ಸ್ಕೈಪ್‌ ಸಂಗೀತ ಸಪ್ತ ಸಾಗರದಾಚೆಗೆ ಮುರಳಿನಾದ 


Team Udayavani, Feb 25, 2017, 3:39 PM IST

16.jpg

ಆರು ತೂತಿನ ಅದೇಷ್ಟೋ ಕೊಳಲುಗಳು ಆ ವಿಶಾಲ ಕೊಠಡಿಯಲ್ಲಿ ಪ್ರದರ್ಶನಕ್ಕೆ ನಿಂತಿವೆ. ಅಡಿಯಿಂದ ಮುಡಿಯ ಅಳತೆಯಷ್ಟು ಉದ್ದದ ಕೊಳಲು ಉಂಟು. ಊದಲು ಬಾರದವರಿಗೆ ಅವು ಬರಿ ಪಿಳ್ಳಂಗೋವಿ, ಆದರೆ ಉಸಿರು ತುಂಬಿ ಬೆರಳಾಡಿಸಿದಾಗ ಹೊಮ್ಮುವ ಮೋಹನ ಮುರುಳಿಯ ನಾದಕ್ಕೆ ಯಾವುದು ಸಮ ? ಅದು ಅನುಭವಿಸುವವನಿಗೆ ಗೊತ್ತು. ಒಡೆದು ಬಿದ್ದಾ…ಕೊಳಲು ನಾನು ನಾದ ಬರದು ನನ್ನಲಿ…ವಿನೋದ ವಿರದು ನಿನ್ನಲಿ.., ಎನ್ನುವ ಕೊಳಲುಗಳು ಕೂಡ ಈತ ಉಸಿರಿಟ್ಟರೆ, ನಾದದಲೆಯನ್ನೆ ಎಬ್ಬಿಸಿ ಬಿಡುತ್ತವೆ.ಅಂತಹ ನಾದ ಲ್ಯಾಪ್‌ಟಾಪ್‌ ಮೂಲಕ ಸಪ್ತ ಸಮುದ್ರಗಳನ್ನು ದಾಟಿ ಹೋಗುತ್ತಿರುವುದು.  ಆಧುನಿಕ ಗುರುಕುಲ ಪದ್ಧತಿ ಅಂದ್ರೆ ಇದೇನಾ ? ಎನ್ನುವಂತಿದೆ. 

ಆಗಲೇ ಗೋಪಾಲನ ಉಸಿರು ಕೊಳಲಿನ ಧ್ವನಿಯಾಗಿ ಹೊರಹೊಮ್ಮಲು ಆರಂಭಿಸಿದ್ದು. ಕಾಲೇಜಿನ ಯುವೋತ್ಸವದ ವೇದಿಕೆಯನ್ನ ಸಂಪೂರ್ಣ ಬಳಸಿಕೊಂಡು  ಕರ್ನಾಟಕ ವಿಶ್ವವಿದ್ಯಾಲಯ ಪ್ರತಿನಿಧಿಸಿ ದೇಶಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ವೇಣುವಿನ ತಂದೆ-ತಾಯಿ ಆನಂದಭಾಷ್ಪ ಹರಿಸಿದ್ದರು. ಇನ್ನು ಆಕಾಶವಾಣಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಸಿದಾಗಲೂ ಅಷ್ಟೇ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ವೇಣು, ಶಾಸ್ತ್ರೀಯ ಕೊಳಲು ವಾದನದತ್ತ ಹೆಜ್ಜೆ ಹಾಕಿದೆ. ಶಾಸ್ತ್ರೀಯ ಸಂಗೀತ ಪರಂಪರೆ ಇರುವ ಪುಣೆ, ಮುಂಬೈನಲ್ಲಿ ವಾಸವಿರುವ ಗುರುಗಳ ಬಳಿ ಹೋಗಿ ತಪಸ್ಸು ಮಾಡಿ ಕಲಿತ. ಆ ವಿದ್ಯೆ ಫಲ ಕೊಟ್ಟಿತು. ಒಟ್ಟಿನಲ್ಲಿ ಕೊಳಲಿಗೆ ಶಾಸ್ತ್ರೀಯವಾಗಿ ಉಸಿರು ತುಂಬಿಸಿ ಮುರುಳಿಗಾನ ಹೊಮ್ಮಿಸುವ ಶಕ್ತಿ ಲಭಿಸಿತು. 

