ಜಯದೇವ ಪ್ರಸಾದ ಮೊಳೆಯಾರ | Dec 26, 2011
ಅನಿವಾಸಿ ಭಾರತೀಯರಿಗೆ ಪರದೇಶದಲ್ಲಿನ ಗಳಿಕೆ/ಹೂಡಿಕೆಗಳ ಮಟ್ಟಿಗೆ ಆ ದೇಶದ ಹೂಡಿಕೆ ಹಾಗೂ ತೆರಿಗೆಯ ಕಾನೂನುಗಳು ಅನ್ವಯವಾಗುತ್ತವೆ. ಒಬ್ಬ ನಿವಾಸಿ ಭಾರತೀಯನ ವಿದೇಶೀ ಸಂಪಾದನೆ/ಹೂಡಿಕೆ ಮತ್ತು ಒಬ್ಬ ಅನಿವಾಸಿಯ ದೇಸೀ ಸಂಪಾದನೆ/ಹೂಡಿಕೆಗಳು ಎರಡೂ ದೇಶಗಳ ಕಾನೂನಿನ ಚೌಕಟ್ಟಿನ ಒಳಗೆ ಬರುತ್ತವೆ.
ರುಗುಂಟಿರಾಯರ ಮಗರಾಯನ ಸುಪರ್‌ಮಂಡೆಗೆ "ದುಬೈಗೆ ಹೋದರೆ ಹೇಗೆ?' ಎಂಬ ಒಂದು ಘನಂದಾರಿ ಐಡಿಯಾ ಹತ್ತಿಕೊಂಡಿತು. ಇಲ್ಲಿಯ ಇನ್‌ಫ್ಲೇಶನ್ನು, ಕರಪ್ಶನ್ನು ಇತ್ಯಾದಿ ಇತ್ಯಾದಿ ಪಿಡುಗುಗಳಿಗೆ ಯಾವ ಗಳಿಗೆಯಲ್ಲೂ ಉದ್ಧಾರ ಇಲ್ಲ ಎಂದು ಆತನಿಗೆ ಅನಿಸತೊಡಗಿತು.
ಒಂದ್ನಾಲ್ಕು ವರ್ಷ ಅಲ್ಲಿ ದುಡಿದು ಬಂದರೆ ಕೈಯಲ್ಲಿ ನಾಲ್ಕು ಕಾಸು ಸಂಪಾದನೆ ಆದೀತು; ಆಮೇಲೆ ಇಲ್ಲಿ ಒಂದು ಸಣ್ಣ ಬಿಸಿನೆಸ್ ಸ್ಟಾರ್ಟ್ ಮಾಡಿ ಕೈಲಾದ ಹಾಗೆ ನಡೆಸ್ಕೊಂಡು ಹೋದ್ರೆ ಸಾಕು, "ಈ ದೈನಂದಿನ ಒ¨ªಾಟ ಯಾವ್ನಿಗೆ ಬೇಕು' ಅಂತ ಸೀರಿಯಸ್ ಆಗಿ ಎನ್ನಾರೈ ಆಗುವ ಕನಸು ಕಾಣತೊಡಗಿದ.
ಗಂಡನಾಗಿ ಹುಟ್ಟಿದ ಮೇಲೆ (ಅದು ಹೇಗಪ್ಪಾ?) ಹೆಂಡತಿಯೆಂಬ ಹೈಕಮಾಂಡನ್ನು ಮರುಳು ಮಾಡುವ ಎÇÉಾ ಚಾಕಚಕ್ಯತೆ ಕರಗತವಾಗಿದ್ದರೂ ಅಪ್ಪನಾದ ಗುರುಗುಂಟಿರಾಯರನ್ನು ಈ ವಿಚಾರದಲ್ಲಿ ಹೇಗಪ್ಪಾ ಒಪ್ಪಿಸುವುದು ಎಂಬ ಚಿಂತೆ ಆತನನ್ನು ಬಲವಾಗಿ ಆವರಿಸಿತ್ತು.
