ಧರ್ಮಸ್ಥಳದ ದಿವ್ಯ ಬೆಳಕು


Team Udayavani, Oct 24, 2017, 3:47 AM IST

24-18.jpg

ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 1968ರ ಅ. 24ರಂದು ಪಟ್ಟಾಭಿಷಿಕ್ತರಾದರು. ಧರ್ಮಸ್ಥಳದ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಹೆಗ್ಗಡೆಯವರ ಈ 50 ವರ್ಷಗಳ ಪಯಣದತ್ತ ತಿರುಗಿ ನೋಡಿದಾಗ… 

ಧರ್ಮಸ್ಥಳದ ಧರ್ಮಾಧಿಕಾರವೆಂಬ ರಥದ ವಾಘೇಯನ್ನೇರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕವಾಗಿ 49 ವರ್ಷಗಳು ಪೂರ್ಣವಾಗಿ ಬಂಗಾರದ ವರ್ಷ ಆರಂಭಗೊಂಡಿದೆ. ಅಂದು ಧರ್ಮಸ್ಥಳವೆಂದರೆ ಇಂದಿನಷ್ಟೇ ಪ್ರಸಿದ್ಧಿ ಪಡೆದ ತಾಣವಾಗಿರಲಿಲ್ಲ. ಈಗ ಜಗದಗಲ ಧರ್ಮಸ್ಥಳದ ಹೆಸರು ಜಾಜ್ವಲ್ಯಮಾನವಾಗಿ ಬೆಳಗುವ ನಂದಾ ದೀಪವಾಗಿದೆ. ವೀರೇಂದ್ರರ‌ ಜನನವಾದಾಗ ಮಂಜಯ್ಯ ಹೆಗ್ಗಡೆಯವರು “ಧರ್ಮಸ್ಥಳದ ದೀಪ ಬೆಳಗಿತು’ ಎಂದು ಉದ್ಗರಿಸಿದ್ದರಂತೆ. ಅದು ನಿಜವಾಗಿದೆ. ಪಟ್ಟಾಭಿಷೇಕದ 50ನೇ ವರ್ಷದ ಹಿನ್ನೆಲೆ ಯಲ್ಲಿ ಸ್ವತಃ ಧರ್ಮಾಧಿಕಾರಿಗಳ ನುಡಿಗಳಿಂದ ಅಂದಿನ ಧರ್ಮ ಸ್ಥಳ ಹೇಗಿತ್ತು ಎನ್ನುವುದನ್ನು ಕೇಳಿ, ಈಗಿನ ಧರ್ಮಸ್ಥಳದ ವಿಸ್ತಾರದ ಕುರಿತು ವಿವರಿಸುವ, ಸಾಗರದ ನೀರನ್ನು ಜಲಪಾತ್ರೆಯಲ್ಲಿ ತುಂಬಿ ತರುವ ಪ್ರಯತ್ನ ಇದು. 

ಧರ್ಮಸ್ಥಳವಾದ ಕುಡುಮ
ಉಡುಪಿಯ ಶ್ರೀ ವಾದಿರಾಜ ಯತಿಗಳು ಕುಡುಮದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ವೈದಿಕ ವಿಧಿವಿಧಾನಗಳಿಂದ ಶುದ್ಧೀಕರಿಸಿ ಶಿವಲಿಂಗವನ್ನು ಪುನರ್‌ ಪ್ರತಿಷ್ಠೆಯ ಮೂಲಕ ಪವಿತ್ರಗೊಳಿಸಿದರು. ದಾನ ಧರ್ಮಾದಿ ಕಾರ್ಯಗಳು ಅನೂಚಾನವಾಗಿ ನಡೆದು ಬರುತ್ತಿರಬೇಕು, ಅಖಂಡ ಧರ್ಮದ ನೆಲೆವೀಡಾಗಿ ಕಂಗೊಳಿಸಬೇಕು, ಜಗತ್ತಿನಲ್ಲಿ ಈ ಕ್ಷೇತ್ರದ ಕೀರ್ತಿ ತಂಬೆಲರಿನಂತೆ ಪಸರಿಸಬೇಕು, ನಾಡಿನ ಭಕ್ತರಿಗೆ ಕ್ಷೇತ್ರದ ಪುಣ್ಯ ಫಲ ದೊರೆಯಬೇಕು, ಇಂತಹ ಸದಾಶಯದಿಂದ ಈ ಕ್ಷೇತ್ರವು “ಧರ್ಮಸ್ಥಳ’ವೆಂದು ಹೆಸರು ಪಡೆದು ಸಕಲ ದಾನಧರ್ಮಗಳ ಗಣಿಯಾಗಲೆಂದು ಹರಸಿದರು. ಹೀಗೆ ವಾದಿರಾಜ ಯತಿಗಳಿಂದ ಅಭಿದಾನ ಪಡೆದ ಈ ಕ್ಷೇತ್ರವು ಅಂದಿನಿಂದ ನಿರಂತರವಾಗಿ ಧರ್ಮ ಕಾರ್ಯಗಳ ನೆಲೆವೀಡಾಗಿ ಭಗವಂತನಿಗೆ ಇಷ್ಟವಾಗುವ ಆಚರಣೆಯನ್ನು ನಡೆಸುತ್ತಾ ಬಂದಿದೆ. ಧರ್ಮಸ್ಥಳ ಎಂಬ ಹೆಸರಿಗೆ ಲವಲೇಶವೂ ಕುಂದು ಬರದಂತೆ ಎಲ್ಲ ರೀತಿಯ ದಾನಧರ್ಮಗಳಿಗೂ ಅಕ್ಷಯ ಕಣಜವಾಗಿ ಸಂಪನ್ನಗೊಂಡಿದೆ

