Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಾಜಾಂಗಣ
    • ಬಂಗಾರಪ್ಪ ಎಂಬ ವರ್ಣಮಯ ರೂಪಕ
      • ಅರಕೆರೆ ಜಯರಾಮ್‌ | Dec 28, 2011

        ಕರ್ನಾಟಕದಲ್ಲಿ ಬಂಗಾರಪ್ಪ ಅವರಿಗೆ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದರು. ವಿಶೇಷವಾಗಿ ಹಿಂದುಳಿದ ವರ್ಗದವರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರು. ಹಲವಾರು ಪಕ್ಷಗಳ ಲಾಂಛನದಡಿ ಅವರು ಆಯ್ಕೆಯಾಗಿದ್ದರು. ಹಾಗೆ ಹಲವು ಪಕ್ಷಗಳ ಟಿಕೆಟ್‌ನಿಂದ ಆಯ್ಕೆಯಾಗಲು ಕಾರಣ ಅವರಲ್ಲಿದ್ದ ನಾಯಕತ್ವ ಗುಣ.

        ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಅಗಲಿಕೆಗೆ ಅನೇಕರು  ಕಂಬನಿ ಮಿಡಿದಿದ್ದಾರೆ. ಈ ಎಲ್ಲಾ ಶೋಕ ಸೂಚಕ ಹೇಳಿಕೆಗಳು ಹೊರಬಿದ್ದು ಒಂದೆರಡು ದಿನಗಳಾದ ಬಳಿಕ ಈ ನಾಯಕನ ಬಗ್ಗೆ ಇನ್ನೂ ಒಂದು ಮಾತನ್ನು ಹೇಳಬಹುದು.

        ಅವರು ಕಳೆದ 30 ವರ್ಷಗಳ ಅವಧಿಯಲ್ಲಿ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ನಿಜವಾದ ಅರ್ಥದಲ್ಲಿ "ನಾಯಕ' ಎಂದು ಕರೆಸಿಕೊಳ್ಳುವ ಅರ್ಹತೆಯಿದ್ದ ಕೇವಲ ಕೆಲವೇ ಮಹನೀಯರಲ್ಲಿ ಒಬ್ಬರಾಗಿದ್ದರು.

        ಕರ್ನಾಟಕದಲ್ಲಿ ಬಂಗಾರಪ್ಪ ಅವರಿಗೆ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದರು. ವಿಶೇಷವಾಗಿ ಹಿಂದುಳಿದ ವರ್ಗದ ವರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರು. ರಾಜ್ಯದ ವಿಧಾನಸಭೆಗೆ ಅಥವಾ ಇಲ್ಲಿಂದ ಲೋಕಸಭೆಗೆ ಹಲವಾರು ಪಕ್ಷಗಳ ಲಾಂಛನದಡಿ ಅವರು ಆಯ್ಕೆಯಾಗಿದ್ದರು.

        ಹಾಗೆ ಹಲವು ಪಕ್ಷಗಳ ಟಿಕೆಟ್‌ನಿಂದ ಆಯ್ಕೆಯಾಗಲು ಕಾರಣ ಅವರಲ್ಲಿದ್ದ ನಾಯಕತ್ವ ಗುಣ. ಅವರು ಪಕ್ಷಗಳನ್ನು, ಪಕ್ಷಗಳಲ್ಲಿನ ನಿಷ್ಠೆಯನ್ನು ಆಗಾಗ ಬದಲಾಯಿಸುತ್ತಿದ್ದುದಕ್ಕೆ  ಕಾರಣವೂ ಇದೇ ಇರಬಹುದು. ರಾಷ್ಟ್ರದಲ್ಲಿನ ಎಲ್ಲಾ ರಾಜಕೀಯ ರಂಗುಗಳಲ್ಲಿಯೂ ಅವರು ತಮ್ಮನ್ನು ಅದ್ದಿಕೊಂಡಿದ್ದರು.

