ಮಕ್ಕಳಲ್ಲಿ ತುಂಬಿ ತುಳುಕುವ ಮತೀಯ ನಂಜನ್ನು ಕಂಡು ದಿಗ್ಭ್ರಮೆಯಾಯಿತು


Team Udayavani, Aug 12, 2017, 12:18 AM IST

Religion-India-600.jpg

ಕರಾವಳಿ ಕನ್ನಡ ಮೇಸ್ಟ್ರ ಸ್ವಗತ

‘ಈ ಕಾಲೇಜನ್ನು – ಧರ್ಮದ ಕಾಲೇಜಾಗಿ ಪರಿವರ್ತಿಸಲಾಗುವುದು” ಎಂಬ ಮೆಸೇಜ್‌ ನನ್ನ ಮೊಬೈಲ್‌ಗೆ ಫಾರ್ವರ್ಡ್‌ ಆಯಿತು. ಪಕ್ಷವೊಂದರ ಸ್ಥಳೀಯ ಮುಖಂಡರು ‘ಅವನನ್ನು ಸೇರಿಸಿ ಮತ್ತಿಬ್ಬರನ್ನು ಅಲ್ಲಿಂದ ಬೇರೆ ಕಡೆ ಓಡಿಸಿದರೆ ಸಂಸ್ಥೆ ಉದ್ಧಾರವಾದೀತು’ ಎಂದು ಹೇಳಿದ್ದರು.

ನಾನು ಕರಾವಳಿಯ ಸರಕಾರಿ ಪದವಿ ಕಾಲೇಜೊಂದರಲ್ಲಿ ಭಾಷೆ ಮತ್ತು ಸಾಹಿತ್ಯ ಕಲಿಸುವ ಕನ್ನಡ ಮೇಸ್ಟ್ರು. ವರ್ಷವಿಡೀ ಅಲ್ಲಮ, ಬುದ್ಧ, ಬೇಂದ್ರೆ, ಬಸವ, ಗಾಂಧಿ, ಅಂಬೇಡ್ಕರ್‌, ಕುವೆಂಪು, ನಾರಾಯಣ ಗುರು ಎಂದೆಲ್ಲ ಪಾಠ ಮಾಡುವವನು. ಭಾಗಶಃ ಇವರೆಲ್ಲರ ಒಳಗಡೆ ತೂರಿಕೊಂಡು ಮಾತು ಶ್ರಮವಾಗದಂತೆ ತರಗತಿ ತುಂಬಾ ವಿಚಾರವನ್ನು ಬೆಸೆದು ಸಂಭ್ರಮಿಸುವವನು. ಆರಂಭದಲ್ಲಿ ನನ್ನಿಂದ ಕ್ರಾಂತಿಯೇ ಆಗುತ್ತದೆ ಎಂದು ಭ್ರಮಿಸಿದ್ದೂ ಉಂಟು. ಇಂಥ ಭ್ರಮೆ – ನಂಬಿಕೆಗೆ ಬಲವಾದ ಕಾರಣ ಸರಕಾರಿ ಕಾಲೇಜು ಯಾವುದೇ ಇರಲಿ, ಎಲ್ಲೇ ವರ್ಗಾವಣೆಯಾಗಲಿ; ಪ್ರತಿಯೊಂದು ಕಾಲೇಜಿನ ತರಗತಿಯೊಳಗಡೆ ಸ್ಥಾಯಿಯಾಗಿರುವ ಬಡತನ, ಮುಗ್ಧತೆ ಮತ್ತು ನೆಲಸಂಬಂಧ.

ಈಗ ನನ್ನ ಪಾಠ ಕೇಳುವ ಮಕ್ಕಳು ಎಲ್ಲಿ ಕೂತಿದ್ದಾರೋ ಅದೇ ಜಾಗದಲ್ಲಿ 35 ವರ್ಷಗಳ ಹಿಂದೆ ನಾನು ಕೂತಿದ್ದಾಗ ನಮಗೆ ಯಾವ ಬಡತನವಿತ್ತೋ, ಯಾವ ದಾಹ – ಹಸಿಹಸಿಸುವಿಕೆ ಇತ್ತೋ; ಅದೇ ಹಸಿವು – ತುಡಿತ ಇವತ್ತಿನ ಮಕ್ಕಳಿಗೂ ಇದೆ. ಈ ಕಾರಣಕ್ಕೆ ಈಗ ನನ್ನ ಪಾಠವೆಂದರೆ ಅದು ಬಡತನ ಮತ್ತು ಬಡತನದ ನಡುವೆ ಒಂದು ಸಂವಾದ. ಇದು ಮಹಾನಗರ ಕೇಂದ್ರಿತ ಖಾಸಗಿ ಕಾಲೇಜುಗಳಲ್ಲಿ ಸಾಧ್ಯವೇ ಇಲ್ಲ.

