ನಾನೀಗಲೂ ಸಂಗೀತ ವಿದ್ಯಾರ್ಥಿ


Team Udayavani, Jan 27, 2017, 8:14 AM IST

kj.jpg

“ನೀನು ಕಲಿಯುತ್ತಲೇ ಇರಬೇಕು’ ಅನ್ನುವುದು ದೈವೇಚ್ಛೆಯೇನೋ!

ನಾನೊಂದು ಮುಕ್ತ ಹಕ್ಕಿ. ಆ ಮರದ ಮೇಲೂ ಕುಳಿತು ಹಾಡುತ್ತೇನೆ. ಈ ಮರ ಕರೆದರೆ ಇಲ್ಲೂ ಹಾರಿಬಂದು ಕುಳಿತು ಹಾಡುತ್ತೇನೆ. ಯಾವತ್ತೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ನಾನೊಬ್ಬ ಕಲಾವಿದ. ನನಗೆ ಎಲ್ಲರೂ ಬೇಕು. ಇನ್ನೊಂದು ಜನ್ಮವೆಂಬುದು ಇದ್ದರೆ ಮತ್ತೆ ಇಲ್ಲಿ ನಿಲ್ಲಿಸಿದಲ್ಲಿಂದಲೇ ಸಂಗೀತ ಕಲಿಕೆಯನ್ನು ಮುಂದುವರಿಸುತ್ತೇನೆ. ಕರ್ನಾಟಕಿ ಸಂಗೀತದ ಕಲಿಕೆ ಅನ್ನುವುದು ಒಂದು ಜನ್ಮದಲ್ಲಿ ಪೂರೈಸುವಂಥದ್ದಲ್ಲ. ಈ ವಿಚಾರದಲ್ಲಿ ಪರಿಪೂರ್ಣರು ಯಾರೂ ಇಲ್ಲ. ಇಷ್ಟು ಪ್ರಮಾಣದ ಪರಿಪೂರ್ಣತೆ ಸಾಧಿಸಿದ್ದೇವೆ ಎನ್ನಬಹುದು ಅಷ್ಟೇ.

ನನ್ನ ತಂದೆ ಆಗಸ್ಟಿನ್‌ ಜೋಸೆಫ್ ನಟ ಮತ್ತು ಗಾಯಕರಾಗಿದ್ದರು. ಕೇರಳೀಯ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿ ಕರ್ನಾಟಕಿ ಸಂಗೀತವನ್ನು ಆರಿಸಿಕೊಂಡ ನನ್ನ ದಾರಿಯೇ ವಿಭಿನ್ನವಾದುದಾಗಿತ್ತು. ಆ ದಿನಗಳಲ್ಲಿ ನಾಟಕಗಳಲ್ಲಿ ಬಹಳಷ್ಟು ಹಾಡು, ಕೀರ್ತನೆಗಳು ಇರುತ್ತಿದ್ದವು. ನನ್ನ ತಂದೆ ಕೇಳಿಯೇ ಹಾಡುವುದನ್ನು ಕಲಿತವರು. ತಾಯಿ ಎಲಿಜಬೆತ್‌ ಜೋಸೆಫ್ ಕೂಡ ಚರ್ಚ್‌ ಹಾಡುಗಳನ್ನು ಚೆನ್ನಾಗಿ ಹಾಡುತ್ತಿದ್ದವರು. ಆಕೆಯಲ್ಲಿ ಸಂಗೀತದ ಗೀಳು ಇತ್ತು – ಚರ್ಚ್‌ ಹಾಡುಗಳು ಮಾತ್ರ ಅಲ್ಲ, ಲಘು ಸಂಗೀತವನ್ನು ಸೊಗಸಾಗಿ ಹಾಡುತ್ತಿದ್ದವರು ಅವರು. ಆ ದಿನಗಳಲ್ಲಿ ಕೇರಳದಲ್ಲಿ ಕರ್ನಾಟಕಿ ಸಂಗೀತಕ್ಕೆ ಪೂರಕ
ವಾದ ವಾತಾವರಣ ಇತ್ತು. ಸಿನೆಮಾಗಳು ಆಗಿನ್ನೂ ಜನಪ್ರಿಯವಾಗಿರಲಿಲ್ಲ. ಹಾಗಾಗಿ ತಂದೆ ನಾನು ಹಾಡಲು ಕಲಿಯಬೇಕು ಎಂದು ಒತ್ತಾಸೆ ನೀಡಿದರು. ಐದನೇ ವಯಸ್ಸಿನಲ್ಲಿ ನಾದಸ್ವರ ವಿದ್ವಾನ್‌ ರಾಜರತ್ನಂ ಪಿಳ್ಳೆಯವರ ಶಿಷ್ಯ ಕುಂಜಾನ್‌ವೇಲು ಆಶಾನ್‌ ಅವರ ಬಳಿ ಸಂಗೀತ ಪಾಠ ಹೇಳಿಸಿಕೊಳ್ಳಲಾರಂಭಿಸಿದೆ. ಪ್ರತೀದಿನ ಸಂಜೆ ಐದರ ಬಳಿಕ ಶಾಲೆ ಬಿಟ್ಟು ಬಂದು ಸಂಗೀತ ಪಾಠ. 

