ಮತ್ತೆ ಗೂಳಿ ಪ್ರವೇಶ : ಮುಂಬಯಿ ಶೇರು 276 ಅಂಕ ಜಿಗಿತ
Team Udayavani, Aug 23, 2017, 5:52 PM IST
ಮುಂಬಯಿ : ಶೇರು ಮಾರುಕಟ್ಟೆಗೆ ಮತ್ತೆ ಗೂಳಿ ಪ್ರವೇಶಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನದ ಮುನ್ನಡೆಯ ರೂಪದಲ್ಲಿ ಇಂದು ಬುಧವಾರದ ವಹಿವಾಟನ್ನು 276.16 ಅಂಕಗಳ ಭರ್ಜರಿ ಏರಿಕೆಯೊಂದಿಗೆ 31,568.01 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 86.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,852.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಇಂದು ಶೇ.1.1ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡವು. ಇಂದಿನ ವಹಿವಾಟಿನಲ್ಲಿ ಹಿನ್ನಡೆ ಕಂಡ ಪ್ರತೀ ಒಂದು ಶೇರಿಗೆ ಪ್ರತಿಯಾಗಿ ಎರಡು ಶೇರುಗಳು ಮುನ್ನಡೆ ಕಂಡವು. ಅಂತೆಯೇ ವಹಿವಾಟಿನ ಹರಹು ಧನಾತ್ಮಕವಾಗಿತ್ತು.