Updated at Sun,23rd Apr, 2017 11:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಧಿಕಾರ ಪ್ರದರ್ಶನದ ಶೋಕಿ ಲಾಲ್‌ಬತ್ತಿ ಸಂಸ್ಕೃತಿಗೆ ಗುಡ್‌ಬೈ

ಆರೋಗ್ಯಕರ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವ ಸಲುವಾಗಿ ಮಂತ್ರಿ ಮಹೋದಯರು, ಗಣ್ಯರ ಗೂಟದ ಕಾರಿನ ಗೀಳಿಗೆ ಕೊನೆ ಹಾಡಲು ಕೇಂದ್ರ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಇದು ದೇಶದಲ್ಲಿ ದಿಲ್ಲಿಯಿಂದ ಹಳ್ಳಿಯ ತನಕ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.

ಗಣ್ಯ ವ್ಯಕ್ತಿಗಳ ಗೂಟದ ಕಾರಿನ ವ್ಯಾಮೋಹಕ್ಕೆ ಕೇಂದ್ರ ಸರಕಾರ ಕೊನೆಯ ಮೊಳೆ ಬಡಿದಿದೆ. ಮೇ 1ರಿಂದ ಯಾವುದೇ ವಿಐಪಿ ವ್ಯಕ್ತಿಗಳು ಗೂಟದ ಕಾರುಗಳಲ್ಲಿ ಓಡಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಗಣ್ಯರ ಗೂಟದ ಕಾರಿನ ಗೀಳಿಗೆ ಕಡಿವಾಣ ಹಾಕಲು ಮುಂದಾಗಿರುವುದು ಇದೇ ಮೊದಲೇನಲ್ಲ. 2013ರಲ್ಲಿ ಸುಪ್ರೀಂ ಕೋರ್ಟ್‌ ಗೂಟದ ಕಾರು ಬಳಕೆಗೆ ಮಿತಿ ಹಾಕಬೇಕೆಂದು ಆದೇಶ ನೀಡಿತ್ತು. ಆದರೆ ಯಾವುದೇ ಆದೇಶ ಅಥವಾ ಕಾನೂನು ಗಣ್ಯರ ಗೀಳಿಗೆ ಲಗಾಮು ಹಾಕಲು ಶಕ್ತವಾಗಿರಲಿಲ್ಲ. ಇದೀಗ ಕೇಂದ್ರ ಬರೀ ಒಂದು ನಿರ್ಧಾರದಿಂದ ದೇಶದಿಂದ ಗೂಟದ ಕಾರಿನ ಸಂಸ್ಕೃತಿಯೇ ಕಣ್ಮರೆಯಾಗುವಂತೆ ಮಾಡಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಶ್ರೇಷ್ಠ ನ್ಯಾಯಾಧೀಶ, ಲೋಕಸಭೆಯ ಸ್ಪೀಕರ್‌, ಉಪರಾಷ್ಟ್ರಪತಿ ಸೇರಿದಂತೆ ಯಾರೂ ಮೇ 1ರಿಂದ ಗೂಟದ ಕಾರು ಬಳಸುವಂತಿಲ್ಲ. ಈ ಕಾರಣಕ್ಕೆ ಈ ನಿರ್ಧಾರ ಐತಿಹಾಸಿಕವೆನಿಸುತ್ತದೆ. ರಾಷ್ಟ್ರಪತಿ, ಪ್ರಧಾನಮಂತ್ರಿಯೇ  ಗೂಟದ ಕಾರು ಬಳಸುವುದಿಲ್ಲ ಎಂದ ಮೇಲೆ ಉಳಿದ ಸಚಿವರು ಅಥವಾ ಅಧಿಕಾರಿಗಳು ಬಳಸುವ ಮಾತೇ ಇಲ್ಲ. ಮೇ 1ರಂದು ಗೂಟದ ಕಾರು ನಿಷೇಧಿಸಿ ಸರಕಾರ ಆದೇಶ ಹೊರಡಿಸಲಿದೆ. 

ಹಿಂದಿ ವಲಯದಲ್ಲಿ "ಲಾಲ್‌ಬತ್ತಿ ಸಂಸ್ಕೃತಿ' ಎಂದೇ ಜನಜನಿತವಾಗಿರುವ ಗೂಟದ ಕಾರು ಬ್ರಿಟಿಷರ ಕಾಲದ ಗುಲಾಮೀ ಮನೋಧರ್ಮವನ್ನು ತೋರಿಸುತ್ತದೆ. ಈ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗೂಟದ ಕಾರಿನ ಬಳಕೆಗೆ ಕಡಿವಾಣ ಹಾಕುವಂತೆ ಸೂಚಿಸಿತ್ತು. ಭಾರತೀಯರನ್ನು ಗುಲಾಮರಂತೆ ನೋಡುತ್ತಿದ್ದ ಬ್ರಿಟಿಷ್‌ ಅಧಿಕಾರಿಗಳ ಮನೋಧರ್ಮವನ್ನು ಗೂಟದ ಕಾರುಗಳು ಬಿಂಬಿಸುತ್ತವೆ. ಗುಲಾಮೀ ಸಂಸ್ಕೃತಿಯ ಪ್ರತೀಕವಾದ ಗೂಟದ ಕಾರುಗಳನ್ನು ಬಳಸಲು ಅಧಿಕಾರದಲ್ಲಿರುವವರು ಹಾತೊರೆಯುವುದು ಹಾಸ್ಯಾಸ್ಪದ ಎಂದು ಅಂದೇ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆದರೆ ಅಧಿಕಾರ ಅಥವಾ ಗಣ್ಯತನ ಪ್ರದರ್ಶನದ ಸಂಸ್ಕೃತಿಗೆ ಒಗ್ಗಿ ಹೋದವರಿಗೆ ಅದನ್ನು ತ್ಯಜಿಸುವುದು ಕಷ್ಟವೇ ಸರಿ. ಹೀಗಾಗಿ ಸುಪ್ರೀಂ ಕೋರ್ಟಿನ ಆದೇಶದ ಹೊರತಾಗಿಯೂ ಗೂಟದ ಕಾರು ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಬಿಡಿ; ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರಂತಹವರು, ಕೊನೆಗೆ ಪಂಚಾಯತ್‌ ಸದಸ್ಯರು ಕೂಡ ಗೂಟದ ಕಾರುಗಳನ್ನು ಬಳಸುತ್ತಿದ್ದರು. ಇಂತಹ ಕಾರುಗಳಲ್ಲಿ ಬಂದವರಿಗೆ ಜನರು ವಿಶೇಷ ಮರ್ಯಾದೆ ನೀಡುವುದು ಗೂಟದ ಕಾರಿನ ವ್ಯಾಮೋಹದ ಹಿಂದಿನ ಮುಖ್ಯ ಕಾರಣ. ಕಡೆಗೆ ಗೂಂಡಾಗಳು ಮತ್ತು ಪುಂಡು ಪೋಕರಿಗಳು ಕೂಡ ಗೂಟದ ಕಾರಿನಲ್ಲಿ ಪ್ರಯಾಣಿಸುವ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟು ಹೋಯಿತು. ಗೂಟದ ಕಾರುಗಳನ್ನು ಪೊಲೀಸರು ತಪಾಸಣೆ ಮಾಡಿ ದಂಡ ಹಾಕುವುದಿರಲಿ, ಅದನ್ನು ತಡೆಯುವ ಧೈರ್ಯವನ್ನೇ ಮಾಡುವುದಿಲ್ಲ. 

ಕೇಂದ್ರ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸುಳಿವು ಕೆಲ ದಿನಗಳ ಹಿಂದೆಯೇ ಇತ್ತು. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿ ದಿಲ್ಲಿಯ ಸಾಮಾನ್ಯ ಟ್ರಾಫಿಕ್‌ನಲ್ಲಿ ಪ್ರಯಾಣಿಸಿದ್ದರು. ಅವರಿಗಾಗಿ ವಾಹನಗಳನ್ನು ತಡೆದು ನಿಲ್ಲಿಸಲಿಲ್ಲ ಮತ್ತು ಅವರ ಕಾರಿನ ಮೇಲೆ ಕೆಂಪು ದೀಪ ಇರಲಿಲ್ಲ. ಆ ಬಳಿಕ ಲಾಲ್‌ಬತ್ತಿ ಸಂಸ್ಕೃತಿಯನ್ನು ರದ್ದುಪಡಿಸುವ ಕುರಿತು ಅವರು ಚಿಂತನ ನಡೆಸಿದ್ದರು. ನಂತರ ಹೆಚ್ಚು ವಿಳಂಬ ಮಾಡದೆ ನಿರ್ಧಾರ ಕೈಗೊಂಡಿದ್ದಾರೆ. ಹಾಗೆಂದು ಅಧಿಕಾರದಲ್ಲಿರುವವರೆಲ್ಲ ಗೂಟದ ಕಾರಿನ ಮೋಹಿಗಳು ಎಂದು ಸಾರ್ವತ್ರೀಕರಿಸುವುದು ತಪ್ಪಾಗುತ್ತದೆ. ಈ ಸೌಲಭ್ಯ ನಿರಾಕರಿಸಿದ ಅನೇಕ ಮಂದಿ ಇದ್ದಾರೆ. ಮಮತಾ ಬ್ಯಾನರ್ಜಿ ಮೊದಲ ಸಲ ಮುಖ್ಯಮಂತ್ರಿಯಾದಾಗ ಗೂಟದ ಕಾರು ಬೇಡ ಎಂದಿದ್ದರು. ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌, ಇತ್ತೀಚೆಗೆ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮತ್ತು ಅವರ ಬೆನ್ನಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಗೂಟದ ಕಾರಿಗೆ ವಿದಾಯ ಹೇಳಿದ್ದಾರೆ. 

ಆರೋಗ್ಯಕರ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವ ಸಲುವಾಗಿ ಕೇಂದ್ರ ಲಾಲ್‌ಬತ್ತಿ ಸಂಸ್ಕೃತಿ ಕೊನೆಗೊಳಿಸಿರುವುದು ಅತ್ಯುತ್ತಮ ನಿರ್ಧಾರ. ಇದರ ಜತೆಗೆ ಮಂತ್ರಿಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಇರುವ ಅನಗತ್ಯ ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ರದ್ದುಪಡಿಸುವ ಮೂಲಕ ಜನರ ತೆರಿಗೆ ಹಣ ವಿಐಪಿ ಸಂಸ್ಕೃತಿಗೆ ಪೋಲಾಗುವುದನ್ನು ತಡೆಯಬೇಕು.


More News of your Interest

Trending videos

Back to Top