ಯಕ್ಷಗಾನ ಕಲಾರಂಗದ ತೆಂಕುತಿಟ್ಟು ಯಕ್ಷಗಾನ: ಮಹಾಪ್ರಸ್ಥಾನದ ಸುತ್ತಮುತ್ತ


Team Udayavani, Jul 21, 2017, 3:29 PM IST

21-KALA-7.gif

ಧರ್ಮರಾಜಕಾರಣ, ಅರ್ಥರಾಜಕಾರಣದ ಕಾರಣಕ್ಕೆ ಹಿಂಸೆ ವಿಜೃಂಭಿಸುತ್ತಾ ಇಡೀ ಪ್ರಪಂಚವೇ ಇನ್ನೊಂದು ಮಹಾಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಈ ಹೊತ್ತಿನಲ್ಲಿ ಯುದ್ದೋತ್ತರ ದುರಂತದ ಭೀಕರ ಚಿತ್ರವನ್ನು ಕಟ್ಟಿಕೊಡುವ ಮಹಾಪ್ರಸ್ಥಾನ ಎಂಬ ಯಕ್ಷಗಾನ ಪ್ರಸಂಗವನ್ನು ಯಕ್ಷಗಾನ ಕಲಾರಂಗ ಉಡುಪಿ, ಇವರು ಉಡುಪಿಯ ಪಿ.ಪಿ.ಸಿ.ಯಲ್ಲಿ ಇತ್ತೀಚೆಗೆ ಆಯೋಜಿಸಿದ್ದು ಅತ್ಯಂತ ಪ್ರಸ್ತುತವಾಗಿತ್ತು. ಯುದ್ಧದ ಪರಿಣಾಮ ಸೋತವರಿಗಷ್ಟೇ ಅಲ್ಲ; ಗೆದ್ದವರ ಬದುಕಿನಲ್ಲೂ ಎಂತಹ ಕರಾಳ ಛಾಯೆ ಬೀರಬಲ್ಲುದು ಎಂಬ ಕಟು ಸತ್ಯವನ್ನು ಇದು ಎಳೆ ಎಳೆಯಾಗಿ ಬಿಡಿಸಿಟ್ಟಿತ್ತು. 

ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಜುಲೈ 2ರಂದು ನಡೆದ ಈ ಆಟ ಆರು ಗಂಟೆಗಳ ಕಾಲ ತುಂಬಿದ ಸಭಾಂಗಣವನ್ನು ಹಿಡಿದಿಟ್ಟಿತ್ತು. ಸಿದ್ಧಪಠ್ಯವಲ್ಲದ ಈ ಪ್ರಸಂಗವನ್ನು ಕಟ್ಟುವುದಕ್ಕೆ ಸಂಯೋಜಕರು ಬೇರೆ ಬೇರೆ ಪ್ರಸಂಗಗಳ ತುಣುಕುಗಳನ್ನು ಆಯ್ದು, ಅಗತ್ಯ ಕಂಡಲ್ಲಿ ಹೊಸ ಪದ್ಯ ರಚಿಸಿ ಒಂದು ಕತೆಯ ಸೂತ್ರವನ್ನು ಹೆಣೆದಿದ್ದಾರೆ. ಯಕ್ಷಗಾನ ಪ್ರಸಂಗಗಳಿಂದಾಗಿ ಮಹಾಭಾರತ ಯುದ್ಧ ಪೂರ್ವದ ಕತೆಗಳು ಜನಜನಿತವಾಗಿದ್ದು, ಅವು ನಮ್ಮ ವ್ಯಕ್ತಿತ್ವದ ಭಾಗ ವೇನೋ ಎಂಬಂತಾಗಿವೆ. ಆದರೆ ಯುದ್ಧಾನಂತರ ಏನಾಯ್ತು ಎನ್ನು ವುದು ಸಣ್ಣಪುಟ್ಟ ಕತೆಗಳಾಗಿ ನಮ್ಮನ್ನು ತಲುಪಿವೆಯಷ್ಟೆ. ಹಾಗಾಗಿ ಈ ಪ್ರಸಂಗದ ಕುರಿತು ಪ್ರೇಕ್ಷಕರಲ್ಲಿ ಒಂದು ಸಹಜ ಕುತೂಹಲವೂ ಇತ್ತು.