        ಸಮಾಜವಾದಿ ಪಕ್ಷದಲ್ಲಿ ಒಬ್ಬ ವಾಮ ಪಂಥೀಯನಾಗಿ, ಕಾಂಗ್ರೆಸ್‌ ಪಕ್ಷದ ನಟ್ಟನಡು ರಾಜಕಾರಣಿಯಾಗಿ, ಬಿಜೆಪಿಯಲ್ಲಿ ಓರ್ವ ಬಲಪಂಥೀಯ ನಾಯಕನಾಗಿ, ತನ್ನ ರಾಜಕೀಯ ಜೀವನದ ಈ ಮೂರು ಘಟ್ಟಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದ  ಸಂದರ್ಭಗಳಲ್ಲಿ ಅವರ ಕುರಿತು ನಾನು ವರದಿ ಮಾಡಿದ್ದಿದೆ.

        ಅವರ ಬಗ್ಗೆ ಲೇಖನಗಳನ್ನು ಬರೆ ದಿದ್ದೆ. ಶಿವಮೊಗ್ಗದಿಂದ ಸಮಾಜವಾದಿ ಪಕ್ಷದ ಟಿಕೆಟ್‌ ಮೂಲಕ ಲೋಕಸಭೆಗೆ ಅವರು ಆಯ್ಕೆಯಾದ ಘಟನೆ ಅವರ ರಾಜಕೀಯ ಜೀವನದ ಬಹುದೊಡ್ಡ ವಿಜಯ
        ಗಾಥೆ. ಅದು ಅವರ ವೈಯಕ್ತಿಕ ವಿಜಯವೇ ಆಗಿತ್ತು.

        ಕಾರಣ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಅಸ್ತಿತ್ವವೇ ಇಲ್ಲ. ರಾಜ್ಯಮಟ್ಟದ ಅನೇಕ ನಾಯಕರಂತೆ ಬಂಗಾರಪ್ಪ ಅವರ ನಾಯಕತ್ವಕ್ಕೂ ಅದರದೇ ಆದ ಮಿತಿಗಳಿದ್ದವು, ತಾವು ಅಸ್ತಿತ್ವಕ್ಕೆ ತಂದ ಮೂರು ಪಕ್ಷಗಳಿಂದ (ಕರ್ನಾಟಕ ಕ್ರಾಂತಿಕಾರಿ ಪಕ್ಷ, ಕರ್ನಾಟಕ ಕಾಂಗ್ರೆಸ್‌ ಹಾಗೂ ಕರ್ನಾಟಕ ವಿಕಾಸ್‌ ಪಾರ್ಟಿ) ಅವರು ಸಾಧಿಸಿದ್ದೇನೂ ಇಲ್ಲ, ಕರ್ನಾಟಕ ಕ್ರಾಂತಿಕಾರಿ ಪಕ್ಷವನ್ನು ಅವರು 1873ರಲ್ಲಿ ಸೋಶಲಿಸ್ಟ್‌ ಪಾರ್ಟಿಯನ್ನು ತ್ಯಜಿಸಿದ ಬೆನ್ನಿಗೇ ಹುಟ್ಟು ಹಾಕಿದರು.

        ಆದರೆ ಅದು ಆರಂಭದಲ್ಲೇ ಟುಸ್‌ ಎಂದಿತು. ರಾಜೀವ್‌ ಗಾಂಧಿಯವರ ಕೃಪೆಯಿಂದ ಎಂಬಂತೆ ಅವರು ಕರ್ನಾಟಕದ ಮುಖ್ಯಮಂತ್ರಿಯಾದರು. ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾವ್‌ ಅವರೊಬ್ಬ ದುರ್ಬಲ ನಾಯಕನೆಂಬ ಲೆಕ್ಕಾಚಾರದಿಂದ ಅವರ ಮೇಲೆ ಟೀಕೆಗಳ ಮಳೆಗರೆದರು. ಕ್ರಮೇಣ ಅವರ ವಿರುದ್ಧ ಬಂಡಾಯದ ಬಾವುಟವನ್ನೂ ಹಾರಿಸಿದರು.

        ಪ್ರಧಾನಿಯಾಗಿದ್ದೇ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದ ರಾವ್‌ ಬಂಗಾರಪ್ಪ ಅವರನ್ನು ಕೆಳಗಿಳಿಸಿ ವೀರಪ್ಪ ಮೊಲಿ ಅವರನ್ನು ಪಟ್ಟದಲ್ಲಿ ಕೂರಿಸಿದರು. 1992ರಲ್ಲಿ ಮುಖ್ಯಮಂತ್ರಿಯ ಅಧಿಕಾರ ಮುಕ್ತಾಯ ಕಂಡಾಗ ಬಂಗಾರಪ್ಪನವರ ಪಾಲಿಗೆ ರಾಜಕಾರಣವೆಂಬುದು ಅಕ್ಷರಶಃ ಕಗ್ಗಂಟಾಗಿಯೇ ಮಾರ್ಪಟ್ಟಿತು.