ಎಸ್‌ಎಸ್‌ಎಲ್‌ಸಿ ಮುಗಿಸಿದ ಮೇಲೆ ತ್ರಿಪುಣಿತರದಲ್ಲಿ ಕೊಚ್ಚಿಯ ರಾಜರು ಸ್ಥಾಪಿಸಿದ ಆರ್‌ಎಲ್‌ಸಿ ಮ್ಯೂಸಿಕ್‌ ಅಕಾಡೆಮಿಯಲ್ಲಿ ಸಂಗೀತ ಪಾಠ ಮುಂದುವರಿಯಿತು. ಅದು ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್‌. ಸಂಗೀತದಲ್ಲಿ ಅದಾಗಲೇ ನನಗಿದ್ದ ಪರಿಶ್ರಮವನ್ನು ಗುರುತಿಸಿ ಮೂರೇ ವರ್ಷಕ್ಕೆ ಡಿಪ್ಲೊಮಾ ಕೊಟ್ಟುಬಿಟ್ಟರು! ಮುಂದೆ ತಿರುವನಂತಪುರದಲ್ಲಿ ಸಂಗೀತ ವಿದ್ವಾನ್‌ ಪೂರೈಸಿದೆ. ಆ ಹೊತ್ತಿಗೆ ತಂದೆಗೆ ಅನಾರೋಗ್ಯ ಉಂಟಾಯಿತು, ಮನೆಯಲ್ಲಿ ಕಷ್ಟಗಳ ಸರಮಾಲೆ. ಒಂದು ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ. ತಿರುವನಂತಪುರದಲ್ಲಿ ಸಣ್ಣ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ, ಹಾಸ್ಟೆಲ್‌ ಫೀಸ್‌ ತೆರುವುದು, ಊಟ ಮಾಡುವುದಕ್ಕೆ ಹಣವಿರಲಿಲ್ಲ. ಕೊನೆಗೆ ಹಾಸ್ಟೆಲ್‌ ಬಿಟ್ಟು ಶೆಮ್ಮಂಗುಡಿ ಭಾಗವತರ ಕಾರು ಶೆಡ್ಡಿನಲ್ಲಿ ವಾಸ್ತವ್ಯ ಹೂಡಿದೆ. 