ಕಾಸು ಕುಡಿಕೆಯ ಸುಪರ್‌ಸ್ಟಾರ್ ಆಗಿರುವ ಅಪ್ಪಾಜಿಯನ್ನು ಒಪ್ಪಾಜಿ ಆಗಿಸಲು ಕುಡಿಕೆ ಸದ್ದಿಗಿಂತ ಅನ್ಯ ದಾರಿ ಇಲ್ಲ ಅಂದುಕೊಂಡು ಅಪ್ಪನಿಗೆ ದುಬೈಯಿಂದ ಬರುವ ಮೂಟೆಗಟ್ಟಲೆ ದುಡ್ಡಿನ ಕನಸನ್ನು 70
mm ಸ್ಕ್ರೀನಿನಲ್ಲಿ ಕಾಣಿಸತೊಡಗಿದ.
"ಒಂದು ದಿರಮ್ಮಿಗೆ ಈಗ 14 ದಾಟಿದೆ ಅಪ್ಪಾ,' ಅದಲ್ಲದೆ "ಎನ್ನಾರಿ, ಎನ್ನಾರೋ ಅಲ್ಲದೆ ಎಫ್‌ಸಿಎನ್ನಾರ್' ಎಂಬೆಲ್ಲ ತಮಿಳ್ ನಮೂನೆಯ ಘನಶಬ್ದಗಳನ್ನು ಹೊರಡಿಸಿ ಅಂತಹ ಅಕೌಂಟಿನಲ್ಲಿ ದುಡ್ಡಿಟ್ಟರೆ ಹತ್ತಕ್ಕೂ ಮೀರಿ ಬಡ್ಡಿ ಪರ್‌ಸೆಂಟ್ ಬರುತ್ತದೆ, ಅದು ಕೂಡಾ ಟ್ಯಾಕ್ಸ್ ಫ್ರೀ ಎಂಬ ಕತೆ ಹೆಣೆಯತೊಡಗಿದ.
ಮಗರಾಯ ಕಪ್ಪು ರೇಬಾನ್ ಕೂಲಿಂಗ್ ಗ್ಲಾಸ್ ಧರಿಸಿ, ರೀಬಾಕ್ ಶೂ ಹಾಕಿ, ನೀಲಿ ಎಫ್‌ಯೂಸ್ ಜೀನ್ಸ್ ಪ್ಯಾಂಟು ಮತ್ತು ಮೊಸಳೆ ಛಾಪಿನ ಟೀಶರ್ಟ್‌ಧಾರಿಯಾಗಿ ಚೆಕ್-ಇನ್ ಬ್ಯಾಗೇಜಿನಲ್ಲಿ ನಾಲ್ಕು ಗೋಣಿ ಚಿನ್ನದೊಂದಿಗೆ ಬಜ್ಪೆಯಲ್ಲಿ ಏರಿಂಡಿಯಾದಿಂದ ಇಳಿದರೆ ಇತ್ಲಾಗಿ ಬಾವುಟಗುಡ್ಡೆಯಲ್ಲಿ ಕೂತವರ ಮೂಗುಗಳಿಗೂ ಸೆಂಟಿನ ಪರಿಮಳ ಹೊಡೆಯಬೇಕು!
ಆಹಾ ಮಗರಾಯನ ದುಬೈ ಕನಸು ರಾಯರನ್ನೂ ಕೂಡ ನಿಧಾನವಾಗಿ ಆವರಿಸತೊಡಗಿತು.
ಆರೈ! ಎನ್ನಾರೈ!... ನೀನಾರೈ?
ರೆಸಿಡೆಂಟ್ ಇಂಡಿಯನ್ (RI) ಮತ್ತು ನಾನ್-ರೆಸಿಡೆಂಟ್ ಇಂಡಿಯನ್ (NRI) ಪದಗಳ ಅರ್ಥವ್ಯಾಪ್ತಿ ಫೆಮ (Foreign Exchange Management Act) ಕಾನೂನಿನಲ್ಲಿ ಬೇರೆ, ಆದಾಯ ತೆರಿಗೆ ಕಾನೂನಿನಲ್ಲಿ ಬೇರೆ.
ಮಾತು ಯಾವ ಕಾನೂನಡಿಯಲ್ಲಿ ಬರುತ್ತದೆ ಎಂಬ ಸಂದರ್ಭಕ್ಕನುಸಾರ ಈ ಪದಗಳನ್ನು ಅರ್ಥೈಸಿಕೊಳ್ಳಬೇಕು. ಫೆಮ ಪ್ರಕಾರ ಅನಿರ್ದಿಷ್ಟಾವಧಿಗೆ ನೌಕರಿ ಅಥವಾ ಬಿಸಿನೆಸ್ ಮೇಲೆ ವಿದೇಶಕ್ಕೆ ಹೋಗುವವರೆಲ್ಲರೂ ನಾನ್-ರೆಸಿಡೆಂಟ್ ಇಂಡಿಯನ್ನುಗಳೇ.
