Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡಿಜಿಟಲ್‌ ದಂಡಕ್ಕೆ ಶುರುವಿನಲ್ಲೇ ವಿಘ್ನ

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂ ಸಿದವರಿಂದ ದಂಡ ಸಂಗ್ರಹಿಸಲು ಪೊಲೀಸ್‌ ಇಲಾಖೆ ಇತ್ತೀಚೆಗಷ್ಟೇ ಜಾರಿಗೆ ತಂದಿದ್ದ ಅತ್ಯಾಧುನಿಕ ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌(ಪಿಡಿಎ) ಯಂತ್ರಗಳ ಕಾರ್ಯನಿರ್ವಹಣೆ ಪ್ರಾರಂಭದಲ್ಲೇ ವಿಫ‌ಲವಾಗಿದೆ. 

ಸಂಚಾರ ನಿಯಮ ಉಲ್ಲಂ ಸಿದ ವಾಹನ ಸವಾರರಿಂದ ಪೊಲೀಸರು ಹಿಂದೆ ನಗದು ರೂಪದಲ್ಲಿ ದಂಡ ಸಂಗ್ರಹಿಸುತ್ತಿದ್ದರು. ಈ ರೀತಿ ಸಂಗ್ರಹವಾದ ಮೊತ್ತವನ್ನು ಸರ್ಕಾರದ ಖಜಾನೆಗೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಮೂಲಕ ಜಮೆ ಮಾಡುತ್ತಿದ್ದರು.

ನಗದು ಮೂಲಕ ದಂಡ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪವಾಗುತ್ತಿದೆ ಎಂಬ ಕಾರಣಕ್ಕೆ ನಗದು ರಹಿತ ವ್ಯವಸ್ಥೆ ತರಲು ಸ್ಮಾರ್ಟ್‌ ಫೋನ್‌, ಪ್ರಿಂಟರ್‌ ಸೌಲಭ್ಯ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌, ಸ್ಟಿಲ್‌ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ಜಿಪಿಎಸ್‌ ತಂತ್ರಜ್ಞಾನಗಳನ್ನೊಳಗೊಂಡ ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌ (ಪಿಡಿಎ) ಯಂತ್ರವನ್ನು ಇತ್ತೀಚೆಗೆ ಸಂಚಾರ ಪೊಲೀಸರಿಗೆ ವಿತರಿಸಲಾಯಿತು. 

ಆದರೆ, ಸಂಚಾರ ಪೊಲೀಸರಿಗೆ ವಿತರಿಸಿರುವ ಪಿಡಿಎ ಯಂತ್ರದಲ್ಲಿ ನಗದು ರಹಿತ ದಂಡ ಪಾವತಿಗೆ ಅವಕಾಶವಿದ್ದರೂ ಉಪಯೋಗವಾಗುತ್ತಿಲ್ಲ. ಕಾರಣ,  ಪಿಡಿಎ ಸಾಧನದೊಂದಿಗೆ ಲಿಂಕ್‌ ಆಗಿರುವ ಬ್ಯಾಂಕ್‌ ಇನ್ನೂ ಆನ್‌ಲೈನ್‌ ವ್ಯವಹಾರಕ್ಕೆ ಸಂಚಾರ ಪೊಲೀಸರಿಗೆ ಅನುಮತಿ ನೀಡಿಲ್ಲ. 

ಆನ್‌ಲೈನ್‌ ಪಾವತಿಗೆ ಅವಕಾಶ ನೀಡುವಂತೆ ಸಂಚಾರ ಪೊಲೀಸರು 2-3 ಬಾರಿ ಬ್ಯಾಂಕ್‌ ಅಧಿಕಾರಿಗಳ ಜತೆ ಪತ್ರ ವ್ಯವಹಾರವನ್ನೂ ನಡೆಸಿದ್ದಾರೆ. ಆದರೆ,  ಬ್ಯಾಂಕ್‌ ಅಧಿಕಾರಿಗಳು ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಪಿಡಿಎ ಯಂತ್ರಗಳ ಮೂಲಕ ಆನ್‌ಲೈನ್‌ನಲ್ಲಿ ದಂಡ ಸಂಗ್ರಹ ಪ್ರಕ್ರಿಯೆ ಸದ್ಯಕ್ಕೆ ನನೆಗುದಿಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ವ್ಯಾಪಕ ಪ್ರಚಾರ ಮಾಡಿದ್ದ ಪೊಲೀಸರು: ನಗರದ ಆಯ್ದ ಪ್ರದೇಶಗಳಲ್ಲಿ ಪಿಡಿಎ ಯಂತ್ರಗಳನ್ನು ಪರಿಚಯಿಸಿದ್ದ ಸಂಚಾರ ವಿಭಾಗದ ಪೊಲೀಸರು ಆ ಬಗ್ಗೆ ಪ್ರಚಾರವನ್ನೂ ಮಾಡಿದ್ದರು. ಇನ್ಮುಂದೆ  ಸಂಚಾರ ನಿಯಮ ಉಲ್ಲಂ ಸುವವರು ತಕ್ಷಣಕ್ಕೆ ನಗದು ಇಲ್ಲದೇ ಹೋದಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ದಂಡ ಪಾವತಿಸಬಹುದು ಎಂದು ಹೇಳಿದ್ದರು.

ಆದರೆ, ಪೂರ್ವ ಸಿದ್ಧತೆ ಸಮಸ್ಯೆ ಯಿಂದಾಗಿ ಪಿಡಿಎ ಯಂತ್ರದ ಮೂಲಕ ದಂಡ ಸ್ವೀಕಾರ ಸಾಧ್ಯವಾಗುತ್ತಿಲ್ಲ. ಇದು ಕೆಲವೆಡೆ ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಜಗಳಕ್ಕೇ ಬರುತ್ತಿದ್ದಾರೆ ಜನ: ಅತ್ಯಾಧುನಿಕ ತಂತ್ರಜ್ಞಾನದ ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌(ಪಿಡಿಎ)ನಲ್ಲಿ ಎಲ್ಲ ರೀತಿಯ ತಂತ್ರಜ್ಞಾನವಿದೆ. ಕಾರ್ಡ್‌ಗಳ ಬಳಕೆಗೆ ಅವಕಾಶವಿದ್ದರೂ ಸದ್ಯಕ್ಕೆ ಬಳಸಲಾಗುತ್ತಿಲ್ಲ. ಇದರಿಂದ ವಾಹನ ಸವಾರರು ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಕಾರ್ಡ್‌ ಗಳ ಸ್ವೆ„ಪಿಂಗ್‌ಗೆ ಅವಕಾಶವಿದ್ದರೂ ಏಕೆ ಉಪಯೋಗಿಸುತ್ತಿಲ್ಲ ಎಂದು ಮರು ಪ್ರಶ್ನೆ ಕೇಳುತ್ತಾರೆ.

ಸಮಸ್ಯೆ ವಿವರಿಸಿದರೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪೊಲೀಸ್‌ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಸಂಚಾರ ಪೊಲೀಸರಿಗೆ ವಿತರಿಸಿರುವ ಪಿಡಿಎ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ದಂಡ ಸಂಗ್ರಹ ಸಾಧ್ಯವಾಗುತ್ತಿಲ್ಲ. 10-15 ದಿನಗಳಲ್ಲಿ ಎಲ್ಲವೂ ಬಗಹರಿಯಲಿದೆ.

* ಮೋಹನ್‌ ಭದ್ರಾವತಿ


More News of your Interest

Trending videos

Back to Top