Updated at Sun,25th Jun, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಗ್‌ಬಿ ಪಾಲಿಗೆ ಫೆ.15 ವ್ಯಾಲೆಂಟೈನ್ಸ್‌ ಡೇ!

ಮುಂಬೈ: ಫೆಬ್ರವರಿ 14 ಬಂತೆಂದರೆ ಸಿನಿಮಾ ತಾರೆಗಳ ಹೃದಯ ಹಿಗ್ಗುತ್ತದೆ. ಮರುದಿನ ಫೆ.15ರಂದು  ಆ ಪ್ರಮಾಣದ ಪ್ರೇಮದ ಮಕರಂದವನ್ನು ಮೆಲುಕು ಹಾಕುವುದು ಕಡಿಮೆ. ಆದರೆ, ಹಿರಿಯ ನಟ ಅಮಿತಾಭ್‌ ಬಚ್ಚನ್‌ ಕಾದು ಕೂರುವುದು ಫೆ.15ಕ್ಕಾಗಿ! ಬಾಂಬೆ ವೆಲ್ವೆಟ್‌ ತೊಟ್ಟ "ಬಾಲಿವುಡ್‌' ಗುಲಾಬಿ ಹಿಡಿದು ಅವರನ್ನು ಸ್ವಾಗತಿಸಿ, ಅಪ್ಪಿಕೊಂಡಿದ್ದೇ ಅಂದು. ಗುರುವಾರ ಪೂರ್ತಿ ಅಮಿತಾಭ್‌ ಭಾವುಕರಾಗಿದ್ದರು. ಬಾಲಿವುಡ್‌ಗೆ ಬಂದು 48 ವರ್ಷವಾಯಿತೆನ್ನುವ ನೆನಪಿನ ಮಧುರ ಬಂಧನದಿಂದ ಅವರು ಹೊರಬಂದಿರಲಿಲ್ಲ.

48ಕ್ಕೆ 2 ಕೂಡಿದರೆ 50. ಬಾಲಿವುಡ್‌ನ‌ ತ್ರಿವಳಿ ಖಾನ್‌ಗಳ ವಯಸ್ಸು (ಅಮೀರ್‌, ಶಾರುಖ್‌ ಮತ್ತು ಸಲ್ಮಾನ್‌). ಈ ಹೊತ್ತಿನಲ್ಲಿ ಅವರಿಗೂ ಸಮಕಾಲೀನ ನಟರೇ ಆಗಿದ್ದೇನೆನ್ನುವ ಹಣ್ಣುಗಡ್ಡದ, 6.16 ಅಡಿ ಎತ್ತರದ ಬಚ್ಚನ್‌ ಇನ್ನೂ ಎತ್ತರಕ್ಕೇರುತ್ತಲೇ ಇದ್ದಾರೆ. 48 ವರ್ಷದ ಹಿಂದೆ "ಸಾಥ್‌ ಹಿಂದುಸ್ಥಾನಿ' ಚಿತ್ರದಲ್ಲಿ ಮುಸ್ಲಿಮ್‌ ಕವಿ ಅನ್ವರ್‌ ಅಲಿಯಾಗಿ ಪ್ರೇಕ್ಷಕನೆದುರು ಬಂದವರು. ಭಾರತದ ಇತರೆ ಭಾಗದ ಆರು ಮಂದಿ ಜತೆ ಸೇರಿ, ಗೋವಾದಲ್ಲಿನ ಪೋರ್ಚುಗೀಸರ ಕೋಟೆ, ಕಟ್ಟಡಗಳ ಮೇಲೆಲ್ಲ ತ್ರಿವರ್ಣ ಧ್ವಜ ಹಾರಿಸಿ ಆ ಚಿತ್ರದಲ್ಲಿ ಕ್ರಾಂತಿ ಮಾಡಿದ್ದವರು. ನಂತರ ನಾವು ಕಂಡಿದ್ದೆಲ್ಲ ಅಮಿತಾಭ್‌ ಅವರ ತೆರೆಮೇಲಿನ ಕ್ರಾಂತಿಗಳೇ!