ಸ್ಕೂಟರ್‌ನಲ್ಲಿ ಬರುವ ಕನ್ನಡ ಮೇಸ್ಟ್ರು ಕಾರಲ್ಲಿ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದೆಂದರೆ ಅದೊಂದು ಬಗೆಯ ಶ್ರೀಮಂತ ಮತ್ತು ಬಡತನದ ನಡುವಿನ ಸಂವಾದವಾಗಿ ಬಿಡುತ್ತದೆ. ಶ್ರೀಮಂತ ಮತ್ತು ಬಡವ, ಶ್ರೀಮಂತ ಮತ್ತು ಶ್ರೀಮಂತರ ನಡುವಿನ ಸಂವಾದ ಖಂಡಿತ ಯೋಗ್ಯ ಬೌದ್ಧಿಕ ಮುಖಾಮುಖೀ ಅಲ್ಲವೇ ಅಲ್ಲ. ಇರಲಿ, ಎರಡು ದಶಕಗಳಲ್ಲಿ ಪತ್ರಿಕೋದ್ಯಮವನ್ನು ಕಳಚಿ ಕಾಲೇಜು ಮೇಸ್ಟ್ರು ಆದ ದಿನದಿಂದ ನಾನು ಅನುಭವಿಸಿಕೊಂಡು ಬರುತ್ತಿದ್ದ ಈ ಸುಖ, ಬದಲಾಗುತ್ತಿರುವ ಗ್ರಾಮ್ಯ ವಿದ್ಯಾರ್ಥಿಗಳಿಂದ ದಿನಾ ನಾನು ಕಲಿಯುತ್ತಿದ್ದ, ಬೆಳೆಯುತ್ತಿದ್ದ ಚೇತೋಹಾರಿ ಕ್ಷಣಗಳಿಗೆ ಬ್ರೇಕ್‌ ಬಿದ್ದು ನಾನು ಈ ವೃತ್ತಿಯ ಬಗ್ಗೆ ಗಂಭೀರವಾಗಿ ಯೋಚಿಸುವಂತಾದುದು ಕಳೆದ ವರ್ಷ. ಆಗ ನಾನು ಕರಾವಳಿಯ ಮೀಸಲು ಕ್ಷೇತ್ರವೊಂದರ ಸರಕಾರಿ ಕಾಲೇಜಿನಲ್ಲಿದ್ದೆ.

ಇಡೀ ರಾಜ್ಯದಲ್ಲಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದ, ನೂರಕ್ಕೆ ನೂರರಷ್ಟು ಗ್ರಾಮ ಕೇಂದ್ರಿತ ವಿದ್ಯಾರ್ಥಿಗಳನ್ನೇ ಹೊಂದಿ ಪಶ್ಚಿಮ ಘಟ್ಟದ ಸರಹದ್ದಿನಲ್ಲೇ ಇದ್ದ ಕಾಲೇಜು ಅದು. ನೆಲ, ಕೆಸರು, ಬೇರು, ಶ್ರಮ, ದುಡಿಮೆಯ ಬಗ್ಗೆ ಅಲ್ಲಿಯ ವಿದ್ಯಾರ್ಥಿಗಳ ಅನುಭವ ಅಪಾರ. ರವಿವಾರ – ರಜಾ ದಿನಗಳಲ್ಲಿ ಹೊರಗಡೆ ದುಡಿಯಲು ಹೋಗಿ ತಮ್ಮ ಫೀಸನ್ನು ತಾವೇ ಸಂಪಾದಿಸುವ ಶ್ರಮಜೀವಿಗಳು. ರಜಾದಿನಗಳಲ್ಲಿ ಅಡಿಕೆ ಸುಲಿದು ಅಂಗೈಯಲ್ಲಿ ಗುಳ್ಳೆ ಎಬ್ಬಿಸಿಕೊಂಡು ಪೆನ್ನು ಹಿಡಿಯಲಾಗದ ಮಕ್ಕಳನ್ನೂ ನಾನು ಅಲ್ಲಿ ಕಂಡದ್ದಿದೆ. ಇಂಥವರಿಗೆ ಅರಿವಿನ ಬೀಜ ತುಂಬುವುದು ಸಾರ್ಥಕ ಎಂದು ಭಾವಿಸಿದ್ದೆ.

