ಅನನ್ಯ ಶಿಲಾ ಕಾವ್ಯ ವಿಧಾನಸೌಧ


Team Udayavani, Oct 25, 2017, 4:34 AM IST

25-14.jpg

ಕರ್ನಾಟಕ ಸರಕಾರ ಅಕ್ಟೋಬರ್‌ 25ರಂದು ವಿಧಾನಸೌಧದ ವಜ್ರ ಮಹೋತ್ಸವ ಆಚರಿಸಲಿದೆ. 1956ರ ವಿಜಯ ದಶಮಿಯಂದು (10 ಅಕ್ಟೋಬರ್‌ 1956) ಅಂದಿನ ಅಲ್ಪಾವಧಿ ಮುಖ್ಯಮಂತ್ರಿ ಕಡಿದಾಳ ಮಂಜಪ್ಪನವರು ಹೋಮ ನಡೆಸಿ ವಿಧಾನಸೌಧ ಪ್ರವೇಶಿಸಿದರು. 20ನೆಯ ಶತಮಾನದ ಅಪೂರ್ವ ವಾಸ್ತುಶಿಲ್ಪದ ಮಾದರಿ ಯೆಂದೇ ಗುರುತಿಸಲ್ಪಡುವ ವಿಧಾನಸೌಧವನ್ನು ನಿರ್ಮಿಸಿದವರು ಕೆಂಗಲ್‌ ಹನುಮಂತಯ್ಯ. ವಿಧಾನಸೌಧ ಇಡೀ ರಾಷ್ಟ್ರದಲ್ಲಿ ಅತೀ ದೊಡ್ಡದು. ಪಾರ್ಲಿಮೆಂಟ್‌ ಭವನಕ್ಕಿಂತ ದೊಡ್ಡದು. ಮೈಸೂರು ಅರಮನೆಯಷ್ಟೇ ಸುಂದರವಾಗಿದೆ. ಇದನ್ನು ದಕ್ಷಿಣದ ತಾಜ್‌ ಎಂದು ಗುರುತಿಸಿದ್ದೂ ಇದೆ. ಹಂಪೆ, ಬೇಲೂರು, ಹಳೆಬೀಡಿನ ವಾಸ್ತುಶಿಲ್ಪಗಳಿಂದ ಪ್ರಭಾವಿತರಾದ ಚೀಫ್‌ ಎಂಜಿನಿಯರ್‌ ಬಿ.ಆರ್‌. ಮಾಣಿಕ್ಯಂ ಅವರು ವಿನ್ಯಾಸಗೊಳಿಸಿದ ಈ ಪ್ರಜಾಪ್ರಭುತ್ವದ ದೇಗುಲವನ್ನು “ಇದು ಕೇವಲ ಕಟ್ಟಡವಲ್ಲ; ಶಿಲಾಕಾವ್ಯ’ ಎಂದು ಬಣ್ಣಿಸಿದವರಿದ್ದಾರೆ.

