜಪಾನುಷ್ಠಾನದಿಂದ ಶಾಂತಿ, ನೆಮ್ಮದಿ ಲಭಿಸಲಿದೆ. ಶುಭ ವಾರಗಳು: ಗುರು, ಶನಿ, ಚಂದ್ರವಾರ.
ವೃಷಭ
ಕುಟುಂಬದ ಹಿರಿಯರಲ್ಲಿ ಒಮ್ಮತದ ಅಭಾವದಿಂದ ವಿರಸ ಒದಗಿಬಂದೀತು. ಶ್ರೀದೇವರ ದರ್ಶನ ಭಾಗ್ಯಕ್ಕಾಗಿ ಸಂಚಾರವಿದೆ. ಉದ್ಯೋಗ ಸ್ಥಳದಲ್ಲಿ ಅಬಕಾರಿ ವರ್ಗದವರ ಕಿರುಕುಳ ಅನುಭವಿಸಬೇಕಾದೀತು. ವೈವಾಹಿಕ ಸಂಬಂಧಗಳು ನಿಮ್ಮ ಮೇಲೆ ಹೊಂದಿಕೊಳ್ಳಲಿವೆ. ಅದ್ದೂರಿಯ ಸಮಾರಂಭಕ್ಕಾಗಿ ಧಾರಾಳ ಖರ್ಚು ಮಾಡಬೇಕಾದೀತು. ಬಿಟ್ಟುಹೋದ ಸ್ನೇಹತಂತುಗಳು ಪುನಃ ಜೋಡಣೆಯಾಗಲಿವೆ. ವಿವಾಹಿತರಿಗೆ ಸಂತಾನಭಾಗ್ಯದ ಸಾಧ್ಯತೆ ಇರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಸಂಪಾದನೆ ನೆಮ್ಮದಿ ತಂದರೂ ನಾನಾ ರೀತಿಯಲ್ಲಿ ಖರ್ಚುಗಳು ಇದ್ದೇ ಇರುತ್ತವೆ. ಶುಭ ವಾರ: ಬುಧ, ಗುರು, ಶನಿವಾರ.
ಮಿಥುನ
ವ್ಯಾಪಾರ, ವ್ಯವಹಾರ ಕ್ಷೇತ್ರಗಳ ಕೊಡು-ಕೊಳ್ಳುವಿಕೆಯಲ್ಲಿ ವಂಚನೆಗಳು ತೋರಿಬರುತ್ತವೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒತ್ತಡವಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ನಿಮಗೆ ಸಿಗಲಿದೆ. ಆರ್ಥಿಕವಾಗಿ ಸಮತೋಲ ನವನ್ನು ಕಾಯ್ದುಕೊಳ್ಳಬೇಕಾದೀತು. ಕೌಟುಂಬಿಕವಾಗಿ ಕೆಲವೊಂದು ಸಮಸ್ಯೆಗಳಿಂದ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುವಂತಾದೀತು. ಪ್ರಣಯಿಗಳ ಪ್ರೇಮ ಪ್ರಸಂಗದಲ್ಲಿ ಮುಂಜಾಗ್ರತೆ ಅಗತ್ಯವಿದೆ. ಜಾಗ್ರತೆ ವಹಿಸಿರಿ. ಆರೋಗ್ಯ ಸುಧಾರಿಸುತ್ತಾ ಹೋದರೂ ಕಾಳಜಿ ಅಗತ್ಯವಿದೆ. ಶುಭವಾರ: ಗುರು, ಶುಕ್ರ, ಶನಿವಾರ.
ಕಟಕ
ನಿರೀಕ್ಷಿತ ರೀತಿಯಲ್ಲಿ ವಯಸ್ಕರಿಗೆ ಕಂಕಣಬಲ ಪ್ರಾಪ್ತಿಯಾದೀತು.ವ್ಯಾಪಾರ, ವ್ಯವಹಾರಗಳಲ್ಲಿ ಸಾಕಷ್ಟು ಧನ ಸಂಪಾದನೆ ತೃಪ್ತಿ ತಂದೀತು. ಭೂ ಖರೀದಿ, ವಾಹನ ಖರೀದಿಯ ಚಿಂತನೆ ಫ‌ಲ ನೀಡಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಮಾಧಾನ ತಂದೀತು. ಅನಿರೀಕ್ಷಿತ ಶುಭ ಸಮಾಚಾರವಿದೆ. ರಾಜಕೀಯ ರಂಗದವರಿಗೆ ಸೂಕ್ತ ಸ್ಥಾನಮಾನ, ಗೌರವಗಳು ಪ್ರಾಪ್ತಿಯಾಗಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು.ನವದಂಪತಿಗಳಿಗೆ ಸಂತಾನದ ಸೂಚನೆ ತೋರಿಬಂದೀತು. ಶುಭ ವಾರ: ಮಂಗಳ, ಬುಧ, ಶನಿವಾರ.