ಪ್ಯಾಂಟ್‌ ಧರಿಸುತ್ತಿದ್ದ ದಿನಗಳು

ಡಿ. ವೀರೇಂದ್ರ ಹೆಗ್ಗಡೆ
 1968ರಲ್ಲಿ ಅ. 24ರಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ಶ್ರೀ ಕ್ಷೇತ್ರದ ಧರ್ಮಾಧಿಕಾರಿಯಾಗಿ 21ನೆಯ ಹೆಗ್ಗಡೆಯವರಾಗಿ ಪಟ್ಟಾಭಿಷಿಕ್ತರಾದರು. ಆಮೇಲೆ ಕ್ಷೇತ್ರದ ಹೆಸರು ಜಗತ್ತಿನ ನೀಲಾಕಾಶದ ಭೂಪಟದಲ್ಲಿ ಮಿಂಚುವ “ಮಿನು ಗುತಾರೆ’ಯಾಗಿದೆ. ಧರ್ಮಸ್ಥಳದ ಖ್ಯಾತಿಯನ್ನು ಅನ್ವರ್ಥಗೊಳಿಸಿದ ಅವರು ಬಹುಜನರ ಪಾಲಿಗೆ ಕೇವಲ ಮಾನವ ರಲ್ಲ, ದೈವಿಕ ಶಕ್ತಿಯ ಪ್ರತಿರೂಪವೆಂಬ ಭಾವ ಮೂಡಿ ದ್ದರೆ ಅದಕ್ಕೆ ಕಾರಣ ಅವರ ಪವಾಡಸದೃಶ ಕೊಡುಗೆಗಳು. 

ಪಟ್ಟಾಭಿಷೇಕದ ಸಂದರ್ಭ

ಅದು ಧರ್ಮಾಧಿಕಾರಿಯಾಗಲು ಪರಿಪಕ್ವ ವಯಸ್ಸಾಗಿ ರಲಿಲ್ಲ, ಅವರಿಗೆ ಅದರ ಹಪಹಪಿ ಇರಲಿಲ್ಲ. ಪದವಿ ಬಳಿಕ ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವೀ ಧರರಾಗಬೇಕೆಂಬುದು ಹೆಬ್ಬಯಕೆಯಾಗಿತ್ತು. ಆದರೆ ತಾನೊಂದು ಬಗೆದೊಡೆ ದೈವ ಮತ್ತೂಂದು ಬಗೆಯಿತು. ಅನಿರೀಕ್ಷಿತ ತಿರುವು ಇವರ ಬದುಕಿನಲ್ಲಿ ಸಂಭವಿಸಿತು. ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆಯವರು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದರು. 1968ರ ಅ.12ರಂದು ರತ್ನವರ್ಮ ಹೆಗ್ಗಡೆಯವರು ವಿಧಿವಶರಾದರು. ಎಣಿಸದೆ ಬಂದ ಪದವಿಯನ್ನು ವೀರೇಂದ್ರರು ಸ್ವೀಕರಿಸಿ ವೀರೇಂದ್ರ ಹೆಗ್ಗಡೆಯವರಾದರು. 

ಕೆರೆಗಳಿಗೆ ಮರುಜೀವ
ಅವರ ವಿವೇಕ, ಜ್ಞಾನ, ಅಗಾಧ ಸಜ್ಜನಿಕೆಗಳೆಲ್ಲವೂ ಅವರ ಬೆಳವಣಿಗೆಯ ಹರಿಗೋಲಾದವು… ಅನ್ನದಾನ, ಅಭಯದಾನ, ವಸ್ತ್ರದಾನ, ತೈಲದಾನ, ವಿದ್ಯಾದಾನದ ಪರಂಪರೆಗೆ ಜೀವ ತುಂಬಿದ್ದಾರೆ. ಜತೆಗೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಚೀನ ದೇಗುಲಗಳ ಸಂರಕ್ಷಣೆಯ ಮೂಲಕ ಧರ್ಮೋತ್ಥಾನದ ಮಹತ್ಕಾರ್ಯವನ್ನು ಅನುಷ್ಠಾನ ಗೊಳಿಸಿದ್ದಾರೆ. ಗ್ರಾಮೀಣ ಮಹಿಳೆಯರ ಬದುಕಿಗೆ ಆಧಾರ ವಾಗುವ ಆಶಾಕಿರಣವಾಗಿ “ಸಿರಿ’ ಯೋಜನೆ ಕಾರ್ಯಾರಂಭಗೊಂಡಿದೆ. ನಿರುದ್ಯೋಗಿಗಳ ಪಾಲಿಗೆ ಉದ್ಯೋಗದ ತರಬೇತಿ ನೀಡುವ ಕಾಮಧೇನುವಾಗಿ “ರುಡ್‌ಸೆಟ್‌’ ಸಂಸ್ಥೆ ಸಹಕರಿಸುತ್ತಿದೆ.  “ಗ್ರಾಮಾಭಿವೃದ್ಧಿ ಯೋಜನೆ’ ಬಡತನದ ಕೂಪದಲ್ಲಿದ್ದ ಲಕ್ಷಲಕ್ಷ ಜನಗಳ ಪಾಲಿಗೆ ಉದ್ಧಾರದ ಸುವರ್ಣ ಸೇತು ವಾಗಿದೆ. ತಳಮಟ್ಟದಲ್ಲಿದ್ದ ಜನರ ಜೀವನಕ್ಕೆ ಉದ್ಧಾರದ ಹೊಸ ಭಾಷ್ಯವನ್ನು ಬರೆದಿದೆ. “ಪ್ರಗತಿಬಂಧು ತಂಡ’ ಎಂಬ ಸ್ವಸಹಾಯ ಸಂಘಗಳ ಕಲ್ಪನೆಗೆ ಮೂರ್ತ ರೂಪ ನೀಡಿ ನಿರಂತರ ಪ್ರಗತಿಯ ಜ್ಯೋತಿ ಬೆಳಗಿದೆ. ಹೆಗ್ಗಡೆಯವರ ಸಹಧರ್ಮಿಣಿ ಮಾತೃಶ್ರೀ ಹೇಮಾವತಿಯವರು “ಜ್ಞಾನ ವಿಕಾಸ’ ಯೋಜನೆಯ ಮೂಲಕ ಎಲ್ಲಿ ಸ್ತ್ರೀಯರ ಪೂಜೆ ನಡೆಯುತ್ತದೋ ಅಲ್ಲಿ ದೇವತೆಗಳಿರುತ್ತಾರೆ ಎಂಬ ಆರೊಕ್ತಿಗೆ ಸಾಕ್ಷಿಯಾಗಿ ಕಳೆಗೆಟ್ಟಿದ್ದ ಬದುಕಿಗೆ ಉನ್ನತಿಯ ಮೆರುಗು ಲೇಪಿಸಿದ್ದಾರೆ. “ಜನಜಾಗೃತಿ’ ಯೋಜನೆಯ ಅನುಷ್ಠಾನದಿಂದ ಪಾನಭಕ್ತರ ಮನಸ್ಸು ಪಾನಮುಕ್ತಿಯೆಡೆಗೆ ತಿರುಗುವಲ್ಲಿ ಪವಾಡಸದೃಶ ಸಾಧನೆಯನ್ನೇ ಮಾಡಿದ್ದಾರೆ.

ಸಾರ್ಥಕ ದಾಂಪತ್ಯ

ಧಾರ್ಮಿಕ ಸಾಮರಸ್ಯಕ್ಕೆ ಉಜ್ವಲ ಉದಾಹರಣೆಯಾಗಿ ಧರ್ಮಸ್ಥಳ ಕಣ್ಣ ಮುಂದೆ ನಿಂತಿದೆ. ಕ್ಷೇತ್ರದ ಆಡಳಿತ ಜೈನ ಧರ್ಮೀಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ ಶೈವ (ಶಿವ). ಶಿವನ ಆರಾಧನೆ ಮಾಡುವ ಅರ್ಚಕರು ವೈಷ್ಣವರು. ಈ ತ್ರಿವಳಿ ಸಂಗಮ ಧರ್ಮಸ್ಥಳದಲ್ಲಿ ಮಾತ್ರ ಕಾಣಲು ಸಿಗುವ ವೈಶಿಷ್ಟ್ಯ.

ಆಗ ರತ್ನವರ್ಮ ಹೆಗ್ಗಡೆಯವರು ವಿಧಿವಶರಾಗಿ 12ನೆಯ ದಿನಕ್ಕೆ ಪಟ್ಟಾಭಿಷಿಕ್ತರಾದರು. ಆ ವೇಳೆಯಲ್ಲಿ ಧರ್ಮಸ್ಥಳಕ್ಕೆ ಹೆಚ್ಚೆಂದರೆ ದಿನದಲ್ಲಿ ಐದುನೂರು ಮಂದಿ ಯಾತ್ರಿಕರು ಬರುತ್ತಿದ್ದರು. ಇಂದಿನ ಹಾಗೆ ಸರತಿ ಸಾಲಿನ ವ್ಯವಸ್ಥೆ ಬೇಕಾಗಿರಲಿಲ್ಲ. ದೂರದೂರಿನ ಯಾತ್ರಿಗಳಿಗೆ ಬರುವುದು ಕೂಡ ತ್ರಾಸದಾಯಕವಾಗಿತ್ತು. ವಾಹನ ಸೌಕರ್ಯಗಳಿರಲಿಲ್ಲ. “”ಪಟ್ಟವಾಗಿ ಮೂರು ತಿಂಗಳು ಕಳೆಯುವಾಗ ಅಲ್ಲಿರುವ ಕೊರತೆಗಳನ್ನು ಗುರುತಿಸಿದೆ, ಯಾಂತ್ರಿಕವಾಗಿ ಕೆಲಸ ಮಾಡಲಾ ರಂಭಿಸಿದೆ. ಯಾವುದೇ ಅನ್ಯ ಭಾವನೆ, ಯೋಚನೆಗಳು ಇಲ್ಲದೇ ಕೆಲಸಗಳು ನಡೆಯುತ್ತಿದ್ದವು. ಮಾಡಬೇಕಾದ ದೀಪಾವಳಿ, ಲಕ್ಷದೀಪೋತ್ಸವ ಇವುಗಳ ಮಾಹಿತಿಯಾಗಲೀ, ವಿಧಿ ವಿಧಾನಗಳ ಪರಿಚಯ ಕೂಡ ಇರಲಿಲ್ಲ. ಕ್ಷಿಪ್ರವಾಗಿ ಕಾರ್ಯ ಕ್ಷೇತ್ರಕ್ಕೆ ಹೊಂದಿಕೊಂಡೆ. ಯಾತ್ರಿಕರ ಸಂಖ್ಯೆ ದಿನೇ ದಿನೇ ಅಧಿಕ ವಾಯಿತು, ಬೆಳ್ತಂಗಡಿ ಠಾಣೆಯ ಎಸ್‌ಐ ಒಬ್ಬರು ಇದ್ದವರು ದೇವಸ್ಥಾನದಲ್ಲಿ ಸರದಿ ಸಾಲಿನ ಪದ್ಧತಿ ಆರಂಭಿಸಲು ಸೂಚನೆ ನೀಡಿದರು” ಹೆಗ್ಗಡೆ ಗತ ನೆನಪುಗಳನ್ನು ಹೀಗೆ ಸ್ಮರಿಸುತ್ತಾರೆ.  