ಬದಲಾದ ವಿನ್ಯಾಸ
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೆ.ಸಿ. ರೆಡ್ಡಿಯವರು ಮೈಸೂರು ರಾಜ್ಯದ ಮೊದಲು ಮುಖ್ಯಮಂತ್ರಿಯಾದರು. ಆಗ ಅಠಾರ ಕಚೇರಿ(ಈಗಿನ ಹೈಕೋರ್ಟ್‌ ಕಟ್ಟಡ) ಶಾಸನ ಸಭೆಯಾಗಿತ್ತು. ಸದನ ನಡೆಯುವಾಗ ಶಾಸಕರನ್ನು ನೋಡಲು ಬರುತ್ತಿದ್ದ ತಮ್ಮ ಮತದಾರರನ್ನು ಭೇಟಿಮಾಡಲು ಸೂಕ್ತ ಸ್ಥಳವಿಲ್ಲದಿರುವುದು ಮುಜುಗರವಾಗುತ್ತಿತ್ತು. ವಾಚನಾಲಯವಿರಲಿಲ್ಲ. ಶಾಸಕರಿಗೆ ವಿಶ್ರಾಂತಿ ಕೊಠಡಿಗಳಿರಲಿಲ್ಲ. ಇದನ್ನು ಗಮನಿಸಿ 1951 ಜನವರಿ 4 ರಂದು ಸದನದಲ್ಲಿ ಜನಪ್ರತಿನಿಧಿಗಳಿಗೆ ತಮ್ಮನ್ನು ಭೇಟಿ ಮಾಡಲು ಬರುವ ಮತದಾರರಿಗೆ ಆಗುತ್ತಿರುವ ಅನಾನುಕುಲವನ್ನು ತಪ್ಪಿಸಲು, ಶಾಸಕರಿಗೆ ಕನಿಷ್ಠ ಸೌಲಭ್ಯವೊದಗಿಸಲು, ಮಂತ್ರಿ ಮಹೋದಯರಿಗೆ ಕೊಠಡಿ, ಕಚೇರಿಗಳನ್ನು, ವಾಚನಾಲಯ, ಲಾಂಜ್‌ಗಳನ್ನುಳ್ಳ ಪ್ರತ್ಯೇಕ ಶಾಸಕಾಂಗ ಕಟ್ಟಡವನ್ನು ನಿರ್ಮಿಸಬೇಕೆಂಬ ನಿರ್ಣಯವಾಯಿತು. ಇದರನ್ವಯ ಎರಡಂತಸ್ತಿನ 109800 ಚದುರಡಿಯ ಅಮೆರಿಕನ್‌ ಶೈಲಿಯ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಜವಹರ್‌ ಲಾಲ್‌ ನೆಹರು 13-07-1951ರಂದು ಶಂಕುಸ್ಥಾಪನೆ ಮಾಡಿದರು. ಕಟ್ಟಡದ ವಿನ್ಯಾಸ ದೇಶಿಯವಲ್ಲ ಎಂದು ಹನುಮಂತಯ್ಯ ವಿರೋಧಿಸಿದರು. 

1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿ ಆದರು. ಅದೇ ಸಮಯದಲ್ಲಿ ಬೆಂಗಳೂರಿಗೆ ಭೇಟಿ ಮಾಡಿದ್ದ ರಷ್ಯಾ ನಿಯೋಗವೊಂದು ಅಂದಿನ ಮುಖ್ಯಮಂತ್ರಿ ಕೆಂಗಲ್‌ರನ್ನು ಭೇಟಿ ಮಾಡಿದಾಗ ನಿಮ್ಮ ಆಡಳಿತ ಕಚೇರಿಯೂ ಸೇರಿದಂತೆ (ಆಗ ಅಠಾರ ಕಚೇರಿಯಲ್ಲಿ-ಈಗಿನ ಹೈಕೋರ್ಟು ಕಟ್ಟಡದಲ್ಲಿ - ರಾಜ್ಯ ಸರಕಾರದ ಕಚೇರಿಗಳಿದ್ದವು) ಎಲ್ಲ ಪ್ರಮುಖ ಕಟ್ಟಡಗಳು ಐರೋಪ್ಯ ಶೈಲಿಯವೇ, ನಿಮ್ಮ ವಾಸ್ತು ಶಿಲ್ಪ ಎಲ್ಲಿದೆ? ಎಂದು ಕೇಳಿತಂತೆ!  ಪರಂಪರೆಯ ಅರಿವು ಜತೆಗೆ ಸೌಂದರ್ಯದ ಅರಿವಿದ್ದ ಕೆಂಗಲ್‌ ಅವರು ಮುಖ್ಯಮಂತ್ರಿಯಾದ ಮಾರನೆ ದಿನವೇ ಭಾರತೀಯ ವಾಸ್ತುವನ್ನು ಬಳಸಿಯೇ ಶಾಸನಾಂಗ ಕಟ್ಟಡ ನಿರ್ಮಾಣವಾಗಬೇಕು. ಮೈಸೂರು ಶೈಲಿಯು ನಿಚ್ಚಳವಾಗಿ ಕಾಣಬೇಕು. ಪಾಶ್ಚಾತ್ಯ ರೀತಿಯಲ್ಲ ಎಂದು ಆದೇಶ ಹೊರಡಿಸಿದ್ದರು. ಹನುಮಂತ ಯ್ಯನವರು ಕನ್ನಡನಾಡಿನ ವಾಸ್ತುಶಿಲ್ಪದ ವೈಭವ ವಿಧಾನಸೌಧದ ಕಟ್ಟಡದಲ್ಲಿ ಪ್ರತಿಫಲಿಸುವಂತೆ ಮಾಡಿದರು. ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಿದರು. ಸಮಿತಿಯು ವರದಿ ನೀಡಿ 3 ಅಂತಸ್ತಿನ 1,74,600 ಚದರಡಿಯ ಕಟ್ಟಡವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲು ಶಿಫಾರಸು ಮಾಡಿತು.

