Updated at Sun,23rd Jul, 2017 11:55AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಂದಿನಿಂದ ನಿಗೂಢ ರಾತ್ರಿ

ಜೀ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಮಾಸ್ಟರ್‌ ಆನಂದ್‌ "ನಿಗೂಢ ರಾತ್ರಿ' ಎಂಬ ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಹಾರರ್‌ ಅಂಶ ಒಳಗೊಂಡ ಧಾರಾವಾಹಿ ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದು ಜುಲೈ 17 ರಿಂದ (ಇಂದಿನಿಂದ) ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ ಎಂಬ ವಿಷಯವನ್ನೂ ಹೇಳಲಾಗಿತ್ತು. ಮಲೆನಾಡ ತಪ್ಪಲಿನಲ್ಲಿರುವ ಸೂರ್ಯನಾರಾಯಣ್‌ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳ ಕಥೆಯೇ "ನಿಗೂಢ ರಾತ್ರಿ'ಯ ಹೈಲೈಟ್‌.

ಆ ಮನೆಯ ಹಿರಿಯ ಜೀವವೊಂದು ಆಕಸ್ಮಿಕವಾಗಿ ಸಾವಿಗೀಡಾದ ಬಳಿಕ ನಡೆಯುವ ಘಟನೆಗಳು ಧಾರಾವಾಹಿಗೆ ಹೊಸ ತಿರುವು ಕೊಡುತ್ತವೆ. ಆ ವಿಚಿತ್ರ ಘಟನೆಯಿಂದ ಆ ಮನೆಯವರು ಹೇಗೆ ಹೊರಗೆ ಬರುತ್ತಾರೆ ಅನ್ನೋದೇ ಧಾರಾವಾಹಿಯ ಸಾರಾಂಶ.  ಇದೆಲ್ಲವೂ ಸರಿ, ಈಗ ಹೊಸ ವಿಷಯ ಅಂದರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳ ಕಲಾವಿದರು, ತಮಗೂ ಆದಂತಹ ಕೆಲ ನೈಜ ಘಟನೆಗಳನ್ನು ವಿವರಿಸಿದ್ದಾರೆ.

ಇಂದಿಗೂ ಭೂತ-ದೆವ್ವ, ಅತೀಂದ್ರಿಯ ಶಕ್ತಿಗಳ ಇರುವಿಕೆ ಕುರಿತು ನಂಬಿಕೆ ಇರುವ ಜನರೂ ಇದ್ದಾರೆ. ತಮ್ಮ ಬದುಕಲ್ಲಾದಂತಹ ಕೆಲ ನೈಜ ಘಟನೆ ಕುರಿತು ಸ್ವತಃ ಆ ಕಲಾವಿದರು ವಿವರಿಸಿದ್ದಾರೆ. "ಜೋಡಿ ಹಕ್ಕಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಮಣ್ಣ ಅವರು ಪಿಯುಸಿ ಓದುವಾಗ ಹಳ್ಳಿಯಲ್ಲಿರುವ ಮಾವನ ಮನೆಗೆ ಹೋಗಿದ್ದರಂತೆ. ಸ್ಮಶಾನದ ಬಳಿ ಇರುವ ದಾರಿಯಲ್ಲಿ ನಡುರಾತ್ರಿ ಮನೆಗೆ ಬರುವಾಗ ಯಾರೋ ಕೂಗಿದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದರಂತೆ. ಸುತ್ತ ಯಾರೂ ಇಲ್ಲದಿದ್ದರೂ ಸದ್ದು ಬಂದಿದ್ದು ಎಲ್ಲಿಂದ ಎಂದು ತಿಳಿಯದೆ, ಅಲ್ಲಿಂದ ಓಡಿದ್ದರಂತೆ ರಾಮಣ್ಣ.

