Updated at Wed,24th May, 2017 9:31AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸ್ಟೇಟ್‌ಬ್ಯಾಂಕ್‌ ವಿಲೀನ ಏನು? ಎತ್ತ?

ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ದ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಪ್‌ ಟ್ರಾವಂಕೂರ್‌, ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಆ್ಯಂಡ್‌ ಜೈಪುರ್‌, ಸ್ಟೇಟ್‌ ಬ್ಯಾಂಕ್‌ ಆಫ್ ಹೈದ್ರಾಬಾದ್‌ ಎಸ್‌ಬಿಐ ಜೊತೆ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಸಮಿತಿ ಹಸಿರು ನಿಶಾನೆ ತೋರಿದೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಸ್‌ಬಿಐ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಸಹವರ್ತಿ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ನೊಂದಿಗೆ ವಿಲೀನಗೊಂಡರೆ ಏನಾಗುತ್ತೆ? ಎಂಬುದರ ಕುರಿತ ವಿವರಗಳು ಇಲ್ಲಿವೆ. 

ವಿಲೀನಕ್ಕೆ ಮುಂದಾಗಿದ್ದೇಕೆ?
ಸ್ಟೇಟ್‌ ಬ್ಯಾಂಕ್‌ ಸಮೂಹದ ಬ್ಯಾಂಕ್‌ಗಳು ಇದುವರೆಗೆ ಪ್ರತ್ಯೇಕ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ವೆಚ್ಚ ಹೆಚ್ಚು ಎಂಬ ಕಾರಣ ಒಡ್ಡಲಾಗಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಖಾಸಗಿ ಬ್ಯಾಂಕ್‌ಗಳು ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿದ್ದು, ಅವುಗಳನ್ನು ಎದುರಿಸಲು ಈ ವಿಲೀನ ಅಗತ್ಯವಾಗಿದೆ ಎಂದು ಹೇಳಲಾಗಿತ್ತು. ಮುಂದಿನ ದಿನಗಳಲ್ಲಿ ಸಂಪೂರ್ಣ ಡಿಜಿಟಲ್‌ ವ್ಯವಹಾರಕ್ಕಾಗಿ, ದೇಶದ ಮೂಲೆ ಮೂಲೆಗೂ ಬ್ಯಾಂಕ್‌ ತಲುಪಿಸುವ ಯತ್ನಕ್ಕೆ ವಿಲೀನಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. 

ಇನ್ನು ಎಸ್‌ಬಿಐ ಬೃಹತ್‌ ಬ್ಯಾಂಕ್‌!
ಎಸ್‌ಬಿಐ ಇತರ ಸಹವರ್ತಿ ಬ್ಯಾಂಕ್‌ಗಳೊಂದಿಗೆ ಸೇರಿದಾಗ ಅದರ ಆಸ್ತಿ ಮೊತ್ತ ಒಟ್ಟು 37 ಲಕ್ಷ ಕೋಟಿ ರೂ.ಗಳಿಗೇರುತ್ತದೆ. ಇದು ದೇಶದಲ್ಲೇ ಅತಿ ದೊಡ್ಡ ಬ್ಯಾಂಕ್‌ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಜೊತೆಗೆ ವಿಶ್ವದ ಟಾಪ್‌ 50 ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಎಸ್‌ಬಿಐ ನಂತರದ ಸ್ಥಾನದಲ್ಲಿ, ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಐಸಿಐಸಿಐ ಬ್ಯಾಂಕ್‌ಗಿದ್ದು (ಒಟ್ಟು ಆಸ್ತಿ ಮೊತ್ತ 7.2 ಲಕ್ಷ ಕೋಟಿ) ಅದರಿಂದ ಐದು ಪಟ್ಟು ದೊಡ್ಡದಿರಲಿದೆ. ಇದರೊಂದಿಗೆ ಎಸ್‌ಬಿಐ 22,500 ಶಾಖೆಗಳನ್ನು ಹೊಂದಿರಲಿದ್ದು, 58 ಸಾವಿರ ಎಟಿಎಂಗಳನ್ನು ಹೊಂದಿರಲಿದೆ. 50 ಕೋಟಿ ಮಂದಿ ಗ್ರಾಹಕರು ಇರಲಿದ್ದಾರೆ. ವಿಲೀನದ ಬಳಿಕ ಎಸ್‌ಬಿಐ 36 ದೇಶಗಳಲ್ಲಿ 191 ಶಾಖೆಗಳನ್ನು ಹೊಂದಿರಲಿದೆ. 

