CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹನುಮಂತನ ದೇವಸ್ಥಾನಕ್ಕೆ ಮುಸ್ಲಿಂ ಕುಟುಂಬದಿಂದ ಭೂದಾನ

ಶಿವಪುರ, ಮಧ್ಯಪ್ರದೇಶ : ಮಧ್ಯಪ್ರದೇಶದ ಶಿವಪುರ ಜಿಲ್ಲೆಯ ಭಗವಾಜ್‌ ಗ್ರಾಮದಲ್ಲಿ  ಹನುಮಂತನ ದೇವಸ್ಥಾನದ ವಿಸ್ತರಣೆಗೆ ತನ್ನ ಒಡೆತನದ ಭೂಮಿಯ ಬಹುಪಾಲನ್ನು ದಾನವಾಗಿ ನೀಡುವ ಮೂಲಕ 34ರ ಹರೆಯದ ಸ್ಥಳೀಯ ಮುಸ್ಲಿಂ ವ್ಯಕ್ತಿ ಜಾವೇದ್‌ ಅನ್ಸಾರಿ ಅತ್ಯುನ್ನತ ಮಟ್ಟದಲ್ಲಿ ಕೋಮು ಸಾಮರಸ್ಯ, ಸೌಹಾರ್ದವನ್ನು ಮೆರೆದಿದ್ದಾರೆ. 

ಹನುಮಂತನ ದೇವಸ್ಥಾನದ ವಿಸ್ತರಣೆಗೆಂದು ತನ್ನ ಭೂಮಿಯ ಬಹುಪಾಲನ್ನು ದಾನವಾಗಿ ನೀಡಿರುವ ಅನ್ಸಾರಿ ಅವರು ನಿಜಕ್ಕಾದರೆ ತಮ್ಮ ತಂದೆ, ಅಜ್ಜನ ಮಾರ್ಗವನ್ನೇ ಅನುಸರಿಸಿ ಬಂದಿರುವುದು ಗಮನಾರ್ಹವಾಗಿದೆ. 

ಅನ್ಸಾರಿ ಅವರ ಇಡಿಯ ಕುಟುಂಬವೇ ಧರ್ಮಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳಿಗೆ ಮಹತ್ವವನ್ನು ಕೊಡುತ್ತಾ ಬಂದಿದೆ.

ಶಿವಪುರ ಜಿಲ್ಲೆಯ ಭಗವಾಜ್‌ ಗ್ರಾಮದಲ್ಲಿನ ಸಣ್ಣ ಮಟ್ಟದ ಹನುಮಂತನ ದೇವಸ್ಥಾನವು ಹುಣಸೇ ಮರದ ಅಡಿಯಲ್ಲಿದೆ. ಹಾಗಾಗಿ ಇಲ್ಲಿನ ಜನರು ಇಲ್ಲಿನ ಹನುಮಂತನನ್ನು ಇಮ್ಲಿ ವಾಲೆ ಹನುಮಾನ್‌ ಎಂದೇ ಪ್ರೀತಿಯಿಂದ ಕರೆಯುತ್ತಾರೆ. 

ಪುಟ್ಟದಾದ ಈ ಹನುಮಂತನ ದೇವಸ್ಥಾನಕ್ಕೊಂದು ಆವರಣ ಇರಬೇಕು ಎಂಬ ಸ್ಥಳೀಯ ಬಹುಕಾಲದ ಅಪೇಕ್ಷೆಯನ್ನು ಅನ್ಸಾರಿ ಇದೀಗ ತಮ್ಮ ಒಡೆತನದ ಭೂಮಿಯ ಬಹುಪಾಲನ್ನು ದಾನವಾಗಿ ನೀಡುವ ಮೂಲಕ ಈಡೇರಿಸಿ ಜನಮನ ಗೆದ್ದಿದ್ದಾರೆ. 

ಶಿವಪುರ ಜಿಲ್ಲೆಯ ಹಲವಾರು ಉನ್ನತ ಅಧಿಕಾರಿಗಳು ಮತ್ತು ಮುಸ್ಲಿಂ ಸಮುದಾಯದ ಹಿರಿಯರು ಅನ್ಸಾರಿಯ ಈ ದಾನ ಕಾರ್ಯವನ್ನು ಬಹುವಾಗಿ ಪ್ರಶಂಸಿಸಿದ್ದಾರೆ. ದೇಶದ ವಿವಿಧೆಡೆ ಕಂಡುಬರುವ ಈ ರೀತಿಯ ಕೋಮು ಸೌಹಾರ್ದ,ಸಾಮರಸ್ಯ ಶಿವಪುರ ಜಿಲ್ಲೆಯಲ್ಲಿ  ಕೂಡ ಮುಸ್ಲಿಂ ಬಾಂಧವರಿಂದ ವ್ಯಕ್ತವಾಗಿರುವುದಕ್ಕೆ ಜನರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. 

Back to Top