ಕೋಲಾರದ ಬಾಲೆ ಹಾಗೂ ನೀರಿನ ನೆನಪುಗಳು


Team Udayavani, Mar 20, 2017, 5:03 PM IST

waetr.jpg

ಮಕ್ಕಳು ಏಕೆ ಶಾಲೆಗೆ ಹೋಗುತ್ತಿಲ್ಲ,  ನೀರಿನ ಸಮಸ್ಯೆ  ಇವರ ಶಾಲೆ ಬಿಡಿಸಿದೆ. ಸರಕಾರ ಆರಂಭಿಸಿದ ಗೋಶಾಲೆಗಳಲ್ಲಿಯೇ ಶಾಲೆ ಬಿಟ್ಟ ನೂರಾರು ಮಕ್ಕಳು ಸಿಗುತ್ತಾರೆ. ನೀರಿನ ಸಮಸ್ಯೆಯಿಂದ ಗುಳೇ ಹೋಗುವ ಕುಟುಂಬಗಳು ಕೊಳೆಗೇರಿಗಳಲ್ಲಿ ಮಕ್ಕಳ ಜೊತೆ ಬದುಕುವುದನ್ನು ಬೆಂಗಳೂರಿನಲ್ಲೇ ನಿಂತು ನೋಡಬಹುದು. ರಾಜ್ಯದ ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯಕಾರಣವಾಗುತ್ತಿದೆ. ಆದರೆ ನಾವು ಓದಿದ ಪದವಿ ಪ್ರಮಾಣ ಪತ್ರಗಳಲ್ಲಿ ಈ ನೀರಿನ ಸತ್ಯಗಳು ಕಾಣಿಸುತ್ತಿಲ್ಲ ಏಕೆ?

2015ರ ಆಗಸ್ಟ್‌ 21ರಂದು ಕೋಲಾರದ ಮಾಲೂರು ಹಳ್ಳಿಗಳನ್ನು ಸುತ್ತಾಡುತ್ತಿದ್ದೆ. ಅಲ್ಲಿನ  ಡೊಡ್ಡಕಲ್ಲಹಳ್ಳಿಯಲ್ಲಿ ಸಾಲು ಹಚ್ಚಿ ಜನ ನಿಂತಿದ್ದರು. ಟ್ಯಾಂಕರ್‌ ನೀರು ಬರುತ್ತದೆಂದು ಅವರೆಲ್ಲ ಕಾಯುತ್ತಿದ್ದರು. 80-85 ವರ್ಷದ ಹಿರಿಯರು, ಯುವಕರು, ಯುವತಿಯರೆಲ್ಲ ಬಿಂದಿಗೆ ನೀರಿನ ನಿರೀಕ್ಷೆಯಲ್ಲಿದ್ದರು. ಒಂದು ಕುಟುಂಬಕ್ಕೆ ನಾಲ್ಕು ಬಿಂದಿಗೆ ನೀರು ಸಿಗುತ್ತದೆಂದೂ, ಇದರಲ್ಲಿ ದನಕರು, ಮನೆ ಬಳಕೆಗೆ ಮಿತಿಯಲ್ಲಿ ಬಳಸಬೇಕೆಂದು ವಿವರಿಸಿದರು. ಕೆರೆಗಳಲ್ಲಿ ಎಲ್ಲಿಯೂ ನೀರು ನೋಡಲು ಸಿಗದ ಪ್ರದೇಶವದು. ಸಾಲಿನಲ್ಲಿ ನಿಂತವರ ಮುಖ ಚಹರೆ ಓದುತ್ತಿದ್ದೆ, ಥಟ್ಟನೆ ಗಮನ ಸೆಳೆದವಳು ನಾಲ್ಕೈದು ವರ್ಷದ ಪುಟ್ಟ ಬಾಲಕಿ. ನನ್ನ ಕೆಮರಾ ನೋಡಿ ಕಂಗಾಲಾಗಿದ್ದಳು. ಮಾತನಾಡಿಸಲು ಹೋದರೆ  ಬಿಂದಿಗೆ ಎತ್ತಿ ಮುಖ ಅಡಗಿಸಿದಳು. ಅವತ್ತು ನೀರಿನ ಸಾಲಿನಲ್ಲಿ ಅಮ್ಮನ ಬದಲು ಪುಟಾಣಿ ನಿಂತಿದ್ದಳು. ಕೋಲಾರದಲ್ಲಿ 35-40 ವರ್ಷಗಳ ಹಿಂದೆ ತೆರೆದ ಬಾವಿಗಳಿದ್ದವು. ಹೊಲದ ಕೆರೆಗಳಲ್ಲಿ ನೀರಿತ್ತು. ಹರಿಯುವ ನೀರಲ್ಲಿ ಸ್ನಾನ ಮಾಡಿದ ನೆನಪುಗಳು ಹಲವರಿಗಿದೆ. ಈಗ ಕೊಳವೆ ಬಾವಿಯ ಆಳ 1500-2000 ಅಡಿಗೂ ದಾಟಿದೆ, ಆದರೂ ನೀರಿಲ್ಲ. ಹಲವು ಹಳ್ಳಿಗಳು ಕುಡಿಯುವ ನೀರಿಗೆ ಟ್ಯಾಂಕರ್‌ ನಂಬಿವೆ. 

