CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಬಿಗ್‌ ಬಾಸ್‌', ಸಿಸಿಎಲ್‌ ಮತ್ತು ಪ್ರೇಮ್‌ ಕಂಡರೆ ಸುದೀಪ್‌ಗೆ ಭಯವಂತೆ

ಬೆಂಗಳೂರು: "ಬಿಗ್‌ ಬಾಸ್‌' ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ನಮಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಇಂತಹ ಘಟನೆಗಳು "ಬಿಗ್‌ ಬಾಸ್‌' ಮನೆಯಲ್ಲಿ ನಡೆದರೆ ನಾನು ಅಲ್ಲಿ ಇರುವುದಿಲ್ಲ. ಜನರ ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡದು ಬೇರೆ ಏನೂ ಇಲ್ಲ ಎಂದು ಸುದೀಪ್‌ ಹೇಳಿದ್ದಾರೆ.
ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ "ಬಿಗ್‌ ಬಾಸ್‌'ನ ಐದನೇ ಅವತರಣಿಕೆ ಅಕ್ಟೋಬರ್‌ 15ರಿಂದ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷದ "ಬಿಗ್‌ ಬಾಸ್‌'ನ ನಾಲ್ಕನೆಯ ಸೀಸನ್‌ನಲ್ಲಿ ನಡೆದ ಒಂದು ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಸೀಕ್ರೆಟ್‌ ರೂಂಗೆ ಬಿಟ್ಟು ಬರುವ ಸಂದರ್ಭದಲ್ಲಿ ಚಾನಲ್‌ನ ಬಿಝಿನೆಸ್‌ ಹೆಡ್‌ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್‌ ನಡುವಿನ ದೃಶ್ಯವೊಂದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕುರಿತು ಮಾತನಾಡುವ ಸುದೀಪ್‌, "ನನಗೆ ಪರಮೇಶ್‌ ಮತ್ತು ಮಾಳವಿಕಾ ಇಬ್ಬರೂ ಚೆನ್ನಾಗಿ ಗೊತ್ತು. ಮಾಳವಿಕಾ ಅವರು ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಸಾಕಷ್ಟು ಅಳುಕಿತ್ತು. ಜನ ತಮ್ಮನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆಗ ಅವರಿಗೆ ಪರಮೇಶ್‌ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಾಳವಿಕಾ ಅವರು ಹಗ್‌ ಮಾಡಿ ಮುತ್ತು ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಅಪಾರ್ಥ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಡೀ ಕಾರ್ಯಕ್ರಮ ಸ್ಕ್ರಿಪ್ಟೆಡ್‌ ಆಗಿದ್ದರೆ, ಮಾಳವಿಕಾ ಅವರು ಗೆಲ್ಲಬೇಕಿತ್ತು.

ಆದರೆ, ಕಳೆದ ಬಾರಿ ಗೆದ್ದಿದ್ದು ಇನ್ನಾéರೋ ಬೇರೆ. ಹಾಗಾಗಿ ಇದೆಲ್ಲಾ ಸುಳ್ಳು. ಈ ಕುರಿತು ಪರಮೇಶ್‌ ಅವರಿಗೆ ಫೋನ್‌ ಬಂದಿದೆ. ಇಷ್ಟು ದುಡ್ಡು ಕೊಟ್ಟರೆ, ಈ ವೀಡಿಯೋ ಅಪ್‌ಲೋಡ್‌ ಮಾಡುವುದಿಲ್ಲ ಎಂದು ಯಾರೋ ಹೆದರಿಸಿದ್ದಾರೆ. ಅವರು ಅದಕ್ಕೆ ಕೇರ್‌ ಮಾಡದ ಕಾರಣ, ವೀಡಿಯೋ ಹೊರಬಂದಿದೆ' ಎನ್ನುತ್ತಾರೆ ಸುದೀಪ್‌.

ಹಾವನ್ನು ಜೇಬಲ್ಲಿ ಇಟ್ಟುಕೊಳ್ಳುವುದು ಕಷ್ಟ: ಇದು ಯಾರ ಷಡ್ಯಂತ್ರ ಎಂಬ ಸತ್ಯ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಎನ್ನುವ ಸುದೀಪ್‌, "ಶತ್ರು ಎಲ್ಲೋ ಇಲ್ಲ. ಒಳಗೇ ಇದ್ದಾರೆ. "ಬಿಗ್‌ ಬಾಸ್‌'ನ ಕಂಸೋಲ್‌ ರೂಂಗೆ ಹೋಗುವುದಕ್ಕೆ ಅನುಮತಿ ಇರುವವರೇ ಈ ಕೆಲಸ ಮಾಡಿದ್ದಾರೆ. ಎಷ್ಟು ಜಾಣ್ಮೆಯಿಂದ ಕೆಲಸ ಮಾಡಿದ್ದಾರೆಂದರೆ, ಎಷ್ಟು ಬೇಕೋ ಅಷ್ಟೇ ಬಿಟ್ಟಿದ್ದಾರೆ. ಅವರಿಗೆ ಗೊತ್ತಿಲ್ಲ, ಹಾವನ್ನು ಜೇಬಲ್ಲಿ ಇಟ್ಟುಕೊಳ್ಳುವುದು ಎಷ್ಟು ಕಷ್ಟ ಎಂದು. ಆ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ಜನ ಕೆಲಸ ಮಾಡುತ್ತಾರೆ. ಕೆಲವರಿಗೆ ಮಾತ್ರ ಒಳಗೆ ಹೋಗುವ ಅವಕಾಶ ಇದೆ. ಹಾಗಾಗಿ ಒಳಗಿರುವವರು ಮಾತ್ರ ಈ ಕೆಲಸ ಮಾಡುವುದಕ್ಕೆ ಸಾಧ್ಯ. ಒಂದಲ್ಲ ಒಂದು ದಿನ ಆ ಕೆಲಸ ವೀಡಿಯೋ ಅಪ್‌ಲೋಡ್‌ ಮಾಡಿ, ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು ಎಂದು ಗೊತ್ತಾಗುತ್ತದೆ' ಎಂದರು.

ಕರಿಗೂದಲು ಬಿಳಿಯಾಗೋದಕ್ಕೆ ಕಾರಣ: ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಮನುಷ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಕುರಿತು ಮಾತನಾಡಿದ ಅವರು, "ಜಗತ್ತಿನಲ್ಲಿ ಅದೆಷ್ಟೋ ಕಲೆಗಳಿವೆ. ಆದರೆ, ಬಹಳಷ್ಟು ಜನರಿಗೆ ಒಂದೊಳ್ಳೆಯ ವೇದಿಕೆ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಇದೊಂದು ಒಳ್ಳೆಯ ವೇದಿಕೆಯಾಗಲಿದೆ. ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರು ಹೇಗೆ ಬೆರೆಯುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಅವರಿಗೆ ಕ್ಯಾಮೆರಾ ಗೊತ್ತಿಲ್ಲ. ಹಾಗಾಗಿ ತುಂಬಾ ಗಲಾಟೆಯಾಗುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೇನೆ. ಶುಕ್ರವಾರ ಆದರೆ ಬಹಳ ಹಿಂಸೆ. ಏಕೆಂದರೆ, ತಮ್ಮ ನೋವನ್ನು ಹೇಳಿಕೊಳ್ಳುವುದಕ್ಕೆ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಅವರನ್ನೆಲ್ಲಾ ಸಮಾಧಾನ ಮಾಡೋದೇ ದೊಡ್ಡ ಕೆಲಸ. ನಿಜ ಹೇಳಬೇಕೆಂದರೆ, ನನ್ನ ಕಪ್ಪು ಕೂದಲು ಬಿಳಿಯಾಗೋಕೆ ಕಾರಣ "ಬಿಗ್‌ ಬಾಸ್‌', ಸಿಸಿಎಲ್‌ ಮತ್ತು ನಿರ್ದೇಶಕ ಪ್ರೇಮ್‌' ಎಂದು ನಗೆಚಟಾಕಿ ಹಾರಿಸಿದರು ಸುದೀಪ್‌.