ಸಿಂಹ
ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತಾ ಹೋದರೂ ನಾನಾ ರೀತಿಯ ವಿನಿಯೋಗಕ್ಕಾಗಿ ಹಣ ನೀರಿನಂತೆ ಖರ್ಚಾಗಲಿದೆ. ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆ ಅಲೆದಾಟ ಕಂಡುಬರಲಿದೆ. ಸಿಡುಕಿನಿಂದಾಗಿ ವೃತ್ತಿರಂಗದಲ್ಲಿ ಸಮಸ್ಯೆ ತಂದೀತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಂತರ ಪ್ರಯತ್ನಬಲದ ಅಗತ್ಯವಿದೆ. ಜಾಗರೂಕತೆ ಆವಶ್ಯವಿದೆ. ಸರಕಾರೀ ಕೆಲಸ ಕಾರ್ಯಗಳು ವಿಳಂಬಗತಿಯಿಂದ ನಡೆದು ಧನವ್ಯಯಕ್ಕೆ ಕಾರಣವಾಗಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕಂಕಣಬಲಕ್ಕೆ ಸಾಧಕವಾದೀತು. ನಿರುದ್ಯೋಗಿಗಳು ಉದ್ಯೋಗ ಗಿಟ್ಟಿಸುವರು.ಶುಭ ವಾರಗಳು: ಮಂಗಳ, ಗುರು, ಶುಕ್ರವಾರ.
ಕನ್ಯಾ
ವೈವಾಹಿಕ ಸುಖದಿಂದ ಮುನ್ನಡೆ ತಂದೀತು. ಹಲವು ರೀತಿಯ ಖರ್ಚುವೆಚ್ಚಗಳು ಆತಂಕ ತಂದಾವು. ಶುಭಮಂಗಲ ಕಾರ್ಯಗಳು ಮನಸ್ಸಿ ನಂತೆ ನಡೆದುಹೋಗಲಿವೆ. ಅವರಿವರ ಮಾತುಗಳು ಬೇಸರ ತಂದಾವು. ತಾತ್ಕಾಲಿಕ ಕರ್ಮ, ಶ್ರದ್ಧೆ , ಪ್ರಯತ್ನಬಲ ನಿಮಗೆ ಅತೀ ಅವಶ್ಯವೆನಿಸಲಿದೆ. ಸಂಚಾರ ಭಾಗ್ಯಕ್ಕಾಗಿ ವಾಹನ ಖರೀದಿ ತಂದೀತು. ಆರೋಗ್ಯದ ತಪಾಸಣೆ ಆಗಾಗ ಇರಲಿ.ಖರ್ಚುವೆಚ್ಚಗಳಿದ್ದರೂ ವಾರಾಂತ್ಯದಲ್ಲಿ ಹೆಚ್ಚಿನ ಅನುಕೂಲ ಸಂತಸ, ಸಮಾಧಾನ ತಂದೀತು.ವಿದ್ಯಾರ್ಥಿಗಳಿಗೆ ನಿರಾತಂಕವಾದ ವಾತಾವರಣ ನೆಮ್ಮದಿ ತಂದೀತು.ಶುಭ ವಾರ: ಶುಕ್ರ, ಚಂದ್ರ, ರವಿವಾರ.