ಕೊಳಲಿಗೆ ಉಸಿರಾಯಿತು, ಬದುಕಿಗೆ ಏನು ? ಎಂಬ ಪ್ರಶ್ನೆ ನೆಂಟರ ಬಾಯಲ್ಲಿ ಬಂದಾಗ, ಗೋಪಾಲನ ಎದೆ ಬಡೆದುಕೊಳ್ಳಲಾರಂಭಿಸಿತು. ಮೊದಲು ವಿದ್ಯೆ ಆ ಮೇಲೆ ಬದುಕು ಎಂದುಕೊಂಡು ಮತ್ತದೇ ಕೊಳಲಿನಲ್ಲಿ ರಾಗಾಲಾಪ ಅಭ್ಯಾಸ ಮಾಡುತ್ತಲೇ ಹೋದ ವೇಣು. ಆದರೆ ನಂತರ ಬದುಕಿಗೆ ಆಸರೆ ಬೇಕೇಬೇಕು ಎನ್ನಿಸತೊಡಗಿತು. ಆಗ ಹೊಳೆದಿದ್ದೆ, ಆನ್‌ಲೈನ್‌ ಸಂಗೀತ ಪರಂಪರೆ.
ಶಿಷ್ಟ ಪರಂಪರೆಯಿಂದ ಹೊಸ ಪರಿಭಾಷಿಕೆ ಬರೆಯಬೇಕು ಎಂದು ಹೊರಟಾಗ  ಅನೇಕ ಅಡ್ಡಿ ಆತಂಕಗಳಿದ್ದವು. ಕೆಲವರು ಇದು ತಪ್ಪು ಎಂದು ಕೂಡ ಹೇಳಿದರು. ಆದರೆ ಸಪ್ತಸಾಗರದಾಚೆ ಇರುವ ಕೊಳಲು ಪ್ರೇಮಿಗಳಿಗೆ ಧಾರಾನಗರಿಯಿಂದಲೇ ಶ್ರೇಷ್ಠವಾದ ಕೊಳಲಿನ ರಾಗಗಳನ್ನು ಕಲಿಸುವ ವೇಣುಗೋಪಾಲ ಹೆಗಡೆ ಪ್ರಯತ್ನ ಇಂದು ಫಲ ಕೊಟ್ಟಿದೆ. 

ಅವರ ಬಳಿ ಆನ್‌ಲೈನ್‌ ಮೂಲಕ ವಿಶ್ವದೆಲ್ಲೆಡೆ ಇಂದು ಕೊಳಲು ಸಂಗೀತಾಭ್ಯಾಸ ಮಾಡಿದ್ದಾರೆ. ಭಾರತ ಕ್ರಿಕೆಟ್‌ ತಂಡದಲ್ಲಿನ ಹೆಸರಾಂತ ಆಟಗಾರರೊಬ್ಬರು ಇವರ ಬಳಿ ಆನ್‌ಲೈನ್‌ನಲ್ಲಿಯೇ ಶಿಷ್ಯತ್ವ ಸ್ವೀಕಾರ ಮಾಡಿ ಇಂದು ಕೊಳಲು ನುಡಿಸುತ್ತಿದ್ದಾರೆ. ಅಮೆರಿಕಾದ ವೈಟ್‌ಹೌಸ್‌ನಲ್ಲಿ ನ್ಯೋರೋ ಸರ್ಜನ್‌ ಆಗಿ ಕೆಲಸ ಮಾಡುತ್ತಿರುವ 54 ವರ್ಷದ ಹಿರಿಯ ವೈದ್ಯರೊಬ್ಬರು 30 ವರ್ಷದ ವೇಣುಗೋಪಾಲ ಹೆಗಡೆ ಅವರು ಶಿಷ್ಯತ್ವ ಸ್ವೀಕಾರ ಮಾಡಿದ್ದಾರೆ. ಒಟ್ಟು 12ಕ್ಕೂ ಹೆಚ್ಚು ದೇಶಗಳಲ್ಲಿ ಇವರ ಶಿಷ್ಯರು ಆನ್‌ಲೈನ್‌ನಲ್ಲಿಯೇ ಕೊಳಲು ವಾದನ ಕಲಿಯುತ್ತಿರುವುದನ್ನು ನೋಡಿದರೆ, ತೊಡಯಮೇಲುಗ (ಲ್ಯಾಪ್‌ಟಾಪ್‌) ಎಂಬ ಸಂವಹನ ಯಂತ್ರವೇ ಇವರ ಶಿಷ್ಯರಿಗೆ ಗುರುವಾಗಿ ಕಾಣಿಸುತ್ತಿದ್ದು, ಸಂವಹನ ಕ್ರಾಂತಿಗೆ ಅವರೆಲ್ಲ ಶರಣು ಹೇಳುತ್ತಿದ್ದಾರೆ. 

