Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಣತಂತ್ರ ಬದಲಿಸಿದ 'ಪಂಚ ಫ‌ಲಿತಾಂಶ'

ಬೆಂಗಳೂರು: ಪಂಚರಾಜ್ಯ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶ ಚುನಾವಣಾ ಫ‌ಲಿತಾಂಶದ ನಂತರ ರಾಜ್ಯದಲ್ಲಿ ಜೆಡಿಎಸ್‌ ಚುನಾವಣಾ ರಣತಂತ್ರ ಬದಲಾಯಿಸಿಕೊಳ್ಳಲು ಮುಂದಾಗಿದ್ದು 'ನಾಲ್ಕು ಸೂತ್ರ'ಕ್ಕೆ ಶರಣಾಗಿದೆ. ಒಂದು ವರ್ಷ ನಿರಂತರ ಸಮಾವೇಶ, ಜನಸಂಪರ್ಕ ಸಭೆ ಮತ್ತು ಗ್ರಾಮವಾಸ್ತವ್ಯ, ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆ, ಸ್ಥಳೀಯ ಸಮಸ್ಯೆ ಹಾಗೂ ಯುವ ನಾಯಕತ್ವಕ್ಕೆ ಆದ್ಯತೆ. ಈ ನಾಲ್ಕು ಸೂತ್ರದ ಆಧಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದ್ದು. ಇದಕ್ಕಾಗಿಯೇ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯರನ್ನೂ ಒಳಗೊಂಡ ನಾನಾ ಕ್ಷೇತ್ರದ ಯುವ ತಜ್ಞರ 'ಥಿಂಕ್‌ ಟ್ಯಾಂಕ್‌' ತಂಡವೂ ರಚನೆಯಾಗಿದೆ.

ಈ ತಂಡ ಈಗಾಗಲೇ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ ಸ್ಥಳೀಯ ಸಮಸ್ಯೆ, ವರ್ಚಸ್ವಿ ಹಾಗೂ ಪ್ರಭಾವಿ ಯುವ ನಾಯಕತ್ವ, ಗ್ರಾಮವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಬಹುದಾದ ಪ್ರದೇಶಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿದೆ. ಜನತೆ ಜತೆ ನಿರಂತರವಾಗಿ ಸಂಪರ್ಕ ಸಾಧಿಸುವ 'ನಮ್ಮ ಎಚ್‌ಡಿಕೆ' ಸಾಮಾಜಿಕ ಜಾಲತಾಣ ಹಾಗೂ ಬೆಂಗಳೂರಿನಲ್ಲಿ ಓಲಾ -ಉಬರ್‌ ಮಾದರಿಯಲ್ಲೇ ಟ್ಯಾಕ್ಸಿ ಚಾಲಕರಿಗಾಗಿ ಸಿದ್ಧಗೊಳ್ಳುತ್ತಿರುವ 'ಎಚ್‌ಡಿಕೆ ಆ್ಯಪ್‌' ಹಿಂದಿರುವುದು ಇದೇ 'ಥಿಂಕ್‌ ಟ್ಯಾಂಕ್‌' ಟೀಂ. ಜೆಡಿಎಸ್‌, ಮುಂದಿನ ಮೂರು ವರ್ಷದ ಯೋಜನೆ ಸಿದ್ಧಪಡಿಸಿದ್ದು 2018ರ ವಿಧಾನಸಭೆ, 2019ರ ಲೋಕಸಭೆ ಹಾಗೂ 2020ರಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ರಣತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮವಾಸ್ತವ್ಯ, ಹಳೇ ಮೈಸೂರು ಭಾಗದಲ್ಲಿ ಜನಸಂಪರ್ಕ ಸಭೆ, ಉಳಿದ ಕಡೆ ಸಮಾವೇಶಗಳ ಮೂಲಕ ಪಕ್ಷದ ವರ್ಚಸ್ಸು ವೃದ್ಧಿಸುವುದು. ಸ್ಥಳೀಯವಾಗಿ ಪ್ರಭಾವ ಇರುವ ಯುವಸಮೂಹವನ್ನು ಪಕ್ಷದತ್ತ ಸೆಳೆಯಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಭಾವಿ ಮಾಧ್ಯಮವಾದ ಸಾಮಾಜಿಕ ಜಾಲತಾಣದ ಮೂಲಕ ನಿರಂತರವಾಗಿ ಜನಸಮೂಹದ ಜತೆ ಸಂಪರ್ಕ ಸಾಧಿಸಲು ಹಾಗೂ ಜಿಲ್ಲಾ ಮತ್ತು ವಿಭಾಗಾವಾರು ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಡುವ ಸಲುವಾಗಿಯೇ 30 ಯುವಕರ ತಂಡ ರಚಿಸಲಾಗಿದೆ ಎಂದು ಹೇಳಲಾಗಿದೆ.