ಕಳೆದ ವರ್ಷ  ಮೊದಲ ಬಾರಿಗೆ ಇಡೀ ರಾಜ್ಯದಲ್ಲೇ ಎಲ್ಲೂ ಇಲ್ಲದ ವಿವಾದವೊಂದು ಇಲ್ಲಿ ಸ್ಫೋಟಗೊಂಡಿತು. ಅದು ವಿದ್ಯಾರ್ಥಿಗಳ ವಸ್ತ್ರ ಸಂಹಿತೆಗೆ ಸಂಬಂಧಿಸಿದ್ದು. ವಿದ್ಯಾರ್ಥಿನಿಯರ ಹಿಜಾಬ್‌ಗ ಪರ್ಯಾಯವೆಂದು ನಿರ್ದಿಷ್ಟ ಬಣ್ಣದ ಶಾಲುಗಳು ಹುಡುಗರ ಹೆಗಲಿಗೇರಿದವು. ‘ಅವರ ಶಿರವಸ್ತ್ರ ತೆಗೆಸಿ, ಇಲ್ಲ ನಾವು ಧರಿಸುತ್ತೇವೆ’ – ತಂತ್ರ – ಪ್ರತಿತಂತ್ರಗಳು ಜೋರಾಯಿತು. ಇವರೆಲ್ಲ ಬಡವರು, ದುಡಿದು ಬರುವವರು ಎಂದೆಲ್ಲ ನಂಬಿದ್ದ ನಮಗೆ ಏಕದಂ ಮಕ್ಕಳಲ್ಲಿ ತುಂಬಿ ತುಳುಕಿದ ಮತೀಯ ನಂಜನ್ನು ಕಂಡು ದಿಗ್ಭ್ರಮೆಯಾಯಿತು. ಮಾಧ್ಯಮಗಳು ದಾಂಗುಡಿ ಇಡುವ ಮುನ್ನ, ಸುದ್ದಿ ಲೋಕ ಸೇರುವ ಮುನ್ನ ಬೆಂಕಿ ನಂದಿಸಲು ನಾವು ಉಪನ್ಯಾಸಕರು ಪಟ್ಟ ಪಾಡು ನಾಯಿ ಪಾಡಾಯಿತು. ತರಗತಿಯೊಳಗಡೆ ನನಗೆ ಯಾವ ಗಾಂಧಿ, ಅಂಬೇಡ್ಕರ್‌, ಕುವೆಂಪು – ಬೇಂದ್ರೆಯೂ ನೆರವಿಗೆ ಬರಲಿಲ್ಲ. ವರ್ಷವಿಡೀ ನಾನು ಮಾಡಿದ ಪಾಠಕ್ಕಿಂತ ಯಾರೋ ಐದು ನಿಮಿಷ ಕಿವಿಗೆ ಗುಟ್ಟಾಗಿ ಹೇಳುವ ಮಾತೇ ನಮ್ಮ ಮಕ್ಕಳಿಗೆ ಮುಖ್ಯವಾಗಿ ಅಂದಿನಿಂದ ಪ್ರತಿ ತರಗತಿಯೂ ನಮ್ಮ ಪಾಲಿಗೆ ಹಿಂಸೆಯಾಯಿತು. ಹದಿಮೂರು ವರ್ಷ ಅದೇ ಕಾಲೇಜಿನಲ್ಲಿ ಕಣ್ಣಾರೆ ಕಂಡ ಸತ್ಯವೊಂದು ಸುಳ್ಳಾಯಿತು!

