ಸಂಚಾರಿ ದೆವ್ವದ ಪ್ರೇಮಕತೆ:2017ರ ಮೊದಲ ಹಾರರ್ ಸಿನಿಮಾ ರಿಕ್ತ
Team Udayavani, Jan 15, 2017, 11:56 AM IST
ಕಳೆದ ವರ್ಷ ಗಾಂಧಿನಗರದಲ್ಲಿ ದೆವ್ವಗಳ ಕಾರುಬಾರು ಜೋರಾಗಿತ್ತು. ಪ್ರೇಕ್ಷಕರನ್ನು ಹೆದರಿಸಲು ಸಾಕಷ್ಟು ದೆವ್ವಗಳು ಥಿಯೇಟರ್ಗೆ ನುಗ್ಗಿದ್ದವು. ಆದರೆ, ಆ ಪ್ರಯತ್ನದಲ್ಲಿ ಯಶಶಸ್ವಿಯಾಗಿದ್ದು ಮಾತ್ರ ಕೆಲವೇ ಕೆಲವು ದೆವ್ವಗಳು. ಈ ವರ್ಷದ ಮೊದಲ ದೆವ್ವ ಯಾವುದೆಂದರೆ ಗಾಂಧಿನಗರದ “ರಿಕ್ತ’ ಸಿನಿಮಾದತ್ತ ಕೈ ತೋರಿಸುತ್ತದೆ. ಹೌದು, ಕಳೆದ ವರ್ಷ 20ಕ್ಕೂ ಹೆಚ್ಚು ಹಾರರ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಒಂದಷ್ಟು ಸಿನಿಮಾಗಳು ಗೆದ್ದಿವೆ ಕೂಡಾ. ಈ ವರ್ಷದ ಮೊದಲ ಹಾರರ್ ಸಿನಿಮಾವಾಗಿ “ರಿಕ್ತ’ ಬಿಡುಗಡೆಯಾಗುತ್ತಿದೆ. ಜನವರಿ 19ಕ್ಕೆ ಚಿತ್ರ ಬಿಡುಗಡೆಯಾಗುವ ಮೂಲಕ ಈ ವರ್ಷದ ಹಾರರ್ ಅದೃಷ್ಟ ಪರೀಕ್ಷೆ ನಡೆಯಲಿದೆ.
ಸಂಚಾರಿ ವಿಜಯ್ ನಾಯಕರಾಗಿರುವ ಈ ಚಿತ್ರದಲ್ಲಿ ಹಾರರ್ ಜೊತೆಗೆ ಲವ್ಸ್ಟೋರಿಯನ್ನು ಬ್ಲೆಂಡ್ ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಒಂದು ಮಟ್ಟಕ್ಕೆ ಸದ್ದು ಮಾಡುವ ಮೂಲಕ ಚಿತ್ರತಂಡ ಸಿನಿಮಾದ ಬಗ್ಗೆಯೂ ನಿರೀಕ್ಷೆ ಇಟ್ಟಿದೆ. ಈ ಸಿನಿಮಾವನ್ನು ಅಮೃತ್ ಕುಮಾರ್ ನಿರ್ದೇಶಿಸಿದ್ದಾರೆ.
ಅರುಣ್ ಕುಮಾರ್ ಈ ಸಿನಿಮಾದ ನಿರ್ಮಾಪಕರು. ಮಲ್ಟಿಪ್ಲೆಕ್ಸ್ ಗಳಲ್ಲೂ “ರಿಕ್ತ’ ಸಾಕಷ್ಟು ಪ್ರದರ್ಶನ ಕಾಣಲಿದೆಯಂತೆ. ಚಿತ್ರದಲ್ಲಿ ಸಂಚಾರಿ ವಿಜಯ್ ಮೊದಲ ಬಾರಿಗೆ ದೆವ್ವದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ಅವರಿಗೂ “ರಿಕ್ತ’ ಹೊಸ ಅನುಭವ ನೀಡಿದ ಸಿನಿಮಾವಂತೆ. ಚಿತ್ರ ಎರಡು ಶೇಡ್ಗಳಲ್ಲಿ ಮೂಡಿಬಂದಿದೆಯಂತೆ. ಒಂದು ಕಡೆ ಲವ್ಟ್ರ್ಯಾಕ್ ಆದರೆ, ಮತ್ತೂಂದು ಕಡೆ ದೆವ್ವದ ಟ್ರ್ಯಾಕ್ ಸಾಗಲಿದೆಯಂತೆ. ಆ ಎರಡೂ ಕೂಡಾ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಅವರಿಗಿದೆ. ವಿಜಯ್ ಜೊತೆಗೆ ಅದ್ವಿಕಾ, ರಮ್ಯಾ ಎಂಬ ಹೊಸ ಹುಡುಗಿಯರು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಭಿನ್ನ ಕಥೆಯಿರುವ ಈ ಚಿತ್ರದ ಚಿತ್ರೀಕರಣ ಶಿವಮೊಗ್ಗ ಬಳಿಯ ಸುಳ್ಳಳ್ಳಿಯಲ್ಲಿ ನಡೆದಿದೆ. ಬಹುತೇಕ ಹೊಸಬರೇ ಇರುವ ಈ ಚಿತ್ರಕ್ಕೆ ರಾಕಿ ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ.