Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಘೋಷಣೆ ಆದರೆ ಸಾಲದು ಸಮರ್ಪಕ ಅನುಷ್ಠಾನ ಮುಖ್ಯ

ಎತ್ತಿನಹೊಳೆ ಯೋಜನೆ, ಸಮುದ್ರದಿಂದ ನೀರು ಶುದ್ಧೀಕರಿಸಿ ಇನ್ನೆಲ್ಲಿಗೋ ಸಾಗಿಸುವುದೇ ಮೊದಲಾದ ದುರ್ಗಮ ಯೋಜನೆಗಳಿಗಿಂತ ಪಶ್ಚಿಮ ವಾಹಿನಿಯಂತಹ ವಾಸ್ತವಿಕ ನೆಲೆಯ ಯೋಜನೆಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೂ ಬರದ ಬಿಸಿ ತಟ್ಟುವ ಲಕ್ಷಣಗಳು ಕಾಣಿಸಿರುವಾಗಲೇ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಿಸಲು ಸರಕಾರ ಮುಂದಾಗುವ ಸಾಧ್ಯತೆಯಿದೆ ಎಂಬ ಕಿವಿಗಿಂಪು ಸುದ್ದಿಯೊಂದು ತೇಲಿ ಬಂದಿದೆ. ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಿಸುವ ಪ್ರಸ್ತಾವ ಮಂಡಿಸುತ್ತಾರೆಯೇ ಇಲ್ಲವೇ ಅನ್ನುವುದು ಬೇರೆ ವಿಚಾರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕರಾವಳಿಗೆ ಈ ಯೋಜನೆ ಅಗತ್ಯವಾಗಿ ಬೇಕು. ಏಕೆಂದರೆ ಈಗ ಉಳಿದೆಡೆಗಳಂತೆ ಕರಾವಳಿಯಲ್ಲೂ ಬೇಸಿಗೆ ಶುರುವಾಗುವುದಕ್ಕಿಂತಲೂ ಮೊದಲೇ ನೀರಿನ ಕೊರತೆ ಕಂಡು ಬರುತ್ತಿದೆ. ಸಮೃದ್ಧ ಜಲಮೂಲಗಳಿದ್ದರೂ ಕರಾವಳಿ ಜಿಲ್ಲೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಇದಕ್ಕೆ ಕಾರಣ ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ಯೋಜನೆಗಳ ಕೊರತೆ. 

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿದು ಸಮುದ್ರ ಸೇರುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಿ ಜನರಿಗೆ ನೀರನುಕೂಲ ಮಾಡಿಕೊಡುವ, 2001ರಲ್ಲಿ ರಚನೆಯಾದ ಯೋಜನೆ ಪಶ್ಚಿಮ ವಾಹಿನಿ. ಎಸ್‌. ಎಂ. ಕೃಷ್ಣ ಕಾಲದಲ್ಲಿ ಯೋಜನೆಯ ನೀಲನಕ್ಷೆ ತಯಾರಾಗಿತ್ತು. ಅನಂತರ ಧೂಳು ತಿನ್ನುತ್ತಿದ್ದ ಈ ಯೋಜಧಿನೆಯ ಕಡತವನ್ನು ಹುಡುಕಿ ತೆಗೆದದ್ದು ಸದಾನಂದ ಗೌಡರು. ಬಳಿಕ ಬಂದ ಕಾಂಗ್ರೆಸ್‌ ಸರಕಾರ ಈ ಯೋಜನೆ ಸರಿಸಿ ಎತ್ತಿನ ಹೊಳೆ ಯೋಜನೆ ಜಾರಿಗೆ ತರಲು ಅತ್ಯುತ್ಸಾಹ ತೋರಿಸಿತು. ಇದಕ್ಕೆ ಕರಾವಳಿ ಭಾಗದಿಂದ ಭಾರೀ ವಿರೋಧವಿದೆ. ಈ ವಿರೋಧವನ್ನು ತಣ್ಣಗಾಗಿಸುವ ಸಲುವಾಗಿ "ಸುವರ್ಣ ವಾಹಿನಿ' ಎಂಬ ಹೊಸ ನಾಮಕರಣದೊಂದಿಗೆ ಜಾರಿಗೆ ಹೊರಟಿದೆ ಎನ್ನಲಾಗುತ್ತಿದೆ. 