ತುಲಾ
ಶನಿಯು ಲಾಭಸ್ಥಾನದಲ್ಲಿ ಇರುವುದರಿಂದ ವ್ಯಾಪಾರ, ವ್ಯವಹಾರ ಗಳಲ್ಲಿ ವಿವಿಧ ರೀತಿಯ ಧನ ಸಂಗ್ರಹವಾಗಲಿದೆ. ತೊಡಗಿಸಿಕೊಳ್ಳುವ ಕೆಲಸ ಕಾರ್ಯಗಳಲ್ಲಿ ಕುಟುಂಬಿಕರ ಸಹಕಾರ, ನೆಮ್ಮದಿ ತಂದೀತು. ಸ್ವಂತ ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ವೃತ್ತಿರಂಗದ ಹಿತಶತ್ರುಗಳ ಬಗ್ಗೆ ಸಾಕಷ್ಟು ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸಿನ ಮುನ್ನಡೆ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಸ್ಥಿರಾಸ್ತಿ ಲಭ್ಯವಾಗುವ ಸಾಧ್ಯತೆ ತಂದೀತು. ಶ್ರೀದೇವರ ದರ್ಶನ ಭಾಗ್ಯದ ಯೋಗವಿದೆ. ಕೋಟು- ಕಚೇರಿ ವ್ಯವಹಾರಗಳು ಮುನ್ನಡೆ ಸಾಧಿಸುತ್ತವೆ. ಶುಭ ವಾರಗಳು: ಗುರು, ಶನಿ, ಚಂದ್ರವಾರ.
ವೃಶ್ಚಿಕ
ಪಿತ್ರಾರ್ಜಿತ ಭೂಮಿಯಲ್ಲಿ ಸೂಕ್ತ ಫ‌ಲವಿದೆ. ಆರ್ಥಿಕ ಕ್ಷೇತ್ರದಲ್ಲಿ ಉನ್ನತಿ ಇದ್ದರೂ ಹೂಡಿಕೆಯಲ್ಲಿ ಎಚ್ಚರವಿರಲಿ. ಅನಿರೀಕ್ಷಿತ ಪ್ರವಾಸ ಯೋಗ ವಿದೆ. ಕೋರ್ಟು-ಕಚೇರಿಗಳ ಸಮಸ್ಯೆಗಳು ನಿವಾರಣೆಯಾಗಲಿವೆ. ಈ ವಾರಫ‌ಲದಾಯಕವಾಗುವ ಕಾರಣ ಸಮತಾಭಾವದಿಂದ ಮುಂದುವರಿಯಬೇಕಾದೀತು. ಆಕಸ್ಮಿಕ ಧನಾಗಮನ, ಕಮಿಶನ್‌, ಜೀವವಿಮೆ ಮುಂತಾದ ಆರ್ಥಿಕ ಮೂಲಗಳು ತೆರೆದು ಕೊಳ್ಳುವುವು. ವೈವಾಹಿಕ ಸಂಬಂಧಿತ ಕೆಲಸಕಾರ್ಯಗಳು ಸಫ‌ಲವಾಗಲಿವೆ. ಗುರುವಿನ ಅನುಗ್ರಹ ಸಕಲ ಕಾರ್ಯಗಳಿಗೆ ರಕ್ಷಣೆಯೊಡ್ಡಲಿದೆ. ಶುಭ ವಾರಗಳು: ಕುಜ, ಬುಧ, ರವಿವಾರ.
ಧನು
ಪ್ರವಾಸಯೋಗ ಸಂತಸ ತರಲಿದೆ. ಉದ್ಯೋಗಿಗಳಿಗೆ ಉದ್ಯೋಗದ ಬದಲಾವಣೆ ಅನಿವಾರ್ಯವಾದೀತು. ಅವಿವಾಹಿತರಿಗೆ ಅನಿರೀಕ್ಷಿತ ವಿವಾಹ ಸಿದ್ಧಿಯ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ರಾಜಕೀಯ ವರ್ಗದಲ್ಲಿ ಬಿರುಕು ಕಾಣಿಸಬಹುದು. ಹಲವು ಬಗೆಯ ಧನಹಾನಿ, ಮಾನಹಾನಿ, ಸ್ಥಾನಭ್ರಂಶಾದಿಗಳು ಜರಗಬಹುದು. ಹಿರಿಯರೊಂದಿಗೆ ದುಃಖ, ಕಷ್ಟ ಹಂಚಿಕೊಂಡು ಹಗುರಾಗಿರಿ. ವಾರಾಂತ್ಯದಲ್ಲಿ ಸಿಹಿ ಸುದ್ದಿಯ ಶ್ರವಣ ಭಾಗ್ಯವಿರುತ್ತದೆ. ವೃತ್ತಿನಿರತರಿಗೆ ಮುಂಬಡ್ತಿಯ ಅವಕಾಶ ತಂದೀತು. ಶುಭ ವಾರ: ಶನಿ, ಕುಜ, ಚಂದ್ರವಾರ.