ಆದರೆ ಆದಾಯ ತೆರಿಗೆ ಕಾನೂನಿನ ಪ್ರಕಾರ ವಾಸ್ತವ್ಯಾವಧಿ ಮುಖ್ಯವಾಗುತ್ತದೆ. ಇಲ್ಲಿ ಆರೈ ಅಥವಾ ನಿವಾಸಿ ಭಾರತೀಯ ಅಂದರೆ ಈ ದೇಶದಲ್ಲಿ ಪ್ರಸ್ತುತ ವಿತ್ತ ವರ್ಷದಲ್ಲಿ 182 ಅಥವಾ ಅದಕ್ಕಿಂತ ಜಾಸ್ತಿ ದಿನ ವಾಸಿಸಿದ ಓರ್ವ ಭಾರತೀಯ ವ್ಯಕ್ತಿ.
ಪ್ರಸ್ತುತ ವಿತ್ತ ವರ್ಷದಲ್ಲಿ ಬರೇ 60 ದಿನಗಳನ್ನು ದೇಶದಲ್ಲಿ ಕಳೆದವರೂ ಕೂಡ ಅದರ ಮೊದಲಿನ 4 ವರ್ಷಗಳಲ್ಲಿ ಒಟ್ಟಾರೆ 365 ದಿನಗಳನ್ನು ದೇಶದಲ್ಲಿ ಕಳೆದಿದ್ದರೆ ಆತ ನಿವಾಸಿ ಭಾರತೀಯನೇ ಆಗುತ್ತಾನೆ (ಉದ್ಯೋಗಕ್ಕೆ ಹೊರ ಹೋದ ವರ್ಷ ಮಾತ್ರ ನಿವಾಸಿಯೆಣಿಸಿಕೊಳ್ಳಲು 182 ದಿನವೇ ಇರಬೇಕಾಗುತ್ತದೆ).
ಮತ್ತೆ, ಅನಿವಾಸಿ ಅಥವಾ ಎನ್ನಾರೈ ಅಂದರೆ ಈ ಮೇಲಿನ 182 ದಿನಗಳ ಅಥವಾ 60 ದಿನಗಳ ನಿವಾಸ ಲೆಕ್ಕಾಚಾರ ಮೀರಿದವ ಎಂದರ್ಥ.
(ಮೇಲೆ ಕಾಣಿಸಿದ ನಿವಾಸಿ ಭಾರತೀಯರ ಒಳಗೂ ಕಳೆದ ವಿತ್ತೀಯ ವರ್ಷದ ಮೊದಲಿನ 7 ವರ್ಷಗಳಲ್ಲಿ ಒಟ್ಟಾರೆ 729 ದಿನಗಳಿಗಿಂತ ಕಡಿಮೆ ಅವಧಿ ಭಾರತದಲ್ಲಿ ವಾಸಿಸಿದವರು ಅಥವಾ ಕಳೆದ ವಿತ್ತೀಯ ವರ್ಷದ ಮೊದಲಿನ 10 ವರ್ಷಗಳಲ್ಲಿ 9 ವರ್ಷಗಳನ್ನು ನಾನ್ ರೆಸಿಡೆಂಟ್ ಆಗಿ ಕಳೆದು ಈಗ ನಮ್ಮ ದೇಶಕ್ಕೆ ಹಿಂತಿರುಗಿದವರು ರೆಸಿಡೆಂಟ್ ಬಟ್ ನಾಟ್ ಆರ್ಡಿನರಿಲಿ ರೆಸಿಡೆಂಟ್ (RNOR) ಎಂಬ ನಾಮ ವಿಶೇಷಣಕ್ಕೆ ಅರ್ಹರಾಗಿ ಕೆಲವು ರಿಯಾಯತಿಗಳಿಗೆ ಬಾಧ್ಯರಾಗುತ್ತಾರೆ ಹಾಗೂ ಈ ರೀತಿ RNOR ಆಗಿರದ ರೆಸಿಡೆಂಟುಗಳಿಗೆ ಅನಧಿಕೃತವಾಗಿ ಆರ್ಡಿನರಿ ರೆಸಿಡೆಂಟ್ (OR) ಅನ್ನುತ್ತಾರೆ.)
