ಸಂಪನ್ಮೂಲವಿಲ್ಲದ ಸ್ವತಂತ್ರ ಸರಕಾರಗಳು


Team Udayavani, Jun 25, 2017, 3:45 AM IST

KOTA-24–2017.jpg

ಗ್ರಾ. ಪಂ.ಗಳು ಕಾನೂನುಬದ್ಧವಾಗಿ ತಮಗೆ ಬರಬೇಕಾಗಿದ್ದ ವಾರ್ಷಿಕ ತೆರಿಗೆ ವಸೂಲಿ ಮಾಡದಷ್ಟು ದುರ್ಬಲ ಸ್ಥಿತಿ ತಲುಪಿವೆಯೊ? ಅಥವಾ ತೆರಿಗೆ ಹೊರೆಯಾಗಿ ಸಾಮಾನ್ಯ ಜನರಿಂದ ವಸೂಲಿ ಮಾಡಲಾಗದ ಮಟ್ಟಕ್ಕೆ ವ್ಯವಸ್ಥೆ ತಲುಪಿದೆಯೋ? ಕೆದಕುತ್ತಾ ಹೋದರೆ ಅಲ್ಲಿಯೂ ಪರಿಸ್ಥಿತಿ ಅರ್ಥವಾಗದಂತಿದೆ. ವಿಚಿತ್ರವೆಂದರೆ ಯಾವುದೇ ಗ್ರಾ. ಪಂ. ನಲ್ಲಿ ಬಡವರು ತೆರಿಗೆ ಬಾಕಿ ಇಟ್ಟಿಲ್ಲ.

ಆಳಿಸಿಕೊಳ್ಳುವವರ ಆಡಳಿತ ಯಾವುದು ಎಂದರೆ ಸಂವಿಧಾನವನ್ನು ನೆನಪಿಸಿಕೊಂಡು ಶಾಸನ ಸಭೆಗಳಲ್ಲಿ ನಾವೆಲ್ಲ ಹೇಳುವುದು ಗ್ರಾಮ ಪಂಚಾಯತ್‌ ವ್ಯವಸ್ಥೆಗಳನ್ನು. ಇದೀಗ ಅಧಿಕಾರ ವಿಕೇಂದ್ರೀಕರಣದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೈಗೆ ಅಧಿಕಾರ ಸಿಕ್ಕಿದೆ. ಇಲ್ಲಿಯವರೆಗೆ ಕೇವಲ ಆಳಿಸಿಕೊಳ್ಳುತ್ತಿದ್ದ ಜೀತ ಮಾಡುವ, ಕಾಡು, ಮೇಡು ಗುಡ್ಡ ಬೆಟ್ಟಗಳಲ್ಲಿ ಬಡಿದಾಡಿ ಬದುಕು ಕಟ್ಟಿಕೊಳ್ಳುವ ಕಡು ಬಡವರ ಕೈಗೆ ಅಧಿಕಾರ ಕೊಟ್ಟ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು “ಆಳಿಸಿಕೊಂಡವರ ಆಡಳಿತವೆನ್ನದೆ ಬೇರೆ ಮಾರ್ಗವಿಲ್ಲ. ಕೂತೂಹಲವೆಂದರೆ ಆಳಿಸಿಕೊಳ್ಳುವವರು ಆಡಳಿತ ನಡೆಸುವ ಈ ಗ್ರಾಮ ಸರಕಾರಗಳು ಮಾತ್ರ ಇದೀಗ ಸಂಪನ್ಮೂಲವಿಲ್ಲದೆ ಸೊರಗುತ್ತಿವೆ. 