ಮಕರ
ಬ್ಯಾಂಕು ವ್ಯವಹಾರಗಳ ಪ್ರಯತ್ನ ಬಲ ನೀಡಲಿವೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕಾಗಿ ವಿದೇಶ ಯೋಗ ಬಂದೀತು. ಸರಕಾರಿ ಸಂಬಂಧಿ ವ್ಯಾಜ್ಯಗಳು ಇತ್ಯರ್ಥಗೊಳ್ಳಲಿವೆ. ಗೃಹಿಣಿಯರ ಮನೋಭಿಲಾಷೆಯಂತೆ ನೆರವೇರಲಿದೆ. ಧಾರ್ಮಿಕವಾಗಿ ಗೃಹದಲ್ಲಿ ದೇವತಾ ಕಾರ್ಯಗಳು ನಡೆದಾವು. ರಾಜಕೀಯ ವರ್ಗದವರು ಮುಜುಗರವನ್ನು ಅನುಭವಿಸುವಂತಾದೀತು. ನಿರುದ್ಯೋಗಿ ಗಳಿಗೆ ಹಲವಾರು ಅವಕಾಶಗಳು ಒದಗಿಬರುತ್ತವೆ. ಆಯ್ಕೆ ನಿಮ್ಮದಾದೀತು. ಶುಭ ವಾರಗಳು: ಬುಧ, ಶುಕ್ರ, ಶನಿವಾರ.
ಕುಂಭ
ಆಪ್ತೇಷ್ಟರ ವಿಯೋಗದಿಂದ ಬೇಸರ ತಂದೀತು. ಅವಿವಾಹಿತರಿಗೆ ವೈವಾಹಿಕ ಸಂಬಂಧದ ಸಮಸ್ಯೆಗಳು ತೋರಿಬರಲಿವೆ. ರಾಜಕೀಯ ಕ್ಷೇತ್ರದಲ್ಲಿ ಸ್ಥಾನಚ್ಯುತಿಯು ಸ್ವಾಭಿಮಾನದ ಪ್ರಶ್ನೆಯಾಗಲಿದೆ. ನಾನಾ ರೀತಿಯಲ್ಲಿ ಧನಹಾನಿ ಯಾಗಲಿದೆ. ಅವಿಭಕ್ತ ಕುಟುಂಬದಲ್ಲಿ ಒಡಕು ಬಯಲಾದೀತು. ಪತ್ನಿಯ ಸಹಕಾರದಿಂದ ಕಾರ್ಯಾನುಕೂಲವಾಗಲಿದೆ. ಯಾವುದೇ ರೀತಿಯಲ್ಲಿ ಎದುರಾಗುವ ದುಃಖ-ಕ್ಲೇಶಗಳನ್ನು ಧೈರ್ಯದಿಂದ ಎದುರಿಸುವುದರಲ್ಲಿ ನಿಮ್ಮ ತಾಳ್ಮೆ ಅಡಗಿರುತ್ತದೆ. ಅನಿರೀಕ್ಷಿತ ಸಂಚಾರವಿದೆ. ಶುಭ ವಾರ: ಮಂಗಳ, ಗುರು, ರವಿವಾರ.
ಮೀನ
ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ಗೃಹನಿರ್ಮಾಣ ಯಾ ದೇವತಾ ಗುಡಿ ನಿರ್ಮಾಣ ಕಾರ್ಯಗಳಿಗೆ ಧನವ್ಯಯ ತಂದೀತು. ಸ್ನೇಹಿತರ ಸಹವಾಸದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಹಾಗೇ ಕೊಡುಕೊಳ್ಳುವುದರಲ್ಲಿ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ತುಸು ನೆಮ್ಮದಿ ಇರುತ್ತದೆ. ಅನಿರೀಕ್ಷಿತ ರೀತಿಯಲ್ಲಿ ಧನಾಗಮನದಿಂದ ಖರ್ಚುಭಾದೆ ಪರಿಹಾರವಾದೀತು. ಕಿರು ಸಂಚಾರದಿಂದ ದೇಹಾಯಾಸ ತಂದೀತು. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯಿದೆ. ವಾರಾಂತ್ಯದಲ್ಲಿ ಶುಭವಾರ್ತೆ ಪ್ರಕಟವಾದೀತು. ಶುಭ ವಾರ: ಚಂದ್ರ, ಗುರು, ಶುಕ್ರವಾರ.
Back to Top