ವಿಧಾನಸೌಧ ನಿರ್ಮಾಣವಾಯಿತು
ನೆಹರು ಅವರು 1951ರ ಜುಲೈನಲ್ಲಿ ವಿಧಾನಸೌಧದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರೂ ಬದಲಾದ ನೀಲಿನಾಕಾಶೆಯಂತೆ ಕೆಲಸ ಆರಂಭವಾದ್ದು 1952 ಸೆಪ್ಟಂಬರ್‌ನಲ್ಲಿ. ಹನುಮಂತಯ್ಯನವರು ಕುಂತ್ರು ನಿಂತ್ರು ಅವನೆª ಧ್ಯಾನ ಅನ್ನುವಂತೆ ತಮ್ಮ ಎಲ್ಲ ಸಮಯವನ್ನು ಅದಕ್ಕೇ ಮಿಸಲಿಟ್ಟರು. ಜತೆಗೆ ಮುಖ್ಯ ಎಂಜನಿಯರ್‌ಗಳಾದ ಮಾಣಿಕ್ಯಂ, ಮುನಿಯಪ್ಪ ಅವರು ಪೂರ್ಣವಾಗಿ ಸಹಕರಿಸಿದರು ಎಂದು ನಿಗದಿತ ಸಮಯ, ವೆಚ್ಚದಲ್ಲೇ ನಿರ್ಮಿಸಲು ಕಠಿಣ ಸಜೆಗೊಳಗಾಗಿದ್ದ 5000 ಖೈದಿಗಳನ್ನು ನಿರ್ಮಾಣ ಕೆಲಸಕ್ಕೆ ಬಳಸಿಕೊಳ್ಳಲು ನಿರ್ಧರಿಸಿದರು. ಜತೆಗೆ ಕಟ್ಟಡ ನಿರ್ಮಾಣದಲ್ಲಿ ನುರಿತ 1500 ಕೆಲಸದವರನ್ನು ಸೇರಿಸಿಕೊಳ್ಳಲಾಯಿತು. ಸಮರೋಪಾದಿಯಲ್ಲಿ ಕೆಲಸ ನಡೆದರೂ ಕಬ್ಬನ್‌ ಉದ್ಯಾನದ ಸುಂದರ ಪರಿಸರದ ನಡುವೆ 60 ಎಕರೆಯ ಪ್ರದೇಶದಲ್ಲಿ ಇಂದು ನಾವು ಕಾಣುತ್ತಿರುವ ಈ ಭವ್ಯ ಸೌಧ ತಲೆ ಎತ್ತಿ ನಿಲ್ಲಲು 4 ವರ್ಷ ಬೇಕಾಯಿತು. ನಾವು ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ,  ರಾಜಸ್ಥಾನದಿಂದ ತರಿಸಿದ ಅಮೃತಶಿಲೆ ಬಿಟ್ಟರೆ ಬಳಸಿರುವ ಕಲ್ಲು, ಮರ ಎಲ್ಲ ಸ್ಥಳೀಯವಾದವು. ಬಾಗಿಲುಗಳು, ಕಿಟಕಿಗಳಿಗೆ ಬಳಕೆಯಾಗಿರುವುದು ಹುಣುಸೂರು ತೇಗ. ಬಾಗಿಲುಗಳ ಕುಸುರಿ ಕೆಲಸ ಕಣ್ಮನ ಸೆಳೆಯದಿರದು. ಬೆಟ್ಟಹಲಸೂರು, ಅರೆಹಳ್ಳಿ ಮತ್ತು ಹೆಸರುಘಟ್ಟದ ಬೂದು ಗ್ರಾನೈಟ್‌ ಕಲ್ಲುಗಳನ್ನು ಬಳಸಲಾಗಿದೆ. ಹಾಗೇ ಹಳದಿ ಗ್ರಾನೈಟ್‌ ಕಲ್ಲುಗಳು ಮಲ್ಲಸಂದ್ರದ್ದಾದರೆ, ಕೆಂಪು ಗ್ರಾನೈಟ್‌ ಕಲ್ಲುಗಳು ಮಾಗಡಿಯದು. ಕರಿ ಕಲ್ಲುಗಳು ತುರುವೆಕೆರೆಯದು. ಅವುಗಳ ಮೂಲರೂಪವನ್ನೇ ಉಳಿಸಿಕೊಂಡಿರುವುದು ಕಟ್ಟಡಕ್ಕೆ ದಿವ್ಯತೆಯನ್ನು ತಂದುಕೊಟ್ಟಿದೆ ಅನ್ನುತ್ತಾರೆ ಸೌಂದರ್ಯಶಾಸ್ತ್ರ ಪರಣಿತರು.