ಯಾವುದೇ ಗ್ರಾ. ಪಂ.ಗಳಿಗೆ ಭೇಟಿ ನೀಡಿದಾಗಲೂ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರು ಅದರಲ್ಲೂ ಮಹಿಳೆಯರು ನಾವು ಗ್ರಾ. ಪಂ. ಅಭಿವೃದ್ಧಿಗಾಗಿ ಶಕ್ತಿ ಮೀರಿ ದುಡಿಯುತ್ತಿದ್ದೇವೆ, ಆದರೆ ಅನುದಾನವಿಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊಡುವ ಹಣ ವಿದ್ಯುತ್‌ ಬಿಲ್ಲಿಗೆ ಕಡಿತವಾಗುತ್ತದೆ. ಪಂಚಾಯತ್‌ ತೆರಿಗೆಯಿಂದ ಬರುವ ಸಂಪನ್ಮೂಲ ಸಿಬಂದಿ ವೆಚ್ಚಕ್ಕೆ ಸಾಲುತ್ತಿಲ್ಲ ಎಂಬ ಅವರ ವಾದವೂ ಅರ್ಥಪೂರ್ಣ. 

ಹಾಗಾಗಿ ಸರಕಾರಗಳು ಗ್ರಾಮ ಪಂಚಾಯತಿಗೆ ಹೆಚ್ಚು ಅನುದಾನ ನೀಡಿದರೆ ಮಾತ್ರ ಗ್ರಾಮ ಸರಕಾರಗಳು ಜೀವಂತವಾಗಿ ಆಡಳಿತ ನಡೆಸಲು ಸಾಧ್ಯ. ಈ ಮಧ್ಯೆ ಗ್ರಾ. ಪಂ.ಗಳ ಅಧ್ಯಕ್ಷರು/ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಪಂಚಾಯತ್‌ಗಳ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳದಿದ್ದರೆ ಮತ್ತು ಪಂಚಾಯತ್‌ಗಳಿಗೆ ಬರಬೇಕಾದ ಕರಗಳನ್ನು ಸಂಗ್ರಹ ಮಾಡದಿದ್ದರೆ ಆಡಳಿತ ನಡೆಸುವುದಾದರೂ ಹೇಗೆ? ಇಂದಲ್ಲ ನಾಳೆ ನಮ್ಮ ಗ್ರಾ. ಪಂ.ಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಜತೆಯಲ್ಲಿ ಸ್ವಂತ ಸಂಪನ್ಮೂಲಗಳ ಕ್ರೋಢೀಕರಣ ಮರೆತರೆ ಎಲ್ಲ ಖರ್ಚುವೆಚ್ಚಗಳಿಗೆ ಸರಕಾರದ ಮುಂದೆ ಕೈಚಾಚಬೇಕಾಗದ ಸ್ಥಿತಿ ಮುಂದುವರಿಯಲಿದೆ. 

ಈಚೆಗೆ ಕುತೂಹಲಕ್ಕಾಗಿ ವಿಧಾನ ಪರಿಷತ್ತಿನಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಗ್ರಾ. ಪಂ.ಗಳ ಕರ ಸಂಗ್ರಹಣೆ ಬಗ್ಗೆ ಮಾಹಿತಿ ಕೋರಿದ್ದೆ. ಮಂತ್ರಿ ಎಚ್‌.ಕೆ ಪಾಟೀಲ್‌ ಸದನದಲ್ಲಿ ಮಂಡಿಸಿದ ಉತ್ತರ ಮಾತ್ರ ಬೆಚ್ಚಿ ಬೀಳಿಸುವಂತಹುದು. ಸರಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕವೇ ಕೊಟ್ಟ ಉತ್ತರವೆಂದರೆ, ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿರುವ 6000ಕ್ಕೂ ಮಿಕ್ಕಿ ಗ್ರಾ. ಪಂ. ಗಳಲ್ಲಿ ವಸೂಲಾಗಬೇಕಿದ್ದುದು ಸುಮಾರು 2,672 ಕೋಟಿ ರೂ. ಆದರೆ ವಸೂಲಾದದ್ದು ಕೇವಲ 597 ಕೋಟಿ ರೂ. ಅಂದರೆ ಪಂಚಾಯತುಗಳಿಗೆ ಬರಬೇಕಾದ ತೆರಿಗೆಯ ಮೊತ್ತ ಬರೋಬ್ಬರಿ 2075 ಕೋಟಿಗೂ ಮೀರಿ. ಸ್ವಂತ ಸರಕಾರವೆಂದು ನಾವೆಲ್ಲ ಹೆಮ್ಮೆಯಿಂದ ಆಡಳಿತ ನಡೆಸುತ್ತಿರುವ ಗ್ರಾ. ಪಂ.ಗಳು ಕಾನೂನುಬದ್ಧವಾಗಿ ತಮಗೆ ಬರಬೇಕಾಗಿದ್ದ ವಾರ್ಷಿಕ ತೆರಿಗೆ ವಸೂಲಿ ಮಾಡದಷ್ಟು ದುರ್ಬಲ ಸ್ಥಿತಿ ತಲುಪಿವೆಯೊ? ಅಥವಾ ತೆರಿಗೆ ಹೊರೆಯಾಗಿ ಸಾಮಾನ್ಯ ಜನರಿಂದ ವಸೂಲಿ ಮಾಡಲಾಗದ ಮಟ್ಟಕ್ಕೆ ವ್ಯವಸ್ಥೆ ತಲುಪಿದೆಯೋ? ಕೆದಕುತ್ತಾ ಹೋದರೆ ಅಲ್ಲಿಯೂ ಪರಿಸ್ಥಿತಿ ಅರ್ಥವಾಗದಂತಿದೆ. 