ಆ ಕ್ಷಣಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ಪರಿವರ್ತಿಸಲಾಗದ ನಮ್ಮ ಮೇಸ್ಟ್ರೆತನದ ಬಗ್ಗೆ ಜುಗುಪ್ಸೆಯೂ ಆಯಿತು. ನಾವು ಅವರಿಗೆ ಹೇಳಿದ ಬುದ್ಧಿ, ಮೇಸ್ಟ್ರೆತನದ ಸಹಜ ಬೆದರಿಕೆ, ಕೊನೆಗೆ ಪ್ರೀತಿಗೂ ಬಗ್ಗದ, ಜಗ್ಗದ, ಒಪ್ಪದ, ಒಲಿಯದ ನಮ್ಮದೇ ಮಕ್ಕಳಲ್ಲಿ ಆ ಪ್ರಮಾಣದಲ್ಲಿ ತುಂಬಿದ ಮತೀಯ ಶಕ್ತಿ, ಕಾಲೇಜು ಬಿಟ್ಟ ಮೇಲೆ ಈ ಶಕ್ತಿ ಸಾಮಾಜಿಕವಾಗಿ ಸೃಷ್ಟಿಸಬಲ್ಲ ಸಮಸ್ಯೆಗಳನ್ನು ನೆನೆದು ಈಗಲೂ ನನಗೆ ಆಗಾಗ ಭಯ, ಆತಂಕವಾಗುವುದಿದೆ.

ಈ ದೇಶದಲ್ಲಿ ಹುಟ್ಟಿದ ಕಾರಣಕ್ಕೆ ಪ್ರತಿಯೊಬ್ಬ ಮೇಸ್ಟ್ರಿಗೂ ಒಂದು ಜಾತಿ, ಮತ, ಧರ್ಮ ಇದ್ದೇ ಇದೆ. ಆದರೆ ಶಿಕ್ಷಕ ಯಾರೇ ಇರಲಿ, ತರಗತಿಯ ಬಾಗಿಲವರೆಗೆ ಮಾತ್ರ ಅದನ್ನು ಇಟ್ಟುಕೊಳ್ಳಬೇಕು ಮತ್ತು ನಿಜವಾದ ಗುರು ಏಕಕಾಲದಲ್ಲಿ ಬರೆಯುವ ಮತ್ತು ಬದುಕುವ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಭಾವಿಸುವವನು ನಾನು. ಎಡ ಅಥವಾ ಬಲವನ್ನು ಸಮರ್ಥಿಸುವುದಕ್ಕಿಂತ ಇವೆರಡರ ನಡುವೆ ಹುದುಗಿರಬಹುದಾದ ಸತ್ಯ ಅಥವಾ ಜೀವವಾದವನ್ನು ಹುಡುಕಬೇಕು, ಆ ಸತ್ಯ ಎರಡರಲ್ಲೂ ಇರಬಹುದು ಅಥವಾ ಬಲದಲ್ಲೂ ಇರಬಹುದು. ಬಲು ಕಹಿಯಾಗಿರಬಹುದಾದ ಆ ಸತ್ಯದ ಮೇಲೆಯೇ ನಮ್ಮ ಪಠ್ಯದ ಪಾಯ ಕೂರಬೇಕು.