ಬದಲಾಯಿತು ಧರ್ಮಸ್ಥಳ
ಈಗ ರಾಜ್ಯದ ಪ್ರತಿ ತಾಲೂಕಿನಿಂದ ಬಸ್‌ ಸಂಪರ್ಕ ಹೊಂದಿದ ವಿರಳಾತಿವಿರಳ ಕ್ಷೇತ್ರಗಳ ಪೈಕಿ ಧರ್ಮಸ್ಥಳ ಒಂದು. ಹಬ್ಬದ ಸಂದರ್ಭದಲ್ಲಿ 2 ಲಕ್ಷ ಜನ ದೇವರ ದರ್ಶನ ಮಾಡಿ 1. 25 ಲಕ್ಷ ಜನ ಅನ್ನಪ್ರಸಾದ ಸೇವಿಸಿದ ದಾಖಲೆಯಿದೆ. ಕಿ.ಮೀ.ಗಟ್ಟಲೆ ಸರದಿ ಸಾಲು ಇದ್ದರೂ ದೇವರ ದರ್ಶನಕ್ಕೆ ಸರದಿಯಲ್ಲಿ ನಿಂತವನಿಗೆ ದರ್ಶನವಾಗದೇ ದೇವಸ್ಥಾನ ಮುಚ್ಚಿದ್ದಿಲ್ಲ. ಆಗ ರತ್ನವರ್ಮ ಹೆಗ್ಗಡೆಯವರು ಕಟ್ಟಿದ 4 ವಸತಿ ಛತ್ರಗಳಿ ದ್ದವು. ನೂರಿನ್ನೂರು ಮಂದಿಗೆ ಸ್ಥಳಾವಕಾಶ ಸಿಗಬಹುದಿತ್ತು. ಈಗ 2,500 ಕೊಠಡಿಗಳುಳ್ಳ 10 ವಸತಿ ಛತ್ರಗಳಿವೆ. ದಿನದಲ್ಲಿ 30 ಸಾವಿರ ಮಂದಿ ಕೊಠಡಿಯ ಪ್ರಯೋಜನ ಪಡೆದ ಉದಾಹರಣೆಯಿದೆ.  ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕಕಾಲದಲ್ಲಿ ದಾಸೋಹ ನಡೆಯು ತ್ತದೆ. ಹೆಗ್ಗಡೆಯವರ ಸಹೋದರ ಡಿ. ಹಷೇìಂದ್ರ ಕುಮಾರ್‌ ಇದರ ನೇತೃತ್ವ ವಹಿಸಿ ವ್ಯವಸ್ಥೆಗಳನ್ನು ನೋಡಿ ಕೊಳ್ಳುತ್ತಾ ಮಾರ್ಗದರ್ಶನ ನೀಡುತ್ತಿದ್ದಾರೆ. ಭಕ್ತರು ಅನ್ನದಾನ ಸ್ವೀಕರಿಸಿದಷ್ಟೂ ಮಂಜುನಾಥ ಸ್ವಾಮಿಗೆ ಸಂತೃಪ್ತಿ ಎಂಬ ನಂಬಿಕೆ ಇದೆ. ನಿತ್ಯ 40 ಸಾವಿರದಷ್ಟು ಮಂದಿ ಅನ್ನದಾಸೋಹ ದಲ್ಲಿ ಸಂತೃಪ್ತರಾಗುತ್ತಾರೆ. ಈ ವ್ಯವಸ್ಥೆಗೆ ಪರಿಸರ ಸ್ನೇಹಿ ಯೋಜನೆ ರೂಪಿಸಲಾಗಿದೆ. ಪರ್ಯಾಯ ಇಂಧನದಿಂದ ಅಡುಗೆಮಾಡಿ ದಶಕಗಳಿಂದ ಇಂಧನ ಉಳಿತಾಯದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಅಡುಗೆ ಸಿದ್ಧಪಡಿಸುವ ಉಪಕರಣಗಳಿಗೂ ಕ್ಷೇತ್ರ ಮಾದರಿಯಾಗಿದೆ.

ವಿಶಾಲವಾಯಿತು ಲೌಕಿಕ ಅನುಭವ
ಆಗ “ಧರ್ಮಾಧಿಕಾರದ ಹೊಣೆ ಹೊತ್ತು ನಾಲ್ಕೇ 4 ತಿಂಗ ಳಲ್ಲಿ 1969ರಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಕಟ್ಟಡ ಕಾಮಗಾರಿ ಆರಂಭಿಸಿದೆವು. ಪೂರ್ಣಕಾಲಿಕವಾಗಿ ಅದರಲ್ಲಿ ತೊಡಗಿಸಿ ಕೊಂಡೆ. ನನ್ನ ಅನುಭವದ ಕೊಡ ಪರಿಪೂರ್ಣವಾಗಿ ಹೆಚ್ಚುತ್ತಾ ಹೋಯಿತು.’  ಈಗ ಉಜಿರೆಯಲ್ಲೇ ಶೆ„ಕ್ಷಣಿಕ ಸಂಸ್ಥೆಯ ಹತ್ತಾರು ಕಟ್ಟಡಗಳಿವೆ. ಹಾಸನ, ಮೈಸೂರು, ಧಾರವಾಡ, ಉಡುಪಿ, ದ.ಕ. ಎಂದು ವಿವಿಧೆಡೆ 54ಕ್ಕೂ ಅಧಿಕ ಶಿಕ್ಷಣ ಸಂಸ್ಥೆಯ ವಿಶಾಲ ಮರ ಬೇರು, ಕೊಂಬೆಗಳನ್ನು ಹರಡಿ ನೆರಳು ಕೊಡುವಂತಾಗಿದೆ’ ಹೀಗೆ ಹೇಳುವ ಧರ್ಮಾಧಿಕಾರಿಗಳು ಅಂದಿನ ಒಂದು ಘಟನೆಯನ್ನೂ ನೆನಪಿಸಿಕೊಳ್ಳುತ್ತಾರೆ.  

“ಆಗ ಟಿ.ಎಂ.ಎ. ಪೈಗಳು ನನ್ನ ಎಡಗಡೆಯಲ್ಲಿದ್ದರು. ಬಲಗಡೆ ವಿಜಯಾ ಬ್ಯಾಂಕ್‌ನ ನಿರ್ದೇಶಕ ಸುಂದರ್‌ರಾಮ್‌ ಶೆಟ್ಟಿ ಇದ್ದರು. ಪಟ್ಟಾಭಿಷೇಕವಾದ ಕೂಡಲೇ ಮಣಿಪಾಲ್‌ ಸಂಸ್ಥೆ ಗಳು ಹಾಗೂ ವಿಜಯಾ ಬ್ಯಾಂಕ್‌ನ ನಿರ್ದೇಶಕತ್ವದ ಘೋಷಣೆ ಮಾಡಿದರು. ಇದರಿಂದ ಇನ್ನಷ್ಟು ವ್ಯವಹಾರ ಜ್ಞಾನ ವೃದ್ಧಿಯಾಯಿತು. ಸಮಕಾಲೀನ ಕಾನೂನು, ಆಡಳಿ ತಾತ್ಮಕ ವಿಚಾರ, ವಾಣಿಜ್ಯ, ವ್ಯವಹಾರ ಜ್ಞಾನದ ಅರಿವು ಉದ್ದೀಪ್ತವಾಯಿತು. ಇದು ಭವಿಷ್ಯದಲ್ಲಿ ಎಲ್ಲ ಹಂತದಲ್ಲೂ ಉಪಯೋಗಕ್ಕೆ ಬಂತು. ಪಟ್ಟ ಸ್ವೀಕರಿಸಿ ವರ್ಷದೊಳಗೆ ವಿದೇಶ ಪ್ರವಾಸ ಮಾಡಿದ ಕಾರಣ ಲೌಕಿಕ ಅನುಭವದ ಹರವು ವಿಶಾಲವಾಙಯಿತು. ಇಲ್ಲಿನ ಶಿಸ್ತು, ಪರಿವರ್ತನೆಗಳಿಗೆ ನನಗೆ ಅದು ಕೂಡ ಮೂಲಧಾತುವಾಯಿತು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ 38 ಲಕ್ಷ ಸದಸ್ಯರ ಪ್ರಗತಿಯ ಯುಗ ಪರಿವರ್ತನೆಯ ಮಹಾಯಜ್ಞದಲ್ಲಿ ಹೆಗ್ಗಡೆಯವರ ಸಾಧನೆ ವಿಶ್ವದ ವಿಸ್ಮಯದ ಕಣ್ಣುಗಳನ್ನು ತೆರೆಸಿದೆ. 

ಆಗ 1966ರಲ್ಲಿ ತ್ಯಾಗ ಮೂರ್ತಿ ಬಾಹುಬಲಿ ವಿಗ್ರಹ ನಿರ್ಮಾಣದ ಚಾರಿತ್ರಿಕ ಕಾರ್ಯ ಆರಂಭವಾಗಿತ್ತು. ರತ್ನ ವರ್ಮ ಹೆಗ್ಗಡೆಯವರ ಬದುಕಿನ ಈ ಕನಸು ಅವರು ವಿಧಿವಶರಾಗುವ ವೇಳೆಗೆ ಕೇವಲ ಕಾಲಂಶ ಕೆಲಸವಾಗಿತ್ತು. ಪಟ್ಟವೇರಿದ ಅನಂತರ ಅದರ ನಿರ್ಮಾಣ, ಸಾಗಾಟ, ಪ್ರತಿಷ್ಠಾಪನೆ ವೀರೇಂದ್ರ ಹೆಗ್ಗಡೆಯವರ ಮುಂದಿದ್ದ ಪ್ರಮುಖ ಸವಾಲು ಅಗಿತ್ತು. 22-23ರ ಹುಮ್ಮಸ್ಸಿನ ವಯಸ್ಸು. ಗೊಂದಲ ಖಂಡಿತ ಇರಲಿಲ್ಲ. ಮಾಡಬಲ್ಲೆನೆಂಬ ಉತ್ಸಾಹ ಇತ್ತು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಚಾಣಾಕ್ಷತೆ ತಾನಾಗಿ ಬಂತು. ಸವಾಲನ್ನು ನಿರಾಯಾಸವಾಗಿ ಗೆದ್ದರು. ತ್ಯಾಗಮೂರ್ತಿಯ ಭವ್ಯ ಮೂರ್ತಿಯನ್ನು ಧರ್ಮಸ್ಥಳದಲ್ಲಿ ನೆಲೆಗೊಳಿಸುವ ಬೆಟ್ಟದೆ ತ್ತರದ ಪ್ರಶ್ನೆ ಕಡ್ಡಿ ಎತ್ತಿದಂತೆ ಹಗುರವೆಂದು ತೋರಿಸಿಕೊಟ್ಟರು. ಈಗ ಶ್ರವಣಬೆಳಗೊಳ, ಕಾರ್ಕಳ, ವೇಣೂರಿನ ಬಾಹು ಬಲಿಗಳ ಸಾಲಿನ ಬೃಹತ್‌ ಏಕಶಿಲಾ ವಿಗ್ರಹ ಜನಾಕರ್ಷಣೆಯ ಕೇಂದ್ರವಾಗಿದೆ.  “ಆಗ ಸದಾ ನನ್ನ ಜತೆ ತಿಂಡಿ ತಿನ್ನುತ್ತಿದ್ದ ಅಮ್ಮ ಮುನಿಸಿ ಕೊಂಡಿದ್ದರು. ಕಾರಣ ಕೇಳಿದಾಗ “ಮದುವೆಯಾಗು’ ಎಂದರು. ಹಾಗೆ ಹೇಮಾವತಿ ಬಾಳ ಸಂಗಾತಿಯಾದರು. ನನ್ನ ಎಲ್ಲ ಕಾರ್ಯಗಳಲ್ಲಿ ಸಹಕಾರ, ಸಲಹೆ, ಪ್ರೇರಣೆ ನೀಡಲಾರಂಭಿಸಿದರು. ನನ್ನ ಸಹೋದರರನ್ನು ತಾಯಿಯಂತೆ ಸಲಹಿದರು.’   ಈಗ ಹೇಮಾವತಿ ಅವರ ಕನಸಿನ ಜ್ಞಾನವಿಕಾಸ ಮನೆ ಮಾತಾಗಿದೆ. ಇಂದು ಲಕ್ಷಾಂತರ ಮಹಿಳೆಯರು ಜ್ಞಾನವಿಕಾಸದ ಮೂಲಕ ಕೌಶಲವರ್ಧನೆ, ಜ್ಞಾನವರ್ಧನೆ, ಸಿರಿ ಯೋಜನೆ ಮೂಲಕ ಸಂಪಾದನೆಯಲ್ಲಿ ತೊಡಗಿ ದ್ದಾರೆ. ಆಗ ಮದುವೆಗೆ ಜನ ಸಹಾಯ ಅಪೇಕ್ಷಿಸಿ ಬರುತ್ತಿದ್ದರು. 1972ರಲ್ಲಿ ಸಾಮೂಹಿಕ ವಿವಾಹದ ಕಲ್ಪನೆ ಚಿಗುರಿತು.

ಈಗ 46 ವರ್ಷ ಪೂರೈಸಿದ ಸಾಮೂಹಿಕ ವಿವಾಹದಲ್ಲಿ 12,000ಕ್ಕೂ ಅಧಿಕ ಜೋಡಿ ಸ್ವಾಮಿಯ ಸನ್ನಿಧಿಯಲ್ಲಿ ದಂಪತಿಯಾಗಿದ್ದಾರೆ. ಎಲ್ಲೆಡೆ ಸಾಮೂಹಿಕ ವಿವಾಹದ ಮೂಲಕ ಸರಳ ವಿವಾಹದ ಆಂದೋಲನ ರೂಪ ಪಡೆದಿದೆ.

