Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಡನ್‌ನಲ್ಲಿ  ಘರ್ಜಿಸಬಹುದೇ ಲಯನ್‌

ಕೋಲ್ಕತಾ: ಹ್ಯಾಟ್ರಿಕ್‌ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ತಂಡವು ಜಯಕ್ಕಾಗಿ ಒದ್ದಾಟ ನಡೆಸುತ್ತಿರುವ ಗುಜರಾತ್‌ ತಂಡವನ್ನು ಐಪಿಎಲ್‌ 10ರ ಶುಕ್ರವಾರದ ಏಕೈಕ ಪಂದ್ಯದಲ್ಲಿ ಎದುರಿಸಲಿದೆ. ಈ ಐಪಿಎಲ್‌ನ ಅಗ್ರ ಮತ್ತು ಕೊನೆಯ ಸ್ಥಾನ ಪಡೆದ ತಂಡಗಳ ನಡುವಣ ಈ ಮುಖಾಮುಖೀಯಲ್ಲಿ ಕೆಕೆಆರ್‌ ತನ್ನ ಗೆಲುವಿನ ಅಭಿಯಾನ ಮುಂದುವರಿಸುವ ಉತ್ಸಾಹದಲ್ಲಿದೆ.

ಆಡಿದ ಐದು ಪಂದ್ಯಗಳಲ್ಲಿ ತವರಿನಲ್ಲಿ ಎರಡು ಮತ್ತು ತವರಿನ ಹೊರಗೆ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಒಟ್ಟಾರೆ ಎಂಟಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್‌ ತಂಡವು ಗೆಲುವಿಗಾಗಿ ಹೋರಾಡಲಿದೆ. ಇದೇ ವೇಳೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿರುವ ಗುಜರಾತ್‌ ಕ್ರಿಕೆಟ್‌ನ ಪ್ರತಿಯೊಂದು ವಿಭಾಗದಲ್ಲಿಯೂ ವೈಫ‌ಲ್ಯ ಅನುಭವಿಸುತ್ತಿದೆ/ ಕಳೆದ ಋತುವಿನಲ್ಲಿ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಗುಜರಾತ್‌ ಈ ಬಾರಿ ತನ್ನ ಫಾರ್ಮ್, ಹೋರಾಟದ ಛಲ ಪ್ರದರ್ಶಿಸಲು ವಿಫ‌ಲವಾಗುತ್ತಿದೆ. 

ಇಷ್ಟರವರೆಗಿನ ಪಂದ್ಯದಲ್ಲಿ ಕೆಕೆಆರ್‌ ಪರ ವೈಯಕ್ತಿಕ ಹೀರೋ ಆಗಿ ಯಾರೂ ಕಾಣಿಸಿಕೊಂಡಿಲ್ಲ. ಪ್ರತಿಯೊಬ್ಬ ಆಟಗಾರನಿಗೆ ಬೇರೆ ಆಟಗಾರ ಉತ್ತಮ ಬೆಂಬಲ ನೀಡಿದ್ದಾರೆ. ಇದರಿಂದಾಗಿ ಯಾವುದೇ ಅಡೆತಡೆಗಳನ್ನು ಮೀರಿಸಿ ಮುನ್ನಡೆಯಲು ಸಾಧ್ಯವಾಗಿದೆಯಲ್ಲದೇ ಗೆಲುವಿನ ಅಭಿಯಾನ ನಿರಂತರವಾಗಿ ಸಾಗಲು ಪ್ರಮುಖ ಪಾತ್ರ ವಹಿಸಿದೆ.

ಆದರೆ ಸುರೇಶ್‌ ರೈನಾ ನೇತೃತ್ವದ ಗುಜರಾತ್‌ ಲಯನ್ಸ್‌ ಆರಂಭದಿಂದಲೇ ಎಡವಿದೆ. ತಂಡದ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಪರಿಣಾಮಕಾರಿಯಾಗಿಲ್ಲ. ಸ್ಪಿನ್ನರ್‌ಗಳ ನಿರ್ವಹಣೆ ಅತ್ಯಂತ ಕಳಪೆಮಟ್ಟದಲ್ಲಿತ್ತು. 