ನಿವಾಸಿ ಭಾರತೀಯರು ಭಾರತದಲ್ಲಿ ಸಂಪಾದನೆ/ಹೂಡಿಕೆ ಮಾಡಿದಾಗ ಅದರ ಮಟ್ಟಿಗೆ ಇಲ್ಲಿನ ಹೂಡಿಕೆ ಮತ್ತು ತೆರಿಗೆಯ ಕಾನೂನು ಅನ್ವಯವಾಗುವುದು ಸಹಜವಷ್ಟೆ? ಅಂತೆಯೇ ಅನಿವಾಸಿ ಭಾರತೀಯರಿಗೆ ಪರದೇಶದಲ್ಲಿನ ಗಳಿಕೆ/ಹೂಡಿಕೆಗಳ ಮಟ್ಟಿಗೆ ಆ ದೇಶದ ಹೂಡಿಕೆ ಹಾಗೂ ತೆರಿಗೆಯ ಕಾನೂನುಗಳು ಅನ್ವಯವಾಗುತ್ತವೆ.
ಇವೆರಡು ಸಂದರ್ಭಗಳೂ ಸರಳವಾಗಿದ್ದರೂ ಒಬ್ಬ ನಿವಾಸಿ ಭಾರತೀಯನ ವಿದೇಶೀ ಸಂಪಾದನೆ/ಹೂಡಿಕೆ ಮತ್ತು ಒಬ್ಬ ಅನಿವಾಸಿಯ ದೇಸೀ ಸಂಪಾದನೆ/ಹೂಡಿಕೆಗಳು ಎರಡೂ ದೇಶಗಳ ಕಾನೂನಿನ ಚೌಕಟ್ಟಿನ ಒಳಗೆ ಬರುತ್ತವೆ. ಆ ದೃಷ್ಟಿಯಿಂದ ಇವೆರಡೂ ತುಸು ಕ್ಲಿಷ್ಟವೆನಿಸುತ್ತವೆ. ಮುಖ್ಯವಾಗಿ ಒಂದೇ ಆದಾಯದ ಮೇಲೆ ಎರಡೂ ದೇಶಗಳಲ್ಲಿ ತೆರಿಗೆ ಕಟ್ಟುವುದು ಅನ್ಯಾಯವೆನಿಸುತ್ತದೆ.
ಈ ರೀತಿ ಎರಡೆರಡು ದೇಶಗಳ ತೆರಿಗೆ ವ್ಯವಸ್ಥೆಯಿಂದ ಮುಕ್ತಿ ಪಡೆಯಲು ಭಾರತವು ಹಲವಾರು ದೇಶಗಳೊಡನೆ ಡಬಲ್ ಟ್ಯಾಕ್ಸ್ ಅವಾçಡನ್ಸ್ ಅಗ್ರಿಮೆಂಟ್ (DTAA) ಗಳಿಗೆ ಸಹಿ ಹಾಕಿರುತ್ತದೆ.
ಇದರಿಂದಾಗಿ ಇಂದು ಎರಡೆರಡು ದೇಶಗಳಲ್ಲಿ ಕಾಲಿಟ್ಟಿರುವವರಿಗೆ ಈಖಅಅ ಕಾನೂನೇ ಅಂತಿಮ ನಿರ್ಣಾಯಕ. ಸ್ಥೂಲವಾಗಿ ಹೇಳುವುದಾದರೆ ಭಾರತವು ಗಲ್ಫ್, ಅಮೆರಿಕ, ಯುರೋಪು ದೇಶಗಳಲ್ಲದೆ ಇನ್ನೂ ಹಲವಾರು ಪ್ರಾಮುಖ್ಯ ದೇಶಗಳೊಡನೆ ಇಂತಹ ಒಪ್ಪಂದ ಮಾಡಿಕೊಂಡಿದ್ದ ಕಾರಣ ಅಲ್ಲಿಗೆ ವಲಸೆ ಹೋದ ಅನಿವಾಸಿ ಭಾರತೀಯರು ಈ ಕಾನೂನು ಪ್ರಕಾರ ಹೂಡಿಕೆ ಮತ್ತು ಕರಸಂದಾಯ ಮಾಡಿದರೆ ಸಾಕು. ಎರಡೆರಡು ದೇಶಗಳ ಕಾನೂನುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪಾಲಿಸಬೇಕಾಗಿಲ್ಲ.
