ರಾಗ್ದೇಶ್ ಚಿತ್ರಕ್ಕೆ ಕನ್ನಡಿಗನ ರಾಗ
Team Udayavani, Jul 22, 2017, 10:36 AM IST
ಕನ್ನಡದ ಹಲವು ಸಂಗೀತ ನಿರ್ದೇಶಕರು ಈಗಾಗಲೇ ಪರಭಾಷೆ ಚಿತ್ರಗಳಿಗೆ ಸಂಗೀತ ನೀಡಿದ್ದು ಗೊತ್ತೇ ಇದೆ. ಆ ಸಾಲಿಗೆ ಈಗ ಧರ್ಮ ವಿಶ್ ಹೊಸ ಸೇರ್ಪಡೆ. “ರಥಾವರ’ ಹಾಗೂ “ತಾರಕಾಸುರ’ ಚಿತ್ರಗಳಿಗೆ ಸಂಗೀತ ನೀಡುತ್ತಿರುವ ಧರ್ಮ ವಿಶ್, ಇದೀಗ ಬಾಲಿವುಡ್ಗೂ ಕಾಲಿಟಿದ್ದಾರೆ. ಹೌದು, ಧರ್ಮ ವಿಶ್ ಹಿಂದಿಯ “ರಾಗ್ದೇಶ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.
ತಿಗ್ಮಾನು ಧುಲಿಯ ನಿರ್ದೇಶನದ “ರಾಗ್ ದೇಶ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿರುವ ಮೊದಲ ಚಿತ್ರ ಇದಾದರೂ, ಧರ್ಮವಿಶ್, ಈ ಹಿಂದೆ ಹಲವು ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಕನ್ನಡಿಗರಾಗಿರುವ ಧರ್ಮವಿಶ್, ಕಳೆದ ಎರಡು ದಶಕದಿಂದಲೂ ಚಿತ್ರರಂಗದಲ್ಲಿದ್ದು, ಮನೋಹರ್ ಅವರ ಜತೆ ತಮ್ಮ ಸಂಗೀತ ಜರ್ನಿ ಶುರುಮಾಡಿದವರು. ಕನ್ನಡದ ಬಹುತೇಕ ಸಂಗೀತ ನಿರ್ದೇಶಕರ ಹಾಡುಗಳಿಗೆ ಕೀಬೋರ್ಡ್ ಪ್ಲೇಯರ್ ಮತ್ತು ಮ್ಯೂಸಿಕ್ ಅರೇಂಜರ್ ಆಗಿ ಕೆಲಸ ಮಾಡಿದ್ದಾರೆ.
ಅಂದಹಾಗೆ, “ರಾಗ್ದೇಶ್’ ಚಿತ್ರವು ಸುಭಾಷ್ ಚಂದ್ರಬೋಸ್ ಕಟ್ಟಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಅದರ ಸುತ್ತ ನಡೆದಿದ್ದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿರುವ ಚಿತ್ರ. ನಿರ್ದೇಶಕ ತಿಗ್ಮಾನು ಧೂಲಿಯ ಅವರು ಧರ್ಮವಿಶ್ ಅವರ ಒಂದಷ್ಟು ಕೆಲಸಗಳನ್ನು ನೋಡಿ, ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಅವಕಾಶ ಕೊಟ್ಟಿದ್ದಾರೆ.
ರಾಜ್ಯಸಭಾ ವಾಹಿನಿ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಇದು. ರಾಷ್ಟ್ರಪತಿಗಳು ಈ ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಲಿರುವುದು ವಿಶೇಷ. ಇನ್ನು, ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರ “ಘಜಿನಿ’ ಚಿತ್ರದಿಂದ ಹಿಡಿದು “ತುಪಾಕಿ’ ತನಕ ಸುಮಾರು ಇಪ್ಪತ್ತು ಸಿನಿಮಾಗಳಿಗೆ ಧರ್ಮ ವಿಶ್ ಅವರು ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದ್ದಾರೆ.