ವಿಚಿತ್ರವೆಂದರೆ ಯಾವುದೇ ಗ್ರಾ. ಪಂ. ನಲ್ಲಿ ಬಡವರು ತೆರಿಗೆ ಬಾಕಿ ಇಟ್ಟಿಲ್ಲ. ಆರ್ಥಿಕವಾಗಿ ದುರ್ಬಲ ವರ್ಗದವರೆಂದು ಪರಿಗಣಿಸಲಾದ ಪ. ಜಾತಿ, ಪ.ಪಂಗಡದವರ ತೆರಿಗೆ ಬಾಕಿ ಕಾಣುತ್ತಿಲ್ಲ. ಅಲ್ಲೋ ಇಲ್ಲೋ ಕೆಲವು ಗ್ರಾ. ಪಂ.ಗಳಲ್ಲಿ ನೀರಿನ ಕರ, ಮನೆ ತೆರಿಗೆ ಬಾಕಿ ಇಟ್ಟುಕೊಂಡಿದ್ದರೆ, ಅವರ ಪಡಿತರ ಚೀಟಿ ತಡೆ ಹಿಡಿದು ಅಥವಾ ಮೀಸಲಾತಿಯ ಹಣದಲ್ಲಿ ಕಡಿತಗೊಳಿಸಿ ಅನುಸೂಚಿತರ ತೆರಿಗೆ ಸಂಗ್ರಹ ಮಾಡಿಕೊಳ್ಳಲಾಗಿದೆ. ವ್ಯಾಪಾರ ವಹಿವಾಟು, ಕಟ್ಟಡ ತೆರಿಗೆಗಳಿಗಿಂತ ಶ್ರೀಮಂತ ವ್ಯವಸ್ಥೆಗಳೇ ಪಂಚಾಯತ್‌ ತೆರಿಗೆಯನ್ನು ಕಟ್ಟದೇ ಉಳಿದು ನ್ಯಾಯಾಲಯದ ಮೆಟ್ಟಿಲು ಹತ್ತಿವೆ ಅಥವಾ ತೆರಿಗೆ ನೀಡದೆ ಸವಾಲು ಹಾಕುತ್ತಿವೆ.