ಗಾಯಗೊಂಡ ಕ್ರಿಸ್‌ ಲಿನ್‌ ಅನುಪಸ್ಥಿತಿಯಲ್ಲಿ ಕೆಕೆಆರ್‌ ಉತ್ತಮ ಆರಂಭಿಕ ಜೋಡಿಯ ಆಯ್ಕೆ ಮಾಡಲು ಒದ್ದಾಡುತ್ತಿದೆ. ಡೆಲ್ಲಿ ವಿರುದ್ಧ 170 ರನ್‌ ಗೆಲುವಿನ ಗುರಿ ವೇಳೆ ತಂಡ ಆರಂಭದಲ್ಲಿಯೇ ಕುಸಿತ ಕಂಡು ಆಘಾತಕ್ಕೆ ಒಳಗಾಗಿತ್ತು. ಮೂರು ಓವರ್‌ಗಳ ಒಳಗಡೆ 21 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಉಳಿದ ಯಾವುದೇ ತಂಡವಾದರೂ ಇಂತಹ ಒತ್ತಡಕ್ಕೆ ಸಿಲುಕಿದಾಗ ಕುಸಿಯಬಹುದು. ಆದರೆ ಕೆಕೆಆರ್‌ ದಿಟ್ಟ ಪ್ರದರ್ಶನ ನೀಡಿ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮನೀಷ್‌ ಪಾಂಡೆ ಮತ್ತು ಯೂಸುಫ್ ಪಠಾಣ್‌ ನಾಲ್ಕನೇ ವಿಕೆಟಿಗೆ 110 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಸಾರಿದ್ದರು.

 ಮನೀಷ್‌ ಪಾಂಡೆ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಡೆಲ್ಲಿ ವಿರುದ್ಧ ಅವು 47 ಎಸೆತಗಳಿಂದ 69 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದು ಅವರ ಈ ಐಪಿಎಲ್‌ನ ಎರಡನೇ ಅರ್ಧಶತಕವಾಗಿದೆ. ಸಿಕ್ಸರ್‌ ಬಾರಿಸುವ ಮೂಲಕ ತಂಡ ಗೆಲುವು ಸಾರಿದ್ದರು.

ಮೂರು ದಿನಗಳ ವಿಶ್ರಾಂತಿ ಬಳಿಕ ಕೆಕೆಆರ್‌ ತಂಡವು ತವರಿನ ಪಂದ್ಯದಲ್ಲಿ ಜಯಕ್ಕಾಗಿ ಹಾತೊರೆಯುತ್ತಿದೆ. ಮುಂದಿನ ಮೂರು ದಿನಗಳಲ್ಲಿ  ಈಡನ್‌ ಪಿಚ್‌ನಲ್ಲಿ ಎರಡು ಪಂದ್ಯಗಳನ್ನಾಡಿಲಿದೆ. ಇದರಲ್ಲಿ ರವಿವಾರ ನಡೆಯುವ ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ ವಿರುದ್ಧದ ಪಂದ್ಯ ಸೇರಿದೆ.

ಆಟಗಾರರೆಲ್ಲರೂ ಉತ್ತಮ ಫಾರ್ಮ್ನಲ್ಲಿರುವ ಕಾರಣ ಕೆಕೆಆರ್‌ ಸತತ ಗೆಲುವು ದಾಖಲಿಸುತ್ತಿದೆ. ಹಾಗಾಗಿ ತಂಡದಲ್ಲಿ ಬದಲಾವಣೆ ಮಾಡಲು ವ್ಯವಸ್ಥಾಪಕರು ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ. ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಇನ್ನೂ ಯಾವುದೇ ಪಂದ್ಯ ಆಡಿಲ್ಲ. ಆಂಡ್ರೆ ರಸೆಲ್‌ ಬದಲಿಗೆ ಆಯ್ಕೆಯಾಗಿದ್ದ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಉತ್ತಮ ಪ್ರದರ್ಶನ ನೀಡಲು ವಿಫ‌ಲ ರಾಗಿದ್ದರಿಂದ ವಿದೇಶಿ ಆಟಗಾರರಾಗಿ ಶಕಿಬ್‌ ಅವರನ್ನು ಆಡಿಸುವ ಕುರಿತು ನಾಯಕ ಗೌತಮ್‌ ಗಂಭೀರ್‌ ಚಿಂತಿಸುವ ಸಾಧ್ಯತೆಯಿದೆ. ಆರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಬ್ಯಾಟಿಂಗ್‌ ವೈಫ‌ಲ್ಯ ಕೂಡ ಕೆಕೆಆರ್‌ಗೆ ಚಿಂತೆಯಾಗಿದೆ. 


More News of your Interest

Trending videos

Back to Top