'ಶ್ರಮಜೀವಿ' ಸಮಾವೇಶ: ಒಂದು ವರ್ಷ ನಿರಂತರ ಸಮಾವೇಶ ನಡೆಸಲು ತೀರ್ಮಾನಿಸಿರುವ ಜೆಡಿಎಸ್‌, ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬವಾದ ಮೇ 18ರಂದು 'ಶ್ರಮಜೀವಿ' ಹೆಸರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಿದೆ. ಆ ಸಮಾವೇಶಕ್ಕೆ ಜನತಾಪರಿವಾರದ ಎಲ್ಲ ನಾಯಕರಿಗೂ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾದೇಶಿಕ ಪಕ್ಷ ಅಗತ್ಯವೆಂಬ ಪ್ರತಿಪಾದನೆ ಜತೆಗೆ ಅದೇ ಕಾರಣಕ್ಕೆ ಈ ವಯಸ್ಸಿನಲ್ಲಿಯೂ ದೇಶ ಹಾಗೂ ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ದೇವೇಗೌಡರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ಬಿಂಬಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ನಿರಂತರ ಸಮಾವೇಶಗಳಿಗೆ ಮಾ.23 ರಂದು ಚಾಲನೆ ನೀಡಿ, ಆ ನಂತರ ಚಿತ್ರದುರ್ಗ, ಹುಬ್ಬಳ್ಳಿ, ಮೈಸೂರು, ಕಲಬುರಗಿ, ಬಳ್ಳಾರಿ ಭಾಗದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ಸಮಾವೇಶ ನಡೆಸಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಲನೆಯಾಗದ ಎಚ್‌ಡಿಕೆ ಹತ್ತು ದಿನ ಹುಬ್ಬಳ್ಳಿ ವಾಸ್ತವ್ಯ
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಿಂಗಳಲ್ಲಿ ಹತ್ತು ದಿನ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡುತ್ತೇನೆಂದು ಹೇಳಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಅಲ್ಲಿ ಮನೆ ಮಾಡಿ ಗೃಹಪ್ರವೇಶ ಮಾಡಿದರೂ ತಿಂಗಳಲ್ಲಿ ಹತ್ತು ದಿನ ವಾಸ್ತವ್ಯ ಮಾಡುತ್ತಿಲ್ಲ. ಪ್ರಾರಂಭದಲ್ಲಿ ಕೆಲ ದಿನ, ಆ ನಂತರ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಇದ್ದದ್ದು, ಇತ್ತೀಚೆಗೆ ಪ್ರವಾಸ ಕೈಗೊಂಡಾಗ ಹೋಗಿ ಬಂದದ್ದು ಬಿಟ್ಟರೆ ಹುಬ್ಬಳ್ಳಿ ಮನೆ 'ಖಾಲಿ'ಯಾಗಿಯೇ ಇರುತ್ತದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅನಾರೋಗ್ಯ, ವಿಧಾನಸಭೆ ಅಧಿವೇಶದಿಂದಾಗಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲು ಸಾಧ್ಯವಾಗುತ್ತಿಲ್ಲ. ಏ.1 ರ ನಂತರ 15 ದಿನ ಹುಬ್ಬಳ್ಳಿಯಲ್ಲೇ ಕುಮಾರಸ್ವಾಮಿ ಇರಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸುತ್ತವೆ.

- ಎಸ್‌.ಲಕ್ಷ್ಮಿನಾರಾಯಣ


More News of your Interest

Trending videos

Back to Top