ಅವ್ಯವಹಾರ ಆರೋಪ!
(ವಿಧಾನಸೌಧವನ್ನು ಅಜರಾಮರವಾಗಿಸಿ; ಕ್ರಿಸ್ತನಂತೆ ಶಿಲುಬೆಗೇರಿದವರು ಅದರ ಶಿಲ್ಪಿ ಕೆಂಗಲ್‌ ಹನುಮಂತಯ್ಯ.)
ವಿಧಾನಸೌಧಕ್ಕೆ ಪ್ರಧಾನಿಗಳು 1951ರಲ್ಲಿ ಚಾಲನೆ ನೀಡಿದಾಗ ಅದರ ಅಂದಾಜು ವೆಚ್ಚ 33 ಲಕ್ಷ. 1952ರಲ್ಲಿ ಬದಲಾದ ವಿನ್ಯಾಸದ ಅನಂತರ 50 ಲಕ್ಷ ಆಗಿತ್ತು. ಕಟ್ಟಡ ಪೂರ್ಣವಾಗಿ ಮುಗಿಯುವ ಹೊತ್ತಿಗೆ ಆದ ಖರ್ಚು 184 ಲಕ್ಷ. ಅಂದರೆ ಅಂದಾಜಿಗಿಂತ 3 ಪಟ್ಟಿಗೂ ಹೆಚ್ಚು. ಅದಕ್ಕೆ ಕಾರಣ ಕಟ್ಟಡ ವಿಸ್ತಾರವಾಗುತ್ತ ಹೋದದ್ದು. (ಕರ್ನಾಟಕ ಏಕೀಕರಣವಾಗುವ ಹಂತ ತಲುಪಿದಾಗ ಮೂರಂತಸ್ತಿನ ಕಟ್ಟಡವನ್ನು 4 ಅಂತಸ್ತಿಗೆ ವಿಸ್ತರಿಸುವಂತೆ ಹನುಮಂತಯ್ಯ ಸೂಚಿಸಿದ್ದರು). ಇದರ ಬಗ್ಗೆ ಧ್ವನಿಯೆತ್ತು ವಷ್ಟು ವಿಪಕ್ಷಗಳು ಬಲಯುತವಾಗಿರಲಿಲ್ಲ. ದುರಂತವೆಂದರೆ ಕೆಂಗಲ್‌ ಹನುಮಂತಯ್ಯನವರ ಏಳಿಗೆಯನ್ನು ಸಹಿಸದ ಆಳುವ ಪಕ್ಷದವರೇ ನಿರಂತರ ಅರೋಪ ಮಾಡುತ್ತಿದ್ದರು. 

ತಪ್ಪು ಮಾಡದ ಕೆಂಗಲ್‌ ಹೆದರಲಿಲ್ಲ. ತಮ್ಮ ವಿರುದ್ಧ ಮಾಡಿರುವ ನಿರಾಧಾರ ಅರೋಪಗಳಿಗೆ ಉತ್ತರಿಸಲು ಸ್ವತಃ ಹನುಮಂತಯ್ಯನವರೇ 1956 ಜುಲೈ 2ರಂದು ನಾಗಪುರದ ಹೈಕೋರ್ಟನ ನಿವೃತ್ತ ನ್ಯಾ|| ಪಿ.ಪಿ. ದೇವ್‌ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿ, ವಿಧಾನಸೌಧದ ನಿರ್ಮಾಣದ ಕೆಲಸ ಮುಗಿಸುವತ್ತ ಮಗ್ನರಾ ದರು. ಸದನದಲ್ಲಿ ಅವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದರು. ಹನುಮಂತಯ್ಯ ಪದತ್ಯಾಗ ಮಾಡಬೇಕಾಯಿತು. ಕಡಿದಾಳು ಮಂಜಪ್ಪ ತಾತ್ಕಾಲಿಕ ಮುಖ್ಯಮಂತ್ರಿ ಆದರು.