ಯುದ್ಧವನ್ನೇ ಕನಸುತ್ತಾ ಬೆಳೆದ ಪಾಂಡವರು ಯುದ್ಧ ಮುಗಿಯುವ ಕಾಲಕ್ಕೆ ತಮಗೆ ದಕ್ಕಿದ ವಿಜಯದ ಶವಯಾತ್ರೆಗೆ ಹೊರಟರೋ ಎಂಬಂತಿವೆ ಯುದ್ದೋತ್ತರ ಘಟನಾವಳಿಗಳು. ರೌದ್ರಾವತಾರ ತಾಳಿದ ಅಶ್ವತ್ಥಾಮನಿಂದಾಗಿ ಉಪಪಾಂಡವರು-ಮನೆ ಮಕ್ಕಳ ಕಗ್ಗೊಲೆಯಾಗಿರುತ್ತದೆ. ಮನೆಯ ಹಿರಿಯರು ಪಾಂಡವರ ಸಿಂಹಾಸನಾರೋಹಣಕ್ಕೂ ಕಾಯದೆ ವೈರಾಗ್ಯ ಹೊಂದಿ ಕಾಡು ಸೇರುತ್ತಾರೆ. ತಮ್ಮವರಿಗೆ ಅಂತ್ಯಸಂಸ್ಕಾರ ಮಾಡಲೋಸುಗ ಯುದ್ಧಭೂಮಿ ಪ್ರವೇಶಿಸಿದ ವೀರ ಪಾಂಡವರು ಮಡುಗಟ್ಟಿದ ನೆತ್ತರ ನಡುವೆ ಬಿದ್ದಿರುವ ರಾಶಿ ರಾಶಿ ಹೆಣಗಳನ್ನು ಕಂಡು ಬೆಚ್ಚಿ ಬೀಳುತ್ತಾರೆ. ಯುದ್ದೋತ್ಸಾಹದಲ್ಲಿ ಎದುರಾದವರೆಲ್ಲ ವೈರಿಗಳಂತೆ ಕಂಡರೆ, ಆ ಕಾವು ಮುಗಿಯುತ್ತಲೇ ಎಲ್ಲರೂ ತಮ್ಮ ಬಂಧು ಬಾಂಧವರು, ಸ್ನೇಹಿತರು ಎಂದು ಅರಿವಾಗುವ ಈ ದೃಶ್ಯವಂತೂ ಯುದ್ಧದ ಬೀಭತ್ಸ ಮುಖವನ್ನು ಕಾಣಿಸುವ ಒಂದು ಪ್ರತಿಮೆಯಾಗಿ ಕಂಡಿತು. “”ಯುದ್ಧದ ಭೀಕರತೆಯನ್ನು ಕಂಡು ದ್ವಾಪರ ಪುರುಷ ನೂರು ವರ್ಷ ಮುಂಚಿತವಾಗಿ ನಿರ್ಗಮಿಸಿದ” ಎಂಬ ಮಾತೂ ಈ ಪ್ರಸಂಗದಲ್ಲಿ ಬರುತ್ತದೆ. ಹೀಗೆ ಮೊದಲಲ್ಲೇ ಆರಂಭವಾಗುವ ವಿಷಾದಯೋಗ ಪ್ರಸಂಗದುದ್ದಕ್ಕೂ ಪ್ರೇಕ್ಷಕರನ್ನು ತಣ್ಣಗೆ ಇರಿಯುತ್ತಿರುವಾಗಲೇ ಇನ್ನೊಂದು ಕಡೆಯಿಂದ ದಾರ್ಶನಿಕತೆಯ ಅನಾವರಣವೂ ಆಗುತ್ತಿರು ತ್ತದೆ. ಮನುಷ್ಯ ಸಹಜವಾದ ಮುಪ್ಪು ಮತ್ತು ಸಾವು ಅನಿವಾರ್ಯ ಹೌದೇ ಆದರೂ ಅದನ್ನು ಒಪ್ಪಿಕೊಳ್ಳುವುದು ಅಷ್ಟು ಸರಳವೇ? 

ದೇವಾದಿದೇವ ಎಂದು ಕರೆಸಿಕೊಳ್ಳುವ ಶ್ರೀಕೃಷ್ಣನೂ ಅಂತ್ಯಕಾಲ ದಲ್ಲಿ ಒಂದು ಹನಿ ನೀರಿಗಾಗಿ ಪರಿತಪಿಸುವಂತಾದದ್ದು ನಮ್ಮನ್ನೊಮ್ಮೆ ಬೆಚ್ಚಿಬೀಳಿಸುತ್ತದೆ. ಮೂರು ಲೋಕದ ಗಂಡ, ರಣಪ್ರಚಂಡ ಅರ್ಜುನ ನಿಗೆ ಗಾಂಡೀವ ಹಿಡಿದೆತ್ತಲು ಅಸಾಧ್ಯವಾಗುವಷ್ಟು ನಿಶ್ಶಕ್ತಿ ಆವರಿಸು ವುದು ಪ್ರತಿಯೊಬ್ಬ ವ್ಯಕ್ತಿಯೂ ಎದುರಿಸಲೇಬೇಕಾದ ಮುಪ್ಪು ಮತ್ತು ಸಾವಿನ ಎದುರಿನ ಹೋರಾಟಕ್ಕೆ ರೂಪಕದಂತಿತ್ತು. ಎಲ್ಲ ವ್ಯಾಮೋಹ ಗಳಿಂದ ವಿಮುಖನಾಗುತ್ತಾ ನಿರ್ಲಿಪ್ತ ಚಿತ್ತದಿಂದ ಗಮ್ಯದ ಕಡೆಗೆ ನಡೆದು ಬಿಡುವ ಯುಧಿಷ್ಠಿರನ ನಡೆ, ಚಿತ್ತಸ್ಥೈರ್ಯ, ಅರ್ಥಗರ್ಭಿತ ಮಾತು ನೋಡುಗರಿಗೆ ಒಂದು ಹೊಸದರ್ಶನವನ್ನು ಕಾಣಿಸಿತು.

ಹೀಗೆ ಬಹುವಾದ ರಸವೈವಿಧ್ಯವಿಲ್ಲದೆ, ಜನರಂಜನೆಗೆ ಅಗತ್ಯವೆನಿಸುವ ನಾಟಕೀಯತೆಗೆ ಹೆಚ್ಚು ತಾವಿಲ್ಲದೆ, ಒಂದು ರೀತಿಯ ಏಕತಾನತೆಯಿಂದ ಸಾಗುವ ಈ ಆಖ್ಯಾನ ಒಂದು ಯಶಸ್ವೀ ಪ್ರಯೋಗವಾಗಿ ಮಾರ್ಪಡಲು ಮುಖ್ಯ ಕಾರಣ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು. 

ಯಕ್ಷಗಾನದಂತಹ ಜನಪದ- ಶಾಸ್ತ್ರೀಯ ಕಲೆಯಲ್ಲಿ ಪೂರ್ವರಂಗದೊಂದಿಗೆ ಪ್ರೇಕ್ಷಕರನ್ನು ಹಂತಹಂತವಾಗಿ ಸಿದ್ಧಗೊಳಿಸುತ್ತಾ ಮುಖ್ಯ ವಿಚಾರಕ್ಕೆ ಬರುವುದು ಒಂದು ಪ್ರಮುಖ ತಂತ್ರ. ಆದರೆ ಇಲ್ಲಿ ಅಶ್ವತ್ಥಾಮನು ಉಪಪಾಂಡವರ ಶಿರಗಳನ್ನು ತರುವ ಬೀಭತ್ಸ ದೃಶ್ಯದಿಂದ ಪ್ರಸಂಗ ಪ್ರಾರಂಭವಾಗುತ್ತದೆ. ರೌದ್ರ ರಸ ಮತ್ತು ನಾಟಕೀಯ ಗುಣದಿಂದ ಈ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬಂದದ್ದು ಸತ್ಯವಾದರೂ, ಮತ್ತೆ ಅಶ್ವತ್ಥಾಮರಿಂದ ಘಾಸಿಗೊಂಡ ಗರ್ಭದ ಕುರಿತು ರೋದಿಸುವ ಉತ್ತರೆ, ಅವಳ ನೆರವಿಗೆ ಬರುವ ಕೃಷ್ಣ – ಎಲ್ಲ ಕ್ಷಣಕಾಲ ಬಂದು ಮಾಯವಾಗದಂತಾಗುತ್ತದೆ. ಹಾಗಾಗಿ ಈ ಸಂದರ್ಭ ಮುಂದಿನ ಭಾಗಕ್ಕೆ ಸಮರ್ಪಕವಾಗಿ ಹೊಂದಿಕೆಯಾಗಲಿಲ್ಲ. ಇದರ ಬದಲು ಕೃಷ್ಣನ ಒಡ್ಡೋಲಗದಿಂದಲೇ ಪ್ರಸಂಗ ಪ್ರಾರಂಭವಾಗಿದ್ದರೆ, ಯುದ್ಧ ಮುಕ್ತಾಯವಾಗುತ್ತಿರುವ ಸಂದರ್ಭದ ವಿವರಣೆ ಕೃಷ್ಣನಿಂದ ದೊರೆತು ಇಡೀ ಪ್ರಸಂಗಕ್ಕೆ ಅದೊಂದು ಸೂಕ್ತ ಪೀಠಿಕೆಯಾಗಿರುತ್ತಿತ್ತು. 

ಅ    ನಂತರದಲ್ಲಿ ಒಂದು ಅಪೂರ್ವವಾದ ದ್ರೌಪದೀ ಸಹಿತ ಪಾಂಡವರ ಒಡ್ಡೋಲಗ. ಒಂದೇ ತರಹದ ಐದು ಹಸಿರು ರಾಜವೇಷಗಳು ರಂಗಕ್ಕೆ ಭವ್ಯತೆಯನ್ನು ತಂದುಕೊಟ್ಟವು. ಇಲ್ಲಿಯ ವಿಶೇಷವೇನೆಂದರೆ, ಒಡ್ಡೋಲಗದಲ್ಲಿ ಒಬ್ಬಳು ಸ್ತ್ರೀ ಕಾಣಿಸಿಕೊಂಡದ್ದು ಮತ್ತು ಆಕೆಗೆ ತನ್ನ ಅಭಿಪ್ರಾಯ ಮಂಡಿಸುವ ಅವಕಾಶ ದೊರಕಿದ್ದು. ದ್ರೌಪದಿ, ಪಾಂಡವರ ಸಂಗಾತಿ, ಸಹಾನುವರ್ತಿ -ಮಹಾಭಾರತದ ಒಂದು ಪ್ರಮುಖ ಪಾತ್ರ. ಈ ಪಾತ್ರಕ್ಕೆ ಇಂತಹದ್ದೊಂದು ಪೋಷಣೆ ಸಿಕ್ಕಿದ್ದು ನಿಜಕ್ಕೂ ಅಭಿನಂದನಾರ್ಹ. ಆದರೆ ಇದೇ ಪಾತ್ರ ಪೋಷಣೆ ಕೊನೆಯ ತನಕ ಉಳಿಯಲಿಲ್ಲವೆಂಬುದೇ ಬೇಸರದ ಸಂಗತಿ. ಮಹಾಪ್ರಸ್ಥಾನದ ತನ್ನ ನಿರ್ಧಾರವನ್ನು ಯುಧಿಷ್ಠಿರ ಆಕೆಯೊಂದಿಗೆ ಸಮಾಲೋಚಿಸಬೇಕಿತ್ತು; ಆದರೆ ಇಲ್ಲಿ ದ್ರೌಪದಿಯೇ ವಿಷಯ ತಿಳಿದು ತನ್ನನ್ನೂ ಕರೆದೊಯ್ಯುವಂತೆ ಕೇಳಿಕೊಳ್ಳಬೇಕಾಯ್ತು. ಅನಂತರ ಪಾಂಡವರು ಮತ್ತು ಧೃತರಾಷ್ಟ್ರ- ಗಾಂಧಾರಿಯರ ಮುಖಾಮುಖೀ. ನೂರು ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರ ಸಂಕಟ ಪ್ರೇಕ್ಷಕರನ್ನೂ ತಟ್ಟಿತು. ಕೇವಲ ಒಂದೇ ಪದ್ಯದಲ್ಲಿ ಗಾಂಧಾರಿ ಪಾತ್ರಧಾರಿ ಆಕೆಯ ನೋವು, ಸಿಟ್ಟು, ಹತಾಶೆಯನ್ನು ಮನಮುಟ್ಟುವಂತೆ ಪ್ರಕಟಿಸಿದರು. ಧರ್ಮಧ್ದೋ ರಾಷ್ಟ್ರಧ್ದೋ ನೆಪದಲ್ಲಿ ಒಂದು ಜೀವ ತೆಗೆಯುವ ಹಕ್ಕು ಯಾರಿಗಿದೆ? -ಹೀಗೆಂದು ದೇವರನ್ನೇ ಶಪಿಸುವ ಶಕ್ತಿ ಮತ್ತು ದಿಟ್ಟತನ ತಾಯಿಗೆ ಮಾತ್ರ ಇರಲು ಸಾಧ್ಯ ಎಂಬುದನ್ನು ಗಾಂಧಾರಿ ನಿರೂಪಿಸಿದಳು. ತೀವ್ರವಾದ ಭಾವಗಳ ಭಾರದಿಂದ ತುಸು ಬಿಡುಗಡೆಗೊಳಿಸಲೆಂದೋ ಏನೋ, ಯಕ್ಷಗಾನದಲ್ಲಿ ಧೃತರಾಷ್ಟ್ರನ ಪಾತ್ರವನ್ನು ತುಸು ಹಾಸ್ಯರಸಕ್ಕಾಗಿ ಉಪಯೋಗಿಸುವ ಚಾಲ್ತಿಯಿದೆ. ಈ ಸಂದರ್ಭದ ಗಾಂಭೀರ್ಯ ಮತ್ತು ಧೃತರಾಷ್ಟ್ರನ ಒಟ್ಟು ವ್ಯಕ್ತಿತ್ವವನ್ನು ಪರಿಕಿಸಿದಾಗ ಆತನನ್ನು ತನ್ನೆಲ್ಲ ಅಸಹಾಯಕತೆ, ಹತಾಶೆ, ಸಂಕಟ ವ್ಯಕ್ತಪಡಿಸುವ ತಂದೆಯಾಗಿ ಚಿತ್ರಿಸುವುದೇ ಸೂಕ್ತವೆನಿಸುತ್ತಿದೆ. ಈ ಸಂದರ್ಭದಲ್ಲಿಯೇ ಕುಂತಿಯು ಧೃತರಾಷ್ಟ್ರಾದಿಗಳಿಗೆ ವಾನಪ್ರಸ್ಥಾಶ್ರಮಕ್ಕಾಗಿ ಜತೆಯಾಗುತ್ತಾಳೆ. ಏಕಾಂಗಿಯಾಗಿ ಅನೇಕ ಸಂಕಷ್ಟಗಳನ್ನು ಛಲದಿಂದ ಎದುರಿಸಿ ಮಕ್ಕಳನ್ನು ಬೆಳೆಸಿದ ಕುಂತಿ, ಅವರ ಕಷ್ಟನಷ್ಟಗಳನ್ನು ಕಂಡು ಮಮ್ಮಲ ಮರುಗಿದ ಆ ತಾಯಿ ತನ್ನ ಮಕ್ಕಳು ಪಟ್ಟಾಭಿಷಿಕ್ತರಾಗಿ ದೊರೆಯುವ ಕಾಲಕ್ಕೆ ಕಾಡಿನ ದಾರಿ ಹಿಡಿಯುತ್ತಾಳೆ ಎಂದರೆ, ಅದೊಂದು ಬಹುದೊಡ್ಡ ನಿರ್ಧಾರ. ಹಾಗಾಗಿ ಈ ಸಂದರ್ಭದಲ್ಲೊಂದಿಷ್ಟು ಕಸುಬು ಆಗುವ ಅಗತ್ಯ ಇತ್ತು. ಇದರಿಂದಾಗಿ ಇಡೀ ಪ್ರಸಂಗದಲ್ಲಿ ಎದ್ದು ಕಾಣುತ್ತಿದ್ದ ಸ್ತ್ರೀ ವೇಷಗಳ ಕೊರತೆ ಸ್ವಲ್ಪ ಮಟ್ಟಿಗೆ ನೀಗುತ್ತಿತ್ತೇನೋ.  