ಇನ್ನು ಇವರಿಂದ ಮಹಾರಾಷ್ಟ್ರ,ತಮಿಳುನಾಡು,ದೆಹಲಿ,ಹಿಮಾಚಲ ಪ್ರದೇಶ,ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲೂ ಆನ್‌ಲೈನ್‌ ಮೂಲಕ ಸಂಗೀತ ಅಭ್ಯಾಸ ಕಲಿಯುವವರಿದ್ದಾರೆ. ಮನೆಯನ್ನೆ ಸಂಗೀತ ಗುರುಕುಲ ಮಾಡಿಕೊಂಡು, ಆಧುನಿಕ ಸಂವಹನ ಯಂತ್ರವನ್ನೆ ಬಳಸಿಕೊಂಡು ವಿಶ್ವಕ್ಕೆ ಸಂಗೀತದ ಸವಿ ಉಣಬಡಿಸಬಹುದು ಎನ್ನುವ ಸಾಹಸಕ್ಕೆ ಕೈ ಹಾಕಿ ಯಶಸ್ಸು ಕಂಡಿರುವ ವೇಣು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಷ್ಯರಿಗೆ ತನ್ನ ಕೊಳಲು ವಾದನ ಕಲಿಸಬೇಕು ಎನ್ನುವ ಹಂಬಲ ಹೊಂದಿದ್ದಾನೆ. ಸಂಗೀತ ಕಲಿತಿರುವುದಕ್ಕೆ ಪರ್ಯಾಯವಾಗಿ ವಿದ್ಯಾರ್ಥಿಗಳು ಗುರುದಕ್ಷಿಣೆಯನ್ನೂ ಕೊಡುತ್ತಾರೆ. ಇಂತಿಷ್ಟೇ ಕೊಡಬೇಕು ಎಂದೇನು ಇಲ್ಲ. ಆದರೆ ಉಚಿತವಂತೂ ಅಲ್ಲ. 
 ತಂದೆ ತಾಯಿ-ಮಕ್ಕಳು ಸಾಫ್ಟ್‌ವೇರ್‌ ಎಂಜಿನಿಯರ್‌ ಅಥವಾ ಡಾಕ್ಟರೇ ಆಗಬೇಕು ಎನ್ನುವ ಈ ಕಾಲದಲ್ಲಿ ಮಗ ಒಬ್ಬ ಸಂಗೀತಗಾರನಾಗಬೇಕು ಎಂದು ಕನಸು ಕಂಡಿದ್ದರು. ಇಂದು ವೇಣುಗೋಪಾಲ ಹೆಗಡೆ ಅದೇ ಸಾಫ್ಟ್‌ವೇರ್‌ ತಂತ್ರಜ್ಞಾನ ಬಳಸಿಕೊಂಡು ವಿಶ್ವದಾದ್ಯಂತ ಆಸಕ್ತಿ ಇರುವವರಿಗೆ ಶಾಸ್ತ್ರೀಯ ಕೊಳಲು ವಾದನ ಕಲಿಸುವುದನ್ನ ನೋಡಿ ಸಂತಸಗೊಂಡಿದ್ದಾರೆ. 

