Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವೈಟ್‌ಫೀಲ್ಡ್‌ಗೆ ಬರಲಿವೆ ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ವಾಹನಗಳು

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹಲವು ಪ್ರಯೋಗಗಳಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ನಗರದಲ್ಲಿ ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ (ಪಿಆರ್‌ಟಿಎಸ್‌) ಸಾರಿಗೆ ಜಾರಿಗೊಳಿಸಲು ಮುಂದಾಗಿದೆ. 

ಶನಿವಾರ ನಗರದಲ್ಲಿ ಅಮೆರಿಕ ಮೂಲದ ಜೆಪಾಡ್ಸ್‌ ಇನ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಪಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಕುರಿತು ಸಂಸ್ಥೆಯಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಪಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಎದುರಾಗುವ ಸಾಧಕ-ಭಾದಕಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೆಟ್ರೋ ಆರಂಭಿಸಿದ ನಂತರದಲ್ಲಿ ನಗರದ ಕೆಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಮೂಹ ಸಾರಿಗೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವೈಟ್‌ಫೀಲ್ಡ್‌ ಭಾಗಕ್ಕೆ ನಮ್ಮ ಮೆಟ್ರೋ ಸೇವೆ ಒದಗಿಸುವುದು ಮತ್ತಷ್ಟು ವಿಳಂಬವಾಗಲಿರುವ ಕಾರಣ, ಈ ಭಾಗದಲ್ಲಿ ಪಿಆರ್‌ಟಿಎಸ್‌ ಸಾರಿಗೆಯನ್ನು ಪ್ರಯೋಗಿಕವಾಗಿ ಆರಂಭಿಸಲು ಜಾರ್ಜ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪಿಆರ್‌ಟಿಎಸ್‌ ವಾಹನ ಕಾರಿನ ಮಾದರಿ ಚಿಕ್ಕದಾಗಿರುವುದರಿಂದ ಹೆಚ್ಚಿನ ಜಾಗ ಬೇಕಾಗುವುದಿಲ್ಲ. ಇದರೊಂದಿಗೆ ಭೂ ಸ್ವಾಧೀನದಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಮೆಟ್ರೋ ಮಾರ್ಗದಂತೆ ಇದಕ್ಕೂ ಎಲಿವೇಟೆಡ್‌ ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ. ಅದಾದ ಬಳಿಕ ಕೆಳ ಭಾಗದಲ್ಲಿ ಕೇಬಲ್‌ ಅಳವಡಿಸಿ ಪಿಆರ್‌ಟಿಎಸ್‌ ಸೇವೆ ಆರಂಭಿಸಬೇಕಾಗುತ್ತದೆ.

ಒಮ್ಮೆಗೆ ಈ ವಾಹನದಲ್ಲಿ ಆರು ಪ್ರಯಾಣಿಕರು ಸಂಚರಿಸಬಹುದಾಗಿದ್ದು, ಪ್ರಯಾಣಿಕರು ಹತ್ತಿ ಇಳಿಯಲು ಮೆಟ್ರೋ ಮಾದರಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಕಾರಿನ ಮಾದರಿಯಲ್ಲಿ ಪಿಆರ್‌ಟಿಎಸ್‌ ವಾಹನದಲ್ಲಿಯೂ ಚಾಲಕನಿರುತ್ತಾನೆ. ಜೆಪಾಡ್ಸ್‌ ಇನ್‌ ಸಂಸ್ಥೆಯವರು ಎಲಿವೇಟೆಡ್‌ ಮಾರ್ಗದ ಮೇಲ್ಭಾಗದಲ್ಲಿ ಸೋಲಾರ್‌ ವ್ಯವಸ್ಥೆ ಅಳವಡಿಸುವ ಮೂಲಕ ವಾಹನವನ್ನು ಸೌರ ಶಕ್ತಿಯ ಮೂಲಕ ಸಂಚರಿಸುವಂತೆ ಮಾಡಬಹುದು ಎಂಬ ಅಂಶವನ್ನು ಸಂಸ್ಥೆಯವರು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. 

ಜೆಪಾಡ್ಸ್‌ ಇನ್‌ ಸಂಸ್ಥೆ 50 ಕೋಟಿ ವೆಚ್ಚದಲ್ಲಿ ಎಲಿವೇಟೆಡ್‌ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದು, ಸಂಚಾರ ಆರಂಭವಾದ ನಂತರ 3-4 ವರ್ಷ ಪ್ರಯಾಣಿಕರಿಂದ ಪಡೆಯುವ ಪ್ರಯಾಣ ದರದಲ್ಲಿ ನಿಗದಿತ ಮೊತ್ತವನ್ನು ಸಂಸ್ಥೆಗೆ ನೀಡಬೇಕು ಎಂದು ಕರಾರು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏನಿದರ ವಿಶೇಷ? 
ಪೋಡ್‌ಕಾರ್‌ ಅಂತಲೂ ಕರೆಯುವ ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ಕಾರಿಗಿಂತಲೂ ಕೊಂಚ ದೊಡ್ಡ  ಗಾತ್ರದ ಸ್ವಯಂಚಾಲಿತ ವಾಹನಗಳಾಗಿವೆ. ಈ ವಾಹನ 3ರಿಂದ 6 ಪ್ರಯಾಣಿಕರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಮೆಟ್ರೋ ರೀತಿ ಇಲ್ಲೂ ಎಲಿವೇಟೆಡ್‌ ಮಾರ್ಗದ ಅಗತ್ಯವಿದ್ದು, ಮಾರ್ಗದ ಕೆಳ ಭಾಗದಲ್ಲಿ ಕೇಬಲ್‌ ಅಳವಡಿಸಲಾಗುತ್ತದೆ. ಕೆಲವೆಡೆ ದೊಡ್ಡ ಗಾತ್ರದ ವಾಹನಗಳೂ ಬಳಕೆಯಲ್ಲಿದ್ದು, ಇಲ್ಲೂ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. 

ಜೆಪಾಡ್ಸ್‌ ಇನ್‌ ಸಂಸ್ಥೆ ಪಿಆರ್‌ಟಿಎಸ್‌ ಯೋಜನೆ ಪ್ರಸ್ತಾವ ಸಲ್ಲಿಸಿದ್ದು, ಯೋಜನೆಯ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈಟ್‌ಫೀಲ್ಡ್‌ ಭಾಗದಲ್ಲಿಯೇ ವಾಹನದ ಪರೀಕ್ಷಾರ್ಥ ಸಂಚಾರ ಆರಂಭಿಸಲು ಸೂಚಿಸಲಾಗಿದೆ.
-ಜಿ. ಪದ್ಮಾವತಿ, ಮೇಯರ್‌


More News of your Interest

Trending videos

Back to Top