ಅನಂತರದ ದೃಶ್ಯ ಯುದ್ಧಭೂಮಿಯ ಹೆಣಗಳ ರಾಶಿಯ ಮೇಲಿನ ಪಾಂಡವರ ನಡೆ. ಅತ್ಯಂತ ನಾಟಕೀಯ ಗುಣವಿರಬಹುದಾದ ಈ ಸಂದರ್ಭದಲ್ಲಿ ಯುಧಿಷ್ಠಿರ ಪಾತ್ರಧಾರಿ ತಮ್ಮ ಮಾತುಗಳಿಂದ ಹಾಗೂ ಭಾಗವತರು ತಮ್ಮ ಪದ್ಯದಿಂದ ನಮ್ಮ ಮನಕಲಕಿದರೂ ಇಲ್ಲೊಂದಿಷ್ಟು ಸೂಕ್ತ ರಂಗಚಲನೆಯ ಆವಶ್ಯಕತೆಯಿತ್ತು. ಈ ಸನ್ನಿವೇಶದಲ್ಲಿ ಒಂದು ರಂಗಪರಿಕರವಾಗಿ ಸೀರೆಯನ್ನು ಬಳಸಿಕೊಳ್ಳಲಾಗಿತ್ತು. ಯಕ್ಷಗಾನದಂತಹ ಕಲಾ ಮಾಧ್ಯಮ ತನ್ನ ನೃತ್ಯ ಮತ್ತು ಮಾತಿನ ಮೂಲಕವೇ ಪ್ರೇಕ್ಷಕನ ಮನಸ್ಸಿನಲ್ಲಿ ದೃಶ್ಯ ಕಟ್ಟಿಕೊಡಬೇಕಲ್ಲದೆ ರಂಗದ ಮೇಲೆ ಅದರ ಸೃಷ್ಟಿ ಅಗತ್ಯವೂ ಇಲ್ಲ. ಅದು ಅಷ್ಟು ಸುಲಭವೂ ಅಲ್ಲ. ಇಲ್ಲಿಯ ವೇಷಭೂಷಣ ಭವ್ಯ ಮತ್ತು ದಿವ್ಯ; ಅದಕ್ಕೆ ಹೊಂದುವಂತಹ ಸೂಚ್ಯವಾಗಿರುವವುಗಳನ್ನು ಉಪಯೋಗಿಸಬೇಕೇ ಹೊರತು ನಿಜದ ವಸ್ತುಗಳನ್ನು (ಒಂದು ದೃಶ್ಯದಲ್ಲಿ ಹೂಕುಂಡ ಮತ್ತು ಗಿಡವನ್ನು ಬಳಸಿಕೊಳ್ಳಲಾಗಿತ್ತು) ಬಳಸಿದರೆ ನಮ್ಮ ಕಲ್ಪನಾವಿಲಾಸಕ್ಕೆ ಬೇಲಿ ಹಾಕಿದಂತಾಗಿ ಬಿಡುತ್ತದೆ.