“ಇವಳು ದೊಡ್ಡವಳಾಗುವ ಕಾಲಕ್ಕೆ ನಿಮ್ಮೂರಲ್ಲಿ ನೀರು ಎಲ್ಲಿರಬಹುದು?’ ಸಾಲಿನಲ್ಲಿ ನಿಂತವರಲ್ಲಿ ಕೇಳಿದೆ. ಯಾರಲ್ಲಿಯೂ ಉತ್ತರವಿರಲಿಲ್ಲ. ನೀರು ಮಾಯದ ಗಾಯ ಮಾಡಿತ್ತು.  ಖಾಲಿ ಬಿಂದಿಗೆಯ ಸಾಲು, ಟ್ಯಾಂಕರ್‌ ಹಾಗೂ ಆ ಮುಗ್ಧ ಮಗುವಿನ ಮುಖ ಈಗಲೂ ಕಾಡುತ್ತಿದೆ. ಯಾವ ಊರಿಗೆ ಹೋದರೂ ನೀರಿನ ಕಷ್ಟಗಳ ದರ್ಶನ. ಆವತ್ತು ಬೆಂಗಳೂರಿಗೆ ಮರಳಿದಾಗ ಜಲ ಜಾಗೃತಿಯಲ್ಲಿ ದಶಕಗಳಿಂದ ದುಡಿಯುತ್ತಿರುವ ಮಿತ್ರರಿಗೆ ಮಗುವಿನ ಕತೆ ಹೇಳಿದೆ. ಚಿತ್ರ ಕಳಿಸಿದೆ. ನಾವು ಒಮ್ಮೆ ಸೇರಿ ರಾಜ್ಯದ ನೀರಿನ ಸ್ಥಿತಿಗತಿ ಕುರಿತು ಮಾತನಾಡಲು ನಿರ್ಧರಿಸಿದೆವು. ಅಕ್ಟೋಬರ್‌ 3, 4ರಂದು ನಮ್ಮ ಉತ್ತರ ಕನ್ನಡದ ಕಳವೆಯ ಕಾನ್ಮನೆಯಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ನೇತೃತ್ವದಲ್ಲಿ ರಾಜ್ಯದ ಜಲಕಾರ್ಯಕರ್ತರ ಜೊತೆ ಮಾತುಕತೆ ನಡೆಯಿತು. ಜಲ ಸಂರಕ್ಷಣೆ ಜಾಗೃತಿಯ ಹಿರಿಯಣ್ಣ ಶ್ರೀಪಡ್ರೆ, ಹುನಗುಂದದ ಮಲ್ಲಣ್ಣ ನಾಗರಾಳ, ದೇವರಾಜರೆಡ್ಡಿ, ಡಾ.ಪ್ರಕಾಶ್‌ ಭಟ್‌ ಸೇರಿದಂತೆ ರಾಜ್ಯದ ವಿವಿಧ 
ಭಾಗಗಳಿಂದ ಆಯ್ದ 24 ಕಾರ್ಯಕರ್ತರು ಭಾಗವಹಿಸಿದ್ದರು. ಚರ್ಚೆಗಳು ಸಣ್ಣ ಗುಂಪಿನಲ್ಲಿ ನಡೆದರೆ ಫ‌ಲಿತಾಂಶ ಪರಿಣಾಮಕಾರಿಯಾಗುತ್ತದೆ.  ರಾಜ್ಯದ ನೀರಿನ ಸ್ಥಿತಿಗತಿ ಅರಿಯುವುದು ಮುಖ್ಯ ಕಾರ್ಯವಾದ್ದರಿಂದ ಹೆಚ್ಚಿನ ಜನರನ್ನು ಸೇರಿಸುವ ಉದ್ದೇಶವೂ ನಮಗಿರಲಿಲ್ಲ. ಜಲಮಿತ್ರ ರಾಧಾಕೃಷ್ಣ ಭಡ್ತಿ ಹಾಗೂ ನಾನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವರನ್ನು ಸಭೆಗೆ ಬರುವಂತೆ  ವಿನಂತಿಸಿದ್ದೆವು.  ಸಚಿವರೂ ಭಾಗವಹಿಸಿದ್ದರಿಂದ ಚರ್ಚೆಯ ವಿಸ್ತಾರ ಹೆಚ್ಚಿತು. ವಿವಿಧ ಪ್ರದೇಶದ ನೀರಿನ ಸಂಕಷ್ಟಕ್ಕೆ ಸ್ಥಳೀಯ ಪರಿಹಾರಗಳ ಬಗ್ಗೆ ಮಾತುಕತೆ ನಡೆಯಿತು.

ರಾಜ್ಯ ಜಲಕ್ಷಾಮದಿಂದ ಬಳಲುತ್ತಿರುವಾಗ ಸರಕಾರ ಮಾತ್ರದಿಂದ ಎಲ್ಲ ಕೆಲಸ ಸಾಧ್ಯವಿಲ್ಲ. ಶಾಸಕರು, ಸಚಿವರು, ಉದ್ಯಮಿಗಳು, ಸಿನಿಮಾ ನಟರು, ಕೃಷಿಕರು, ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರೂ ಜಲಜಾಗೃತಿ, ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕೆಂದು ನಾವು ಆಗ್ರಹಿಸಿದೆವು. ಹಳ್ಳಿಗಾಡು ಸುತ್ತಾಡಿ ಕೆರೆ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವ ಕೆಲಸ ನಡೆಯಿತು. ನೀರಿನ ಸಂಕಷ್ಟ ಅನುಭವಿಸಿದವರಿಗೆ ಸರಿಯಾದ ಸಮಯಕ್ಕೆ ಮಾರ್ಗದರ್ಶನ ಸಿಕ್ಕರೆ ಒಂದಿಷ್ಟು ರಚನಾತ್ಮಕ ಕೆಲಸ ನಡೆಯುತ್ತದೆ. ಸಚಿವರು, ಶಾಸಕರು, ಕೃಷಿಕರು ಕೆರೆ ಹೂಳು ತೆಗೆಸಿದರು.  ಹೊಸ ಕೆರೆ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ನೀರಿನ ಸಮಸ್ಯೆಗಳ ಬಗ್ಗೆ ಬೊಬ್ಬೆ ಹೊಡೆಯುತ್ತ ಕಾಲ ಕಳೆಯುವುದಕ್ಕಿಂತ ರಚನಾತ್ಮಕ ಕೆಲಸ  ಖುಷಿ ನೀಡಿತು. 

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇತ್ತೀಚೆಗೆ ಪುನಃ ಜಲಕಾರ್ಯಕರ್ತರ ಸಭೆ ನಡೆಯಿತು. ಹಿರಿಯ ಪರಿಸರ ಪತ್ರಕರ್ತ ನಾಗೇಶ ಹೆಗಡೆ, ಶ್ರೀಪಡ್ರೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಕಾರ್ಯಕರ್ತರು ಬಂದಿದ್ದರು. ವಿಶೇಷವೆಂದರೆ ನಮ್ಮ ಜೊತೆ ಖ್ಯಾತ ಚಲನಚಿತ್ರ ನಟ ಯಶ್‌ ಭಾಗವಹಿಸಿದ್ದರು. ಕಳೆದ ವರ್ಷ ಸುಮಾರು 150 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಹಂಚಿದ ಯಶ್‌ ಈಗ ಜಲಕಾರ್ಯಕರ್ತರ ಸಹಕಾರದೊಂದಿಗೆ ಕೊಪ್ಪಳದ 
ಯಲಬುರ್ಗಾದ ತಲ್ಲೂರು ಕೆರೆಯ ಹೂಳು ತೆಗೆಯುವ ಕೆಲಸ ಆರಂಭಿಸಿದ್ದಾರೆ. ನೀರಿನ ಮಾತುಕತೆಗೆ ಮುಂಚೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆಯಿತು. ಸುಮಾರು 96 ಎಕರೆ ಶಾಲ ಕೆರೆುಂದ 4 ಲಕ್ಷ ಕ್ಯುಬಿಕ್‌ ಮೀಟರ್‌ ಮಣ್ಣು ತೆಗೆಯುವ ಕಾರ್ಯವದು. ನಟ ಯಶ್‌ರ ಯಶೋಮಾರ್ಗ ಹಾಗೂ ಸುತ್ತಲಿನ ಗ್ರಾಮಸ್ಥರ ಸಹಯೋಗದೊಂದಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿಯ ಮಹತ್ವದ ಕೆಲಸ ನಡೆಯುತ್ತಿದೆ. ಪ್ರಮುಖ ನಟರೊಬ್ಬರು ಕೆರೆ ಕಾಯಕಕ್ಕೆ ಜೊತೆಯಾಗಿದ್ದು ಖುಷಿಯ ಸಂಗತಿ. ಕೃಷಿ ಸಾಧಕ ರಮೇಶ ಬಲೂಟಗಿ ತಮ್ಮ ಕೆಲಸ ಬದಿಗಿಟ್ಟು ಚೆಂದದ ಕೆರೆ ರೂಪಿಸಲು ಕಾರ್ಯಕರ್ತರ ಜೊತೆ ಶ್ರಮಿಸುತ್ತಿದ್ದಾರೆ. 

ತಲ್ಲೂರು ಕೆರೆಯಂಚಿನಲ್ಲಿ ಪುಟ್ಟ ನೀರ ಕುಟೀರವಿದೆ. ಕೆರೆಯ ಹೂಳು ತೆಗೆಯುವುದರ ಜೊತೆಗೆ ಜಲಸಾಕ್ಷರತೆ ಮೂಲಕ ತಲೆಯ ಹೂಳು ತೆಗೆಯುವ ಕೆಲಸದು.  ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೃಷಿ ಬದುಕು, ಜಲ ಸಂರಕ್ಷಣೆಯ ಸಚಿತ್ರ ವಿವರಗಳಿವೆ.  ರಾಜ್ಯದ ನೀರಿನ ಸ್ಥಿತಿಗತಿ ಬಿಂಬಿಸುವ ಮಾಹಿತಿ ಇದೆ. ರಾಜ ಮಹಾರಾಜರ ಕೋಟೆ ಕೆರೆಗಳ ಇತಿಹಾಸವಿದೆ.  ಕುಟೀರ ಉದ್ಘಾಟಿಸಿದ ನಟಿ ರಾಧಿಕಾ ಹಾಗೂ ಯಶ್‌ರಿಗೆ ಜಲಜಾಗೃತಿಯ ವಿವರ ನೀಡುತ್ತಿರುವಾಗ ಕೋಲಾರದ ದೊಡ್ಡಕಲ್ಲಹಳ್ಳಿಯ ಪುಟ್ಟ ಬಾಲೆಯ ಚಿತ್ರ ತೋರಿಸಿದೆ. ರಾಜ್ಯದ ಜಲಕಾರ್ಯಕರ್ತರನ್ನು ಒಂದೆಡೆ ಸೇರಿಸಲು ಪ್ರೇರಣೆ ನೀಡಿದ ಎರಡು ವರ್ಷದ ಹಿಂದಿನ ಘಟನೆ ವಿವರಿಸಿದೆ. ಇಂದಿನ ನೀರಿನ ಕಾಯಕಕ್ಕೆ ಇವಳೇ ಹಿರೋಇನ್‌ ಎಂದು ಪರಿಚಯಿಸಿದೆ. ಮಗುವಿನ ಚಿತ್ರ ನೋಡಿದ ಎಲ್ಲರಿಗೂ ನೀರಿನ ಭವಿಷ್ಯದ ಚಿಂತೆ ಶುರುವಾಗುತ್ತದೆ. ನಾಳಿನ ತಲೆಮಾರಿಗಾಗಿ ನಾವು ಉಳಿಸುವ ಕಾಡು, ನೀರೆಷ್ಟು ಎಂಬ ಆತಂಕ ಸಹಜವಾಗಿ ಕಾಡುತ್ತದೆ. 

ದೊಡ್ಡಕಲ್ಲಹಳ್ಳಿಯ ಬಾಲಕಿ ಯಾರೆಂದು ಇಂದಿಗೂ ಹೆಸರು ಗೊತ್ತಿಲ್ಲ. ಆದರೆ ಇವಳಂಥವರೇ ಸಾವಿರಾರು ಜನ ರಾಜ್ಯದ ಪ್ರವಾಸದಲ್ಲಿ  ನನಗೆ ಸಿಗುತ್ತಿರುತ್ತಾರೆ. ಶಾಲೆಯ ಸಮವಸ್ತ್ರಧರಿಸಿ ಇಡೀ ದಿನ ಬಿಸಿಲಲ್ಲಿ ನೀರಿಗಾಗಿ ಕಾಯುವ ಮಕ್ಕಳು ಹಳ್ಳಿಹಳ್ಳಿಗಳಲ್ಲಿದ್ದಾರೆ. ಸರ್ವರಿಗೂ ಶಿಕ್ಷಣವೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಮಕ್ಕಳು ಏಕೆ ಶಾಲೆಗೆ ಹೋಗುತ್ತಿಲ್ಲ? ಹುಡುಕಲು ಹೋದರೆ ನೀರಿನ ಸಮಸ್ಯೆ  ಶಾಲೆ ಬಿಡಿಸಿದ್ದು ಕಾಣಿಸುತ್ತದೆ. ಸರಕಾರ ಆರಂಭಿಸಿದ ಗೋಶಾಲೆಗಳಿಗೆ ಹೋಗಿ ನೋಡಿದರೆ ನೂರಾರು ಮಕ್ಕಳು ಸಿಗುತ್ತಾರೆ. ನೀರಿನ ಸಮಸ್ಯೆಯಿಂದ ಗುಳೇ ಹೋಗುವ ಕುಟುಂಬಗಳು ಕೊಳಗೇರಿಗಳಲ್ಲಿ ಮಕ್ಕಳ ಜೊತೆ ಬದುಕುವುದನ್ನು ಬೆಂಗಳೂರಿನಲ್ಲೇ ನಿಂತು ನೋಡಬಹುದು. ರಾಜ್ಯದ ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯಕಾರಣವಾಗುತ್ತಿದೆ. ಆದರೆ ನಾವು ಓದಿದ ಪದವಿ ಪ್ರಮಾಣ ಪತ್ರಗಳಲ್ಲಿ ಈ ನೀರಿನ ಸತ್ಯಗಳು ಕಾಣಿಸುತ್ತಿಲ್ಲ ಏಕೆ?

ಜೀವಜಲದ ಹುಡುಕಾಟಕ್ಕಾಗಿ ಮಕ್ಕಳನ್ನು ಶಾಲೆ ಬಿಡಿಸುವ ಸ್ಥಿತಿ ಬಂದಿರುವುದು ಶೋಚನೀಯ. ನಗರದ ನೀರಿನ ಸಮಸ್ಯೆ ಬಹುಬೇಗ ಸುದ್ದಿಯಾಗುತ್ತದೆ. ಹಳ್ಳಿಗಾಡಿನ ಕುಟುಂಬಗಳ ಪರಿಸ್ಥಿತಿಯನ್ನು ಕಣ್ಣೆತ್ತಿ ನೋಡುವವರೂ ಗತಿ ಇಲ್ಲದ ಸ್ಥಿತಿ ಇದೆ. ಜಲ ಸಂರಕ್ಷಣೆ, ಮಳೆ ನೀರು ಹಿಡಿಯುವುದರಿಂದ ನೀರ ನೆಮ್ಮದಿ ಸಾಧಿಸಬಹುದೆಂದು ಹೇಳುತ್ತಿದ್ದ ನಾವು ಈಗ ಸಾಕ್ಷರತೆ, ಆರೋಗ್ಯಕ್ಕಾಗಿ ಜಲ ಸಂರಕ್ಷಣೆ ಎನ್ನುವಂಥಾಗಿದೆ.  ನೀರಿನ ಕಷ್ಟ ನೋಡುತ್ತ ನಾಡು ಸುತ್ತಾಡಿ ನಮ್ಮ ನಗರದ ಕೆಲವು ಬಡಾವಣೆಗಳಿಗೆ ಹೋಗಿ ಅಲ್ಲಿನ ಕೈತೋಟ, ಕಾರು ತೊಳೆಯುವುದಕ್ಕೆ ನೀರು ಬಳಸುವುದು ನೋಡಿದರೆ ಜಲಕ್ಷಾಮದ ಕನಿಷ್ಟ ಅರಿವೂ ಇಲ್ಲಿ ಕಾಣಿಸುತ್ತಿಲ್ಲ. ಭೂಮಿಗೆ ಸಂಬಂಧವಿಲ್ಲದ ಸ್ವರ್ಗದ ಸೌಧವೇ ಇದು?  ನಗರ ಕಟ್ಟುತ್ತ ನದಿ ನುಂಗಿದ ಅಭಿವೃದ್ಧಿ ಹಳ್ಳಿಯ ಕೃಷಿಯನ್ನು ನುಂಗಿ ಕಟ್ಟಕಡೆಗೆ ತಲೆಮಾರಿನ ಮಕ್ಕಳ ಭವಿಷ್ಯ ನಾಶಮಾಡುತ್ತಿದೆ.

ನದಿಯ ನೀರಿನ ಜೊತೆ ಆಟವಾಡುತ್ತ ಬೆಳೆದ ಹಳ್ಳಿಗಳು ಈಗ ನಗರ ಕೊಳಚೆ ನೀರನ್ನು ಕುಡಿಯುವ ದುಃಸ್ಥಿತಿಗೆ ತಲುಪಿವೆ. ಸಮಸ್ಯೆಗಳಿಗೆ ಕಾರಣಗಳು ನೂರಾರು, ಆದರೆ ಪರಿಹಾರದ ದಾರಿ ಹಿಡಿದು ಕೆರೆ ಸಂರಕ್ಷಣೆ, ಛಾವಣಿ ನೀರಿನ ಕೊಯ್ಲು, ಅರಣ್ಯಾಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದರೆ ಮಾತ್ರ ನಾಡು ಉಳಿಯಬಹುದು. ಮುಂದಿನ ವರ್ಷವೂ ಮಳೆ ಸಾಕಷ್ಟು ಸುರಿಯುವ ಖಾತ್ರಿ ಇಲ್ಲ, ಹನಿ ಹನಿ ಹಿಡಿಯುವುದೇ ಬದುಕುವ ಉಪಾಯವಾಗಿದೆ.  

– ಶಿವಾನಂದ ಕಳವೆ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.