ಹುಬ್ಬಳ್ಳಿ ಬಳಿ ಹಳಿ ತಪ್ಪಿದ ಸರಕು- ಸಾಗಣೆ ರೈಲು
Team Udayavani, Jan 19, 2017, 3:50 AM IST
ಹುಬ್ಬಳ್ಳಿ: ಅಕ್ಕಿ ಚೀಲಗಳನ್ನು ಹೊತ್ತೂಯ್ಯುತ್ತಿದ್ದ ಸರಕು ಸಾಗಣೆ ರೈಲಿನ ಬೋಗಿಗಳು ಹಳಿತಪ್ಪಿದ ಘಟನೆ ಮಂಟೂರ ರಸ್ತೆಯ ಸುಣ್ಣದ ಬಟ್ಟಿ ಸಮೀಪದ ಎಫ್ಸಿಐ ಗೋದಾಮು ಬಳಿ ಸಂಭವಿಸಿದೆ.
ಒಟ್ಟು 52 ಬೋಗಿಗಳನ್ನು ಹೊಂದಿದ್ದ ಸರಕು ಸಾಗಣೆ ರೈಲು ಅಕ್ಕಿ ಚೀಲಗಳನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಹರಿಯಾಣದ ಭಟ್ಟು ಮಂಡಿಗೆ ಆಗಮಿಸುತ್ತಿತ್ತು. ಬೆಳಗಿನ ಜಾವ 3.30ರ ಸುಮಾರಿಗೆ ನಗರದ ಎಫ್ಸಿಐ ಗೋದಾಮು ಬಳಿ ರೈಲಿನ 7ಬೋಗಿಗಳು ಹಳಿ ತಪ್ಪಿವೆ. 7 ಬೋಗಿಗಳ ಚಕ್ರಗಳು ಬಿರುಕು ಕಾಣಿಸಿಕೊಂಡು ಹಳಿ ತಪ್ಪಿವೆ. ಸ್ಥಳಕ್ಕೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ರೈಲಿನ ಬೋಗಿಗಳನ್ನು ಹಳಿಗೆ ಏರಿಸಿದ ನಂತರ ಮಧ್ಯಾಹ್ನ 12:30ರ ಸುಮಾರಿಗೆ ರೈಲು ಮತ್ತೆ ಗೋದಾಮಿನತ್ತ ಸಂಚರಿಸಿತು.