ಕರಾವಳಿಯ ಮೂರು ಜಿಲ್ಲೆಗಳಲ್ಲಿ 13 ಪ್ರಮುಖ ನದಿಗಳು ಸಮುದ್ರವನ್ನು ಸೇರುತ್ತಿವೆ. ಚಿಕ್ಕಪುಟ್ಟ ತೊರೆ, ಹಳ್ಳಗಳನ್ನು ಸೇರಿಸಿದರೆ ಸೇರಿಸಿದರೆ 22 ನದಿಗಳಾಗುತ್ತದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಮಳೆಗಾಲದಲ್ಲಿ 2000 ಟಿಎಂಸಿ ನೀರು ಈ ನದಿಗಳ ಮೂಲಕ ಸಮುದ್ರ ಸೇರುತ್ತದೆ. ಪ್ರಸ್ತುತ ಇದರಲ್ಲಿ ಬರೀ ಶೇ.2.5 ನೀರು ಮಾತ್ರ ಜನರ ಬಳಕೆಗೆ ಸಿಗುತ್ತಿದೆ. ಸುಮಾರು 350 ಕಿಂಡಿ ಅಣೆಕಟ್ಟೆಗಳನ್ನು ಕಟ್ಟಿ ನೀರು ಹಿಡಿದಿಡಲು ಯೋಜನೆ ರೂಪಿಸಲಾಗಿತ್ತು. ವಾಸ್ತವವಾಗಿ 950ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟೆ ನಿರ್ಮಿಸಲು ಅವಕಾಶವಿದೆ. 

ಈ ಯೋಜನೆಯಿಂದ ಅರಣ್ಯ ನಾಶ, ಭೂ ಸ್ವಾಧೀನ, ಜನವಸತಿ ಪ್ರದೇಶ ಮುಳುಗಡೆಯಂತಹ ಸಮಸ್ಯೆಗಳಿಲ್ಲ. ಯೋಜನೆ ಕಾಲಮಿತಿಯೊಳಗೆ ಜಾರಿಯಾದರೆ ನೀರು ಲಭ್ಯವಾಗಿ ಮೂರು ಜಿಲ್ಲೆಗಳ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಲಿದೆ. ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಒಳನಾಡು ಮೀನುಗಾರಿಕೆ ವಿಪುಲ ಅವಕಾಶ ಸಿಗುತ್ತದೆ. ಜತೆಗೆ ಸುಮಾರು 5000 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸಬಹುದು. ಇಷ್ಟೆಲ್ಲ ಪ್ರಯೋಜನಗಳಿರುವ ಯೋಜನೆ ಅನುಷ್ಠಾನವಾಗುವಂತೆ ಮಾಡುವ ಛಲ ಈ ಭಾಗದ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದು ದೌರ್ಭಾಗ್ಯ. 

2001ರಲ್ಲಿ ಯೋಜನೆ ರೂಪಿಸುವಾಗ 100 ಕೋ. ರೂ. ವೆಚ್ಚ ಅಂದಾಜಿಸಲಾಗಿತ್ತು. 2005ರಲ್ಲಿ ಅದು 423 ಕೋಟಿಗೇರಿತ್ತು. ಈಗ 1,000 ಕೋ. ರೂ. ವೆಚ್ಚ ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ಪ್ರಸ್ತಾವವಾಗಿ ಉಳಿದ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಅನುಷ್ಠಾನಗೊಳ್ಳುವಾಗ ವೆಚ್ಚ ಇಮ್ಮಡಿಯಾದರೂ ಆಶ್ಚರ್ಯವಿಲ್ಲ. ಹಾಲಿ ಸರಕಾರದ ಅವಯಿರುವುದು ಇನ್ನು ಒಂದು ವರ್ಷ ಮಾತ್ರ. ಅಷ್ಟರೊಳಗೆ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನವಾದೀತು ಎಂದು ನಿರೀಕ್ಷಿಸುವಂತಿಲ್ಲ. ಮಹದಾಯಿ, ಮಲಪ್ರಭಾ ಎಡದಂಡೆಯಂತಹ ಪ್ರಮುಖ ಯೋಜನೆಗಳೇ ಕುಂಟುತ್ತಿವೆ; ವಾರಾಹಿ ಯೋಜನೆ ಪೂರ್ತಿಯಾಗಲು ಮೂರು ದಶಕ ಹಿಡಿದಿದೆ ಎನ್ನುವುದೇ ನೀರಾವರಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಳ್ಳುತ್ತಿವೆ ಎನ್ನುವುದಕ್ಕೆ ಸಾಕ್ಷಿ. ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸರಕಾರ ಕನಿಷ್ಠ ಯೋಜನೆಯ ಅನುಷ್ಠಾನವನ್ನು ಘೋಷಿಸಿ ಅನುದಾನವನ್ನು ಮೀಸಲಿಟ್ಟರೆ ಅಷ್ಟರಮಟ್ಟಿಗೆ ಕರಾವಳಿ ಜನತೆ ಅವರಿಗೆ ಕೃತಜ್ಞರಾಗಿರುತ್ತಾರೆ. ಪಶ್ಚಿಮ ವಾಹಿನಿಗೂ ಪ್ರತ್ಯೇಕವಾದ ನಿಗಮ ಸ್ಥಾಪಿಸಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಲು ಕರಾವಳಿ ಭಾಗದ ಶಾಸಕರು ಪಕ್ಷಬೇಧವಿಲ್ಲದೆ ಒತ್ತಡ ಹಾಕಬೇಕು.


More News of your Interest

Trending videos

Back to Top