ಕೆಂಗಲ್‌ ಹತ್ಯೆಗೆ ಪ್ರಯತ್ನಿಸಿದ್ದ ಖೈದಿ
ಕೆಂಗಲ್‌ ಅವರು ತಮ್ಮ ಕನಸಿನ ಕಟ್ಟಡದ ನಿರ್ಮಾಣದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದರು. ಪ್ರತಿದಿನ ತಮ್ಮ ದೈನಂದಿನ ಅಧಿಕೃತ ಕಾರ್ಯಭಾರವನ್ನು ಮುಗಿಸಿದ ನಂತರ ಅಠಾರ ಕಚೇರಿಯಿಂದ ನೇರವಾಗಿ ವಿಧಾನಸೌಧದ ಕಾಮಗಾರಿಯನ್ನು ಪರಿಶೀಲಿಸಿ ಅಲ್ಲಿದ್ದ ಅಧಿಕಾರಗಳು, ಮೇಸ್ತ್ರಿಗಳನ್ನು ವಿಚಾರಿಸಿದ ನಂತರವೇ ಮನೆಗೆ ತೆರಳುತ್ತಿದ್ದರು. ಹೀಗೆ ಒಂದು ದಿನ 1953ರಲ್ಲಿ ಕೆಲಸವನ್ನು ಪರಿಶೀಲಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಒಬ್ಬ ಕೆಲಸಗಾರ ಕೆಂಗಲ್‌ ಹನುಮಂತಯ್ಯನವರ ಮೇಲೆ ಹಲ್ಲೆ ನಡೆಸಲು ಮುಂದಾದ ಸಂಗತಿಯನ್ನು ಕಂದಾಯ ಸಚಿವ ಕಡಿದಾಳು ಮಂಜಪ್ಪ ತಮ್ಮ ಡೈರಿಯಲ್ಲಿ ಹೀಗೆ ದಾಖಲಿಸಿದ್ದಾರೆ: “”ಮುಖ್ಯಮಂತ್ರಿಗಳು ಕೆಲಸದ ಪ್ರಗತಿಯನ್ನು ತಪಾಸಣೆ ನಡೆಸುತ್ತಿದ್ದರು. ನಾನು ಸ್ವಲ್ಪ ಹಿಂದಿದ್ದೆ. ಆಗ ಇದ್ದಕ್ಕಿದ್ದಂತೆಯೇ ಒಬ್ಬ ನೇರವಾಗಿ ಕೆಂಗಲ್‌ ಅವರ ಮೇಲೆರಗಿ ಹಲ್ಲೆ ನಡೆಸಿದ. ಅವರ ಬಲಗೈ ಎಳೆದ, ತಲೆಯ ಮೇಲಿನ ಪೇಟ ಜರುಗಿತು. ಮತ್ತೆ ಅವನು ಅಲ್ಲಿದ್ದ ಕಬ್ಬಿಣದ ಸರಳನ್ನು ತೆಗದುಕೊಳ್ಳುತ್ತಿದ್ದ. ಅಲ್ಲಿಯೇ ಇದ್ದ ಚಿಕ್ಕಬಳ್ಳಾಪುರದ ಚಿಕ್ಕಪುಟ್ಟಸ್ವಾಮಿಯವರು ಅವನನ್ನು ಹಿಂದಿನಿಂದ ಬಲವಾಗಿ ಹಿಡಿದುಕೊಂಡರು. ಪುಟ್ಟಸ್ವಾಮಿಯವರು ಕಟ್ಟು ಮಸ್ತಾದ ದೇಹದವರಾದ್ದರಿಂದ ಅವನು ತಪ್ಪಿಸಿಕೊಳ್ಳಲಾಗಲಿಲ್ಲ. ನಂತರ ತಿಳಿಯಿತು ಅವನೊಬ್ಬ ಶಿಕ್ಷೆಗೊಳಗಾದ ಖೈದಿ ಎಂದು. ಸಮಯಕ್ಕೆ ಸರಿಯಾಗಿ ಚಿಕ್ಕಪುಟ್ಟಸ್ವಾಮಿಯವರು ಬರದಿದ್ದರೆ ಅಂದು ದೊಡ್ಡ ದುರಂತ ನಡೆದು ಹೋಗುತ್ತಿತ್ತು. ಇಷ್ಟೆಲ್ಲ ಅಡೆತಡೆ, ಅಪಾಯಗಳನ್ನು ಎದುರಿಸಿದ ಹನುಮಂತಯ್ಯನವರು ವಿಧಾನಸೌಧ ಉದ್ಘಾಟನೆಯ ಹೊತ್ತಿಗೆ ರಾಜಿನಾಮೆ ಕೊಡಬೇಕಾಯಿತು.”