"ಫೆಬ್ರವರಿ 15 ಬಂತೆಂದರೆ ಹಿಮಪಾತದಂತೆ ಹಳೆಯ ನೆನಪುಗಳು ದೊಪ ದೊಪನೆ ಬೀಳುತ್ತವೆ. ಅದು 1969. ಬಾಲಿವುಡ್‌ಗೆ ನಾನು ಕಾಲಿಟ್ಟು ಇಂದಿಗೆ 48 ವರ್ಷ. ಮೊದಲ ಚಿತ್ರ ಸಾಥ್‌ ಹಿಂದೂಸ್ತಾನಿಗೆ ನಾನು ಸಹಿಹಾಕಿದ್ದೆ' ಎನ್ನುತ್ತಾ ಅಮಿತಾಭ್‌ ಆ ದಿನಗಳ ಫೋಟೋಗಳನ್ನು ಟ್ವಿಟರ್‌ನಲ್ಲಿ  ಹಂಚಿಕೊಂಡಿದ್ದಾರೆ.

"ಈ ಚಿತ್ರದ ಪ್ರೀಮಿಯರ್‌ಗೆ ಮಾಹಿತಿ ಮತ್ತು ಪ್ರಸಾರ ಸಚಿವ ದಿ.ಇಂದ್ರಕುಮಾರ್‌ ಗುಜ್ರಾಲ್‌ ಆಗಮಿಸಿದ್ದರು. ಅಂಥ ಗಣ್ಯರಿಗೆ ಸರಿಸಮನಾಗಿ ಕಾಣಲು ನನ್ನಲ್ಲಿ ಸೂಕ್ತ ಉಡುಪು ಇರಲಿಲ್ಲ. ಸುನೀಲ್‌ ದತ್‌ ಮತ್ತು ವಹೀದಾ ರೆಹಮಾನ್‌ ಜತೆಗೆ ಜೈಸಲ್ಮೇರ್‌ನಲ್ಲಿ ಶೂಟಿಂಗಿನಲ್ಲಿದ್ದ ನಾನು, ಕೂಡಲೇ ಹೊರಟು ಪ್ರೀಮಿಯರ್‌ ಶೋಗೆ ಬಂದಿದ್ದೆ. ಆಗಷ್ಟೇ ನನ್ನ ಗೆಳೆಯನೊಬ್ಬ ಇರಾನ್‌ನಿಂದ ಹೊಸ ಕೋಟು ತಂದಿದ್ದ. ಅದನ್ನೇ ಸಾಲವಾಗಿ ತೆಗೆದುಕೊಂಡು ಧರಿಸಿ, ಅವರ ಮುಂದೆ ಹೋಗಿ ನಗುಬೀರಿದ್ದೆ. ಆಕಸ್ಮಿಕ ಉದ್ಭವಿಸಿದ ಪರ್ಷಿಯನ್‌ ರೂಪ ನನ್ನದು' ಎಂದು ಇದೇ ವೇಳೆ ಅವರು ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಟೀನೂ ಆನಂದ್‌, ಸಾಥ್‌ ಹಿಂದುಸ್ಥಾನಿಯಲ್ಲಿ ನಟಿಸಬೇಕಾಗಿತ್ತು. ಸತ್ಯಜಿತ್‌ ರೇ ಜತೆಗೆ ಸಿನಿಮಾ ನಿರ್ದೇಶನ ಕಲಿಯಲು ಹೋಗಿದ್ದರಿಂದ ಅವರ ಅವಕಾಶವನ್ನು ನಿರ್ದೇಶಕ ಅಬ್ಟಾಸ್‌, ಬಚ್ಚನ್‌ಗೆ ನೀಡಿದ್ದರು.

ಅಲ್ಲದೆ, ಬಚ್ಚನ್‌ ಪಾಲಿಗೆ ಇದೇ ಫೆ.15 ಅವರ ಮೂರು ಸಿನಿಮಾಗಳ ಬರ್ತ್‌ ಡೇಯೂ ಹೌದು. "ಬಂಧೇ ಹಾತ್‌'ಗೆ 44, "ಅಗ್ನಿಪಥ್‌'ಗೆ 27, "ಏಕಲವ್ಯ' ಚಿತ್ರದ 10ನೇ ವರ್ಷದ ಹುಟ್ಟುಹಬ್ಬವೂ ಇದೇ ದಿನ. ಈ ಕಾರಣ ಬಚ್ಚನ್‌ ಫೆ.15 ಎಂದಾಕ್ಷಣ ಹೆಚ್ಚು ಭಾವುಕರಾಗಿ ಬರೆದುಕೊಳ್ಳುತ್ತಾರೆ. ದಿನಪೂರ್ತಿ ಒಂದೊಂದೇ ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ, ಆ ದಿನಗಳಿಗೆ ಜಾರುತ್ತಾರೆ.


More News of your Interest

Back to Top