ಶೆಮ್ಮಂಗುಡಿಯವರು ಮ್ಯೂಸಿಕ್‌ ಅಕಾಡೆಮಿಯಲ್ಲಿ ಕಲಿಸುತ್ತಿದ್ದರು. ನನ್ನ ಜತೆಗಿದ್ದವರೊಬ್ಬರು ಅಲ್ಲಿ ಕಲಿಯುತ್ತಿದ್ದರು. ಶೆಮ್ಮಂಗುಡಿಯವರಿಗೆ ತಿಳಿಯದಂತೆ ನಾನು ಸಂಗೀತ ಕಲಿತೆ. ಈ ನಡುವೆನನಗೆ ಅನಾರೋಗ್ಯ ಉಂಟಾಗಿ ಮನೆಗೆ ಮರಳಬೇಕಾಯಿತು. ವಿದ್ವಾನ್‌ ಪದವಿ ವಿದ್ಯಾಭ್ಯಾಸ ಹಾಗೆ ಅಲ್ಲಿಗೇ ನಿಂತುಹೋಯಿತು. ಈಗಲೂ ನಾನು ಸಂಗೀತ ವಿದ್ವಾನ್‌ ಅಲ್ಲ, ನಾನೀಗಲೂ ಕರ್ನಾಟಕಿ ಸಂಗೀತ ವಿದ್ಯಾರ್ಥಿಯೇ!

ದೇವರು ಕೊಟ್ಟ ವರ
ಪ್ರಾಯಃ ನಾನು ಕೊನೆ ತನಕವೂ ಸಂಗೀತ ವಿದ್ಯಾರ್ಥಿಯೇ ಆಗಿರಬೇಕು ಎಂದು ದೇವರು ನನಗೆ ಸಂಗೀತ ವಿದ್ವಾನ್‌ ಪದವಿ ಪೂರೈಸಲು ಅವಕಾಶ ಕೊಡಲಿಲ್ಲ. “ನೀನು ಇನ್ನೂ ವಿದ್ವಾನ್‌ ಅಲ್ಲ, ಹಾಗಾಗಿ ಕಲಿಯುತ್ತಲೇ ಇರು’ ಎಂಬುದೇ ದೇವರ ಇಂಗಿತವಾಗಿರಬೇಕು. ನಾನು ತ್ರಿಪುಣಿತರದಲ್ಲಿ ಸಂಗೀತ ಕಲಿಯುತ್ತಿದ್ದಾಗ ಒಬ್ಬರು ನನಗೆ ಸಿನೆಮಾದಲ್ಲಿ ಹಾಡಲು ಅವಕಾಶ ಕೊಟ್ಟರು. ಆಗ ನನಗೆ ಸ್ವಲ್ಪ ಜ್ವರ ಇತ್ತು. ಆದರೂ ನಾಲ್ಕು ಸಾಲು ಹಾಡಲು ಹೇಳಿದರು. ಪ್ರಾಯಃ ನಾನು ಹೇಗೆ ಹಾಡುತ್ತೇನೋ ಎಂದು ಅವರಿಗೆ ಅನುಮಾನ ಇತ್ತು ಅನ್ನಿಸುತ್ತದೆ. ಪ್ರೀತಿ ಜಾತಿ ಮತ ಭೇದವನ್ನು ಮರೆಯಿಸಿ, ಧರ್ಮ – ಧರ್ಮಗಳ ನಡುವಣ ದ್ವೇಷವನ್ನು ಕರಗಿಸಿ ಮನುಷ್ಯನನ್ನು ಹೇಗೆ ಹೊಸ ಎತ್ತರಕ್ಕೆ ಏರಿಸುತ್ತದೆ ಎಂಬ ಭಾವದ ಹಾಡು ಅದು. ಹಾಡಲು ಅವಕಾಶ ಕೊಟ್ಟಿದ್ದ ಎಂ. ಬಿ. ಶ್ರೀನಿವಾಸನ್‌ “ಯೇಸು, ಚೆನ್ನಾಗಿ ರಿಹರ್ಸಲ್‌ ಮಾಡು’ ಅಂದರು. ನನಗೆ ರಿಹರ್ಸಲ್‌ ಅಂದರೇನೆಂದೇ ತಿಳಿದಿರಲಿಲ್ಲ. ಆನಂದ ಭೈರವಿ ರಾಗದ ಶ್ಲೋಕ ಅದು. ಹಿನ್ನೆಲೆ ಸಂಗೀತವಿಲ್ಲ, ನನ್ನ ಹಾಡು ಮಾತ್ರ. ಹಾಡಿದ ಬಳಿಕ ಶ್ರೀನಿವಾಸನ್‌ ಆನಂದತುಂದಿಲರಾಗಿದ್ದರು. ಸೌಂಡ್‌ ಇಂಜಿನಿಯರ್‌ ಆಗಿದ್ದ ಕೋಟೇಶ್ವರ ರಾವ್‌ ಅವರ ಬಳಿ “ಇವನ ಸ್ವರ ಹೇಗಿದೆ?’ ಎಂದು ಪ್ರಶ್ನಿಸಿದರು. ಅದಕ್ಕೆ ರಾವ್‌ ಹೇಳಿದ್ದೇನು ಗೊತ್ತೇ? -“ಹತ್ತು ವರ್ಷಗಳ ಬಳಿಕ ಇದಕ್ಕೆ ಉತ್ತರಿಸುತ್ತೇನೆ.’ ನನಗೆ ಅದೇನೆಂದು ಅರ್ಥವಾಗಲಿಲ್ಲ. ಪ್ರಾಯಃ ನಾನು ಹಾಡಿದ್ದು ಕೆಟ್ಟದಾಗಿದೆ, ಇನ್ನಿಲ್ಲಿಗೆ ಹತ್ತು ವರ್ಷಗಳ ಬಳಿಕ ಪ್ರವೇಶ ಎಂದು ಭಾವಿಸಿದೆ. ದೇವರ ಕೃಪೆ, ಕೋಟೇಶ್ವರ ರಾವ್‌ ಹೇಳಿದಂತೆ ಈ ಇಷ್ಟೂ ವರ್ಷಗಳಲ್ಲಿ ಹಾಡುತ್ತಲೇ ಬಂದಿದ್ದೇನೆ. 

