ಕೆಪಿಎಸ್ಸಿ: ಪರೀಕ್ಷೆ ವೇಳಾಪಟ್ಟಿ ಪ್ರಕಟ
Team Udayavani, Oct 23, 2017, 6:55 AM IST
ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಯ 428 ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ವೇಳಾಪಟ್ಟಿಯಂತೆ ಡಿ.16ರಂದು ಬೆಳಗ್ಗೆ 10ರಿಂದ 12ರವರೆಗೆ ಕಡ್ಡಾಯ ಪತ್ರಿಕೆ (ಕನ್ನಡ) ಮತ್ತು ಮಧ್ಯಾಹ್ನ 2ರಿಂದ 4ರವರೆಗೆ ಕಡ್ಡಾಯ ಪತ್ರಿಕೆ (ಇಂಗ್ಲಿಷ್) ಪರೀಕ್ಷೆ ನಡೆಯಲಿದೆ. ಡಿ.17ರಂದು ಬೆಳಗ್ಗೆ 10ರಿಂದ 1ರವರೆಗೆ ಪತ್ರಿಕೆ-1 (ಪ್ರಬಂಧ). ಅ.19ರಂದು ಬೆಳಗ್ಗೆ 10ರಿಂದ 1ರವರೆಗೆ ಪತ್ರಿಕೆ-2 (ಸಾಮಾನ್ಯ ಅಧ್ಯಯನ-1),
ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪತ್ರಿಕೆ-3 (ಸಾಮಾನ್ಯ ಅಧ್ಯಯನ-2). ಡಿ.21ರಂದು ಬೆಳಿಗ್ಗೆ 10ರಿಂದ 1ರವರೆಗೆ ಪತ್ರಿಕೆ-4 (ಸಾಮಾನ್ಯ ಅಧ್ಯಯನ-3), ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪತ್ರಿಕೆ-5 (ಸಾಮಾನ್ಯ ಅಧ್ಯಯನ-4). ಡಿ.23ರಂದು ಬೆಳಗ್ಗೆ 10ರಿಂದ 1ರವರೆಗೆ ಪತ್ರಿಕೆ- (ಐಚ್ಛಿಕ ವಿಷಯ ಪತ್ರಿಕೆ-1), ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪತ್ರಿಕೆ-7 (ಐಚ್ಛಿಕ ವಿಷಯ ಪತ್ರಿಕೆ-2) ಪರೀಕ್ಷೆಗಳು ನಡೆಯಲಿವೆ. ವಿವಿಧ ಇಲಾಖೆಗಳ ಒಟ್ಟು 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಆಗಸ್ಟ್ 20ರಂದು
ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಅರ್ಜಿ ಸಲ್ಲಿಸಿದ್ದ 2.31 ಲಕ್ಷ ಅಭ್ಯರ್ಥಿಗಳ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ
ಹಾಜರಾಗಿದ್ದರು.ಸೆ.19ರಂದು ಫಲಿತಾಂಶ ಪ್ರಕಟವಾಗಿತ್ತು. 1:20 ಅನುಪಾತದಲ್ಲಿ 8,327 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ನವೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ಈ ಹಿಂದೆ ಕೆಪಿಎಸ್ಸಿ ಹೇಳಿತ್ತು. ಆದರೆ, ಈಗ ಡಿಸೆಂಬರ್ 13ರಿಂದ ಅಂತಿಮ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.