ಇನ್ನು "ಪತ್ತೆದಾರಿ ಪ್ರತಿಭಾ' ಧಾರಾವಾಹಿಯ ನಾಯಕಿ ಪ್ರತಿಭಾ ಅವರದು ಆಂಧ್ರಪ್ರದೇಶದ ಚಿಕ್ಕಹಳ್ಳಿ ಕಾವೇರಿರಾಜಪುರಂ ಹುಟ್ಟೂರು. ಆ ಊರಿನ ನಡುವಿನಲ್ಲಿ ದೊಡ್ಡ ಬಾವಿ ಇದೆಯಂತೆ. ಯುವತಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಆಕೆಯ ಆತ್ಮ ಬಾವಿ ಸುತ್ತ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಅಲ್ಲಿನ ಜರದ್ದು. ಈಗಲೂ ವರ್ಷಕ್ಕೆರಡು ಬಾರಿ ಆ ಯುವತಿಯ ಶ್ರಾದ್ಧವನ್ನು ಬಾವಿ ಬಳಿ ಮಾಡುತ್ತಾರಂತೆ. ಪೂಜೆ ನಂತರ ಯಾರೋ ಬಾವಿಗೆ ಹಾರಿದ ಸದ್ದು ಕೇಳುತದಂತೆ. ನೀರಲ್ಲಿ ಅಲೆ ಹೊರತೂ ಯಾರೂ ಕಾಣಿಸಲ್ಲವಂತೆ. ಇಂದಿಗೂ ಆ ಘಟನೆ ಪ್ರತಿಭಾಗೆ ಬೆಚ್ಚಿಬೀಳಿಸಿದೆಯಂತೆ.

"ನಾಗಿಣಿ'ಯ ಅರ್ಜುನ್‌, ಅಣ್ಣನ ಜತೆ ಕುಂದಾಪುರದ ತೋಟದಲ್ಲಿ ರಾತ್ರಿ ವೇಳೆ ಪಂಪ್‌ಸೆಟ್‌ ಆನ್‌ ಮಾಡಲೂ ಹೋಗಿದ್ದರಂತೆ. ಆಗ ಯಾರೋ ಜೋರಾಗಿ ಕೂಗಿಕೊಂಡು ಕಲ್ಲುಗಳನ್ನು ಇವರ ಮೇಲೆ ಎಸೆಯೋಕೆ ಶುರುಮಾಡಿದರಂತೆ.  ಟಾರ್ಚ್‌ ಹಿಡಿದರು ನೋಡಿದಾಗ, ವ್ಯಕ್ತಿಯೊಬ್ಬ ತಮ್ಮತ ಓಡಿಬರುವುದನ್ನು ನೋಡಿ ಅರ್ಜುನ್‌ ಗಾಬರಿ ಆಗಿದ್ದರಂತೆ. ಪುನಃ ಟಾರ್ಚ್‌ ಹಿಡಿದರೆ, ಆ ವ್ಯಕ್ತಿ ಮಾಯವಂತೆ. ಆ ಘಟನೆ ಇಂದಿಗೂ ಅರ್ಜುನ್‌ ಮರೆತಿಲ್ಲ.

ಹೀಗೆ "ಜೋಡಿಹಕ್ಕಿ'ಯ ನಟಿ ಜಾನಕಿಗೂ ಮರೆಯದ ಅನುಭವ ಆಗಿದೆಯಂತೆ. ಇದು ಇವರ ನೈಜ ಅನುಭವವಾದರೆ, ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಘಟನೆ ನಡೆದಿರುತ್ತೆ. ಅಂತಹ ಹಲವು ಘಟನೆ ಹೊತ್ತು "ನಿಗೂಢ ರಾತ್ರಿ' ಬರುತ್ತಿದೆ. ಈ ಧಾರಾವಾಹಿಗೆ ಜೋನಿ ಫಿಲ್ಮ್ ಸಂಸ್ಥೆ ನಿರ್ಮಾಣವಿದೆ.


Back to Top