ಬಡವರಾದರೂ ತೆರಿಗೆ ಉಳಿಸಿಕೊಂಡು ತಮ್ಮ ಕಷ್ಟ ಹೇಳಿಕೊಂಡಿದ್ದರೆ ವಿಚಾರ ವಿಮರ್ಶಿಸಬಹುದಿತ್ತು. ಬದಲಾಗಿ ಶ್ರೀಮಂತ ಸಂಸ್ಥೆಗಳೇ ತೆರಿಗೆ ನೀಡದೆ ನ್ಯಾಯಾಲಯದ ತಡೆ ಆಜ್ಞೆ ತಂದು ಸವಾಲೊಡ್ಡಿದರೆ ನಮ್ಮ ಪಂಚಾಯತ್‌ಗಳಲ್ಲಿ ಅಧಿಕಾರದ ಸೂತ್ರ ಹಿಡಿದ, ಇನ್ನೂ ಆಡಳಿತದಲ್ಲಿ ಪಳಗಬೇಕಾದ ಮುಗ್ಧರಿಗೆ ಸ್ವಲ್ಪ ಮಟ್ಟಿಗೆ ಆತಂಕವಾಗುವುದು ನಿಜ. ಆದರೆ ಈ ಸವಾಲನ್ನು ಸಂಘಟಿತವಾಗಿ ಎದುರಿಸಬೇಕಾದುದು ಅನಿವಾರ್ಯ.
 
ರಮೇಶ್‌ ಕುಮಾರ್‌ ವರದಿಯ ಆಧಾರದಲ್ಲಿ ರಚನೆಯಾದ ನೂತನ ಗ್ರಾಮ ಸ್ವರಾಜ್‌ ಪಂಚಾಯತ್‌ ರಾಜ್‌ ಕಾಯ್ದೆ ತಿದ್ದುಪಡಿ 2017ರ ಅಧಿನಿಯಮದ ಪ್ರಕರಣ 199 ಮತ್ತು 200ರಲ್ಲಿ ಕರ ವಸೂಲಿಯ ಪೂರ್ಣ ಉಲ್ಲೇಖವಿದೆ. ಉದ್ದೇಶಪೂರ್ವಕವಾಗಿ ಉಳ್ಳವರು ಕರ ನೀಡದೆ ಉಡಾಫೆ ಮಾಡಿದರೆ ಭೂಕಂದಾಯ ವಸೂಲಾತಿಯ ಮಾರ್ಗವನ್ನು ಅನುಸರಿಸಿ ವಸೂಲಾತಿಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ. 

ಆದರೆ ಅನೇಕ ಪಂಚಾಯತ್‌ಗಳಲ್ಲಿ ಬಾಕಿ ವಸೂಲಿಗೆ ತಗಾದೆ ಮಾಡಿ ನ್ಯಾಯಾಲಯಕ್ಕೆ ಹೋದವರಿಗೆ ಕಾನೂನಿನ ರುಚಿ ತೋರಿಸಿ ವಸೂಲಿಯ ದಿಟ್ಟತನದ ಕ್ರಮ ವಹಿಸದಿರುವುದರಿಂದ ಕರ ವಸೂಲಿ ಕುಂಠಿತವಾಗಿರುತ್ತದೆ. ಕೆಲವು ಕಡೆ ಗ್ರಾ. ಪಂ.ಗಳು ಮನೆ ತೆರಿಗೆ, ನೀರಿನ ಕರ, ಅಂಗಡಿ ವ್ಯಾಪಾರ, ಕಟ್ಟಡ ಪರವಾನಿಗೆ ಬಿಟ್ಟು ಮತ್ತಾವುದೇ ತೆರಿಗೆ ವಸೂಲಿಯ ಬಗ್ಗೆ ಯೋಚಿಸುವುದೇ ಇಲ್ಲ. ಪಂಚಾಯತ್‌ ರಾಜ್‌ ಕಾಯ್ದೆಯ ಪ್ರಕರಣ 63ರಿಂದ 68ರವರೆಗೆ ಪಂಚಾಯತ್‌ ವ್ಯಾಪ್ತಿಯೊಳಗೆ ಬರುವ  ಕೈಗಾರಿಕೆಗಳು, ಉತ್ಪಾದನಾ ಕಾರ್ಖಾನೆಗಳು, ಐಟಿ ಪಾರ್ಕುಗಳು, ಹಾರ್ಡ್‌ವೇರ್‌ ಪಾರ್ಕ್‌, ಟೆಕ್ಸ್‌ಟೈಲ್‌ ಪಾರ್ಕ್‌, ಬಯೋಟೆಕ್‌ ಪಾರ್ಕ್‌, ಪವರ್‌ ಪ್ಲಾಂಟ್‌, ಹೈಡ್ರೋ ಥರ್ಮಲ್‌, ಸೋಲಾರ್‌ ಸ್ಥಾವರಗಳು, ವಿಂಡ್‌ ಮಿಲ್‌ಗ‌ಳು, ವಿಮಾನ ನಿಲ್ದಾಣ ಹಾಗೂ ಅವುಗಳಿಗೆ ಸಂಬಂಧಿಸಿದ ಆಯ್ಕೆ ಪ್ರದೇಶಗಳು, ವಿಶೇಷ ಆರ್ಥಿಕ ವಲಯ ಮತ್ತು ಕೈಗಾರಿಕಾ ಪ್ರದೇಶಗಳು ಹಾಗೂ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಂಪನಿಗಳ ಮೊಬೈಲ್‌ ಟವರ್‌ಗಳ ಮೇಲೆ ಕರ ವಸೂಲಾತಿ ಮಾಡಲು ಕಾಯಿದೆ ಅಧಿಕಾರ ನೀಡಿದೆ. 

