Updated at Wed,26th Jul, 2017 10:12AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಂದೆ ಬಂದ್ರೆ ಹಾಯ್ ಬಹುದು

ಒಂದೆರಡು ವರ್ಷಗಳ ಹಿಂದೆ "ಹಾಯ್‌' ಎಂಬ ಸಿನಿಮಾವೊಂದು ಸೆಟ್ಟೇರಿದ ಬಗ್ಗೆ ನಿಮಗೆ ನೆನಪಿರಬಹುದು. ಆ ಸಿನಿಮಾ ಏನಾಯಿತು ಎಂದು ನೀವು ಕೇಳುವ ಹೊತ್ತಿಗೆ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ಆಗಿದೆ. ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿ ಖುಷಿಪಟ್ಟಿದೆ. ರಾಘವೇಂದ್ರ ಕಠಾರೆ ಹಾಗೂ ಸಿ.ರಾಜೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿ.ಎನ್‌. ರುದ್ರೇಶ್‌ ಈ ಸಿನಿಮಾದ ನಿರ್ದೇಶಕರು. ಯಶ್‌ರಾಜ್‌ ದೇವ್‌ ಹಾಗೂ ಸಾನ್ಯ ಈ ಚಿತ್ರದ ನಾಯಕ-ನಾಯಕಿ. 

ನಿರ್ದೇಶಕ ರುದ್ರೇಶ್‌ ಹೇಳುವಂತೆ, "ಹಾಯ್‌' ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವ ವಿಶ್ವಾಸವಿದೆಯಂತೆ. ಚಿತ್ರದಲ್ಲಿ ಲವ್‌ಸ್ಟೋರಿ ಜೊತೆಗೆ ಕಾಮಿಡಿಯೂ ಇದ್ದು, ಇಂದಿನ ಟ್ರೆಂಡ್‌ಗೆ ತಕ್ಕಂತೆ ಮೂಡಿಬಂದ ವಿಶ್ವಾಸ ನಿರ್ದೇಶಕರದು. ನಿರ್ಮಾಪಕ ರಾಘವೇಂದ್ರ ಕಠಾರೆ ತಮಗೆ ಬೆಂಬಲವಾಗಿ ನಿಂತವರಿಗೆ ಥ್ಯಾಂಕ್ಸ್‌ ಹೇಳುವಷ್ಟಕ್ಕೆ ತಮ್ಮ ಮಾತು ಮುಗಿಸಿದರು. ನಾಯಕ ಯಶ್‌ರಾಜ್‌ಗೆ ಈ ಸಿನಿಮಾ ಮೂಲಕ ಗೆಲುವು ಸಿಗುವ ವಿಶ್ವಾಸವಿದೆಯಂತೆ.

ಅವರ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆಯಂತೆ. ಎಲ್ಲರ ಪ್ರೋತ್ಸಾಹದಿಂದ ಚೆನ್ನಾಗಿ ನಟಿಸಿದ್ದೇನೆ ಎಂಬ ವಿಶ್ವಾಸ ಯಶ್‌ರಾಜ್‌ ಅವರಿಗಿದೆಯಂತೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಹಾಡುಗಳು ಸೊಗಸಾಗಿ ಮೂಡಿಬಂದಿವೆಯಂತೆ. ವಿ. ನಾಗೇಂದ್ರಪ್ರಸಾದ್‌ ಅವರ ಸಾಹಿತ್ಯ ಚಿತ್ರಕ್ಕಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ದಾವಣಗೆರೆ, ಮಂಗಳೂರು, ಚಿಕ್ಕಮಗಳೂರು ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.


Back to Top