Updated at Sun,25th Jun, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕನ್ನಡದಲ್ಲೀಗ ಸುವರ್ಣ ಯುಗ: ಅರ್ಜುನ ರಾಗ

ನೋಡ ನೋಡುತ್ತಲೇ ಅರ್ಜುನ್‌ ಜನ್ಯ ಬರೋಬ್ಬರಿ 70 ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಈ ವಾರ ಬಿಡುಗಡೆಯಾಗುತ್ತಿರುವ "ರಾಗ' ಚಿತ್ರವು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ 70ನೇ  ಸೆಂಚುರಿಗೆ ಇನ್ನು 30 ಸಿನಿಮಾ ಮಾತ್ರ ಬಾಕಿ. ಈ ವರ್ಷ ಏನಿಲ್ಲವೆಂದರೂ ಹದಿನೈದು ಚಿತ್ರಗಳು ಸೆಟ್ಟೇರಲಿವೆ. ಮುಂದಿನ ಒಂದೆರೆಡು ವರ್ಷಗಳಲ್ಲಿ ಸೆಂಚುರಿ ಬಾರಿಸುವುದು ಗ್ಯಾರಂಟಿ.

ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಿನಿಮಾಗಳನ್ನು ಮಾಡೋದು ಕಷ್ಟ ಎಂದನಿಸಬಹುದು. ಆದರೆ, ಅರ್ಜುನ್‌ಗೆ ಅದೆಂದೂ ಕಷ್ಟ ಎಂದನಿಸಿಲ್ಲವಂತೆ. "ಇಷ್ಟ ಇರುವ ಮತ್ತು ಪ್ರೀತಿ ಇರುವವರ ಜತೆ ಕೆಲಸ ಮಾಡಬೇಕಾದರೆ, ಯಾವುದೂ ಕಷ್ಟ ಆಗಲ್ಲ. ಕಷ್ಟ ಅನಿಸೋದು ಬೇರೆ ರೀತಿಯ ಜನರ ಜತೆ ಕೆಲಸ ಮಾಡುವಾಗ. ಕಳೆದ ವರ್ಷ ಹದಿನೈದು ಸಿನಿಮಾ ಮಾಡಿದ್ದೇನೆ. ನಿಜವಾಗಿಯೂ ಅದು ನನಗೇ ಗೊತ್ತಿಲ್ಲ. ಅದೆಲ್ಲಾ ಸಾಧ್ಯವಾಗಿದ್ದು, ಅರ್ಜುನ್‌ ಜನ್ಯ ಒಬ್ಬನಿಂದ ಅಲ್ಲ. ನನ್ನ ಜತೆ ರಾತ್ರಿ, ಹಗಲು ಕೆಲಸ ಮಾಡಿದ ಸಂಗೀತಗಾರರು, ಬೆಂಗಳೂರು ಮತ್ತು ಚೆನ್ನೈನಲ್ಲಿರುವ ನನ್ನ ಮ್ಯೂಸಿಷಿಯನ್ಸ್‌ ಕೊಟ್ಟ ಸಹಕಾರ, ಪ್ರೋತ್ಸಾಹದಿಂದ ಎಷ್ಟೇ ಒತ್ತಡವಿದ್ದರೂ ಎಲ್ಲವನ್ನೂ ನಿಭಾಯಿಸಿದ್ದೇನೆ. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ರಿಯಾಲಿಟಿ ಶೋ ಇವೆಲ್ಲ ಸರಿಯಾಗಿ ನಿರ್ವಹಿಸಲು ಒಳ್ಳೇ ಟೀಮ್‌ ಜತೆಗಿರಬೇಕು. ನನ್ನ ಜತೆ ಆ ತಂಡವಿದೆ. ಹಾಗಾಗಿ ಸಲೀಸಾಗಿಯೇ ಎಲ್ಲವೂ ನಡೆಯುತ್ತಿದೆ' ಎನ್ನುತ್ತಾರೆ ಅರ್ಜುನ್‌.