ತನಿಖಾ ಅಯೋಗದ ಮುಂದೆ ಕೆಂಗಲ್‌
ನಿಜವಾದ ಅರ್ಥದಲ್ಲಿ ತಮ್ಮ ತನು-ಮನವನ್ನೂ ಅಮೂಲ್ಯ ಸಮಯವನ್ನು ಸಮರ್ಪಿಸಿ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯನವರು ವಿಧಾನಸೌಧದಲ್ಲಿ ಕೂತು ಒಂದು ದಿನವೂ ಅಧಿಕಾರ ನಡೆಸಲಾಗಲಿಲ್ಲ ಎಂಬುದು ದುರಾದೃಷ್ಟಕರ. ವಿಷಾದದ ಸಂಗತಿಯೆಂದರೆ, ಕುರ್ಚಿಯಲ್ಲಿ ಕೂತು ಆಡಳಿತ ನಡೆಸಬೇಕಾಗಿದ್ದ ವ್ಯಕ್ತಿ ತನಿಖಾ ಆಯೋಗದ ಮುಂದೆ ನೆವಂಬರ್‌ 17, 1956ರಂದು ವಿವರಣೆ ನೀಡಬೇಕಾಗಿ ಬಂದಿದ್ದು. ಕೆಂಗಲ್‌ ನೀಡಿರುವ ಉತ್ತರಗಳು ಸಾಕ್ರಟೀಸ್‌ ನೀಡಿದ ಉತ್ತರಗಳನ್ನು ನೆನಪಿಸುತ್ತದೆ.

ನಿಯೋಗದ ಮುಂದೆ ಅವರು ನೀಡಿದ ಹೇಳಿಕೆಯ ಕೆಲವು ಭಾಗ ಹೀಗಿದೆ: “”ವಿಧಾನಸೌಧ ನಿರ್ಮಾಣಕ್ಕೆ ಕಾರಣಕರ್ತ ಎಂದು ನಾಡಿನ ಜನತೆ ನಂಬಿದ್ದಾರೆ. ದುರ್ದೈವ ಇದೇ ಮಂದಿರದಲ್ಲಿ ನಿಂತು ನಾನು ಅಪರಾಧ ಮಾಡಿಲ್ಲ, ಯಾವುದೇ ತಪ್ಪು ನನ್ನಿಂದಾಗಿಲ್ಲ ಎಂದು ಈ ಸಭೆಯ ಮುಂದೆ ನಿಂತು ಸಮರ್ಥಿಸಿಕೊಳ್ಳುವ ದೌರ್ಭಾಗ್ಯ ನನಗೆ ಬಂದಿದೆ. ಸಮಿತಿಯವರು ಹೇಳುವಂತೆ ಪ್ರತಿ ಹಂತದಲ್ಲಿ ಸರಕಾರದ ನಿಯಮವನ್ನು ಅನುಸರಿಸಿ ಕಟ್ಟಡ ಕಟ್ಟಬೇಕಾದರೆ 8-10 ವರ್ಷಗಳಿಗೂ ಮುಗಿಯುತ್ತಿರಲಿಲ್ಲ… ಆಯೋಗದ ಈ ಮೂರು ಮಂದಿಯೂ ಈ ಕಟ್ಟಡ ಚೆನ್ನಾಗಿಲ್ಲ, ಇದನ್ನು ಕಟ್ಟಬಾರದಿತ್ತು ಎಂದರೆ ನನಗೆ ದಿಗ್ಭ್ರಮೆಯಾಗುತ್ತದೆ….ದೇವರೇ ಅನ್ಯಾಯವೋ ಸುನ್ಯಾಯವೋ ನಿನ್ಯಾವನು ನೀನೇ ಬಲ್ಲೆ ಎಂಬ ಕನಕದಾಸರ ಕೀರ್ತನೆಯ ಸಾಲುಗಳೊಂದಿಗೆ ನನ್ನ ಹೇಳಿಕೆ ಮುಗಿಸುತ್ತೇನೆ.” ಸಮಿತಿಯು ಕೆಂಗಲ್‌ ಹನುಮಂತಯ್ಯನವರನ್ನು ಅಪರಾಧಿ ಎಂದಿತು. ಆದರೆ, ನಾಡಿನ ಜನತೆ ಗೊತ್ತಿತ್ತು ಸತ್ಯ ಏನು ಎಂಬುದು. ವಿಧಾನಸೌಧದ ಪಕ್ಕದಲ್ಲಿ ನಿರ್ಮಾಣವಾಗಿರುವ ವಿಕಾಸಸೌಧವನ್ನು ವಿಧಾನ ಸೌಧದ ಪ್ರತಿರೂಪ ಎಂದಿದ್ದಾರೆ. ಅದಕ್ಕೆ ತಗುಲಿದ ವೆಚ್ಚ 475 ಕೋಟಿ. ಎರಡೂ ಕಟ್ಟಡಗಳ ನಡುವೆ ಇರುವ ಧ್ಯಾನಸ್ತಿಗರೂ ಪ್ರತಿಮೆ. ಈ ಎರಡು ಕಟ್ಟಡದ ಆಗುಹೋಗುಗಳಿಗೆ ಮುಖ ಸಾಕ್ಷಿ.

