Updated at Thu,25th May, 2017 3:04AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಾಶೀನಾಥ್‌ ಎಂಬ ಓಳ್‌ ಮುನಿಸ್ವಾಮಿ

"ಜಲ್ಸಾ' ಸಿನಿಮಾ ಮೂಲಕ ಹೀರೋ ಆಗಿದ್ದ ನಿರಂಜನ್‌ ಒಡೆಯರ್‌ ಈಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಸಿನಿಮಾ ಬಳಿಕ ಸಾಕಷ್ಟು ಕಥೆ ಕೇಳಿದ್ದ ಅವರಿಗೆ, ಈಗ ಒಂದು ಕಥೆ ಇಷ್ಟವಾಗಿ ಕ್ಯಾಮೆರಾ ಮುಂದೆ ನಿಲ್ಲೋಕೆ ರೆಡಿಯಾಗಿದ್ದಾರೆ. ಅದು ಆನಂದ ಪ್ರಿಯ ನಿರ್ದೇಶನದ ಸಿನಿಮಾ. ಆ ಚಿತ್ರಕ್ಕೆ ನಿರ್ದೇಶಕರು "ಓಳ್‌ ಮುನಿಸ್ವಾಮಿ' ಎಂದು ನಾಮಕರಣ ಮಾಡಿದ್ದಾರೆ.

ಚಿತ್ರದ ಶೀರ್ಷಿಕೆ ಕೇಳಿದ ಮೇಲೆ ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ ಅಂತ ಹೇಳಬೇಕಿಲ್ಲ. ಇನ್ನೊಂದು ವಿಷಯವೆಂದರೆ, ಈ ಸಿನಿಮಾದಲ್ಲಿ ಹಿರಿಯ ನಟ ಕಾಶೀನಾಥ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಅವರ 50ನೇ ಸಿನಿಮಾ ಅನ್ನೋದು ವಿಶೇಷ. ಕಾಶೀನಾಥ್‌ ಇದ್ದಾರೆ ಅಂದಮೇಲೆ ಇದು ಪಕ್ಕಾ ಮನರಂಜನಾತ್ಮಕ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಅಂದಹಾಗೆ, ಈ ಚಿತ್ರ ಸಮೂಹ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗುತ್ತಿದೆ. "ಕ್ರ್ಯಾಕ್‌' ಚಿತ್ರ ನಿರ್ಮಿಸಿರುವ ಸಮೂಹ ಟಾಕೀಸ್‌ ಈ ಚಿತ್ರಕ್ಕೂ ಹಣ ಹಾಕುತ್ತಿದೆ. ಹಾಗಾದರೆ ಇಲ್ಲಿ "ಓಳ್‌ ಮುನಿಸ್ವಾಮಿ' ಯಾರು? ಈ ಪ್ರಶ್ನೆಗೆ ಉತ್ತರ ಕೊಡುವ ನಿರ್ದೇಶಕ ಆನಂದಪ್ರಿಯ, ಅದು ಕಾಶೀನಾಥ್‌ ಎನ್ನುತ್ತಾರೆ. ಕಾಶೀನಾಥ್‌ ಅವರನ್ನಿಟ್ಟುಕೊಂಡು ಒಂದು ಒಳ್ಳೆಯ ಕಥೆ ಮಾಡಬೇಕು ಅಂತೆನಿಸಿತ್ತು. ಆಗ ಹುಟ್ಟುಕೊಂಡಿದ್ದೇ ಈ ಕಥೆ.

ಕಾಶೀನಾಥ್‌ ಬಳಿ ಹೋಗಿ, ಇಂಥದ್ದೊಂದು ಕಥೆ ಪಾತ್ರ ಇದೆ ಅಂತ ಹೇಳಿದ ಕೂಡಲೇ, ಖುಷಿಯಿಂದ ಒಪ್ಪಿದ್ದಾರೆ. ಇದು ಅವರ 50ನೇ ಸಿನಿಮಾ ಅನ್ನೋದು ಇನ್ನೊಂದು ಖುಷಿಯ ವಿಷಯ. ಅವರನ್ನು ನಿರ್ದೇಶಿಸುತ್ತಿರುವುದು ನನ್ನ ಅದೃಷ್ಟ ಎನ್ನುವ ಅವರು, "ಇದೊಂದು ಸಮಾಜದ ವಿಡಂಬನಾತ್ಮಕ ಕಥೆ. ಭಾವನೆಗಳ ತೊಳಲಾಟ ಸೇರಿದಂತೆ ದೇವ್ರು ದಿಂಡಿರು, ನಂಬಿಕೆ, ಪ್ರೀತಿ ಮತ್ತು ಬದುಕು ಇದೆಲ್ಲದರ ಹೂರಣವೇ "ಓಳ್‌ ಮುನಿಸ್ವಾಮಿ' ಎಂದು ವಿವರ ಕೊಡುತ್ತಾರೆ.

ಸಮಾಜದಲ್ಲಿ ಸರಿಯಾದ ಕೆಲಸ ಮಾಡಲು ಹೊರಟರೆ, ನೂರೆಂಟು ಪ್ರಶ್ನೆಗಳು ಎದುರಾಗುತ್ತವೆ. ಅದೇ ತಪ್ಪು ಕೆಲಸ ನಡೆಯುತ್ತಿದ್ದರೆ ಪ್ರಶ್ನಿಸಲು ಯಾರೂ ಮುಂದಾಗಲ್ಲ. ಸಮಾಜ ಇಂದು ಬದುಕನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಅದೇ ವಿಷಯಗಳು ಇಲ್ಲಿ ಹೈಲೆಟ್‌ ಆಗಿರಲಿವೆ. ಇಡೀ ಕಥೆ ಹಾಸ್ಯಮಯವಾಗಿ ಸಾಗಲಿದೆ ಎನ್ನುವ ಆನಂದಪ್ರಿಯ, ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ.

ಈಗಾಗಲೇ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಮೇ 3 ರಿಂದ 30 ದಿನಗಳ ಕಾಲ ಮೂಡಿಗೆರೆ, ಚಿಕ್ಕಮಗಳೂರು, ದೇವರಮನೆ ಕಾಡು ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಖೀಲಾ ಎಂಬ ಹೊಸ ಹುಡುಗಿ ನಾಯಕಿಯಾಗಿದ್ದಾರೆ. ನಾಗಾರ್ಜುನ್‌ ಕ್ಯಾಮೆರಾ ಹಿಡಿದರೆ, ಸತೀಶ್‌ ಮೂರು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ.


More News of your Interest

Trending videos

Back to Top