ಕರ ವಸೂಲಿಯ ಅಧಿಕಾರ ಇದೆ ಆದರೆ ವಸೂಲು ಮಾಡುವ ಶಕ್ತಿ ಪಂಚಾಯತ್‌ಗಳಿಗೆ ಇಲ್ಲ. ಮೊಬೈಲ್‌ ಟವರ್‌ ಒಂದಕ್ಕೆ ವಾರ್ಷಿಕ 12,000 ರೂ. ಕರ ವಿಧಿಸುವ ಅಧಿಕಾರವಿದೆ. ಉಡುಪಿ ತಾಲೂಕಿನ ಕಟಪಾಡಿ ಗ್ರಾ.ಪಂ.ನಲ್ಲಿ 7 ಮೊಬೈಲ್‌ ಟವರ್‌ಗಳಿದ್ದು, ಕೇವಲ ಒಂದಕ್ಕೆ ಮಾತ್ರ ತೆರಿಗೆ ವಸೂಲಿ ಆಗುತ್ತಿದೆ. ಉಳಿದವಕ್ಕೆ ನೋಟೀಸ್‌ ಕೊಟ್ಟರೆ ಹೈಕೋರ್ಟ್‌ ತಡೆಯಾಜ್ಞೆ ತರಲಾಗಿದೆ. ತಡೆಯಾಜ್ಞೆ ತೆರವು ಮಾಡಬೇಕಾದ ಪಂಚಾಯತ್‌ ರಾಜ್‌ ಇಲಾಖೆ ಮೌನ ವಹಿಸಿರುವುದು ಇಚ್ಛಾಶಕ್ತಿಯ ಕೊರತೆಗೆ ಉದಾಹರಣೆ. ಕಟಪಾಡಿ ಮಾತ್ರವಲ್ಲ, ಯಾವ ಪಂಚಾಯತುಗಳಲ್ಲೂ ಮೊಬೈಲ್‌ ಟವರ್‌ಗಳಿಗೆ ಕಂಪನಿಗಳು ತೆರಿಗೆ ನೀಡದೆ ಕಣ್ಣುಮುಚ್ಚಾಲೆ ಆಡುತ್ತಿವೆ. ಆಧುನಿಕವಾಗಿ ತಲೆ ಎತ್ತುತ್ತಿರುವ ವಿಂಡ್‌ ಮಿಲ್‌ಗ‌ಳಂತೂ ತಮಗೂ ಗ್ರಾ. ಪಂ.ಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತವೆ. 