ಅಂತಹ ಒಪ್ಪಂದ ಇಲ್ಲದ ದೇಶಕ್ಕೆ ಹೋದವರಿಗೆ ಮಾತ್ರ ಎರಡೂ ದೇಶಗಳಲ್ಲಿ ತೆರಿಗೆ ಕಕ್ಕುವ ಎಡಬಿಡಂಗಿ ಸ್ಥಿತಿ ತಪ್ಪಿದ್ದಲ್ಲ.
ಈ DTAA ಒಪ್ಪಂದದಡಿಯಲ್ಲಿ ಎರಡು ಸ್ಥಿತಿಗಳು ನಿರ್ಮಾಣವಾಗುತ್ತವೆ:
1. ಭಾರತೀಯ ನಿವಾಸಿಗಳಿಗೆ ಬರುವ ವಿದೇಶೀ ಆದಾಯವನ್ನು ಈ ಕಾನೂನು ಯಾವ ರೀತಿಯಲ್ಲಿ ನೋಡುತ್ತದೆ? ಇದು RI/OR ಗಳಿಗೆ ಪ್ರಸ್ತುತ.
2. ಅನಿವಾಸಿ ಭಾರತೀಯರಿಗೆ ಬರುವ ಭಾರತೀಯ ಆದಾಯವನ್ನು ಈ ಕಾನೂನು ಯಾವ ರೀತಿಯಲ್ಲಿ ಕಾಣುತ್ತದೆ? ಇದು NRI ಗಳಿಗೆ ಪ್ರಸ್ತುತ. ಅಲ್ಲದೆ, ಹಿಂದೊಮ್ಮೆ ಎನ್ನಾರೈಳಾಗಿದ್ದು ಈಗ ನಿವಾಸಿಗಳಾದ RNORಗಳ ವಿದೇಶೀ ಆದಾಯಕ್ಕೆ ಯಾವ ರಿಯಾಯಿತಿಗಳು ಲಭ್ಯ?
ಮುಂದಿನ ಕೆಲ ವಾರಗಳಲ್ಲಿ ಈ ವಿಚಾರಗಳ ಮೇಲೆ ನಮ್ಮ ಕಾಕುದೃಷ್ಟಿ ಬೀರೋಣ. ಈ ಕಾಕು ಕಾಲಮ್ಮಿಗೆ ಬಹಳಷ್ಟು ಅನಿವಾಸಿ ಓದುಗರಿ¨ªಾರೆ. ಅವರುಗಳು ಫೇಸ್‌ಬುಕ್/ಇ-ಮೈಲ್ ಮೂಲಕ ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಬಂದಿ¨ªಾರೆ. ಅವರು ತೋರುವ ಪ್ರೀತಿಗೆ ಇದು ನನ್ನ ಕಾಣಿಕೆಯೂ ಹೌದು; ಅವರ ಪರ ನನ್ನ ಕರ್ತವ್ಯವೂ ಹೌದು.
ಅಟ್ಯಾಚ್‌ಮೆಂಟ್
ಬಾಂಡು ಫಂಡು ಕೊಳ್ಳಲು ಒಳ್ಳೆಯ ಸಮಯವಿದು ಎಂದು ತಿಳಿಸಲು ಬಾಂಡು ಫಂಡು ವ್ಯಾಮೋಹದ ಗುರುಗುಂಟಿ ರಾಯರಿಗೆ ಫೋನ್ ಮಾಡಿ "ಹಲೋ, ಹಲೋ' ಅಂತ ಒಂದೆರಡು ಬಾರಿ ಹೇಳಿದಾಗ ಅತ್ಲಾಗಿಂದ ನನ್ನ ಸ್ವರವನ್ನು ಪರೀಕ್ಷಿಸಿಯೋ ಎಂಬಂತೆ "ರಿದಂ ಕರೆಕ್ಟ್' ಎಂಬ ಒಂದು ಮೆಚ್ಚುಗೆಯ ಕಿಶೋರವಾಣಿ ತೇಲಿ ಬಂತು.