ನಾಲ್ಕು ಬ್ಯಾಟರಿ ಚಾರ್ಜರ್‌ಗಳು
ಹನ್ನೆರಡು ವರ್ಷ ವಯಸ್ಸಿನ ಹೊತ್ತಿಗೆ ಅನೇಕ ಸ್ಥಳಗಳಲ್ಲಿ ಹಾಡಿದ್ದೆ. ತಂದೆ ಸೈಂಟ್‌ ಜೋಸೆಫ್ ಚಾಪೆಲ್‌ನಲ್ಲಿ ಕರ್ನಾಟಕಿ ಶೈಲಿಯಲ್ಲಿ ಸ್ವರಗಳು ಮತ್ತು ರಾಗಪೂರ್ಣವಾಗಿ ಹಾಡುತ್ತಿದ್ದರು. ಅದನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ. ಹನ್ನೆರಡು ವರ್ಷ ವಯಸ್ಸಿನಿಂದ ತೊಡಗಿ ಈವರೆಗೂ ಅಲ್ಲಿ ಹಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ. ಅಲ್ಲಿಯ ವಾರ್ಷಿಕ ಉತ್ಸವ ಮಾರ್ಚ್‌ 31ರಂದು ನಡೆಯುತ್ತದೆ. ಈಗಲೂ ಹೊಸ ವರ್ಷದ ಡೈರಿ ಸಿಕ್ಕಿದಾಕ್ಷಣ ಮಾರ್ಚ್‌ 31ನ್ನು ಮೊತ್ತಮೊದಲಿಗೆ ಗುರುತಿಸಿಕೊಂಡು ಬಿಡುತ್ತೇನೆ. ಇನ್ನೊಂದು ತಿರುವಿಯಾರ್‌ ಉತ್ಸವದಲ್ಲಿ ಹಾಡುವುದು. ಮತ್ತೂಂದು ನನ್ನ ಜನ್ಮದಿನದಂದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹಾಡುವುದು. ಮಗದೊಂದು ಚೆಂಬೈ ಸ್ವಾಮಿ ಉತ್ಸವ. ಈ ನಾಲ್ಕು ನನ್ನ ಪಾಲಿಗೆ ಬ್ಯಾಟರಿ ಚಾರ್ಜರ್‌ಗಳು ಇದ್ದಂತೆ. ಇವುಗಳನ್ನು ನಾನು ಮಿಸ್‌ ಮಾಡಿಕೊಳ್ಳುವುದಿಲ್ಲ, ನನ್ನನ್ನು ಮುಂದೆ ನಡೆಯಿಸುತ್ತಿರುವುದು ಈ ನಾಲ್ಕು ಕಡೆಗಳಲ್ಲಿ ನಾನು ನೀಡುವ ಕಛೇರಿಗಳೇ.

ಸಾಹಿತ್ಯ ಸ್ಪಷ್ಟತೆ – ತಂದೆಯ ಪ್ರಭಾವ
ನನ್ನ ಹಾಡಿಕೆಯ ಮೇಲೆ ಪ್ರಭಾವ ಬೀರಿದ್ದು ಯಾವುದು ಎಂದು ಯಾರಾದರೂ ಕೇಳಿದರೆ, ನಾನು ಹೇಳುವುದು ಸಾಹಿತ್ಯ ಸ್ಪಷ್ಟತೆ ಮತ್ತು ಉಚ್ಚಾರ. ನಾನು ಅದನ್ನು ನನ್ನ ತಂದೆಯವರಿಂದ ಕಲಿತೆ. ಪ್ರತಿಯೊಂದು ಸಂಸ್ಕೃತ ಪದವನ್ನೂ ಸ್ಪಷ್ಟವಾಗಿ, ಸರಿಯಾಗಿ ಉಚ್ಚರಿಸುವ ವಿಚಾರದಲ್ಲಿ ತಂದೆ ಭಾರೀ ಕಾಳಜಿ ಹೊಂದಿದ್ದರು. ಪ್ರಾರ್ಥನೆಯ ಸಮಯದಲ್ಲಿ ಇದೇ ವಿಚಾರವಾಗಿ ತಂದೆಗೂ ತಾಯಿಗೂ ವಾಗ್ವಾದ ನಡೆಯುತ್ತಿದ್ದುದೂ ಉಂಟು. ನಾನು ತಪ್ಪಿದಾಗ ತಂದೆ ಅಲ್ಲೇ ಸರಿಪಡಿಸುತ್ತಿದ್ದರು. ಅದಕ್ಕೆ ತಾಯಿ ಹೇಳುತ್ತಿದ್ದುದು, “”ನಾನು ಬೆಳ್ಳಂಬೆಳಗ್ಗೆ ಎದ್ದಿದ್ದೇನೆ, ಮನೆಗೆಲಸ ಇನ್ನೂ ರಾಶಿ ಬಿದ್ದಿದೆ. ನಿಮ್ಮ ಪ್ರಾರ್ಥನೆಯನ್ನೊಮ್ಮೆ ಬೇಗ ಮುಗಿಸಬಾರದಾ”. ತಂದೆಗೆ ಪ್ರಾರ್ಥನೆ ಅಥವಾ ಅದನ್ನು ಬೇಗ ಮುಗಿಸುವುದು ಮುಖ್ಯವಾಗಿರಲಿಲ್ಲ, ನನ್ನ ಶಬೊªàಚ್ಚಾರ ಸರಿಪಡಿಸುವತ್ತಲೇ ಅವರ ಲಕ್ಷ್ಯ! ಸಂಗೀತ ಅಕಾಡೆಮಿಯಲ್ಲಿ ಕಲಿಯಲಾರಂಭಿಸಿದ ಬಳಿಕ ಸಂಸ್ಕೃತವನ್ನೂ ಕಲಿಯತೊಡಗಿದೆ. 