ಅರ್ಜುನ್‌ ಸುಲಭವಾಗಿ ಕೆಲಸ ಮಾಡುವುದರ ಜೊತೆಗೆ ಇಷ್ಟೊಂದು ಚಿತ್ರಗಳಿಗೆ ಸಂಗೀತ ನೀಡುವುದಕ್ಕೆ ಸಾಧ್ಯವಾಗಿರುವುದಕ್ಕೆ ಅವರ ಸರಳತೆಯೇ ಕಾರಣ ಎಂಬ ಮಾತು ಅವರನ್ನು ಹತ್ತಿರದಿಂದ ನೋಡಿದವರು ಹೇಳುತ್ತಾರೆ. "ಚಿಕ್ಕ ವಯಸ್ಸಿನಿಂದಲೂ ನಾನು ಸಾಕಷ್ಟು ಸಮಸ್ಯೆ ನೋಡಿಕೊಂಡೇ ಬಂದಿದ್ದೇನೆ. ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ನನಗೆ ಅರ್ಥ ಆಗಿದ್ದೇನೆಂದರೆ, ಲೈಫ‌ಲ್ಲಿ ಖುಷಿಯಾಗಲಿ ದುಃಖವಾಗಲಿ ಈ ಎರಡೂ ಶಾಶ್ವತ ಅಲ್ಲ. ತುಂಬ ಖುಷಿ ಪಟ್ಟಾಗ ಸಹಜವಾಗಿಯೇ ಒಳಗಡೆ ಅಹಂಕಾರ ಬರುತ್ತೆ. ಆದರೆ, ಅದು ಶಾಶ್ವತ ಅಲ್ವಲ್ಲ ಗುರು ಅಂತ ಗೊತ್ತಾಗಿ ಹೋಗುತ್ತೆ. ದುಃಖ ಬಂದಾಗಲೂ ಬೇಸರದಿಂದ ಯಾರನ್ನಾದರೂ ಬೈಯಬೇಕು, ಹೀಯಾಳಿಸಬೇಕು ಅನಿಸುತ್ತೆ. ಅದೂ ಶಾಶ್ವತವಲ್ಲ ಅಂತ ಎನಿಸಿದಾಗ ಸಹಜಸ್ಥಿತಿಗೆ ಬರುತ್ತಾರೆ. ನಾನು ಭಗವದ್ಗೀತೆ ಓದಿಲ್ಲ. ಆದರೆ, ಅದನ್ನು ಓದದೆಯೇ ಒಳ್ಳೇದು ಕೆಟ್ಟದ್ದನ್ನು ಗೊತ್ತಿಲ್ಲದೇ ಅರಿವು ಮಾಡಿಕೊಂಡು ಬಂದಿದ್ದೇನೆ. ಮುಖ್ಯವಾಗಿ ನಾನು ತುಂಬಾ ಫಾಲೋ ಮಾಡಿದ್ದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ಜೀವನ ಶೈಲಿಯನ್ನ. ಅವರ ಒಳ್ಳೆಯ ಮಾತುಗಳನ್ನ ಆಲಿಸಿಕೊಂಡು ಬಂದಿದ್ದೇನೆ. ಬಹುಶಃ ಅದೇ ನನ್ನ ಸಿಂಪ್ಲಿಸಿಟಿಗೆ ಕಾರಣವಿರಬೇಕು' ಎನ್ನುತ್ತಾರೆ ಅರ್ಜುನ್‌ ಜನ್ಯ.

ಅರ್ಜುನ್‌ ಯಶಸ್ಸಿಗೆ ಕಾರಣವೇನೆಂದರೆ, ಒಂದೇ ತರಹದ ಸಂಗೀತಕ್ಕೆ ಅಂಟಿಕೊಳ್ಳದೆಯೇ ಎಲ್ಲಾ ತರಹದ ಪ್ರಯತ್ನಗಳನ್ನೂ ಮಾಡುವುದಂತೆ. "ಕನ್ನಡದಲ್ಲಿ ನನ್ನ ಜರ್ನಿ ಶುರುವಾಗಿ 11 ವರ್ಷಗಳಾಗಿವೆ. ಎಲ್ಲಾ ತರಹದ ಸಂಗೀತದ ಟ್ರೆಂಡ್‌ ಅನ್ನೂ ಗಮನಿಸಿದ್ದೇನೆ. ನಾನು ಬರುವಾಗ ಗುರುಕಿರಣ್‌ ಅವರು "ಜೋಗಿ' ಮೂಲಕ ಅದ್ಭುತ ಹಾಡುಗಳನ್ನು ಕೊಟ್ಟಿದ್ದರು. ಆಮೇಲೆ  "ಮುಂಗಾರು ಮಳೆ' ಮೂಲಕ ಮನೋಮೂರ್ತಿ ಅದ್ಭುತ ಮೆಲೋಡಿ ಕೊಟ್ಟರು. ಆ ಟ್ರೆಂಡ್‌ ಕೂಡ ನೋಡಿದೆ. ಅದಾದ ಮೇಲೆ ಹರಿಕೃಷ್ಣ ಅವರು ಟಪ್ಪಾಂಗುಚ್ಚಿ ಟ್ರೆಂಡ್‌ಗೆ ಮುನ್ನುಡಿ ಬರೆದರು. ಅದರ ಜತೆಯಲ್ಲೆ ನಾನೂ ಬಂದೆ. ಈಗೀಗ ಹೊಸಬರೂ ಸಹ ತಿರುಗಿ ನೋಡುವಂತಹ ಸಂಗೀತ ಕೊಡುತ್ತಿದ್ದಾರೆ. ಚರಣ್‌ರಾಜ್‌ರಂತಹ ಯುವ ಸಂಗೀತ ನಿರ್ದೇಶಕರು ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಹಾಗೆ ಹೇಳುವುದಾದರೆ, ಕನ್ನಡದಲ್ಲೀಗ ಸುವರ್ಣ ಯುಗ. ನಾನಂತೂ ಎಂಜಾಯ್‌ ಮಾಡುತ್ತಿದ್ದೇನೆ. ಒಂದೇ ರೀತಿಯ ಸಂಗೀತಕ್ಕೆ ಅಂಟಿಕೊಳ್ಳುವುದಕ್ಕಿಂತ ಬೇರೆ ಏನಾದರೊಂದು ಪ್ರಯೋಗ ಮಾಡಬೇಕು, ಅದು ಈಗ ಆಗುತ್ತಿದೆ' ಎನ್ನುತ್ತಾರೆ ಅರ್ಜುನ್‌.


More News of your Interest

Back to Top