ಪರಿವರ್ತನೆಯ ಬೀಜಮಂತ್ರ
“ಆಗ ಉತ್ತರ ಕರ್ನಾಟಕದ ಜನರ ನೀರಿನ ಸೌಕರ್ಯಕ್ಕಾಗಿ ಹಳೆಯ ಕೆರೆಗಳ ಹೂಳೆತ್ತುವಿಕೆ ಆರಂಭಿಸಿ ಲಕಲಕ ನೀರಿನಿಂದ ತುಂಬುವಂತೆ ಮಾಡಿದೆವು. ರಾಜ್ಯದ ವಿವಿಧೆಡೆ ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಗಳ ಹೂಳೆತ್ತಲಾಗಿದೆ. ಮಗಳು ಶ್ರದ್ಧಾಳ ಸೂಚನೆಯಂತೆ ಕಾಡುಗಳಲ್ಲಿ ಸಸ್ಯಗಳ ವಂಶವನ್ನು ಹರಡುವ ಬೀಜದುಂಡೆ ಕಾರ್ಯಕ್ರಮ ಕೂಡ ಹಮ್ಮಿಕೊಂಡೆವು. 20 ಲಕ್ಷಕ್ಕಿಂತ ಹೆಚ್ಚು ಬೀಜದುಂಡೆ ತಯಾರಿಸಿ ಭೂಮಿಗೆ ಸೇರಿಸಲಾಗಿದೆ. ಈಗ ಧರ್ಮಸ್ಥಳದ ಮಾದರಿ ಗಮನಿಸಿದ ಸರಕಾರವೇ ಸ್ತ್ರೀಶಕ್ತಿ ಸ್ವಹಾಯ ಗುಂಪುಗಳನ್ನು ಆರಂಭಿಸಿದೆ.’ 

“ಆಗ ಜನ ನನ್ನ ಬಳಿ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿ ದ್ದರು. ಕಣ್ಣೀರು ಹಾಕುತ್ತಿದ್ದರು. ಇದಕ್ಕೆ ಪರಿಹಾರದ ಅಭಯವನ್ನು ಸೂಚಿಸಿದರೂ ಮನದಲ್ಲಿ ಇನ್ನೊಂದು ಸತ್ಯ ಕೊರೆಯು ತ್ತಿತ್ತು. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸ್ವಾವಲಂಬನೆಯ ಬದುಕಿಗೆ ಉತ್ತೇಜನ, ಕಷ್ಟ ಕಾರ್ಪಣ್ಯದ ಪರಿವರ್ತನೆಗೆ ಮಾರ್ಗದರ್ಶನ ಕೊಡಬೇಕೆಂಬ ಯೋಚನೆ ಮೂಡಿತು. ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಯನ್ನು ಬಾಹುಬಲಿ ಪ್ರತಿಷ್ಠೆ ಸಂದರ್ಭ ನೊಂದ ಜನರ ಬದುಕಿನ ನಂದಾದೀಪವಾಗಿ ನೀಡಿದೆ. ಐದು ವರ್ಷಗಳ ಮಟ್ಟಿಗೆ ಎಂದು ಆರಂಭಿಸಿದ ಯೋಜನೆ ಅದಾಗಿತ್ತು. ಆದರೆ ಅಮೃತ ಕುಡಿದ ಚಿರಂಜೀವಿಯಾಗಿ ಅದು ಬೆಳೆಯಿತು. ಅದರ ನೆರಳಿಗೆ ಬಂದವರಿಗೆ ಕಲ್ಪತರುವಾ ಯಿತು, ಕಾಮಧೇನುವಾಯಿತು, ಪರಿವರ್ತನೆಯ ಬೀಜಮಂತ್ರ ವಾಯಿತು’ ಎಂದು ಹೆಗ್ಗಡೆ ಧನ್ಯತೆಯಿಂದ ನೆನಪಿಸುತ್ತಾರೆ. ಈಗ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಸರಿಸಿದೆ. 38 ಲಕ್ಷ ಸದಸ್ಯರನ್ನು ಪ್ರಗತಿಯ ಪಾಲುದಾರರಾಗಿ ಬೆಳೆಸಿದೆ. ಹೆಗ್ಗಡೆಯವರು ಅತೀವ ಆಸಕ್ತಿ, ಬಡವರ ಪರಮೋದ್ಧಾರದ ಕಾಳಜಿಯಿಂದ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆಯನ್ನೇ ಮೆಲುಕು ಹಾಕಿದರೆ ಅದೊಂದು ರೋಚಕ ಯಶೋಗಾಥೆಯ ಪದಪುಂಜ. ಸಣ್ಣ ಮಟ್ಟಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಸೀಮಿತವಾಗಿ ಪ್ರಾರಂಭಿಸಿದ ಯೋಜನೆ ಇಂದು ದೇಶದ ಭವಿಷ್ಯದ ಸೃಷ್ಟಿಕರ್ತರು ನಿಬ್ಬೆರಗಾಗುವಂತೆ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಗಮನ ಸೆಳೆದು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸರಕಾರವೇ ಈ ಯೋಜನೆಯ ಕೆಲ ಉಪಯೋಜನೆಗಳನ್ನು ಮಾದರಿಯಾಗಿ ಅನುಷ್ಠಾನಗೊಳಿಸುತ್ತಿದೆ. 