ಆನ್‌ಲೈನ್‌ನ ಮುರುಳಿಗಾನ ಹೀಗಿರುತ್ತೆ 
ಆನ್‌ಲೈನ್‌ನಲ್ಲಿ ಕೊಳಲು ಪಾಠ ಮಾಡುವುದು, ಅವರು ಕಲಿಯುವುದು ಅಷ್ಟು ಸರಳವಾಗಿಲ್ಲ. ಈ ಶಿಷ್ಯನಿಗೆ ಗುರುಗಳು ಮೊದಲೇ ಒಂದಿಷ್ಟು ನಿರ್ದೇಶನಗಳನ್ನು ನೀಡಿರುತ್ತಾರೆ. ಅದಕ್ಕೆ ಅನ್ವಯವಾಗಿ ತರಗತಿಗಳು ನಡೆಯುತ್ತಿರುತ್ತವೆ. ಒಂದಿಷ್ಟು ಕೊಳಲು ವಾದನ ಅಭ್ಯಾಸ ಮಾಡಿದ್ದರೆ ಮಾತ್ರ ಆನ್‌ಲೈನ್‌ ಸಂಗೀತಕ್ಕೆ ಬೇಗ ಹೊಂದಿಕೊಳ್ಳಲು ಸಾಧ್ಯ. ಬೇಸಿಕ್‌ ಸಂಗೀತವನ್ನು ಆನ್‌ಲೈನ್‌ನಲ್ಲಿ ಕಲಿಯಲು ಆರಂಭಿಸಿದರೆ ಸಮಯ ಹೆಚ್ಚು ಬೇಕಾಗಬಹುದು. ಸ್ಕೈಪ್‌ ಸಂಗೀತ ಹೇಳಿಕೊಡುವವರು ವಿದೇಶದ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲಿ ನಿದ್ದೆ ಕೂಡ ಕೆಡಬೇಕು. 

ಇನ್ನು ಆನ್‌ಲೈನ್‌ ಸಂಗೀತದಲ್ಲಿ ಮೊದಲು ಎದುರಾಗುವ ಸಮಸ್ಯೆ ಎಂದರೆ ತಾಳದ್ದು. ಕಲಿಸುವ ಗುರು ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೊಳಲಿನಿಂದ ನಾದ ಹೊಮ್ಮಿಸಿದರೆ, ಕಲಿಯುವ ಶಿಷ್ಯನಿಗೆ ಅದು ಆನ್‌ಲೈನ್‌ ಮೂಲಕ ತಲುಪುವುದಕ್ಕೆ ಒಂದು ಸೆಕೆಂಡ್‌ ವಿಳಂಬ ಮಾಡುತ್ತದೆ. ಇದು ಸಾಮಾನ್ಯ ತಾಂತ್ರಿಕ ವಿಚಾರ. ಹೀಗಾಗಿ ಇಲ್ಲಿ ಒಂದು ತತ್ವ ಅಳವಡಿಸಲಾಗಿದೆ. ಗುರುವಿನಿಂದ ಹೊರಟ ಕೊಳಲಿನ ಧ್ವನಿ ಕಲಿಯುವ ಶಿಷ್ಯನಿಗೆ ತಲುಪಿದಾಗ, ಆತ ತಾನಿದ್ದ ಸ್ಥಳದಲ್ಲಿಗೆ ಧ್ವನಿ ತಲುಪಿದಾಗ ಹೊಂದಿಕೊಳ್ಳುವ ತಾಳವನ್ನು ಅಳವಡಿಸುತ್ತಾ (ತಬಲಾ,ಕ್ಯಾಶಿಯೋದಲ್ಲಿನ್‌ ರಿದಮ್‌ಗಳನ್ನು)ಕೇಳುತ್ತ ಕೊಳಲು ನುಡಿಸುತ್ತಾನೆ. ಆಗ ಕೊಳಲಿನ ರಾಗಕ್ಕೆ ತಕ್ಕಂತೆ ತಾಳ ಹೊಂದಿಕೊಂಡು ಕಲಿಯುವವರಿಗೆ ಅಪಭ್ರಂಸವಾಗುವುದಿಲ್ಲ. 