        ಕಾಗೋಡು ತಿಮ್ಮಪ್ಪ ಹಾಗೂ ಕೋಣಂದೂರು ಲಿಂಗಪ್ಪ ಅವರೊಂದಿಗೆ ಕಾಂಗ್ರೆಸ್‌ನೆದುರು ಪರಾಭವ ಅನುಭವಿಸಬೇಕಾಗಿ ಬಂದಾಗ ಬಂಗಾರಪ್ಪ ಸಮಾಜವಾದಕ್ಕೆ ಟಾಟಾ ಹೇಳಿದರು.  ಮುಂದಿನ ಅವರ ರಾಜಕೀಯ ಜೀವನದಲ್ಲಾಗಲೀ, ಜೀವನಶೈಲಿಯಲ್ಲಾಗಲೀ, ಸಮಾಜವಾದದ ಗಂಧ ಗಾಳಿಯೂ ಇರಲಿಲ್ಲ.

        ಅವರು ಸಿರಿವಂತ ಕುಳಗಳಲ್ಲಿ ಒಬ್ಬರಾಗಿ ಬದುಕಿದರು. ಉಳ್ಳವರೊಂದಿಗೆ ಮೈತ್ರಿ ಬೆಳೆಸಿಕೊಂಡರು. ಜನಸಾಮಾನ್ಯರನ್ನು ದೂರವಿಟ್ಟಿದ್ದು ಅವರ ಮುಖ್ಯಮಂತ್ರಿತ್ವದ ಅವಧಿಯ ಲಕ್ಷಣಗಳಲ್ಲಿ ಒಂದು.

        ಆಗ ಅವರಿಗೆ ಹತ್ತಿರವಾಗಿದ್ದವರು ಸೊರಬ ವಿಧಾನಸಭಾ ಕ್ಷೇತ್ರದ ಜನರಷ್ಟೇ. ಅವರು ಶಾಂತವೇರಿ ಗೋಪಾಲ ಗೌಡ ಅಥವಾ ಅಂಥ ಕೈಬೆರಳೆಣಿಕೆಯ ಕಟ್ಟಾ ಸಮಾಜವಾದಿಗಳ ವರ್ಗಕ್ಕೆ ಸೇರಿದವರಲ್ಲ.

        ವಾಸ್ತವವಾಗಿ ಸಮಾಜವಾದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಬಲವಾಗಿಯೇ ಇದ್ದರೂ ಜಾತಿ ಹಾಗೂ ಸಮುದಾಯದಂಥ ಅಂಶಗಳು ಅಲ್ಲಿನ ಸಮಾಜವಾದಿಗಳ ವಿರುದ್ಧವಿದ್ದುದರಿಂದ ಇವರಲ್ಲನೇಕರು ರಾಜಕೀಯದಲ್ಲಿ ಯಶಸ್ಸು ಕಾಣಲಿಲ್ಲ.

        ಅಲ್ಲಿನ ಭೂ ಹಿಡುವಳಿದಾರರಲ್ಲಿ ಹೆಚ್ಚಿನವರು ಬೇರೆಲ್ಲೋ ಇದ್ದು ಗೇಣಿದಾರರ ಮೇಲೆ ಸವಾರಿ ಮಾಡುತ್ತಿದ್ದವರು. ಸಮಾಜವಾದಿಗಳ ಆಸಕ್ತಿ ಇಂಥ ಗೇಣಿಧಣಿಗಳ ಪರೋಕ್ಷ ಜಮೀನಾªರಿಕೆಯನ್ನು ಕೊನೆಗೊಳಿಸುವುದಕ್ಕಷ್ಟೇ ಸೀಮಿತವಾಗಿತ್ತು.