ಸಚ್ಚಾರಿತ್ರ್ಯಕ್ಕೆ ಪ್ರಾಶಸ್ತ್ಯ 
ಯೋಜನೆ ಆರಂಭವಾದಾಗ ಅದು ಪೂರ್ಣವಾಗಿ ಮನೆ ಮಂದಿಗೆ ತಲುಪುತ್ತಿಲ್ಲ ಎನ್ನುವ ಕೊರಗಿನ ಕೂಗು ಕೇಳಿಬಂತು. ಇದಕ್ಕೆ ಕಾರಣ ಹುಡುಕಿದಾಗ ಕಂಡುಬಂದ ಕಠೊರ ಸತ್ಯ ದುಶ್ಚಟಗಳ ದಾಸ್ಯ. ಹಾಗಾಗಿ ಇದರ ಚಿಕಿತ್ಸಾ ರೂಪದಲ್ಲಿ ಆರಂಭ ವಾದದ್ದೇ ಜನಜಾಗೃತಿ ವೇದಿಕೆ.  “ಪಾನಮುಕ್ತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಹೊಣೆ’ ಎಂಬ ಧ್ಯೇಯ ವಾಕ್ಯಗಳೊಂದಿಗೆ ಜನಜಾಗೃತಿ ಅಭಿಯಾನ ಒಂದು ಜನಾಂದೋಲನವಾಗಿ ಕಾರ್ಯ ನಿರ್ವಹಿಸಲಾರಂಭಿಸಿತು. ಗ್ರಾಮಸ್ಥರಿಗೆ ಮದ್ಯಪಾನವೊಂದೇ ದುಶ್ಚಟವಲ್ಲ. ಅಂತಹ ಹಲವಾರು ಪ್ರೇತಬಾಧೆಗಳಿವೆ, ದುಶ್ಚಟ ಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಅವುಗಳಿಂದ ದೂರ ಸೆಳೆಯುವ, ಸನ್ಮಾರ್ಗಕ್ಕೆ ಪ್ರೇರೇಪಿಸುವ, ಸಚ್ಚಾರಿತ್ರ್ಯಕ್ಕೆ ಪ್ರಾಶಸ್ತ್ಯ ನೀಡುವುದೇ ಅಭಿಯಾನದ ಅಭಿಮಂತ್ರವಾಗಿತ್ತು. ಮದ್ಯಪಾನ ಪಿಡುಗಿನಿಂದ ನಾಶವಾಗುತ್ತಿರುವ ಗ್ರಾಮಗಳ ಆರ್ಥಿಕತೆಯನ್ನು ಸರಿದಾರಿಗೆ ತರಬೇಕು. ನಶಿಸಿ ಹೋಗುತ್ತಿರುವ ಕುಟುಂಬ ಬಾಂಧವ್ಯವನ್ನು ಸರಿಪಡಿಸುವ ಕಾರ್ಯ ನಡೆಯಬೇಕು. ಅದರ ಫಲವೇ ದುಶ್ಚಟ ಮುಕ್ತಿಯ ಜನಜಾಗೃತಿ ಶಿಬಿರಗಳು. ರಾಜ್ಯದ ಎಲ್ಲ ಕಡೆಯ 10 ಸಾವಿರಕ್ಕಿಂತ ಅಧಿಕ ಮಂದಿ ಮದ್ಯವರ್ಜನ ಶಿಬಿರದಲ್ಲಿ ಮದ್ಯಮುಕ್ತರಾಗಿ ಮರು ಜನ್ಮ ಪಡೆದಿದ್ದಾರೆ. ಆಗ ಒಮ್ಮೆ ವಿದೇಶಕ್ಕೆ ಹೋದಾಗ ಸ್ಥೂಲಕಾಯ, ಬೊಜ್ಜುತನ ಕೂಡ ಹಲವರ ಬದುಕಿನ ಸಮಸ್ಯೆಯಾಗಿರುವುದು ಕಂಡಿತು. ಜಿಂದಾಲ್‌ಗೆ ಹೋದಾಗ ಅದರ ನಿವಾರಣೆಗೆ ಚಿಕಿತ್ಸೆ ಇದ್ದುದು ಗೋಚರವಾಯಿತು. ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯ ಪುನರುತ್ಥಾನದ ಸಂಕಲ್ಪವಾಗಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಆರಂಭಿಸಲಾಯಿತು. ನಿಸರ್ಗದಲ್ಲೇ ಸರ್ವ ರೋಗ ನಿವಾರಣೆಯ ಕಾಯಕಲ್ಪವಿರುವುದನ್ನು ಅರುಹುವ ಪ್ರಕೃತಿ ಚಿಕಿತ್ಸಾ ಕಾಲೇಜಿನ ಆರಂಭವಾಯಿತು. 

ಈಗ ಉಡುಪಿ ಹಾಗೂ ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಮಾಜಿ ಪ್ರಧಾನಿ, ಮುಖ್ಯಮಂತ್ರಿಯಾದಿಯಾಗಿ ಗಣ್ಯಾತಿಗಣ್ಯರು ಚಿಕಿತ್ಸೆ ಪಡೆಯುತ್ತಾರೆ. ಏಷ್ಯಾದ ಮೊದಲ ಪ್ರಕೃತಿ ಚಿಕಿತ್ಸಾ ಕಾಲೇಜೆಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಪ್ರಶಿಕ್ಷುಗಳಿಗೆ 100 ಶೇ. ಉದ್ಯೋಗ ದೊರೆತಿದೆ. ಇಲ್ಲಿ ಕಲಿತವರು ರಾಷ್ಟ್ರಪತಿಗಳಿಗೆ ಅಧಿಕೃತ ಚಿಕಿತ್ಸಕರಾಗಿಯೂ ನೇಮಕವಾಗಿದ್ದ ಉದಾಹರಣೆ ನಮ್ಮ ಮುಂದಿದೆ. ಆಗ ಉಡುಪಿಯ ಪೇಜಾವರ ಶ್ರೀಗಳಿಂದಾಗಿ ಉಡುಪಿ ಆಯುರ್ವೇದ ಆಸ್ಪತ್ರೆ, ಧಾರವಾಡ ಜನತಾ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ಸ್ವೀಕರಿಸಬೇಕಾಯಿತು. ಈಗ ಉಡುಪಿ ಮಾತ್ರವಲ್ಲದೆ ಹಾಸನ, ಬೆಂಗಳೂರಿನಲ್ಲೂ ಆಯುರ್ವೇದ ಆಸ್ಪತ್ರೆಗಳಿವೆ. ಧಾರವಾಡದಲ್ಲಿ ಅಂತಾ ರಾಷ್ಟ್ರೀಯ ಮಾನ್ಯತೆ ಗಳಿಸಿದ ಮೆಡಿಕಲ್‌, ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಿವೆ.  ಆಗ ಅದೊಮ್ಮೆ ಕಂಪೆನಿಯೊಂದು ಬಂದು ಶುದ್ಧ ಕುಡಿ ಯುವ ನೀರಿನ ಯೋಜನೆ ಕುರಿತು ವಿವರಿಸಿತು. ಕರ್ನಾಟಕದ ಬಹುಭಾಗದಲ್ಲಿ ಶುದ್ದ ನೀರಿನ ಕೊರತೆಯಿಂದ ಜನ ಅನು ಭವಿಸುತ್ತಿರುವ ಬವಣೆಗಳನ್ನು ಕಂಡಾಗ ಮಂಜುನಾಥ ಸ್ವಾಮಿಯ ಪ್ರೇರಣೆಯಾಯಿತು. ಪರಿಣಾಮವಾಗಿ ಶುದ್ಧ ಗಂಗಾ ಯೋಜನೆ ಆರಂಭವಾಯಿತು. “ರಾಜ್ಯದ 10 ಜಿಲ್ಲೆಗಳಲ್ಲಿ ಶುದ್ಧಗಂಗಾ ಯೋಜನೆ ಮೂಲಕ ಫ್ಲೋರೈಡ್‌ಯುಕ್ತ ನೀರಿರುವ ಪ್ರದೇಶದಲ್ಲಿ ಲೀ.ಗೆ ಕೇವಲ 10 ಪೈಸೆಗೆ ಶುದ್ಧ ಕುಡಿಯುವ ನೀರು ವಿತರಿಸಲಾಗುತ್ತಿದೆ. ಸರಕಾರವೇ ಯೋಜನೆಯನ್ನು ಕಂಡು ಶುದ್ಧ ಜಲ ಯೋಜನೆ ಆರಂಭಿಸಿ ನಮ್ಮ ಹಾದಿಯಲ್ಲಿ ಮುನ್ನಡೆದಿದೆ’ ಎನ್ನುತ್ತಾರೆ ಹೆಗ್ಗಡೆ.  