ಮಂಗಳೂರು ವಿಮಾನ ನಿಲ್ದಾಣ ತನ್ನ ವ್ಯಾಪ್ತಿಯೊಳಗೆ ಬರುತ್ತದೆ, ಕಾನೂನುಬದ್ಧ ತೆರಿಗೆ ಕೊಡಿ ಎಂದು ಮಂಗಳೂರು ತಾಲೂಕಿನ ಮಳವೂರು ಪಂಚಾಯತ್‌ ಕೊಟ್ಟ ನೊಟೀಸಿಗೆ ಮಂಗಳೂರು ವಿಮಾನ ನಿಲಾಣ ಪ್ರಾಧಿಕಾರ ಕರಪಾವತಿ ಮಾಡುವುದಿರಲಿ, ಉತ್ತರವನ್ನು ಕೊಟ್ಟಿಲ್ಲ. ರಾಜ್ಯಾದ್ಯಾಂತ ಹೆದ್ದಾರಿಗಳಲ್ಲಿ ಸಾಲಾಗಿ ವಾಹನಗಳನ್ನು ಅಡ್ಡಕಟ್ಟಿ ಕಾನೂನು ಪ್ರಕಾರ ಟೋಲ್‌ ವಸೂಲಿ ಮಾಡುವ ಗೇಟ್‌ಗಳ ಒಟ್ಟು ಆದಾಯದಲ್ಲಿ ಕನಿಷ್ಠ ಶೇ.1ರಿಂದ ಶೇ. 2ನ್ನು ತೆರಿಗೆಯಾಗಿ ಸ್ಥಳೀಯ ಸಂಸ್ಥೆಗಳಿಗೆ ನಿಡಬೇಕೆಂಬ ನಿಯಮವಿದ್ದರೂ ಟೋಲ್‌ಗೇಟ್‌ಗಳು ಆಯಾ ಗ್ರಾ. ಪಂ. ಅಧ್ಯಕ್ಷರ ವಾಹನವನ್ನೂ ಬಿಡದೇ ಟೋಲ್‌ ವಸೂಲಿ ಮಾಡುತ್ತವೆ ಹೊರತು ಗ್ರಾ.ಪಂ.ಗೆ ತೆರಿಗೆ ಕಟ್ಟಿದ ಉದಾಹರಣೆ ಇಲ್ಲ.
 
ಮರಳುಗಾರಿಕೆ ಇರುವ ಪಂಚಾಯತುಗಳಲ್ಲಿ ಕನಿಷ್ಠ ತೆರಿಗೆ ರಾಜಧನದ ರೂಪದಲ್ಲಾದರೂ ಬರಬಹುದೆಂದುಕೊಂಡರೆ ಅಲ್ಲೂ ವಂಚನೆಯೇ. ಸರಕಾರದ ಸುತ್ತೋಲೆ ಸಂಖ್ಯೆ: ಸಿಐ170 ಎಂಎಂಎನ್‌ 2014 ದಿನಾಂಕ: 8-9-2014ರಲ್ಲಿ ಕರ್ನಾಟಕ ರಾಜ್ಯದಲ್ಲಿ ಗಣಿ ಇಲಾಖೆಯ ಮೂಲಕ ಸುತ್ತೋಲೆಯೊಂದನ್ನು ಹೊರಡಿಸಿ, ಯಾವ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಯುತ್ತದೆಯೋ ಅಂತಹ ಪಂಚಾಯತುಗಳಿಗೆ ಸರಕಾರಕ್ಕೆ ವಸೂಲಾಗುವ ರಾಜಧನದಲ್ಲಿ ಶೇ.25ನ್ನು ನೀಡಲಾಗುವುದು ಎಂದು ಆದೇಶ ಹೊರಡಿಸಲಾಗಿತ್ತು. ಈ ಮಾರ್ಗಸೂಚಿಯಂತೆ ರಾಜ್ಯದಲ್ಲಿ 158 ಕೋಟಿ ರೂ.ಗಳಷ್ಟು ಹಣ ಗ್ರಾ. ಪಂ.ಗಳಿಗೆ ಬರಬೇಕಾಗಿದೆ. ಉಡುಪಿ ಜಿಲ್ಲೆಯೊಂದರಲ್ಲೇ ಸುಮಾರು 4 ಕೋಟಿ ರೂ.ಗಳಷ್ಟು ವಿವಿಧ ಗ್ರಾ. ಪಂ.ಗಳಿಗೆ ಪಾವತಿ ಆಗಬೇಕಾಗಿದೆ. 