ವಿಲೀನ ಅನುಪಾತ ಎಷ್ಟು? 
ಸದ್ಯ ವಿಲೀನ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕಿದೆ. ಆದರೆ ವಿಲೀನ ಶಿಫಾರಸಿನ ಪ್ರಕಾರ ಅದರ ಅನುಪಾತ ಹೀಗೆ ಇರಲಿದೆ. ವಿಲೀನಗೊಂಡ ಬಳಿಕ ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಆ್ಯಂಡ್‌ ಜೈಪುರ್‌ ಷೇರುದಾರರು ಎಸ್‌ಬಿಐನ 28 ಷೇರುಗಳನ್ನು ಪಡೆಯಲಿದ್ದಾರೆ (ತಲಾ 1 ರೂ.), ಇನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಟ್ರಾವೆಂಕೂರ್‌ನ ಷೇರುದಾರರು ತಾವು ಹೊಂದಿದ ಪ್ರತಿ 10 ಷೇರುಗಳಿಗೆ ಎಸ್‌ಬಿಐನ 22 ಷೇರುಗಳನ್ನು ಪಡೆಯಲಿದ್ದಾರೆ. 

ವಿಲೀನಕ್ಕೆ ಅಂದಿನಿಂದಲೇ ಯತ್ನ!
ಎಸ್‌ಬಿಐ ಜೊತೆಗೆ ಇತರ ಸಹವರ್ತಿ ಬ್ಯಾಂಕ್‌ಗಳನ್ನೂ ವಿಲೀನಗೊಳಿಸುವ ಸುದ್ದಿ ಇಂದು ನಿನ್ನೆಯದಲ್ಲ. ಸುಮಾರು 8-9 ವರ್ಷಗಳ ಹಿಂದೆಯೇ ಇದು ಆರಂಭಗೊಂಡಿತ್ತು. ಬ್ಯಾಂಕ್‌ ಆಫ್ ಸೌರಾಷ್ಟ್ರ 2008ರಲ್ಲಿ ವಿಲೀನಗೊಂಡಿದ್ದರೆ, ಬ್ಯಾಂಕ್‌ ಆಫ್ ಇಂದೋರ್‌ 2010ರಂದು ವಿಲೀನಗೊಂಡಿತ್ತು,

ವಿಲೀನಕ್ಕೆ ತೀವ್ರ ವಿರೋಧ
ಎಸ್‌ಬಿಐ ಜೊತೆಗೆ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಈ ಮೊದಲಿನಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಕೀಯ ಕಾರಣಕ್ಕಾಗಿ ಬ್ಯಾಂಕುಗಳನ್ನು ವಿಲೀನ ಮಾಡಲಾಗುತ್ತಿದೆ. ಮತ್ತು ಸಹವರ್ತಿ ಬ್ಯಾಂಕುಗಳು ಹಲವು ಲಾಭದಲ್ಲಿದ್ದು, ಅನುತ್ಪಾದಕ ಆಸ್ತಿ ಪ್ರಮಾಣವೂ ಕಡಿಮೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಸ್‌ಬಿಐ ಜೊತೆಗೆ ವಿಲೀನ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಸಹವರ್ತಿ ಬ್ಯಾಂಕುಗಳ ಸಿಬ್ಬಂದಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಲೀನ ಬಳಿಕ ಶೇ.30ರಷ್ಟು ಸಿಬ್ಬಂದಿಯನ್ನು ಕೈಬಿಡಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಮತ್ತು ಸಿಬ್ಬಂದಿ ಕುರಿತ ಕಾನೂನುಗಳಲ್ಲಿ ಕೆಲವೊಂದು ಬದಲಾವಣೆಯಾಗುತ್ತದೆ ಎಂಬ ಕಾರಣಕ್ಕೆ ವಿರೋಧ ಮಾಡಲಾಗಿತ್ತು. 


More News of your Interest

Trending videos

Back to Top