ಕಾವ್ಯ ಬಿಂದು: ಮನೋಹರ ಪ್ರಸಾದ್
ಹೊಸ ವರುಷದ ಆಗಮನವೆಂದರೇ ಹಾಗೆ; ಅಪಾರ ನಿರೀಕ್ಷೆಯ ಹೂವು ಅರಳುವ ಹಾಗೆ. ಹೊಸ ವರುಷದ ಹರುಷವೆಂದರೆ ಹಾಗೆ; ಬೆಳದಿಂಗಳ ಕಂಡು ಸಾಗರ ಉಕ್ಕುವ ಹಾಗೆ. ಹೊಸ ವರುಷದ ಕನಸುಗಳೆಂದರೆ ಹಾಗೆ;ಬದುಕಿನ ಹಾದಿಗೆ ನವಿರಿನ ಸ್ಪರ್ಶ ತುಂಬುವ ಹಾಗೆ. ಹೊಸ ವರುಷದ ಸ್ವಾಗತವೆಂದರೆ ಹಾಗೆ; ಕತ್ತಲನು ಕಳೆವ ಸೂರ್ಯ ಉದಯಿಸುವ ಹಾಗೆ. 2012 ರ ನೂತನ ವರ್ಷ ಸರ್ವರಿಗೂ ಸುಖ ಶಾಂತಿ ನೆಮ್ಮದಿಯ ವರ್ಷವಾಗಲೆಂಬ ಶುಭ ಹಾರೈಕೆಗಳೊಂದಿಗೆ.

ಬಂದಿದೆ ಹೊಸ ಸೂರ್ಯೋದಯ
ತಂದಿದೆ ಹೊಸ ಹರುಷೋದಯ
ಇದು ಭುವನದ ಭಾಗ್ಯೋದಯ
ತೆರೆಯಂತೆ ಪುಳಕಿತವೀ ಹೃದಯ

ಆರಂಭವಾಗಿದೆ ಕ್ಷಣಗಣನೆ
ಇಲ್ಲಿಂದ ಪ್ರಪಂಚ ಪರ್ಯಟನೆ
ಸ್ವಾತಂತ್ರ್ಯದ ನವಿರು ಭಾವನೆ
ಹೊಸ ನೋಟಕೆ ಸಂಕೇತ ನೀನೆ

ಹೊಸ ಪಯಣದ ಆರಂಭವಿದು
ನೀಲಾಗಸದ ಅವಕಾಶವಿಹುದು
ಹೊಸ ವರುಷದ ಆರಂಭವಿದು
ಶುಭವಾಗಲೆಂದು ಸಾರುತಿಹುದು

ಜಗವಿದು ಜಾಣ ಚೆಲುವಿನ ತಾಣ
ಕವಿಯ ಮಾತಲ್ಲಿ ರಸದೌತಣ
ಹಾಗೆ ದೂರ ಗುರಿಯತ್ತ ಪಯಣ
ಹೊಸ ವರುಷದ ಅನುಸಂಧಾನ

ಎತ್ತರದಿಂದ ಎತ್ತರಕ್ಕೆ
ಉತ್ತುಂಗದಿಂದ ಉತ್ತುಂಗಕ್ಕೆ
ಔನ್ನತ್ಯದಿಂದ ಔನ್ನತ್ಯಕ್ಕೆ
ಸಾಧ್ಯವಾಗಲಿ ಹೊಸ ವರ್ಷಕ್ಕೆ

ನಿಸರ್ಗದ ಮಡಿಲ ರಮ್ಯತಾಣ
ಕೋಟೆಗಿದು ಶಿಲೆಯ ತೋರಣ
ಕಲೆಯ ಬಲೆಯಂತ ನಿರ್ಮಾಣ
ಹೊಸತನದ ಚಿಂತನೆಗೆ ಆಹ್ವಾನ

ನೆಲಜಲ ಬಾನು ಬಯಲು
ಪ್ರಕೃತಿಯ ಮಮತೆಯ ಮಡಿಲು
ಜತೆಯಾಗಿದೆ ಇಲ್ಲಿ ಕಾವಲು
ಹೊಸ ಸಾಹಸಕೆ ಕಣ್ಗಾವಲು

ಹೊಸ ವರ್ಷಕ್ಕೊಂದು ಇಣುಕು
ಸುಖದಾಯಕವಾಗಲಿ ಬದುಕು
ಹಸಿರ ನಡುವೆ ಹಕ್ಕಿ ಚುರುಕು
ಶುಭವಾಗಲಿ ತಿನ್ನುತ್ತ ಗುಟುಕು

ಚಂದಿರ ಬರೆದ ಚೆಲುವಿನ ಚಿತ್ತಾರ
ಭುವಿಯಾಯಿತು ಬಣ್ಣದ ಸಾಗರ
ಎಲ್ಲೆಲ್ಲೂ ಸುಖದ ಕಂಪನ ಅಪಾರ
ಹೊಸ ವರ್ಷದ ಹರ್ಷ ನಿರಂತರ

ಹೊನಲಾಗಿ ಹರಿಯಲಿ ಹರ್ಷ
ಮೋಡ ಕರಗಿ ಸುರಿಯಲಿ ವರ್ಷ
ಹಸಿರು ನೀಲಿ ಸಮೃದ್ಧಿಯ ಹರ್ಷ
ಸುಖ ಶಾಂತಿ ತರಲಿ ಹೊಸ ವರ್ಷ

ಇದು ಅಲ್ಲ ಬರಿಯ ನೀರ ಹನಿ
ಇದು ಸುರಿವ ಮುತ್ತಿನಾ ಮಣಿ
ಇಂತು ಇಳಿಯಲಿ ಹನಿಯ ಹನಿ
ಹೊಸ ವರುಷಕೆ ಶುಭದ ದನಿ

ಮೊಗ್ಗು ಅರಳುತ ಹೂವಾಗಿ
ಸುರ ಸೌಂದರ್ಯದ ಖನಿಯಾಗಿ
ಕಂಪ ಬೀರುತಲಿ ಮಾಗಿ
ಹೊಸ ವರುಷಕೆ ನಿಮಗಾಗಿ
(ಚಿತ್ರಬಿಂದು: ಸತೀಶ್ ಇರಾ)