ವಿಧಾನಸೌಧದ ವೈಶಿಷ್ಟ್ಯ
ವಿಧಾನಸೌಧ ಉತ್ತರ-ದಕ್ಷಿಣ 720 ಅಡಿ, ಪೂರ್ವ-ಪಶ್ಚಿಮ 360 ಅಡಿ ಇದೆ. ಒಳ ಅಂಗಳದ ವಿಸ್ತೀರ್ಣ 230×230. ಕಟ್ಟಡದ ಅಡಿಪಾಯ 1.324 ಲ.ಚ.ತಾ. ಒಟ್ಟು ಮೂರಂತಸ್ತಿನ ಕಟ್ಟಡ 5.5 ಲಕ್ಷ ಚದರಡಿ ಇದೆ. ಕಟ್ಟಡದ ಎತ್ತರ 150ಅಡಿಯಿದೆ. ನೆಲಮಾಳಿಗೆಯಲ್ಲಿ 132×120 ಅಡಿಯ ಬಾಂಕ್ವೆಟ್‌  ಹಾಲ್‌ ಇದೆ. ಪತ್ರಾ ಗಾರವಿದೆ. ಉಪಹಾರ ಗೃಹವಿದೆ. ಪ್ರತಿ ಮಹಡಿಲೂ 40 ರಿಂದ 45 ಕೊಠಡಿಗಳಿವೆ.  1ನೆಯ ಮಹಡಿಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ಗಳ ಸುಸಜ್ಜಿತವೂ, ವಿಶಾಲವೂ ಆದ ಸಭಾಂಗಣಗಳಿವೆ. ದೊಡ್ಡದಾದ ಈ ಸಭಾಂಗಣದ ಮಧ್ಯೆ ಒಂದೂ ಕಂಬ ಇಲ್ಲದಿರುವುದು ಒಂದು ವೈಶಿಷ್ಟé. 2ನೆಯ ಮಹಡಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಿದೆ.

3ನೆಯ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ,  ಕ್ಯಾಬಿನೆಟ್‌ ಹಾಲ್‌, ಸಮ್ಮೇಳನ ಸಭಾಂಗಣಗಳಿವೆ. ಮುಖ್ಯಮಂತ್ರಿಗಳ ಕೊಠಡಿಯ ಬಾಗಿಲು ಶ್ರೀಗಂಧದ್ದು. ಅಪರೂಪದ ಕುಸರಿ ಕಲೆ ಕೆತ್ತನೆಯಿದೆ.  ಮಧ್ಯ ಗುಮ್ಮಟದ ಶಿಖರದಲ್ಲಿ ಚಿತ್ತಾರಗಳ ಮಧ್ಯೆ ರಾಷ್ಟ್ರೀಯ ಲಾಂಛನ ನಾಲ್ಕು ಮುಖಗಳ ಸಿಂಹದ ಶಿಲ್ಪವಿದ್ದು  ಅಶೋಕ ಚಕ್ರವೂ ಇದೆ. ಇಂಡೋ-ಇಸ್ಲಾಮಿಕ್‌ ವಾಸ್ತುಗಳನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ನಾಲ್ಕು ಮೂಲೆಗಲ್ಲೂ ಸಣ್ಣಗೋಪುರಗಳಿವೆ.