ದುರಂತವೆಂದರೆ, ಅದೇ ಸತ್ಯ ನನ್ನ ಎದುರುಗಡೆ ಕೂತವರಿಗೆ ಮತ್ತು ಕೂತವರ ಸಂಪರ್ಕ ಇರುವ ಸ್ಥಳೀಯರಿಗೆ ಮಹಾಸುಳ್ಳುಗಳಾಗಿ ಕಾಣಲಾರಂಭಿಸಿದುವು. ಪರಿಣಾಮ ಎಡದವರಿಗೆ ನಾನು ಬಲವಾಗಿ ಯೂ, ಬಲದವರಿಗೆ ನಾನು ಎಡವಾಗಿಯೂ ಕಾಣಲಾರಂಭಿಸಿದೆ. ತರಗತಿಯೊಳಗಡೆಯ ಉಪನ್ಯಾಸಕರ ಮಾತುಗಳು ರೆಕಾರ್ಡುಗಳಾಗುವ, ಮಾತು – ನುಡಿಗಟ್ಟುಗಳಿಗೆ ಬೇರೆಯೇ ಅರ್ಥ ಕಲ್ಪಿಸುವ ಪರಿಸ್ಥಿತಿ ಹುಟ್ಟುಕೊಂಡಿತು. “ಈ ಕಾಲೇಜನ್ನು – ಧರ್ಮದ ಕಾಲೇಜಾಗಿ ಪರಿವರ್ತಿಸಲಾಗುವುದು” ಎಂಬ ಮೆಸೇಜ್‌ ನನ್ನ ಮೊಬೈಲ್‌ಗೆ ಫಾರ್ವರ್ಡ್‌ ಆಯಿತು. ಪಕ್ಷವೊಂದರ ಸ್ಥಳೀಯ ಮುಖಂಡರು ‘ಅವನನ್ನು ಸೇರಿಸಿ ಮತ್ತಿಬ್ಬರನ್ನು ಅಲ್ಲಿಂದ ಬೇರೆ ಕಡೆ ಓಡಿಸಿದರೆ ಸಂಸ್ಥೆ ಉದ್ಧಾರವಾದೀತು’ ಎಂದು ಹೇಳಿದ್ದರು. ನಮಗೆ ವರ್ಗಾವಣೆಯಾದಾಗ ಅದೇ ಸ್ನೇಹಿತರು, ‘ಛೇ ಛೇ ಆಗಬಾರದಿತ್ತು, ಒಂದೆರಡು ವರ್ಷ ಇದ್ದು ಹೋಗಬಹುದಿತ್ತು’ ಎಂದು ಹೇಳಿದರು.

ಕಾಲೇಜು – ಶಿಕ್ಷಣ ಸಂಸ್ಥೆಗಳಲ್ಲಿ ಅನುಸರಿಸುತ್ತಿರುವ ಏಕರೂಪಕ ವಸ್ತ್ರ ಸಂಹಿತೆ (uniform) ಯಾಕಿರಬೇಕು? ಏಕರೂಪಕ ವಸ್ತ್ರ ಸಂಹಿತೆಯಿಂದ ವಿದ್ಯಾರ್ಥಿಗಳ ಮೇಲ್‌ರೂಪ ಒಂದೇ ರೀತಿ ಕಂಡರೂ ಒಳಗಡೆಯ ಭಾವರೂಪ ಅಥವಾ ನಿಜವಾದ ಮನಃಸ್ಥಿತಿ ಹಾಗೆಯೇ ಉಳಿಯುವುದರಿಂದ ಕೇವಲ ವಸ್ತ್ರ ರೂಪವನ್ನು ಏಕರೂಪಕ್ಕೆ ತರುವ ಅಗತ್ಯವಾದರೂ ಏನು? ವಿದ್ಯಾರ್ಥಿಗಳ ಹುಟ್ಟು ಹಿನ್ನೆಲೆ ಸಂಬಂಧೀ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಮುದಾಯಿಕ ಅಸಮಾನತೆಗಳು ಒಳಗಡೆ ಹಾಗೆಯೇ ಉಳಿದು ಮತ್ತು ಅದ‌ನ್ನೇ ನಿಜವಾದ ಭಾರತ ಎಂದು ಭಾವಿಸುವ ಸಂದರ್ಭದಲ್ಲಿ ಕೇವಲ ಸಮವಸ್ತ್ರದಿಂದ ಪ್ರಯೋಜನ ಇದೆಯೇ? ದ್ವೇಷವನ್ನೇ ಉಸಿರಾಡುವ ಮಕ್ಕಳು ಸಮವಸ್ತ್ರದ ಒಳಗಡೆಯೇ “ಅವರು – ನಾವು’ ಎಂಬ ಗುರುತುಗಳನ್ನು ತಮ್ಮ ಮೇಲೆ ಹೇರಿಕೊಳ್ಳುವುದಿಲ್ಲವೇ? ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಮತ್ತು ಇಡೀ ರಾಜ್ಯಕ್ಕೆ ಅನ್ವಯವಾಗುವಂಥ ವಸ್ತ್ರ ಸಂಹಿತೆಯ ಬಗೆಗಿನ ನೀತಿ ನಿಯಮಗಳೇನು ಎಂಬುದಾಗಿ ನಾನೂ ಮತ್ತು ನನ್ನ ಸಹೋದ್ಯೋಗಿ ಐವನ್‌ ಲೋಬೋ ಸಂಬಂಧಿಸಿದ ಮಂತ್ರಿ, ಆಯುಕ್ತರಿಗೆ ಪತ್ರ ಬರೆದೂ ಆಯಿತು. “ಯಾರು ಏನು ಬೇಕಾದರೂ ಧರಿಸಬಹುದು” ಎಂಬ ಮಾತು ಮಂತ್ರಿಗಳಿಂದ ಸಾರ್ವಜನಿಕವಾಗಿ ಬಂತೇ ಹೊರತು ಈ ಕುರಿತು ಇದಮಿತ್ಥಂ ಆದ ನಿಯಮ ಇವತ್ತಿನವರೆಗೂ ಪ್ರಕಟವಾಗಿಲ್ಲ.

