ಹಿಲರಿ ಕ್ರಾಸ್ತಾಮಂಗಳೂರು : ಮುಂಬಯಿ-ಮಂಗಳೂರು ನಡುವಣ ಪ್ರಯಾಣಿಕರ ಆಗ್ರಹದ ಮೇರೆಗೆ ವರ್ಷದ ಹಿಂದೆ ಆರಂಭವಾದ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಈಗ 'ಮುಂಬಯಿ ಎಕ್ಸ್‌ಪ್ರೆಸ್' ರೈಲು ಆಗಿ ನಾಮಕರಣಗೊಂಡಿದ್ದು, ಕೇರಳದ ಎರ್ನಾಕುಳಂಗೆ ವಿಸ್ತರಣೆಯಾಗಲು ಪೀಠಿಕೆ ಸಿದ್ಧವಾಗಿದೆ. ಮುಂದಿನ ರೈಲ್ವೇ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಪ್ರಕಟನೆ ಆಗುವುದೊಂದೇ ಬಾಕಿ ಉಳಿದಿದೆ.ಮಂಗಳೂರು ಜಂಕ್ಷನ್(ಕಂಕನಾಡಿ)ನಿಂದ ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ಪ್ರತಿನಿತ್ಯ ಸಂಚರಿಸುತ್ತಿರುವ ಈ ಸೂಪರ್ ಫಾಸ್ಟ್ ರೈಲು ವರ್ಷದ ಹಿಂದೆ ಆರಂಭವಾಗಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಕೊರತೆಯ ನೆಪ ಒಡ್ಡಿ ಈ ರೈಲನ್ನು ಕಂಕನಾಡಿ ರೈಲು ನಿಲ್ದಾಣದ ತನಕ ಮಾತ್ರ ಓಡಿಸಲಾಗುತ್ತಿದೆ. ಸೆಂಟ್ರಲ್ ರೈಲು ನಿಲ್ದಾಣಕ್ಕೆ ವಿಸ್ತರಿಸಲು ವಿವಿಧ ನೆಪಗಳನ್ನು ಒಡ್ಡುತ್ತಿರುವುದನ್ನು ಗಮನಿಸಿದಾಗಲೇ ಬಹಳಷ್ಟು ಮಂದಿಗೆ ಇದು ಕೇರಳಕ್ಕೆ ವಿಸ್ತರಿಸುವ ಬಗ್ಗೆ ಗುಮಾನಿ ಹುಟ್ಟಿಕೊಂಡಿತ್ತು. ಈಗ ಅದು ನಿಜವಾಗಿದೆ. ಇಲಾಖೆಯ ರೈಲುಗಳ ಪಟ್ಟಿಯಲ್ಲಿ ಈಗ 12133/34 ರೈಲು ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಎಂಬ ಹೆಸರಿನಲ್ಲಿ ಇಲ್ಲ. ಅದು ಮುಂಬಯಿ ಎಕ್ಸ್‌ಪ್ರೆಸ್ ರೈಲು ಎಂಬ ಹೆಸರಿನಲ್ಲಿದೆ.ಮುಂಬಯಿಯ ತುಳು ಕನ್ನಡಿಗರ ಮಹಾ ಮಂಡಲದ ಅಧ್ಯಕ್ಷ ನಾರಾಯಣ ಶೆಟ್ಟಿ ಮತ್ತು ಕಾರ್ಯದರ್ಶಿ ಶಶಿಧರ ಕುಂದರ್ ಅವರ ನೇತೃತ್ವದ ನಿಯೋಗವು ಮುಂಬಯಿ ವಸಾಯಿರೋಡ್‌ನಲ್ಲಿ ರೈಲುಗಳ ನಿಲುಗಡೆಗೆ ಅವಕಾಶ ನೀಡ ಬಾರದೇಕೆ ಎಂದು ವಿಚಾರಿಸಲು ರೈಲ್ವೇ ಅಧಿಕಾರಿಗಳ ಬಳಿಗೆ ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮುಂದಿನ ಬಜೆಟ್‌ನಲ್ಲಿ ಈ ರೈಲನ್ನು (ಮುಂಬಯಿ ಎಕ್ಸ್‌ಪ್ರೆಸ್) ಎರ್ನಾಕುಳಂಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಅವರಿಂದ ಲಭಿಸಿದೆ. ಇತ್ತೀಚೆಗಷ್ಟೇ ಈ ರೈಲಿನ ಬೋಗಿಗಳ ಸಂಖ್ಯೆಯನ್ನು 17ರಿಂದ 22ಕ್ಕೆ ಏರಿಸಲಾಗಿದೆ.