ಇನ್ನು ಭಾವಲೀನತೆ, ಸಂಗೀತ ಮಗ್ನತೆ. ಇದು ನೇರಾನೇರ ಗುರುವಿನಿಂದ ಕೊಳಲು ವಾದನ ಕಲಿಯುವಾಗ ಆಗುವ ಅನುಭವ. ಇದು ಸಂಗೀತದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಪದ್ಧತಿ. ಹೀಗಾಗಿ ಇಲ್ಲಿ ವೇಣುಗೋಪಾಲ ಹೆಗಡೆ ಅವರು, ತಾವು ಕಲಿಸುವ ಶಿಷ್ಯರನ್ನ ಎರಡು ಮೂರು ವರ್ಷಕ್ಕೆ ಒಂದು ಬಾರಿ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು, ಒಂದುವಾರ, ಎರಡುವಾರ ಇಲ್ಲಿಯೇ ಇರಿಸಿಕೊಂಡು ಅವರಿಗೆ ಕೊಳಲು ವಾದನ ಕಲಿಸುತ್ತಾರೆ. 

ಏನೇ ಆದರೂ ಆನ್‌ಲೈನ್‌ ಆನ್‌ಲೈನೇ… ಗುರುಕುಲ ಗುರುಕುಲವೇ. ಆದರೆ ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಬೇಕಾದರೂ ದೇಶಿ ಪರಂಪರೆ ಸಂಗೀತವನ್ನು ನಾನು ಕಲಿಯಬೇಕು ಎನ್ನಿಸಿದ ಭಾರತೀಯನಿಗೆ ಮಾತ್ರ ಇವರ ಕೊಳಲಿನ ನಾದ ಅವರಿಸಿಕೊಂಡಿದ್ದು ಸುಳ್ಳಲ್ಲ. 

ಬಸವರಾಜ ಹೊಂಗಲ್‌

ಸ್ಕೈಪಾಯಣ

ಅಭಿರುಚಿ ಮೂಡಿಸಲು, ಜ್ಞಾನ ವಿಸ್ತರಣೆಗೆ, ಸಮಯ ಉಳಿತಾಯ ಮಾಡಲು ಸ್ಕೈಪ್‌ ಒಳ್ಳೆಯದೇ. ಆದರೆ ಗುರು ಮುಖೇನ ಕಲಿಯದೇ ಸ್ಕೈಪ್‌ ಸಂಗೀತ ಕಲಿಯುವುದು ಎಷ್ಟು ಸರಿ ಅನ್ನೋದು ಚರ್ಚಿತ ವಿಷಯ. ಬಹುತೇಕ ಮೇಷ್ಟ್ರಿಗೆ ಇವತ್ತು ಸ್ಕೈಪ್‌ ಸಂಗೀತ ಬದುಕಿನ ದಾರಿಯಾಗಿ, ಲಾಭದಾಯಕ ಪಾಠವೂ ಆಗಿದೆ.

ಸಂಗೀತ ಅನ್ನೋದು ಗುರುಮುಖೇನ ಕಲಿಯೋ ವಿದ್ಯೆ. ಕಣ್ಣಲ್ಲಿ ಕಣ್ಣಿಟ್ಟು ಗುರುಪಾಠವನ್ನು ಕಲಿತು ಅರಗಿಸಿಕೊಳ್ಳುವುದು ನಿಜವಾದ ಕಲಿಕೆ ಹೀಗೆ ವಾದ ಮಾಡುತ್ತಿದ್ದ ಸಂಗೀತಗಾರರೆಲ್ಲ ಈಗ ಸ್ಕೈಪ್‌ ಜಪ ಶುರುಮಾಡಿದ್ದಾರೆ. 

ದೂರದೂರು, ವಿದೇಶಗಳಲ್ಲಿ ಇರುವವರಿಗೆ ಸ್ಕೈಪ್‌ ವರದಾನ. ಅಭಿರುಚಿಯನ್ನು ಮುಂದುವರಿಸಲು  ಇದು ಒಳ್ಳೆಯ ಪ್ರಯತ್ನ.  ಆದರೆ  ಸ್ಕೈಪಲ್ಲಿ ಕಲಿತು ಸಂಗೀತಗಾರರಾಗಬಹುದೇ? ಇದು ಕೂಡ ಮಿಲಿಯನ್‌ ಡಾಲರ್‌ ಪ್ರಶ್ನೆ. 

ಸ್ಕೈಪ್‌ನಲ್ಲಿ ಕಲಿಯುವುದಕ್ಕೆ ಸಂಗೀತ ಬೇಸಿಕ್‌ ಗೊತ್ತಿರಬೇಕು. ಅದು ಗುರು ಮುಖಾಮುಖೀಯಲ್ಲಿ ಕಲಿತಿದ್ದರೆ ಸ್ಕೈಪ್‌ ಸಂಗೀತಕ್ಕೆ ಬೆಲೆ ಬರುತ್ತದೆ ಅನ್ನೋದು ಕೆಲವರವಾದ. ಇದು ಸತ್ಯ ಕೂಡ. ಆದರೆ ಸಂಗೀತ ಗಂಧಗಾಳಿ ಇಲ್ಲದವರು ಈ ಮೂಲಕ ಸಂಗೀತ ಕಲಿಯಬಹುದು. ಆದರೆ ಯಾವ ಮಟ್ಟಕ್ಕೇ? ಇದು ಕೂಡ ಯಕ್ಷಪ್ರಶ್ನೆಯೇ ಆಗಿದೆ. 

ಕಾರಣ ಏನೆಂದರೆ, ಸಂಗೀತ ಕಲಿಕೆ ಎಂದರೆ ಶೃತಿ ಶುದ್ಧ, ತಾಳ ಬದ್ದವಾಗಿರಬೇಕು. ಸ್ವರದ ಎಳೆಯನ್ನು ಓಡಿಸುವುದು, ನಿಲ್ಲಿಸುವುದು ಅದಕ್ಕೆ ಶೃತಿಯನ್ನು ಬೆರೆಸುವುದು. ಇವೆಲ್ಲವೂ ಕಣ್ಣಲ್ಲಿ ನೋಡಿ, ಕಿವಿಯಲ್ಲಿ ಕೇಳಿ ಮಾಡಬೇಕಾದ ಕೆಲಸ.

 ಅರೆರೆ, ನಮ್ಮ ಸ್ಕೈಪ್‌ನಲ್ಲೂ ಇವೆಲ್ಲಾ ಸಾಧ್ಯ ಇದೆಯಲ್ಲಾ? ಹೀಗೆ ವಾದಮಾಡುವವರೂ ಇದ್ದಾರೆ. ಖಂಡಿತ ಇವೆಲ್ಲ ಸಾಧ್ಯ. ಆದರೆ ಎಷ್ಟರ ಮಟ್ಟಿಗೆ? ಭಾವ, ನಾದ ಯಾವ ರೀತಿ ಕೇಳಿಸುತ್ತದೆ, ಹೇಗೆ ಕೇಳಿಸುತ್ತದೆ ಇವೆಲ್ಲ ಬಹುಮುಖ್ಯ ಸಂಗತಿ. ಬೇಸಿಕ್‌ ಸಂಗೀತ ಗೊತ್ತಿಲ್ಲದವರಿಗೆ ಇವೆಲ್ಲವೂ ಅರ್ಥೈಸುವ ರೀತಿಯೇ ಬೇರೆ ಅನ್ನುವುದು ಖಂಡಿತ.  ಸಂಗೀತ ತಿಳಿದವರಿಗೆ ಫ‌ಲುಕುಗಳನ್ನು, ಮಟ್ಟುಗಳನ್ನು ಅರ್ಥ ಮಾಡಿಕೊಳ್ಳುವುದೇನು ಕಷ್ಟವಾಗಲಿಕ್ಕಿಲ್ಲ. ಆದರೆ ಹೊಸದಾಗಿ ಸಂಗೀತ ಅಕ್ಷರಾಭ್ಯಾಸ ಮಾಡುವವರಿಗೆ ಇದು ಕಷ್ಟವೇನೋ ಅನ್ನೋ ಶಾಸ್ತ್ರೀಯ ಮನಸುಗಳ ಅನುಮಾನವನ್ನು ಒಪ್ಪಿಕೊಳ್ಳಲೇಬೇಕು. ಹಾಗೆಯೇ ವಾದ್ಯಗಳನ್ನು ಹೇಳಿಕೊಡುವುದು ಸ್ಕೈಪ್‌ನಲ್ಲಿ ಕಷ್ಟಸಾಧ್ಯ ಕೆಲಸ. ಉದಾಹರಣೆಗೆ ಮೊದಲ ಬಾರಿಗೆ ತಬಲ ಕಲಿಯುವ, ವೀಣೆ ಮೀಟುವ, ಡೋಲು ನುಡಿಸುವ, ಮೃದಂಗದ ಮೇಲೆ ಛಾಪು ಹಾಕುವವರಿಗೆ ಸ್ಕೈಪ್‌ ಹೇಗೆ ಸ್ಪಂದಿಸೀತು, ಹೇಗೆ ಅರ್ಥೈಸಿಕೊಂಡೀತು?

ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ- ಏಕಕಾಲದಲ್ಲಿ ಗುರು-ಶಿಷ್ಯ ಹಾಡಲಾಗಲಿ, ನುಡಿಸಲಾಗಲಿ ಸಾಧ್ಯವೇ ಇಲ್ಲ. ಹೀಗೆ ಮಾಡುತ್ತ ತಪ್ಪುಗಳನ್ನು ತಿದ್ದುವುದು ಸ್ಕೈಪ್‌ ಸಂಗೀತದಲ್ಲಿ ಆಗದು. ಇದು ಕಲಿಕಾರ್ತಿಗಳಿಗೆ ಆಗುವ ದೊಡ್ಡ ಲಾಸ್‌. ಜೊತೆಗೆ ಇಂದು ಆನ್‌ಲೈನ್‌ ಸಂಗೀತಗಾರರು ಬಹಳಷ್ಟು ಜನ ಇದ್ದಾರೆ. ಅಘೋಚರ ಗುರುವಿನ ಪಾಂಡಿತ್ಯ ಏನು ಅನ್ನೋದನ್ನು ಶಿಷ್ಯ ತಿಳಿಯಲು ಆಗದು. 
ವಾದ್ಯ ಕಲಿಕೆ ವಿಚಾರಕ್ಕೆ ಬಂದರೆ ಮೃದಂಗ, ತಬಲ ಕಲಿಕೆಯಲ್ಲಿ ಫಿಂಗರಿಂಗ್‌ ಬಹುಮುಖ್ಯ. ಐದು ಬೆರಳುಗಳಲ್ಲಿ ಉಂಗುರದ ಬೆರಳು, ತೋರು ಬೆರಳು, ಮಧ್ಯದ ಬೆರಳುಗಳ ಕೆಲಸ ಹೆಚ್ಚು. ಹೆಬ್ಬೆಟ್ಟು, ಕಿರುಬೆರಳುಗಳ ನೆರವಿನಿಂದ ಮೂರು ಬೆರಳುಗಳು ಫ‌ುಟ್‌ಬಾಲ್‌ ಪ್ಲೇಯರ್‌ನಂತೆ ತಬಲದ ಮೈದಾನದ ಪೂರ್ತಿ ಓಡಬೇಕು. ಓಡಾಟದಿಂದ ಹುಟ್ಟುವ ಶೃತಿ ಬದ್ಧಶಬ್ದವೇ ನಾದವಾಗುತ್ತದೆ. ಇವನ್ನೆಲ್ಲಾ ಏನೂ ಗೊತ್ತಿಲ್ಲದ ಕಲಿಕಾರ್ತಿಗಳು ಸ್ಕೈಪ್‌ ಪಾಠದಲ್ಲಿ ಹೇಗೆ ತಿಳಿದಾರು? ಅದು ವೀಡಿಯೋ ಗೇಮ್‌ ರೀತಿ ಆದರೆ ಗತಿ ಏನು? ದೇವರೇ ಬಲ್ಲ. ಇನ್ನು ಡ್ಯಾನ್ಸ್‌, ಭರತ ನಾಟ್ಯ, ಯಕ್ಷಗಾನವನ್ನು ಸ್ಕೈಪ್‌ನಲ್ಲಿ ಹೊಸದಾಗಿ ಕಲಿಯುವವರಿಗೆ ಸಂಗೀತ ಸ್ಕೈಪಾಯಣವೇ ಸರಿ.  ಹಾಗಾದರೆ ಸ್ಕೈಪ್‌ ಸಂಗೀತ ಬೇಡವೇ? ಹೀಗೊಂದು ಪ್ರಶ್ನೆ ಎದ್ದೇಳುತ್ತದೆ. ಅಭಿರುಚಿ ಮೂಡಿಸುವ, ಜ್ಞಾನ ವಿಸ್ತರಣೆಗೆ, ಸಮಯ ಉಳಿತಾಯ ಮಾಡಲು ಸ್ಕೈಪ್‌ ಒಳ್ಳೆಯದೇ. ಆದರೆ ಗುರು ಮುಖೇನ ಕಲಿಯದೇ ಸ್ಕೈಪ್‌ ಸಂಗೀತ ಕಲಿಯುವುದು ಎಷ್ಟು ಸರಿ ಅನ್ನೋದು ಚರ್ಚಿತ ವಿಷಯ.  ಬಹುತೇಕ ಮೇಷ್ಟ್ರಿಗೆ ಇವತ್ತು ಸ್ಕೈಪ್‌ ಸಂಗೀತ ಬದುಕಿನ ದಾರಿಯಾಗಿದೆ. ಲಾಭದಾಯಕ ಪಾಠವೂ ಕೂಡ. 