ಮಹಾದ್ವಾರದ ಮುಂದೆ ಬೃಹತ್‌ ಆದ 40 ಅಡಿ ಎತ್ತರದ 12 ಕಲ್ಲಿನ ಕಂಬಗಳಿವೆ. ವಿಧಾನಸೌಧಕ್ಕೆ 4 ಪ್ರವೇಶ ದ್ವಾರಗಳಿದ್ದು, ಮುಖ ಮಂಟಪಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಪೂರ್ವದ್ವಾರದಲ್ಲಿ “ಸರಕಾರದ ಕೆಲಸ ದೇವರ ಕೆಲಸ’ ಎಂದು ಬರೆದಿದೆ(1957ರಲ್ಲಿ ಈ ಉಕ್ತಿ ಬದಲಿಗೆ “ಸತ್ಯಮೇವ ಜಯತೆ’ ಎಂದು ಬರೆಸಲು ಸರಕಾರ ಮುಂದಾಗಿತ್ತು. ಅದಕ್ಕಾಗಿ 75 ಸಾವಿರ ರೂಪಾಯಿಗಳನ್ನು ಮಿಸಲಿರಿಸಿತ್ತು. ಅದು ಕಾರಣಾಂತರಗಳಿಂದ ಕೈಗೂಡಲಿಲ್ಲ). ಪಶ್ಚಿಮ ದ್ವಾರದಲ್ಲಿ “ಧರ್ಮೋ ರಕ್ಷತಿ ರಕ್ಷತು’ (ಕನ್ನಡ ಅನುವಾದ “ಧರ್ಮವನು ರಕ್ಷಿಪನ ಧರ್ಮ ರಕ್ಷಿಪುದು’ ಎಂಬುದನ್ನೂ ಕೆತ್ತಲಾಗಿದೆ) ಎಂದು ಬರೆಯಲಾಗಿದೆ. 

ಇಷ್ಟೆಲ್ಲ ವೈವಿಧ್ಯಮಯವಾದ, ವೈಭವಯುತ ಕಟ್ಟಡ 1952-56ರ ಅವಧಿಯಲ್ಲಿ ನಿರ್ಮಾಣವಾಯಿತು. ಇದು ಕೆಂಗಲ್‌ ಹನುಮಂತಯ್ಯನವರ ಕತೃìತ್ವ ಶಕ್ತಿ, ಕಲ್ಪನೆಯ ಕೂಸು. ಎಂಜಿನಿಯರ್‌ಗಳಾದ ಮುನಿಯಪ್ಪ, ಮಾಣಿಕ್ಯಂ ಮಾರ್ಗದರ್ಶ ನದಲ್ಲಿ 5000 ಕಾರ್ಮಿಕರು, 1500 ಕುಶ ಲಕರ್ಮಿಗಳು, ಹಲವು ಕಲಾವಿದರು, ಶಿಲ್ಪಿಯ ತಂಡ ಈ ಅದ್ಭುತ ಗ್ರಾನೈಟ್‌ ಕಟ್ಟಡವನ್ನು ನಿರ್ಮಿಸಿತು. ಈ ಕಟ್ಟಡಕ್ಕೆ ತಗುಲಿದ ವೆಚ್ಚ ಕೇವಲ 1.84 ಕೋಟಿ. ಅಂದರೆ ಪ್ರತಿ ರಚನೆ 30 ರೂಪಾಯಿಗಳು. ಈಗ ವಿಧಾನಸೌಧದ ಪಕ್ಕ ಹಲವು ವ್ಯಕ್ತಿಗಳ ಪ್ರತಿಮೆಯಿದ್ದು ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಯೂ ಇದೆ ಎಂಬುದು ಸ್ವಲ್ಪ ನೆಮ್ಮದಿಯ ಸಂಗತಿ.

ರಾ.ನಂ. ಚಂದ್ರಶೇಖರ

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.