CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

8 ವರ್ಷ ಹಿಂದೆ ಮುದ್ದಿನ ನಾಯಿಯನ್ನೇ ವರಿಸಿದ ಅಯರ್ಲಂಡ್‌ ಮಹಿಳೆ

ಲಂಡನ್‌ : ಪುರುಷನೊಂದಿಗೆ ದಾಂಪತ್ಯ ಜೀವನ ನಡೆಸುವ ಎಲ್ಲ ಭರವಸೆಗಳನ್ನು ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ನಾಯಿಯನ್ನೇ ವರಿಸಿ ಅದರೊಂದಿಗಿನ ಎಂಟನೇ ವೈವಾಹಿಕ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಇದೀಗ ಸಜ್ಜಾಗಿದ್ದಾಳೆ. 

ಉತ್ತರ ಅಯರ್ಲಂಡ್‌ನ‌ 43ರ ಹರೆಯದ ವಿಲ್‌ಹೆಲ್‌ಮಿನಾ  ಮಾರ್ಗನ್‌ ಕ್ಯಾಲಘಾನ್‌ ಎಂಬ ಮಹಿಳೆ 2009ರಲ್ಲಿ ಯಾರ್ಕ್‌ಶಯರ್‌ ಟೆರಿಯರ್‌ ಹೆನ್ರಿ ಎಂಬ ತನ್ನ  ಮುದ್ದಿನ ನಾಯಿಯನ್ನು ಮದುವೆಯಾಗಿದ್ದಳು. ತನ್ನ ಬದುಕಿನ ಎಲ್ಲ ಕಷ್ಟ ಕಾರ್ಪಣ್ಯ, ಬಿಕ್ಕಟ್ಟು, ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ತನಗೆ ತನ್ನ ಮುದ್ದಿನ ನಾಯಿ ಅತ್ಯಂತ ನಿಷ್ಠೆ ಮತ್ತು ಪ್ರೀತಿಯಿಂದ ಜತೆ ನೀಡಿದೆ ಎಂದಾಕೆ ತನ್ನ ನಾಯಿಯ ಬಗ್ಗೆ ಮೆಚ್ಚುಗೆ, ಕೃತಜ್ಞತೆಯ ಮಾತುಗಳನ್ನಾಡಿದ್ದಾಳೆ.

ಮುಂದಿನ ತಿಂಗಳ ನವೆಂಬರ್‌ 20ರಂದು ವಿಲ್‌ಹೆಲ್‌ಮಿನಾ  ತನ್ನ ಮುದ್ದಿನ ನಾಯಿಯೊಂದಿಗಿನ ತನ್ನ 8ನೇ ವೈವಾಹಿಕ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದ್ದಾಳೆ. 

ಈ ಗಂಡು ನಾಯಿಯನ್ನು ವಿಲ್‌ಹೆಲ್‌ಮಿನಾ  ತನ್ನ ಸ್ನೇಹಿತರೊಬ್ಬರಿಂದ 2009ರಲ್ಲಿ ದತ್ತು ತೆಗೆದುಕೊಂಡಿದ್ದಳು. ಜನರು ತಮ್ಮ ಮುದ್ದಿನ ನಾಯಿಗಳನ್ನೇ ಮದುವೆಯಾಗುತ್ತಾರೆ ಎಂಬ ವಿಚಾರವನ್ನು ಆನ್‌ಲೈನ್‌ನಲ್ಲಿ ಅರಿತುಕೊಂಡ ಆಕೆ, ತನ್ನ ಈ ಮುದ್ದಿನ ನಾಯಿಯ ವಧುವಾಗಲು ನಿರ್ಧರಿಸಿದಳು. 

"ನನಗೆ ಮತ್ತು ಹೆನ್ರಿಗೆ (ಮುದ್ದಿನ ನಾಯಿ) ಈ ಎಂಟು ವರ್ಷಗಳ ವೈವಾಹಿಕ ಬದುಕಿನಲ್ಲಿ ಯಾವ ಸಂದರ್ಭದಲ್ಲೂ ಭಿನ್ನಾಭಿಪ್ರಾಯ ಉಂಟಾದದ್ದೇ ಇಲ್ಲ. ಆತ ನನ್ನ ರಾಜ; ನನ್ನನ್ನು ಜೀವನದ ಕಷ್ಟಕಾಲದಲ್ಲಿ ಉಳಿಸಿದ್ದೇ ಆತ' ಎಂದು ವಿಲ್‌ಹೆಲ್‌ಮಿನಾ  ಸಂತಸದಿಂದ ಹೇಳುತ್ತಾಳೆ.  

ಅಂದ ಹಾಗೆ ವಿಲ್‌ಹೆಲ್‌ಮಿನಾ  ತನ್ನ ಮುದ್ದಿನ ನಾಯಿಗಾಗಿಯೇ "ಸೆಲಿಯಾ ಹ್ಯಾಮ್‌' ಎಂಬ ಹೆಸರಿನಲ್ಲಿ ಫೇಸ್‌ ಬುಕ್‌ ಪೇಜನ್ನು ಮುಡಿಪಾಗಿಟ್ಟಿದ್ದಾಳೆ. ಇನ್ನೂ 10 ನಾಯಿಗಳನ್ನು ವಿವಿಧೆಡೆಯಿಂದ ತರಿಸಿಕೊಂಡಿರುವ ಆಕೆ ಅವೆಲ್ಲವುಗಳ ಜತೆಗೆ ತನ್ನ ಮನೆಯಲ್ಲಿ ಆನಂದದಿಂದ ಇದ್ದಾಳೆ.

Back to Top