Updated at Tue,30th May, 2017 5:25PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತಾಯಿ ಶೀಲ ಶಂಕಿಸುತ್ತಿದ್ದ ತಂದೆಯ ಕೊಂದ ಮಗ

ಬೆಂಗಳೂರು: ದಿನವೂ ಕುಡಿದು ಬರುತ್ತಿದ್ದ ತಂದೆ ತನ್ನ ತಾಯಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದನ್ನು ಕಂಡು ರೋಸಿಹೋಗಿದ್ದ ವ್ಯಕ್ತಿಯೊಬ್ಬ ಸಮಸ್ಯೆ ಕೊನೆಗಾಣಿಸಲು ತಂದೆಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ಸುಬ್ರಮಣ್ಯ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಸುಬ್ರಮಣ್ಯನಗರದ ಡಿ ಬ್ಲಾಕ್‌ ನಿವಾಸಿ ಶಿವಶಂಕರ್‌ (45) ಮೃತ ವ್ಯಕ್ತಿ. ಕೊಲೆಗೆ ಸಂಬಂಧಿಸಿದಂತೆ ಶಿವಶಂಕರ್‌ ಪುತ್ರ, ಕಾಲೇಜು ವಿದ್ಯಾರ್ಥಿ ರೇವಂತ್‌ (19) ನನ್ನು ಪೊಲೀಸರು ಬಂಧಿಸಿದ್ದಾರೆ. 

20 ವರ್ಷಗಳ ಹಿಂದೆ ಶಿವಶಂಕರ್‌ ಜಯಲಕ್ಷ್ಮಿ ಎಂಬುವವರನ್ನು ವಿವಾಹವಾಧಿಗಿದ್ದರು. ದಂಪತಿಗೆ ರೇವಂತ್‌ ಮತ್ತು ರೋಹಿತ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ರೇವಂತ್‌ ರಾಜಾಜಿನಗರದಲ್ಲಿರುವ ಕೆಎಲ್‌ಇ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಮಗ ರೋಹಿತ್‌ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

ಶಿವಶಂಕರ್‌ ಇಂಟಿರಿಯರ್‌ ಡಿಸೈನರ್‌ ಆಗಿ ಸ್ವಂತ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಶಿವಶಂಕರ್‌ ನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಇತ್ತೀಚೆಗೆ ವೃತ್ತಿ ತ್ಯಜಿಸಿ, ಡಿ ಬ್ಲಾಕ್‌ನಲ್ಲಿರುವ ಸ್ವಂತ ಮನೆಯ ಬಾಡಿಗೆ ಹಣದಲ್ಲೇ ಜೀವನ ಸಾಗಿಸುತ್ತಿದ್ದರು. 

ನಿತ್ಯ ಕುಡಿದು ಬರುತ್ತಿದ್ದ ಶಿವಶಂಕರ್‌, ಪತ್ನಿ ಜಯಲಕ್ಷ್ಮಿಅವರ ಶೀಲ ಶಂಕಿಸಿ, ಆಕೆಯನ್ನು ಥಳಿಸುತ್ತಿದ್ದರು. ತಂದೆಯ ವರ್ತನೆಯಿಂದ ಮಗ ರೇವಂತ್‌ ಬೇಸರಗೊಂಡಿದ್ದ. ಈ ವಿಚಾರವಾಗಿ ರೇವಂತ್‌ ಹಲವು ಬಾರಿ ತಂದೆ ಬಳಿ ಜಗಳವಾಡಿದ್ದ. ಆದರೂ ಶಿವಶಂಕರ್‌ ಕುಡಿತ ಮತ್ತು ಜಗಳ ಬಿಟ್ಟಿರಲಿಲ್ಲ. 

ಸೋಮವಾರವೂ ಇದೇ ವಿಚಾರಕ್ಕೆ ಜಗಳವಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಕುಡಿದು ಮನೆಗೆ ಬಂದಿದ್ದ ಶಿವಶಂಕರ್‌, ಪತ್ನಿ ಬಳಿ ಜಗಳ ತೆಗೆದಿದ್ದಾರೆ. ಎಷ್ಟು ಸಮಾಧಾನಪಡಿಸಿದರೂ ಸುಮ್ಮನಾಗದ ಶಿವಶಂಕರ್‌ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಕುಡಿದ ಅಮಲಿನಲ್ಲಿ ತಡರಾತ್ರಿ 2.30ರ ವರೆಗೆ ಶಿವಶಂಕರ್‌ ಜಗಳವಾಡುತ್ತಲೇ ಇದ್ದರು.

ಇದರಿಂದ ಕೋಪಗೊಂಡ ರೇವಂತ್‌ ಮನೆಯಲ್ಲಿದ್ದ ಚಾಕುವಿನಿಂದ ಶಿವಶಂಕರ್‌ ಇದ್ದ ಕೊಠಡಿಗೆ ನುಗ್ಗಿ ಎರಡು ಬಾರಿ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದ ಶಿವಶಂಕರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರೇ ಚಾಕುವಿನಿಂದ ಇರಿದುಕೊಂಡ್ರು!
ಚೂರಿ ಇರಿತಕ್ಕೊಳಗಾಗಿದ್ದ ಶಿವಶಂಕರ್‌ನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಶಂಕರ್‌ ಅವರೇ ಚಾಕುವಿನಿಂದ ಚುಚ್ಚಿಕೊಂಡಿದ್ದಾಗಿ ಪತ್ನಿ ಮತ್ತು ಮಕ್ಕಳು ಹೇಳಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಬಳಿ ಕೂಡ ಅವರು ಅದೇ ರೀತಿ ಹೇಳಿಕೆ ನೀಡಿದ್ದರು. ಅನುಮಾನಗೊಂಡು ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ಹೇಳಿದರು. ತಾಯಿ ಶೀಲ ಶಂಕಿಸಿ ನಿತ್ಯ ತಂದೆ ಜಗಳವಾಡುತ್ತಿದ್ದರು. ಕೋಪಗೊಂಡು ಚಾಕುವಿನಿಂದ ಇರಿದಿದ್ದಾಗಿ ರೇವಂತ್‌ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


More News of your Interest

Trending videos

Back to Top