Updated at Wed,28th Jun, 2017 3:35PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡಾ.ರಾಜ್‌ ಸುಪ್ರಭಾತ ಆಡಿಯೋ ಬಿಡುಗಡೆ

ಡಾ.ರಾಜ್‌ಕುಮಾರ್‌ ಕುರಿತು ಅತಿ ಹೆಚ್ಚು ಪುಸ್ತಕಗಳು ಹೊರ ಬಂದಿವೆ. ಸಾಕಷ್ಟು ಆಡಿಯೋ, ವೀಡಿಯೋ ಸಿಡಿಗಳು ಹೊರಬಂದಿವೆ. ಇದು ನಿಜಕ್ಕೂ ದಾಖಲೆಯೇ ಸರಿ. ಈಗ ಮತ್ತೂಂದು ದಾಖಲೆಯೂ ಸೇರ್ಪಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಮೇರು ಕಲಾವಿದ ಡಾ.ರಾಜ್‌ಕುಮಾರ್‌ ಕುರಿತು "ಸುಪ್ರಭಾತ' ಹೊರ ಬಂದಿರುವುದು ವಿಶೇಷತೆಗಳಲ್ಲೊಂದು. ಹೌದು, ಇತ್ತೀಚೆಗೆ "ಡಾ.ರಾಜ್‌ಕುಮಾರ್‌ ಸುಪ್ರಭಾತ' ಹೆಸರಿನ ಆಡಿಯೋ ಸಿಡಿಯೊಂದನ್ನು ಹೊರತರಲಾಯಿತು. ಡಾ.ರಾಜ್‌ಕುಮಾರ್‌ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹೊರತಂದ ಸುಪ್ರಭಾತ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಕೊಳದಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಮುಖ್ಯ ಆಕರ್ಷಣೆಯಾಗಿದ್ದರು.

"ಒಬ್ಬ ಕನ್ನಡದ ಕಲಾವಿದನ ಕುರಿತು ಸುಪ್ರಭಾತ ಹೊರಬಂದಿರುವುದು ಬಹುಶಃ ಗಿನ್ನಿಸ್‌ ದಾಖಲೆ ಎನ್ನಬಹುದು' ಎಂದು ಅಭಿಪ್ರಾಯಪಟ್ಟಿದ್ದು ಹಿರಿಯ ನಿರ್ಮಾಪಕ ಕೆಸಿಎನ್‌ ಚಂದ್ರಶೇಖರ್‌. ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, "ಡಾ.ರಾಜ್‌ಕುಮಾರ್‌ ಅಪರೂಪದ ವ್ಯಕ್ತಿಯಾಗಿದ್ದರು. ಚಿತ್ರೋದ್ಯಮದಲ್ಲಿ ಮಹಾನ್‌ ತಪಸ್ವಿಯಾಗಿದ್ದ ಅವರು ಮಗುವಿನಂತಹ ಮನಸ್ಸುಳ್ಳವರು. ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದರಿಂದಲೇ ಅವರು ಆ ಮಟ್ಟಕ್ಕೆ ಏರಿದರು. ಕನ್ನಡ ಚಿತ್ರರಂಗದಲ್ಲಿರುವ ಪ್ರತಿಯೊಬ್ಬರೂ ಡಾ.ರಾಜ್‌ಕುಮಾರ್‌ ಅವರ ಆದರ್ಶಗಳನ್ನು ಮೈಗೂಡಿಸಿಕೊಮಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು' ಅಂದರು.

ಹಿರಿಯ ಗೀತ ಸಾಹಿತಿ ಸಿ.ವಿ.ಶಿವಶಂಕರ್‌ ಮಾತನಾಡಿ, "ಡಾ.ರಾಜ್‌ಕುಮಾರ್‌ ಅವರು ಅಪ್ಪಟ ಶುದ್ದ ಕನ್ನಡವನ್ನು ವ್ಯಾಕರಣ ಬದ್ದವಾಗಿ ಮಾತನಾಡುತ್ತಿದ್ದರು. ಅವರು ಇರುವಷ್ಟು ಕಾಲ ದೇವ ಮಾನವರಾಗಿದ್ದರು' ಎಂದು ಗುಣಗಾನ ಮಾಡಿದರು.

ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರು, "ಡಾ.ರಾಜ್‌ಕುಮಾರ್‌ ಒಬ್ಬ ಕಲಾ ಸೂರ್ಯರಾಗಿದ್ದರು. ಕಾಲೇಜು ದಿನಗಳಿಂದಲೂ ನಾನು ಅವರನ್ನು ನೋಡಿದ್ದೇನೆ. ಅವರು ಬಳಸುವ ಕನ್ನಡ ಭಾಷೆ ಅದ್ಭುತವಾಗಿತ್ತು. "ಸುಪ್ರಭಾತ' ಸಿಡಿ ಹೊರತಂದಿರುವ ರಮೇಶ್‌ ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು ದೊಡ್ಡ ರಂಗೇಗೌಡ. 18 ಸ್ಕಂದಗಳಲ್ಲಿರುವ ರಂಗಸ್ವಾಮಿ ಅವರ ಸಾಹಿತ್ಯವನ್ನು ಗಾಯಕ ಅಜಯ್‌ ವಾರಿಯರ್‌ ಹಲವು ರಾಗಗಳಲ್ಲಿ ಹಾಡಿದ್ದಾರೆ. ಎಲ್‌.ಎನ್‌. ಗೂಚಿ ಸಂಗೀತ  ನೀಡಿದ್ದಾರೆ. ರಮೇಶ್‌ ಅವರು ಈ ಆಡಿಯೋ ಸಿಡಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.


More News of your Interest

Back to Top