ಸಂಗೀತ ಒಂದು ಸಾಗರ
ಕರ್ನಾಟಕಿ ಸಂಗೀತ ಒಂದು ಸಾಗರ. ಸಾಗರದಲ್ಲಿ ಏನೆಲ್ಲ ಇರುತ್ತದೆ? ಅಲ್ಲಿ ಎಲ್ಲವೂ – ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅದರ ಆಳಕ್ಕೆ ಮುಳುಗಿ ಮುತ್ತುಗಳನ್ನೇ ಹೆಕ್ಕಬೇಕೆಂದರೆ ಕಷ್ಟಪಡಬೇಕು. ನಮಗೆ ಮುತ್ತುಗಳೇ ಬೇಕು ಎಂದಿದ್ದರೆ ಮುಳುಗಿ ಕಷ್ಟಪಡಲೇ ಬೇಕು. ಕರ್ನಾಟಕಿ ಸಂಗೀತ ಅಂಥ ಒಂದು ಸಾಗರ. ಅದರಲ್ಲಿ ಇರುವ ಒಳ್ಳೊಳ್ಳೆಯ ಮುತ್ತುಗಳನ್ನು ಆಯ್ದುಕೊಳ್ಳಲು ಹಲವು ಜನ್ಮಗಳನ್ನೇ ಎತ್ತಬೇಕಾಗಿ ಬರಬಹುದು. 

ನಾವೆಲ್ಲ ಭಾರತೀಯರು. ನಾವು ಹುಟ್ಟುವುದು ಮನುಷ್ಯರಾಗಿ. ಕ್ರೈಸ್ತ, ಹಿಂದೂ ಅಥವಾ ಇನ್ನಾéವುದೇ ಜಾತಿಯ ದೀಕ್ಷೆ ಒದಗುವುದು ಆ ಬಳಿಕ. ಆ ದಿನಗಳಲ್ಲಿ ಮಧುರೈ ಮಣಿ ಅಯ್ಯರ್‌ ತ್ರಿಪುಣಿ ತರದಲ್ಲಿ ಆಗಾಗ ಕಛೇರಿ ನೀಡುತ್ತಿದ್ದರು. ಒಮ್ಮೆ ಅವರು ಕಛೇರಿ ನೀಡುತ್ತಿದ್ದ ದೇವಾಲಯದ ಒಳಕ್ಕೆ ಹೋಗಲು ನನಗೆ ಆಗಲಿಲ್ಲ. ಹೊರಗೇ ನಿಂತು ಕಛೇರಿ ಕೇಳಿದೆ. ಆ ಸಮಯದಲ್ಲಿ ಶಬರಿಮಲೆಗೆ ಹೋಗುವ ಮನಸ್ಸಾಯಿತು. ನಾನು ದೇವಾಲಯದ ಅಧಿಕಾರಿಗಳಿಗೆ ಪತ್ರ ಬರೆದು ನಾನೂ ಯಾತ್ರೆ ಕೈಗೊಳ್ಳಬಹುದೇ ಎಂದು ಕೇಳಿದೆ. ವ್ರತ ಆಚರಿಸಿದ ಯಾರೇ ಆದರೂ ಯಾತ್ರೆ ಕೈಗೊಳ್ಳಬಹುದು ಎಂಬ ಉತ್ತರ ಬಂತು. ಹೋದೆ. ನನ್ನ ಶಬರಿಮಲೆ ಯಾತ್ರೆ ಬಹಳ ದೊಡ್ಡ ಸುದ್ದಿಯಾಯಿತು. ದೇವರಿಗೆ ಧರ್ಮಗಳ ಭೇದ ಇಲ್ಲ ಎಂಬುದನ್ನು ಆ ಬಳಿಕ ನಾನು ಸ್ಪಷ್ಟವಾಗಿ ತಿಳಿದುಕೊಂಡೆ. 