ಬಳಿಕ, ಸ್ವಲ್ಪ ತಡೆದು "ಕಂಟಿನ್ಯೂ ಪ್ಲೀಸ್' ಎಂಬ ಹೇಳಿಕೆಯೂ ಕೇಳಿಸಿತು. ಇದು ಖಂಡಿತ ಪುಟ್ಟುವಿನ ಸ್ವರವೇ ಅಂತ ಗೊತ್ತಾದರೂ ಅವನು ಏನು ಹೇಳುತ್ತಿ¨ªಾನೆ ಎಂಬುದರ ತಲೆಬುಡ ಮಾತ್ರ ಅರ್ಥವಾಗಲಿಲ್ಲ. ಏನಿರಬಹುದು ಈ ಹೊಸ ಶೈಲಿ ಅಂತ ತಲೆ ಕೆರೆಯುತ್ತಾ ಯೋಚಿಸುತ್ತಿದ್ದರೆ ಹಿಂದಿನಿಂದ ಗಿಟಾರ್ ಜೊತೆ ಸ್ಪಷ್ಟವಾಗಿ ರಾಯರದ್ದೇ ದನಿಯಲ್ಲಿ "ವೈ ದಿಸ್ ಕಾಸು ಕುಡಿ, ಕಾಸು ಕುಡಿ, ಕಾಸು ಕುಡಿ...ಕೆ!!' ಎಂದು ಎರಡೆರಡು ಬಾರಿಯೂ ಆಮೇಲೆ "ಕೈಲಿ ಕಾಸು... ಓನ್ಲಿà ಇಂಗ್ಲಿಸ್... ಹ್ಯಾಂಡ್‌ಲಿ
ಕಾಸು, ಕಾಸ್‌ಲಿ ಶೇರು... ಕುಡಿಕೆ ಫುಲ್ಲೂ ದುಡ್ಡು!!'
ಅಂತ ಜೋರಾಗಿ ಅರಚುವುದು ಕೇಳಿಸುತ್ತಿತ್ತು. ಅಬ್ಬಬ್ಬ! ಈಗ ಮಂಡೆಗೆ ಹೊಕ್ಕಿತು. ಹೇ ರಾಮ! ಕರ್ಮ ಕರ್ಮ!! ಸರಿ, "ಅಜ್ಜಂಗೆ ಫೋನ್ ಕೊಡೋ ಪುಟ್ಟಾ, ಒಂಚೂರು ಮಾತಾಡ್ಬೇಕು' ಅಂದ್ರೆ "ಓಕೆ ಮಾಮ, ನವ್ ಟ್ಯೂನ್ ಚೇಂಜು!' ಅಂತ ಹೇಳಿ ಫೋನ್ ಕೆಳಗಿಟ್ಟು ತಾಳಕ್ಕೆ ತಕ್ಕಹಾಗೆ ಚಿಟಿಕೆ ಹೊಡೆಯುತ್ತಾ ಅಜ್ಜನನ್ನು ಕರೆಯಲು ಹೋದ.
ಇದೊಂದು ಬಾಕಿ ಇತ್ತು ನೋಡಿ ಸಾರ್, ಕೊಲವೇರಿ ಎಂಬ ಅಮರಗೀತೆಯ ಕಲ್ಯಾಣಕ್ಕೆ. ಈಗ ಅದೂ ಆದ ಹಾಗೆ ಆಯ್ತು ಬಿಡಿ - ಕೊಲವೇರಿಯ ಕಾಕು ವರ್ಶನ್. ಇನ್ನು ಯುಟ್ಯೂಬ್‌ನಲ್ಲಿ ಬೇಗ ಅದರ ದರ್ಶನ್ ಕೂಡ ಮಾಡಬಹುದು. ಆಲ್ ದ ಬೆಸ್ಟ್ ಓದುಗರೆ, ವರ್ಶನ್‌ಗಳ ಮೇಲೆ ವರ್ಶನ್‌ಗಳನ್ನು ನೋಡಿ ಈಗಾಗಲೇ ಬೇ-ಸತ್ತಿದ್ದ ನಿಮಗೆ ಇನ್ನೊಂದು ವರ್ಶನ್, ರಾಯರ ವತಿಯಿಂದ! ಗೂಗಲ್‌ಗೆ ಹೋಗಿ "ಕೊಲವೇರಿ ಕಾಕು ವರ್ಶನ್' ಅಂತ ಟೈಪಿಸಿ ನೋಡಿ, ಸಿಕ್ಕೀತು.