ಗಣಿ ಇಲಾಖೆಯ ಸಚಿವರೇ ಸದನದಲ್ಲಿ ಕೊಡುವ ಭರವಸೆ ಕೊಟ್ಟರೂ ಗಣಿ ಇಲಾಖಾಧಿಕಾರಿಗಳು ಒಬ್ಬರನೊಬ್ಬರು ತೋರಿಸಿ ಗ್ರಾ. ಪಂ.ಗಳಿಗೆ ಸುಳ್ಳು ಹೇಳುವುದು ಬಿಟ್ಟರೆ 10 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಒಎಫ್ಸಿ ಕೇಬಲ್‌ಗ‌ಳ ಕತೆಯೇ ಬೇರೆ. ಯಾವುದೇ ಕಂಪನಿ ಭೂ ಅಗೆತ ಮಾಡಿ ಕೇಬಲ್‌ ಅಳವಡಿಸಬೇಕಿದ್ದರೆ ಮೀಟರಿಗೆ ಕನಿಷ್ಠ 225 ರೂ. ಕರ ಪಾವತಿಸಬೇಕೆಂಬ ನಿಯಮವಿದ್ದರೂ ಕಂಪೆನಿಗಳು ಗ್ರಾ. ಪಂ.ಗಳಿಗೆ ಹಣ ಕೊಡುತ್ತಿಲ್ಲ. 

ಒಟ್ಟಾರೆ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾ. ಪಂ.ಗಳು ಈ ಎಲ್ಲ ವ್ಯವಸ್ಥೆಗಳಿಗೆ ಕಡ್ಡಾಯವಾಗಿ ಕರ ವಿಧಿಸಿ ಪ್ರತೀ ಸಾಮಾನ್ಯ ಸಭೆಯಲ್ಲಿ ವಿಷಯ ಸೂಚಿಯಾಗಿ ಕರವಸೂಲಿಯ ಬಗ್ಗೆ ಸೂಕ್ತವಾಗಿ ಚರ್ಚಿಸಿ, ಧನವಂತರ ಕುರಿತು ಕಠಿನ ನಿರ್ಧಾರ ತೆಗೆದುಕೊಳ್ಳಲೇ ಬೇಕಾಗುತ್ತದೆ. ಗ್ರಾ. ಪಂ. ಕರ ವಸೂಲಿಯಲ್ಲಿ ವಿಫ‌ಲಗೊಂಡರೆ ತಾ. ಪಂ. ಸಿಇಒ ಮತ್ತು ಜಿ.ಪಂ. ಸಿಇಒ ಪ್ರತಿ ಮಾಸಿಕ ಸಭೆಗಳಲ್ಲಿ ಪಂಚಾಯತ್‌ಗಳ ಕರ ವಸೂಲಿ ತೊಂದರೆಗಳ ಬಗ್ಗೆ ಚರ್ಚಿಸಿ ಮಾರ್ಗದರ್ಶನ ಮತ್ತು ಕಾನೂನು ಸಲಹೆ ಕೊಡುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಾದ ಅಗತ್ಯವಿದೆ. ಈಗಿರುವ ಅಂಕಿಸಂಖ್ಯೆಗಳನ್ನು ಗಮನಿಸಿದರೆ ಇಡೀ ರಾಜ್ಯದಲ್ಲಿ ಸರಾಸರಿ ಶೇಕಡಾವಾರು ಕೇವಲ 23ರಷ್ಟು ಮಾತ್ರ ಕರವಸೂಲಾಗಿದೆ. ದ.ಕ., ಉಡುಪಿ ಜಿ.ಪಂ.ಗಳಲ್ಲಿ ಸರಾಸರಿ ಶೇಕಡಾ 80ಕ್ಕೂ ಮೀರಿ ತೆರಿಗೆ ವಸೂಲಾಗಿದ್ದು, ಉಳಿದೆಡೆ ತೆರಿಗೆ ವಸೂಲಾತಿಯ ಪ್ರಮಾದವೇನೋ ಎಂಬಂತೆ ಪಂಚಾಯತ್‌ಗಳು ನಿಷ್ಕ್ರಿಯವಾಗಿವೆ. 