ಕರಾವಳಿಯಲ್ಲಿ ಗುಪ್ತಗಾಮಿನಿಯಾಗಿರುವ ಮತೀಯ ಭಾವಗಳು ನಮ್ಮ ವಿದ್ಯಾರ್ಥಿಗಳ ಶಿಕ್ಷಣದ ಉದ್ದೇಶ, ಅರಿವು ಮತ್ತು ಸೃಜನಶೀಲತೆಯನ್ನು ಯಾವ ರೀತಿ ದಿಕ್ಕು ತಪ್ಪಿಸುತ್ತವೆ ಎಂಬುದನ್ನು ನಾನು ಮತ್ತು ನನ್ನ ಸಹೋದ್ಯೋಗಿಗಳು ಕಳೆದ ಒಂದೆರಡು ವರ್ಷಗಳಿಂದ ಅನುಭವಿಸಿದ್ದೇವೆ. ನಿರಂತರ ಓದು, ವಿಚಾರಗೋಷ್ಠಿ, ಚರ್ಚೆ, ಪರೀಕ್ಷೆ, ಗ್ರಂಥಾಲಯ ಭೇಟಿಗಳಿಗಿಂತ ಆರಾಧನಾ ಕೇಂದ್ರಗಳಿಗೆ ಭೇಟಿ, ಧಾರ್ಮಿಕ ಸಭೆ – ಸಮಾರಂಭಗಳೇ ಮುಖ್ಯವಾಗುವ; ಪುಸ್ತಕ ಸಾಹಿತ್ಯಕ್ಕಿಂತ ಮೊಬೈಲ್‌ ಎಸ್‌ಮ್ಮೆಸ್‌ಗಳೇ ಮುಖ್ಯವಾಗುವ ಮನಃಸ್ಥಿತಿಯ ಅಪಾಯ ನನಗೆ ತಟ್ಟಿದೆ. ತರಗತಿಯೊಳಗಡೆ ತಮಗೂ ಒಂದು ಜಾತಿ – ಮತ – ಧರ್ಮಗಳೆಲ್ಲ ಇವೆ ಎಂಬುದನ್ನು ಮರೆತು ಸತ್ಯ – ತಣ್ತೀಗಳೊಂದಿಗೆ ಲೀನವಾಗಿ ಪಾಠವನ್ನು ಅನುಭವಿಸುವ ನಮಗೆ ಮುಗ್ಧರು, ಬಡವರು ಎಂದೆಲ್ಲ ನಂಬಿದ್ದ ಮಕ್ಕಳ ಮತೀಯ ಭಾವಗಳು ತಿರುಗೇಟು ಕೊಟ್ಟಾಗ ಅಚ್ಚರಿಯಷ್ಟೇ ಅಲ್ಲ ಆತಂಕ, ಭಯವೇ ಹೆಚ್ಚಾಗುತ್ತದೆ. ಎಲ್ಲರೂ ಸೇರುವ ಜಾತ್ಯತೀತ ಜಾಗ ಶಿಕ್ಷಣ ಸಂಸ್ಥೆಗಳು ಭಾರತದ ಸಂವಿಧಾನ ಬದ್ಧತೆಯನ್ನು ಮತ್ತಷ್ಟು ಗಟ್ಟಿ ಮಾಡುತ್ತವೆ ಎಂಬ ಆಶೆ – ಆಶಯ ಕರಾವಳಿ ದೃಷ್ಟಿಯಿಂದ ಹುಸಿಯಾಗುತ್ತಿದೆ.

– ನರೇಂದ್ರ ರೈ ದೇರ್ಲ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.