ಜಿಎಸ್ಟಿ ಸುಲಲಿತ ಅನುಷ್ಠಾನಕ್ಕಾಗಿ ಟಿಡಿಎಸ್, ಟಿಸಿಎಸ್ ಮುಂದಕ್ಕೆ
Team Udayavani, Jun 26, 2017, 4:41 PM IST
ಹೊಸದಿಲ್ಲಿ : ದೇಶವು ಮಹತ್ವಾಕಾಂಕ್ಷೆಯಿಂದ ಎದುರು ನೋಡುತ್ತಿರುವ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲು (ಜು.1ರಿಂದ) ಇನ್ನು ಕೇವಲ ನಾಲ್ಕು ದಿನಗಳು ಉಳಿದಿವೆ. ಈ ನಡುವೆ ಸರಕಾರ ಜಿಎಸ್ಟಿ ಅಡಿ ಟಿಡಿಎಸ್ ಮತ್ತು ಟಿಸಿಎಸ್ ಅವಕಾಶಗಳ ಅನುಷ್ಠಾನವನ್ನು ತಡೆ ಹಿಡಿದಿದ್ದು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಕೈಗೊಳ್ಳುವ ಸಣ್ಣ ಉದ್ದಿಮೆಗಳ ನೋಂದಾವಣೆಗೆ ವಿನಾಯಿತಿ ನೀಡಿದೆ.
ಜು.1ರಿಂದ ಜಾರಿಗೆ ಬರುವ ಜಿಎಸ್ಟಿ ಅಡಿ ಇ-ಕಾಮರ್ಸ್ ಕಂಪೆನಿಗಳು ಪೂರೈಕೆದಾರರಿಗೆ ಮಾಡುವ ಪಾವತಿಗಳ ಮೇಲೆ ಶೇ.1ರ ಟಿಸಿಎಸ್ (ಮೂಲದಲ್ಲಿ ತೆರಿಗೆ ಸಂಗ್ರಹ – ಟ್ಯಾಕ್ಸ್ ಕಲೆಕ್ಷನ್ ಅಟ್ ಸೋರ್ಸ್) ಸಂಗ್ರಹಿಸಬೇಕಾಗಿಲ್ಲ ಎಂದು ತಿಳಿದು ಬಂದಿದೆ.
ಸೆಂಟ್ರಲ್ ಜಿಎಸ್ಟಿ (ಸಿಜಿಎಸ್ಟಿ) ಕಾಯಿದೆ ಪ್ರಕಾರ 2.50 ಲಕ್ಷ ರೂ.ಗಳಿಗೆ ಮೀರುವ ಸರಕು ಮತ್ತು ಸೇವೆಗಳ ಪೂರೈಕೆದಾರರಿಗೆ ಮಾಡಲಾಗುವ ಪಾವತಿಗಳ ಮೇಲೆ ಶೇ.1ರ ಟಿಡಿಎಸ್ (ಮೂಲದಲ್ಲೇ ಕಡಿತ ಮಾಡಲಾಗುವ ತೆರಿಗೆ) ನಮೂದಿತ ಸಂಸ್ಥೆಗಳು ಸಂಗ್ರಹಿಸಬೇಕಾಗಿಲ್ಲ. ಸದ್ಯಕ್ಕೆ ಇದನ್ನು ತಡೆಹಿಡಿಯಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ವಲಯದಿಂದ ಸ್ವೀಕರಿಸಲಾಗಿರುವ ಫೀಡ್ ಬ್ಯಾಕ್ ಆಧರಿಸಿ, ಸರಕಾರವು 2017ರ ಸಿಜಿಎಸ್ಟಿ/ಸ್ಟೇಟ್ ಜಿಎಸ್ಟಿ ಅಡಿಯ ಟಿಡಿಎಸ್ (ಸೆ.51) ಮತ್ತು ಟಿಸಿಎಸ್ (ಸೆ.52) ಅವಕಾಶಗಳನ್ನು, ಜಿಎಸ್ಟಿಯ ಸುಲಲಿತ ಅನುಷ್ಠಾನಕ್ಕಾಗಿ, ಮುಂದಕ್ಕೆ ಹಾಕಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.