ರಾಜ್ಯದ ಅನೇಕ ಕಡೆ ಪಂಚಾಯತ್‌ಗಳಲ್ಲಿ ಸ್ವಂತ ಸಂಪನ್ಮೂಲ ಏರಿಕೆಗೆ ದುಡಿಯುವ ಮನಸ್ಸುಗಳು ಕಂಡುಬರುತ್ತಿಲ್ಲ. ಹಾಗೊಂದು ವೇಳೆ ಈಗಾಗಲೇ ಬಾಕಿ ಬರಬೇಕಾದ ಮತ್ತು ತೆರಿಗೆ ಬೇಡಿಕೆಗೆ ಮೇಲಿನೆಲ್ಲ ಸಂಸ್ಥೆಗಳು ಸಹಕರಿಸಿದರೆ ಕರ್ನಾಟಕ ರಾಜ್ಯದ ಗ್ರಾ. ಪಂ.ಗಳ ಒಟ್ಟು ಆದಾಯ ಬಹುತೇಕ ಕನಿಷ್ಠವೆಂದರೂ 6,000 ಕೋಟಿ ರೂ.ಮೀರುವುದು. ಆಗ ಒಂದೊಂದು ಗ್ರಾ.ಪಂ.ಗೆ ತೆರಿಗೆಯ ಮೂಲಕ ಸರಾಸರಿ 75 ಲಕ್ಷದಿಂದ 1 ಕೋಟಿ ರೂ.ವರೆಗೆ ಸಂಪನ್ಮೂಲ ಪಡೆಯುವ ಶಕ್ತಿ ಬರಲಿದೆ. ಹಾಗಾಗಬೇಕಾದರೆ ಇಡೀ ಪಂಚಾಯತ್‌ ರಾಜ್‌ ವ್ಯವಸ್ಥೆ ದುಡಿಯಬೇಕು.

ಸದ್ಯ ತೆರಿಗೆ ವಸೂಲಿ ಎಂಬ ಚೆಂಡು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಣೆ ಹೊತ್ತಿರುವ ಕುಶಲಮತಿ ಮಂತ್ರಿ ಎಚ್‌.ಕೆ ಪಾಟೀಲ್‌ ಅವರ ಅಂಗಳದಲ್ಲಿದೆ. ಹಾಗೆಂದು ನಮ್ಮ ಗ್ರಾ. ಪಂ.ಗಳು ತಮ್ಮ ಕರವಸೂಲಿಯ ಜವಾಬ್ದಾರಿ ಮರೆಯುವಂತಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಹಕ್ಕುಗಳನ್ನು ಮಾತ್ರ ಕೇಳುವುದಲ್ಲ, ಕರ್ತವ್ಯವನ್ನು ಮರೆಯಬಾರದು.  ಕೊನೆಯ ಮಾತು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು  ತಾಲೂಕಿನ ಕೇಪು ಗ್ರಾ. ಪಂ. ಕಳೆದ 18 ವರ್ಷಗಳಿಂದ  ಶೇ.100ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಕುಂದಾಪುರ ತಾಲೂಕಿನ ಮರವಂತೆ -ತಲ್ಲೂರು ಪಂಚಾಯತ್‌ಗಳು ಅದೇ ದಾರಿಯಲ್ಲಿವೆ. ಇಲ್ಲಿ ಸಾಧ್ಯವಾಗುವುದಾದರೆ ಉಳಿದೆಡೆ ಏಕಿಲ್ಲ? ಬಡವರ ಮಧ್ಯೆ ಬದುಕುವ ಗ್ರಾ. ಪಂ.ಗಳು ಶ್ರೀಮಂತರ ತೆರಿಗೆ ಪಡೆಯುವ ಶಕ್ತಿ ಹೊಂದಲೇಬೇಕು. ಇದಕ್ಕೆ ಸರಕಾರದ ನಿಲುವೇನು ಎಂಬುದೇ ಪ್ರಶ್ನೆ. 

– ಕೋಟ ಶ್ರೀನಿವಾಸ ಪೂಜಾರಿ 
ವಿಧಾನ ಪರಿಷತ್‌ ಸದಸ್ಯರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.