ಜಗತ್ತು ನೋಡುವ ರೀತಿ ಬದಲಾಗಿದೆ: "ಬಿಗ್‌ ಬಾಸ್‌' ಕಾರ್ಯಕ್ರಮದಿಂದ ಏನು ಕಲಿತಿರಿ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಯಾರಿಗೂ ಹೊಡೆಯಬಾರದು, ಸೀಕ್ರೆಟ್‌ ರೂಂ ಹತ್ತಿರ ಹೋಗಬಾರದು' ಎಂದು ನಗೆಚಟಾಕಿ ಹಾರಿಸಿದರು. "ನಿಜ ಹೇಳಬೇಕೆಂದರೆ, ಈ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪ್ರಾರಂಭಿಸಿದ ಮೇಲೆ ಸಾಕಷ್ಟು ತಾಳ್ಮೆ ಬಂದಿದೆ. ಅಷ್ಟೇ ಅಲ್ಲ, ನಾನು ಜಗತ್ತನ್ನು ನೋಡುವ ರೀತಿ ಬದಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾನೊಬ್ಬ ಒಳ್ಳೆಯ ಕೇಳುಗನಾಗುವುದರ ಜೊತೆಗೆ, ಏನೇನು ಮಾಡಬಾರದು ಎಂದು ಅರಿತುಕೊಂಡಿದ್ದೇನೆ. ಒಟ್ಟಾರೆ ನನ್ನ ದೃಷ್ಟಿಕೋನವೇ ಬದಲಾಗಿದೆ' ಎಂದು ಹೇಳಿದರು.

ಇನ್ನು "ಬಿಗ್‌ ಬಾಸ್‌'ನ ಐದನೆಯ ಅವತರಣಿಕೆಯು ಅಕ್ಟೋಬರ್‌ 15ರಿಂದ ಕಲರ್ಸ್‌ ಸೂಪರ್‌ ಚಾನಲ್‌ನಲ್ಲಿ ಪ್ರಾರಂಭವಾಗಲಿದೆ. 16ರಿಂದ ಪ್ರತಿ ರಾತ್ರಿ 8ರಿಂದ 9ರವರೆಗೂ ಪ್ರಸಾರವಾಗಲಿದೆ. ಈ ಬಾರಿ ಒಟ್ಟು 17 ಸ್ಪರ್ಧಿಗಳಿದ್ದು, ಆ ಪೈಕಿ 11 ಜನ ಸೆಲೆಬ್ರಿಟಿಗಳಿದ್ದರೆ, ಆರು ಸಾಮಾನ್ಯ ಜನರಿರುತ್ತಾರೆ. ಈ ಆರು ಜನಸಾನಾನ್ಯರನ್ನು ಸುಮಾರು 40 ಸಾವಿರ ಜನರ ಪೈಕಿ ಆಯ್ಕೆ ಮಾಡಲಾಗಿದೆ. ಈ ಬಾರಿಯ ಕಾರ್ಯಕ್ರಮದ ವಿಶೇಷತೆಯೆಂದರೆ, ಸುದೀಪ್‌ ಪ್ರತಿ ಭಾನುವಾರ ರಾತ್ರಿ ಅಡುಗೆ ಮಾಡಿ ಬಡಿಸುತ್ತಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಕಲರ್ಸ್‌ ಕನ್ನಡ ಹಾಗೂ ಕಲರ್ಸ್‌ ಸೂಪರ್‌ನ ಬಿಝಿನೆಸ್‌ ಹೆಡ್‌ ಹಾಗೂ "ಬಿಗ್‌ ಬಾಸ್‌' ನಿರ್ದೇಶಕ ಪರಮೇಶ್ವರ ಗುಂಡ್ಕಲ್‌, ಚಾನಲ್‌ನ ನಾನ್‌-ಫಿಕ್ಷನ್‌ ಹೆಡ್‌ ವೈಷ್ಣವಿ, ಎಂಡೆಮಾಲ್‌ ಶೈನ್‌ ಇಂಡಿಯಾದ ಸಿಒಒ ಅಭಿಷೇಕ್‌ ರೇ ಹಾಜರಿದ್ದರು.

Back to Top