ಇರುವುದೇ ಎರಡು ರೈಲುಮಂಗಳೂರಿನ ಪ್ರಯಾಣಿಕರಿಗೆ ಮುಂಬಯಿಗೆ ತೆರಳಲು ಈಗ ಎರಡು ರೈಲುಗಳು (ಮತ್ಸ Âಗಂಧಾ ಮತ್ತು ಮಂಗಳೂರು (ಮುಂಬಯಿ) ಜಂಕ್ಷನ್ ಎಕ್ಸ್‌ಪ್ರೆಸ್) ಮಾತ್ರ ಇದ್ದು, ಮಂಗಳೂರು ಜಂಕ್ಷನ್ ರೈಲು ಕೇರಳಕ್ಕೆ ವಿಸ್ತರಣೆಗೊಂಡರೆ ಬಳಿಕ ಉಳಿಯುವುದು ಒಂದೇ ರೈಲು.ಮತ್ಸ Âಗಂಧಾ ಎಕ್ಸ್‌ಪ್ರೆಸ್‌ಗೆ 34 ನಿಲುಗಡೆಗಳಿದ್ದರೆ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ಗೆ ಕೇವಲ 12 ನಿಲುಗಡೆಗಳು ಮಾತ್ರ ಇವೆ. ಮಧ್ಯಾಹ್ನ 12 ಗಂಟೆಗೆ ಮಂಗಳೂರಿಗೆ ಆಗಮಿಸುವ ಈ ರೈಲು ಅಪರಾಹ್ನ 4 ಗಂಟೆಗೆ ಮುಂಬಯಿಗೆ ವಾಪಸ್ ಪ್ರಯಾಣ ಬೆಳೆಸುತ್ತದೆ. ಮರುದಿನ ಬೆಳಗ್ಗೆ ಮುಂಬಯಿ ತಲಪುತ್ತದೆ. ಬಹಳಷ್ಟು ಮಂದಿಗೆ ಈ ಸೂಪರ್‌ಫಾಸ್ಟ್ ರೈಲು ಸಂಚಾರಕ್ಕೆ ಅನುಕೂಲಕರವಾಗಿತ್ತು. ಇನ್ನೀಗ ಕೇರಳಕ್ಕೆ ವಿಸ್ತರಣೆಗೊಂಡರೆ ಇದರ ವೇಳಾಪಟ್ಟಿಯೂ ಬದಲಾವಣೆಗೊಂಡು ಮಂಗಳೂರಿನ ಜನರಿಗೆ ಇದರ ಸವಲತ್ತು ಸಿಗದೆ ಹೋಗುವ ಸಾಧ್ಯತೆ ಇದೆ.ನೇತ್ರಾವತಿ ಎಕ್ಸ್‌ಪ್ರೆಸ್ ಮತ್ತು ಮಂಗಳಾ ಎಕ್ಸ್‌ಪ್ರೆಸ್ ರೈಲುಗಳು ಕೂಡ ಆರಂಭದ ಕೆಲವು ವರ್ಷಗಳಲ್ಲಿ ಮಂಗಳೂರಿನಿಂದಲೇ ಹೊರಡುತ್ತಿತ್ತು. ಕ್ರಮೇಣ ಈ ರೈಲುಗಳನ್ನು ಕೂಡ ಕೇರಳಕ್ಕೆ ವಿಸ್ತರಿಸಲಾಗಿದ್ದು, ಇದೀಗ ಅವುಗಳು ಅಲ್ಲಿಂದಲೇ ಯಾನ ಆರಂಭಿಸುವುದರಿಂದ ಇಲ್ಲಿನ ಜನರಿಗೆ ಸೀಮಿತ ಸೀಟುಗಳಷ್ಟೇ ದೊರಕುತ್ತಿದೆ. ಜನರಲ್ ಬೋಗಿಗಳಲ್ಲಂತೂ ಸ್ಥಳ ಸಿಗುವುದೇ ಅಪರೂಪ ಎಂಬಂತಾಗಿದೆ.ಮಂಗಳೂರಿನ ಜನತೆಯ ಅನುಕೂಲಕ್ಕಾಗಿ ಇದ್ದ ಒಂದು ಸೂಪರ್‌ಫಾಸ್ಟ್ ರೈಲನ್ನು ಕೂಡ ಕಿತ್ತುಕೊಳ್ಳುವ ಪ್ರಯತ್ನವನ್ನು ತಡೆಯಲು ನಮ್ಮ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವರೇ?