Updated at Wed,26th Jul, 2017 9:42AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ರೇಲರ್‌ನಲ್ಲಿ ರಿಯಲ್‌ ಪೊಲೀಸ್‌; "ಮಿಸ್ಸಿಂಗ್‌ ಬಾಯ್‌"

ಗುರುನಂದನ್‌ ಅಭಿನಯದ "ಮಿಸ್ಸಿಂಗ್‌ ಬಾಯ್‌' ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯಕ್ಕೆ ಚಿತ್ರದ ಎಡಿಟಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ರಘುರಾಮ್‌, ಸದ್ಯದಲ್ಲೇ ಒಂದು ಟ್ರೇಲರ್‌ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದ ಟ್ರೇಲರ್‌ನ ವಿಶೇಷತೆ ಏನೆಂದರೆ, ಚಿತ್ರದ ಯಾವೊಂದು ಶಾಟ್‌ಗಳಿರದಿರುವುದು. ಅದರ ಬದಲು "ಮಿಸ್ಸಿಂಗ್‌ ಬಾಯ್‌'ನ ಕೇಸ್‌ ತನಿಖೆ ಮಾಡಿರುವ ನಾಲ್ಕು ಪ್ರಮುಖ ಅಧಿಕಾರಿಗಳು ಈ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, "ಮಿಸ್ಸಿಂಗ್‌ ಬಾಯ್‌' ಒಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ಹಲವು ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಹಲವು ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿದ್ದರು. ಈಗ ಅವರನ್ನೇ ಇಟ್ಟುಕೊಂಡು ಟ್ರೇಲರ್‌ ಮಾಡುತ್ತಿದ್ದಾರೆ ರಘು. ಈ ಟ್ರೇಲರ್‌ನಲ್ಲಿ ಮಾಜಿ ಪೊಲೀಸ್‌ ಅಧಿಕಾರಿಗಳಾದ ರೇವಣ್ಣಸಿದ್ಧಯ್ಯ, ಅಶೋಕ್‌ ಕುಮಾರ್‌, ಉಲ್ತಾಫ್ ಹುಸೇನ್‌ ಮತ್ತು ಬಿ.ಕೆ. ಶಿವರಾಮ್‌ ಅವರುಗಳು ಕಾಣಿಸಿಕೊಳ್ಳುತ್ತಿದ್ದಾರಂತೆ. ಅವರೆಲ್ಲರೂ ಈ ಘಟನೆ ಚಿತ್ರವಾಗುತ್ತಿರುವ ಬಗ್ಗೆ ಮಾತನಾಡುತ್ತಾರಂತೆ.

ಸುಮಾರು ಒಂದು ನಿಮಿಷದ ಈ ಟ್ರೇಲರ್‌ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಇನ್ನೂ ಒಂದು ವಿಶೇಷತೆಯಿದೆ. ಅದೇನೆಂದರೆ, ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ "ಮಿಸ್ಸಿಂಗ್‌ ಬಾಯ್‌' ಎಂಬ ಹೆಸರು ಬಿಟ್ಟರೆ, ಯಾರ ಹೆಸರನ್ನೂ ತೋರಿಸುವುದಿಲ್ಲವಂತೆ. ಅದರ ಬದಲಿಗೆ ವಿಭಿನ್ನವಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಟೈಟಲ್‌ ಕಾರ್ಡ್‌ ಮಾಡುವುದಕ್ಕೆ ಪ್ರತ್ಯೇಕ ತಂಡ ಮಾಡಲಾಗಿದ್ದು, ಟೈಟಲ್‌ ಕಾರ್ಡ್‌ ಚಿತ್ರೀಕರಣಕ್ಕೆ ಏಳು ವಾರ ಬೇಕಂತೆ.

ಗುರುನಂದನ್‌, ಅರ್ಚನಾ ಜಯಕೃಷ್ಣ, ರವಿಶಂಕರ್‌ ಗೌಡ, ರಂಗಾಯಣ ರಘು ಭಾಗೀರಥಿ ಬಾಯಿ ಕದಂ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕೊಲ್ಲ ಪ್ರವೀಣ್‌ ನಿರ್ಮಿಸಿದ್ದು, ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದರೆ, ಜಗದೀಶ್‌ ವಾಲಿ ಛಾಯಾಗ್ರಹಣ ಮಾಡುತ್ತಿದ್ದಾರೆ.


Back to Top