ಅನಂತರದ ಯಾದವರ ಪ್ರವೇಶ ಸ್ವಲ್ಪ ಏಕತಾನತೆಯಿಂದ ಚಲಿಸುತ್ತಿದ್ದ ಪ್ರಸಂಗಕ್ಕೆ ಒಂದಿಷ್ಟು ಉತ್ಸಾಹ ತುಂಬಿತು. ಇಡೀ ಶ್ರೀಕೃಷ್ಣ ನಿರ್ಯಾಣ ಭಾಗ ಹಾಸ್ಯ, ವೀರ, ರೌದ್ರ, ಕರುಣರಸಗಳ ಸಮಪಾಕದಿಂದ ಮೂಡಿಬಂದು, ಹಲವಾರು ಬಾರಿ ಆಡಿದ ಕಲಾವಿದರ ವೃತ್ತಿಪರತೆಯು ಅನುಭವಕ್ಕೆ ಬಂತು. ಈ ಸಂದರ್ಭದಲ್ಲಿ ಪಾತ್ರಗಳು ತಮ್ಮ ತಮ್ಮೊಳಗೆ ಮಾತಾಡುವ ಭರದಲ್ಲಿ ಪ್ರೇಕ್ಷಕರತ್ತ ಮುಖ ಮಾಡುವುದನ್ನೇ ಮರೆಯುತ್ತಾರೆ. ಅವರ ಮಾತು ಮತ್ತು ಅಭಿನಯ ಸರಿಯಾದ ರೀತಿಯಲ್ಲಿ ಸಂವಹನವಾಗುವುದಕ್ಕೆ ಇದೊಂದು ತೊಡಕಾಗುವ ಸಾಧ್ಯತೆ ಇದೆ. 

ತಮ್ಮ ಸೂತ್ರಧಾರಿಯೆಂದೆನಿಸಿಕೊಂಡ ಶ್ರೀಕೃಷ್ಣನೇ ಇಲ್ಲವಾದ ಮೇಲೆ ತಮ್ಮ ಗತಿ ಏನೆಂದು ದಿಗಿಲುಗೊಂಡ ಪಾಂಡವರು ವೇದವ್ಯಾಸರ ಮೊರೆಹೊಗುವ ದೃಶ್ಯ ಗಮನಾರ್ಹವಾಗಿತ್ತು. ಪಾತ್ರಗಳೇ ಕವಿಯನ್ನು ತಮ್ಮ ನಡೆಯ ಬಗೆಗೆ ಪ್ರಶ್ನಿಸುವ ಅಪೂರ್ವ ತಂತ್ರವದು. ವೇದವ್ಯಾಸ ಪಾತ್ರಧಾರಿ ಹಿರಿಯ ಕಲಾವಿದರಂತೂ ತಮಗೆ ದೊರೆತ ಈ ಪುಟ್ಟ ಜವಾಬ್ದಾರಿಯನ್ನು ಅತ್ಯಂತ ಪ್ರಬುದ್ಧವಾಗಿ ನಿರ್ವಹಿಸಿ ಇಡೀ ಪ್ರಸಂಗಕ್ಕೆ ಘನತೆಯನ್ನು ತಂದುಕೊಟ್ಟರು.  

ಈ ಮಧ್ಯೆ ಬಣ್ಣದ ವೇಷವಾಗಿ ಬಂದ ಮ್ಲೆàಂಛರ ಪಾತ್ರಗಳು ಅತ್ಯಂತ ಆಕರ್ಷಣೀಯವಾಗಿದ್ದು, ರಂಗದಲ್ಲೊಂದು ಮಿಂಚಿನ ಸಂಚಾರವಾಯಿತು. ಯಾವತ್ತೂ ಇರುವಂತೆ ಈ ರಕ್ಕಸರ ಅಸ್ಪಷ್ಟ ಮಾತುಗಳಿಂದ ಅವರ ದಿಕ್ಕು ದೆಸೆ ಏನೆಂಬುದು ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತಷ್ಟೇ. 

ಅನಂತರದ ಮುಖ್ಯಭಾಗ ಪಾಂಡವರ ಮಹಾಯಾನ, ಮಹಾಪ್ರಸ್ಥಾನ. ಹಂತ ಹಂತವಾಗಿ ತನಗಂಟಿದ್ದ ವ್ಯಾಮೋಹದ ಪೊರೆಗಳನ್ನೂ ಕಳಚಿಕೊಳ್ಳುತ್ತಾ ತನ್ನ ಧರ್ಮನಿಷ್ಠೆಯನ್ನು ಸರ್ವಥಾ ಬಿಟ್ಟು ಕೊಡದೆ ಸಶರೀರಿಯಾಗಿ ಗಮ್ಯ ತಲುಪುವ ಧರ್ಮರಾಯನ ಪಾತ್ರ ನಿರ್ವಹಣೆ ಅದ್ಭುತವಾಗಿತ್ತು. ಇವರ ಸ್ವಯಂ ಸ್ಫೂರ್ತಿಯ ವಾಗ್ವಿಲಾಸ ಕೇವಲ ಪಾಂಡವರನ್ನಷ್ಟೇ ಅಲ್ಲ, ನೋಡುಗರನ್ನೆಲ್ಲ ಮಹಾಯಾನಿಗಳನ್ನಾಗಿಸಿತು. ಇಲ್ಲಿ ಪಾಂಡವರ ನಡಿಗೆಯನ್ನು ಸೂಚಿಸುವುದಕ್ಕೆ ಪ್ರಯಾಣ ಕುಣಿತದ ಹೆಜ್ಜೆಗಳನ್ನು ಸಂದರ್ಭದ ಭಾವಕ್ಕೆ ಸರಿಯಾಗಿ ಬಳಸಿಕೊಂಡಿದ್ದರೆ ಖಂಡಿತವಾಗಿ ಇದು ಒಂದು ಪರಿಪೂರ್ಣತೆಯನ್ನು ಕಾಣುತ್ತಿತ್ತು.

ಪರೀಕ್ಷಿತ ಮತ್ತು ವಜ್ರ -ಇವರನ್ನು ದ್ವಾಪರ ಮತ್ತು ಕಲಿಯುಗದ ಕೊಂಡಿಗಳಂತೆ ತೋರುತ್ತಾ ಪ್ರಸಂಗಕ್ಕೊಂದು ಸೂಕ್ತ ಮುಕ್ತಾಯವು ದೊರಕಿತು.

ಭಾಗವತರಂತೆ, ತೆಂಕಿನ ಚೆಂಡೆಯವರೂ ರಂಗಸ್ಥಳದ ಅಂದ ಕೆಡದಂತೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಬಾರದೇ? ನಾದ ಕೆಡುತ್ತದೆ ಎನ್ನುವುದಾದರೆ ಚೆಂಡೆ ನುಡಿಸುವಾಗ ನಿಲ್ಲುವ ಅವಕಾಶವಿದ್ದರಾಯ್ತು. ಕೇವಲ ಸಂಪ್ರದಾಯದ ನೆಪಕ್ಕೆ ಚೆಂಡೆಯವರು ಅಷ್ಟು ಹೊತ್ತು ನಿಲ್ಲುವ ಅಗತ್ಯ ಇಲ್ಲ.

ಪ್ರದರ್ಶನದಲ್ಲಿ ತೆರೆಯ ಬಳಕೆ ಬಹಳವಾಗಿದ್ದು, ಅನೇಕ ಕಡೆ ಅದರ ಅಗತ್ಯ ವಿರಲಿಲ್ಲ. ಕಲಿಪುರುಷನಂಥ ಮುಖ್ಯಪಾತ್ರದ ಪ್ರವೇಶ ತೆರೆಯ ಹಿಂದಿನಿಂದ ಆಗು ವುದಕ್ಕಿಂತಲೂ ಕುಣಿತದ ಮೂಲಕವಾಗಿದ್ದರೆ ಇನ್ನೂ ಹೆಚ್ಚು ಶಕ್ತಿಯುತವಾಗಿರುತ್ತಿತ್ತು. ಹಾಗೆಯೇ ಶ್ವಾನವು ಯಮನಾಗುವ ಪ್ರಕ್ರಿಯೆಯು ತೆರೆ ಇಲ್ಲದಿದ್ದರೆ ಚೆನ್ನಾಗಿರು ತ್ತಿತ್ತು. ತೆರೆಯ ಅತಿ ಬಳಕೆ ಒಮ್ಮೊಮ್ಮೆ ಪ್ರಸಂಗದ ಓಘಕ್ಕೆ ತಡೆ ಕೊಡುವಂತಿತ್ತು. ಶ್ವಾನ ಪಾತ್ರಧಾರಿ ಪಾತ್ರೋಚಿತ ಅಭಿನಯದಿಂದ ಗಮನ ಸೆಳೆದರು. ಯಕ್ಷಗಾನದ ಪ್ರಾಣಿ-ಪಕ್ಷಿಗಳ ವೇಷಭೂಷಣದ ಬಗೆಗೆ ನನಗೊಂದಿಷ್ಟು ತಕರಾರಿದೆ. ರಾಜವೇಷ ಗಳೆಲ್ಲವೂ ವಾಸ್ತವಕ್ಕೆ ಸ್ವಲ್ಪವೂ ಹತ್ತಿರವಿಲ್ಲದ ಒಂದು ಅಗಾಧ ಕಲ್ಪನೆ. ಆದರೆ ನಾಯಿ, ಕರಡಿ ಎನ್ನುವಾಗ ನಿಜಕ್ಕೆ ಹತ್ತಿರವಿರುವುದನ್ನು ಸೃಷ್ಟಿಸುವ ಅಗತ್ಯವಿದೆಯೇ? 

ಇಡೀ ಪ್ರದರ್ಶನ ಪರಂಪರೆಯ ಬೇರು ಹಾಗೂ ಆಧುನಿಕ ಮನಸ್ಸಿನ ಚಿಗುರಿನಿಂದ ಕೂಡಿದ್ದು, ಅನನ್ಯ ಅನುಭವವನ್ನು ಕೊಟ್ಟಿತು. ಎಲ್ಲ ಕಲಾವಿದರು- ಒಂದರೆಕ್ಷಣ ಬಂದುಹೋದ ಬಲರಾಮ ಪಾತ್ರಧಾರಿಯಾದಿಯಾಗಿ ಪ್ರತಿಯೊಬ್ಬರೂ -ವೃತ್ತಿಪರತೆಯನ್ನೂ ಮೆರೆದಿದ್ದಾರೆ. ಇಂಥ ಪ್ರಯೋಗಕ್ಕೆ ಮತ್ತೆ ಮತ್ತೆ ತನ್ನನ್ನು ದುಡಿಸಿ ಕೊಳ್ಳುತ್ತಿರುವ ಸಂಯೋಜಕರು ಹಾಗೂ ಇಂತಹದ್ದೊಂದು ಜನಾಕರ್ಷಣೆ ಪಡೆಯ ಬಹುದಾದ ಪ್ರಸ್ತುತಿಯನ್ನು ಅನವರತ ಕೊಡುತ್ತಾ ಒಂದಿಷ್ಟು ಪ್ರೇಕ್ಷಕರನ್ನೂ ಅವರ ಸಂವೇದನೆಯನ್ನೂ ರೂಪಿಸುತ್ತಿರುವ ಯಕ್ಷಗಾನ ಕಲಾರಂಗ ಉಡುಪಿ ಇವರೆಲ್ಲರೂ ಅಭಿನಂದನಾರ್ಹರು.

ಅಭಿಲಾಷಾ ಸಾಲಿಕೇರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.