Updated at Fri,18th Aug, 2017 8:00PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪುಷ್ಕರ್ ಬ್ಯಾನರ್ ನಲ್ಲಿ ದಿಗಂತ್ ಚಿತ್ರ

ದಿಗಂತ್‌ ಕಡೆಯಿಂದ ಹೊಸ ಸಿನಿಮಾದ ಸುದ್ದಿ ಬಾರದೇ ತುಂಬಾ ದಿನಗಳೇ ಆಗಿತ್ತು. "ಹ್ಯಾಪಿ ನ್ಯೂ ಇಯರ್‌' ನಂತರ ದಿಗಂತ್‌ ಯಾವೊಂದು ಚಿತ್ರವನ್ನು ಒಪ್ಪಿದ್ದ ಸುದ್ದಿ ಬಂದಿಲ್ಲ. ಇನ್ನು "ಚಾರ್ಲಿ' ಎಂಬ ಚಿತ್ರದಲ್ಲಿ ದಿಗಂತ್‌ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರ ನಿಂತೇ ಹೋಯಿತು. ಈಗ ದಿಗಂತ್‌ ಹೊಸದೊಂದು ಸಿನಿಮಾ ಒಪ್ಪಿರುವ ಸುದ್ದಿ ಬಂದಿದೆ. 

ಅದು ಪುಷ್ಕರ್‌ಹಾಗೂ ಪರಂವಾ ಸ್ಟುಡಿಯೋದ ಜೊತೆ. ಹೌದು, ದಿಗಂತ್‌ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಮಾತುಕತೆಯಾಗಿದ್ದು, ನವೆಂಬರ್‌ನಲ್ಲಿ ಚಿತ್ರ ಆರಂಭವಾಗಲಿದೆ. ಈ ಚಿತ್ರವನ್ನು ಸೆನ್ನಾ ಹೆಗಡೆ ಎನ್ನುವವರು ನಿರ್ದೇಶಿಸುತ್ತಿದ್ದಾರೆ. 

ಕಾಸರಗೋಡು ಮೂಲದ ಸೆನ್ನಾ ಹೆಗಡೆಯವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಈ ಹಿಂದೆ ಮಲಯಾಳಂನಲ್ಲಿ "0-41*' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ಕನ್ನಡದಲ್ಲಿ ದಿಗಂತ್‌ಗೆ ಸಿನಿಮಾ ಮಾಡುತ್ತಿದ್ದಾರೆ. ದಿಗಂತ್‌ ಅವರ ಮ್ಯಾನರೀಸಂಗೆ ತಕ್ಕಂತೆ ಈ ಸಿನಿಮಾ ಇದ್ದು, "ಪಂಚರಂಗಿ' ನಂತರ ದಿಗಂತ್‌ ಅವರಿಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದೊಂದು ರೊಮ್ಯಾಂಟಿಕ್‌-ಕಾಮಿಡಿ ಚಿತ್ರವಾಗಿದ್ದು, ದಿಗಂತ್‌ ಕೆರಿಯರ್‌ನಲ್ಲಿ ವಿಭಿನ್ನ ಚಿತ್ರವಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಪುಷ್ಕರ್‌ ಫಿಲಂಸ್‌ ಹಾಗೂ ಪರಂವಾ ಸ್ಟುಡಿಯೋ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದು, ಹೊಸ ಹೊಸ ನಿರ್ದೇಶಕರ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಅದರಲ್ಲಿ ದಿಗಂತ್‌ ಸಿನಿಮಾ ಕೂಡಾ ಒಂದು. ಸದ್ಯ ನಾಯಕ ಹಾಗೂ ನಿರ್ದೇಶಕ ಅಷ್ಟೇ ಅಂತಿಮವಾಗಿದ್ದು, ನಾಯಕಿ ಸೇರಿದಂತೆ ತಾಂತ್ರಿಕ ವರ್ಗ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈ ನಡುವೆಯೇ ಪುಷ್ಕರ್‌ ಫಿಲಂಸ್‌ "ಭೀಮಸೇನ ನಳಮಹಾರಾಜ' ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಅರವಿಂದ್‌ ಅಯ್ಯರ್‌ ನಾಯಕರಾಗಿ ನಟಿಸುತ್ತಿದ್ದಾರೆ. 

Back to Top