ಇಲ್ಲಿ 100 ಜನ ಹುಡುಗರಿಗೆ ಪಾಠ ಹೇಳಿಕೊಟ್ಟಾಗ ಸಿಗುವ ಫೀಗೆ, ವಿದೇಶದ 10 ವಿದ್ಯಾರ್ಥಿಗಳ ಫೀಸು ಸಮ. ಕೆಲವರು ಗಂಟೆ ಇಷ್ಟು, ಇನ್ನೂ ಕೆಲವರು ಕ್ಲಾಸಿಗೆ ಡಾಲರ್‌ ಲೆಕ್ಕದಲ್ಲಿ ಫೀ ಪಡೆಯುತ್ತಾರೆ.  ” ಸಾರ್‌, ನಾವು ಎಷ್ಟು ದಿನ ಹೀಗೆ ಬದುಕಬೇಕು. ನಮಗೂ ಜೀವನ ಅನ್ನೋದು ಇದೆಯಲ್ಲಾ? ಸರಿ, ಎಷ್ಟೋ ವರ್ಷಗಳು ಫ್ರೀ ಸಂಗೀತ ಹೇಳಿಕೊಟ್ಟಿದ್ದೇನೆ. ಅವರೂ ಕಲಿತು ದೊಡ್ಡ ಸಂಗೀತಗಾರರಾಗಿದ್ದಾರೆ? ಆದರೆ ನನ್ನ ಜೀವನ ಹಾಗೇ ಇದೆ. ಇದಕ್ಕೆ ಏನು ಮಾಡಬೇಕು? ಸಂಗೀತಕ್ಕೆ ತಂತ್ರಜ್ಞಾನ ಬಳಸಿಕೊಳ್ಳೋದು ತಪ್ಪೇ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸಂಗೀತಗಾರರೊಬ್ಬರು.

ಕಟ್ಟೆ 

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.