ಧರ್ಮದ ಹೆಜ್ಜೆ
ಅತ್ಯಪೂರ್ವ ಕಾರುಗಳ ಸಂಗ್ರಹ, ಛಾಯಾಗ್ರಹಣ ಹೀಗೆ ಹವ್ಯಾಸಗಳ ವರ್ಣರಂಜಿತ ವ್ಯಕ್ತಿತ್ವಕ್ಕೆ ಹೆಗ್ಗಡೆ ಒಂದು ನಿದರ್ಶನ. ಮಗುವಿನ ಮುಗ್ಧ ಮನಸ್ಸು. ಸರಳವಾದ ಜೀವನಕ್ರಮ. ಆದರೆ ಯಾವುದೇ ವಿಷಯದಲ್ಲಿಯೂ ಅನುಭವದ ಸಮುದ್ರ. ಅದು ಶಾಂತ ಸಾಗರವಲ್ಲ, ಭೋರ್ಗರೆಯುವ ಕಡಲು. ಇಡೀ ದಿನ ಸಭೆಗಳಲ್ಲಿ ಪಾಲುಗೊಂಡರೂ ಮುಖದಲ್ಲಿ ಆಯಾಸವಿಲ್ಲ. ಪಾದರಸದಂತಹ ಚುರುಕು ನಡಿಗೆ. ಐವತ್ತರ ಹಾದಿಯಲ್ಲಿ ನಡೆದುಬಂದಾಗ ಅದು ಹೂವು ಹಾಸಿದ ಬೃಂದಾವನ ವಾಗಿರಲಿಲ್ಲ. ಸವಾಲುಗಳು ಅವರ ಸ್ನೇಹಿತರಾದವು. ಅವರನ್ನು ದೃಢಗೊಳಿಸಿದವು. ಹೆಗ್ಗಡೆ ಸೌಲಭ್ಯಗಳ ಮಹಾ ಪೂರವನ್ನೇ ಮೊಗೆಮೊಗೆದು ಕೊಟ್ಟುಬಿಟ್ಟವರು. ನೊಂದವರ ಕಂಬನಿಯೊರೆಸಿದವರು. ಮಾತೃತ್ವದ ಸೆಲೆ ಹರಿಸಿದವರು. 50ರ ನಡಿಗೆಯಲ್ಲಿ ಧರ್ಮದ ಹೆಜ್ಜೆಗಳಿಗೆ ಬಲ ತುಂಬಿದವರು. ಸದ್ಧರ್ಮದ ಸಾರಥಿಯಾದವರು. ಮಾನವನ ಹೃದಯ ಸಾಮ್ರಾಜ್ಯದಲ್ಲಿರುವ ಭಗವಂತನಿಗೆ ನೆಮ್ಮದಿಯ ಮಹಾ ಪೂಜೆಯನ್ನು ಮಾಡುವ ಮೂಲಕ ಚಿರ ನೂತನ ಗುರುತುಗಳನ್ನು ಪಡಿ ಮೂಡಿಸಿದವರು. ದೀಪ‌ದಂತೆ ಬೆಳಗಿದವರು.

ಅವರು ಸದಾ ಕ್ಷೇತ್ರದ ಚಟುವಟಿಕೆಗಳ ಕುರಿತೇ ಯೋಚಿಸುತ್ತಾರೆ. ಬಿಡುವು ಎಂಬುದಿಲ್ಲ. ನಾವಿಬ್ಬರೇ ಜತೆಗಿದ್ದರೂ ನಮ್ಮೊಳಗೆ ಏಕಾಂತವೆಂಬುದಿಲ್ಲ. ಲೋಕಾಂತವೇ. ಏಕೆಂದರೆ ಮಾತುಕತೆ ಕ್ಷೇತ್ರದ ಕುರಿತೇ ಇರುತ್ತದೆ. 
ಹೇಮಾವತಿ ವಿ. ಹೆಗ್ಗಡೆ, ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ

ಅಣ್ಣಾಜಿ ಚೈತನ್ಯ ಶಕ್ತಿ. ವೈಜ್ಞಾನಿಕ ಮನೋಭಾವದವರು. ಕ್ಷೇತ್ರದ ಬೆಳವಣಿಗೆ, ಜನಮಂಗಲ ಕಾರ್ಯಗಳು ಜನರಿಗೆ ತಲುಪ ಬೇಕೆಂಬ ಮಹತ್ವಾ ಕಾಂಕ್ಷೆ ಉಳ್ಳವರು. ಯಾವುದೇ ಯೋಜನೆ ಯೋಚನೆ ಅರ್ಧಕ್ಕೆ ನಿಲ್ಲಿಸಿದವರಲ್ಲ.  
ಡಿ. ಹರ್ಷೇಂದ್ರ  ಕುಮಾರ್‌, ವೀರೇಂದ್ರ ಹೆಗ್ಗಡೆಯವರ ಸಹೋದರ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.