ದೇವರ ಸಾಕ್ಷಾತ್ಕಾರವಾಗುವ ಕ್ಷಣ
ಹಣ, ವಸ್ತು ಅಥವಾ ಇನ್ನೇನೋ ಸಿಗುತ್ತದೆ ಎಂದು ನಾನು ಯಾವತ್ತೂ ಹಾಡಿಲ್ಲ. ಕೆಲವೊಮ್ಮೆ ಕಛೇರಿ ಕೊಡುತ್ತೇವೆ, ಅದಕ್ಕೆ ಹಣ ಕೊಡುತ್ತಾರೆ. ಅದು ಇದೆ ನಿಜ. ಆದರೆ ಅದಕ್ಕಿಂತ ಹೆಚ್ಚಿನದು ಹಾಡಿದಾಗ ಸಿಗುವ ಸಂತೋಷ. ಅದನ್ನು ಕೊಳ್ಳಲಾಗುವುದಿಲ್ಲ, ಅದಕ್ಕೆ ಮೌಲ್ಯ ಕಟ್ಟಲಾಗುವುದಿಲ್ಲ. ಸಾಧನೆ ಎಂದರೆ ಪರಿಪೂರ್ಣತೆ. ಯಾರೂ ಪರಿಪೂರ್ಣತೆಯನ್ನು ಸಾಧಿಸಲಾಗದು. ಇಂತಿಷ್ಟು ಪರಿಪೂರ್ಣತೆಯನ್ನು ಸಾಧಿಸಿದ್ದೇನೆ ಎನ್ನಬಹುದೋ ಏನೋ. ಯಾರೂ ಪರಿಪೂರ್ಣರಿಲ್ಲ, ದೇವರು ಮಾತ್ರ. ಹಾಡುತ್ತಿರುವಾಗ ನಾನು ನನ್ನನ್ನು ಮರೆತುಬಿಡುತ್ತೇನೆ, ನಾನು ಹಾಡುತ್ತಿರುವುದನ್ನು ಕೂಡ. ಸಂಪೂರ್ಣವಾಗಿ ಸಂಗೀತದಲ್ಲಿ ಮುಳುಗಿಬಿಡುತ್ತೇನೆ, ಸ್ವರಗಳಲ್ಲಿ ಲೀನವಾಗುತ್ತೇನೆ. ಅದು
ನಾನು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಕ್ಷಣ.

ಆ ಸಂತೃಪ್ತಿಯನ್ನು ಪಡೆಯುವುದಕ್ಕೆ ಸಂಗೀತದ ಜಪವನ್ನು ಯಾವಾಗಲೂ ಮಾಡುತ್ತಲೇ ಇರಬೇಕು. ನನ್ನ ಜೀವನದ ಗುರಿ ಅಂದರೆ ಯಾವಾಗಲೂ ಕಲಿಯುತ್ತಲೇ ಇರುವುದು. ಕಲಿಕೆಯನ್ನು ಈ ಒಂದು ಜನ್ಮದಲ್ಲಿ ಪೂರೈಸಲು ಸಾಧ್ಯವಿಲ್ಲ. ನನಗೆ ಇನ್ನೊಂದು ಜನ್ಮ ಇದ್ದರೆ, ನಾನು ಕರ್ನಾಟಕಿ ಸಂಗೀತದ ಕಲಿಯುವಿಕೆಯನ್ನೇ ಮುಂದುವರಿಸುತ್ತೇನೆ. ಈ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೆನೋ ಅಲ್ಲಿಂದ ಈ ಕಲಿಕೆಯನ್ನು ಮುಂದುವರಿಸಲು ದೇವರು ಅನುಮತಿ ಕೊಡದಿದ್ದರೆ ಬೇಡ, ನನಗಿನ್ನೊಂದು ಜನ್ಮವೇ ಬೇಡ.

– ಕೆ. ಜೆ. ಯೇಸುದಾಸ್‌ ಕರ್ನಾಟಕ ಸಂಗೀತಗಾರ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.