        ಗೇಣಿದಾರರ ಪರವಾದ ಹಲವು ಚಳವಳಿಗಳನ್ನು ಸಮಾಜವಾದಿ ಪಕ್ಷ ಏರ್ಪಡಿಸುತ್ತಿದ್ದುದು ನಿಜವಾದರೂ ಇದರ ಲಾಭ ದಕ್ಕಿಸಿಕೊಂಡದ್ದು ಕಾಂಗ್ರೆಸ್‌ ಪಕ್ಷ (1961ರಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ಹಾಗೂ 1974ರಲ್ಲಿ ಈ ಕಾಯ್ದೆಗೆ ಬೃಹತ್‌ ಸ್ವರೂಪದ ಸಂವಿಧಾನ ತಿದ್ದುಪಡಿ ತರುವ ಮೂಲಕ).

        ಈ ಕಾಯ್ದೆಯ ಬಹುತೇಕ ಶ್ರೇಯಸ್ಸು ಸಲ್ಲಬೇಕಾಗಿದ್ದು ಜತ್ತಿ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಸ್ವತಃ ಗೇಣಿದಾರ ರೈತನ ಪುತ್ರನಾಗಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರಿಗೆ ಮುಂದೆ ದೇವರಾಜ್‌ ಅರಸು ಅವರು ತರಾತುರಿಯಿಂದ 1974ರ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.

        ಇದಕ್ಕೆ ಅವರಿಗೆ ನೆರವಾದುದು ಆಗ ದೇಶದಲ್ಲಿದ್ದ ತುರ್ತು ಪರಿಸ್ಥಿತಿ ಹಾಗೂ ದೇಶಾದ್ಯಂತ ಮೊಳಗುತ್ತಿದ್ದ ಸಮಾಜವಾದ ಹಾಗೂ ರಾಷ್ಟ್ರೀಯತೆ ಕುರಿತ ಶಂಖಧ್ವನಿ.

        ಸಿರಿವಂತ ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ನಡೆಸುತ್ತಿದ್ದ ಶೋಷಣೆ ಹಾಗೂ ಲಾಭಬಡುಕುತನವನ್ನು ಸಮಾಜವಾದಿಗಳು ನಿರ್ಲಕ್ಷಿಸುತ್ತಾ ಹೋದರು. ಇಂಥ ಶೋಷಕ ಪ್ರಭೃತಿಗಳಲ್ಲಿ ಬಹು ಪ್ರಬಲರಾಗಿದ್ದ ಲಿಕ್ಕರ್‌ ಲಾಬಿಕೋರರು ಹಾಗೂ ಸೂಪರ್‌ ಸಿರಿವಂತ ನಗರ ಪ್ರದೇಶಗಳ ಆಸ್ತಿಪಾಸ್ತಿಗಳ ಒಡೆಯರೂ ಸೇರಿದ್ದರು.

        ಅಲ್ಲದೇ ಶ್ರೀಮಂತ ಕುಳಗಳಾಗಿದ್ದ ಕಾಫಿ ಎಸ್ಟೇಟ್‌ ಮಾಲಕರನ್ನೂ ಈ ಸೋಶಲಿಸ್ಟ್‌ ನಾಯಕರು ಅವರ ಪಾಡಿಗೇ ಬಿಟ್ಟರು. ಲಾಗಾಯ್ತಿನಿಂದಲೂ ಆಸ್ತಿಯನ್ನು ಗೇಣಿಗೆ ಕೊಟ್ಟು ಬದುಕುತ್ತಿದ್ದ ಮಧ್ಯಮವರ್ಗದ ಮಂದಿಯನ್ನು ಹಿಂಸಿಸಿ ಅವರನ್ನು ಹಳ್ಳಿಗಳಿಂದ ಹೊರಗೋಡಿಸುವಲ್ಲಿ ಸಮಾಜವಾದಿಗಳು ಯಶಸ್ವಿಯಾದರು.

        ಬಂಗಾರಪ್ಪ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲು ಕಾರಣಗಳು ಹಲವು. ಇಂಥ ಕಾರಣಗಳಲ್ಲಿ ಒಂದು ಅವರ ಅವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು. ಕ್ಲಾಸಿಕ್‌ ಕಂಪ್ಯೂಟರ್‌ ಖರೀದಿ ವ್ಯವಹಾರದಲ್ಲಿ ನಡೆದಿತ್ತೆನ್ನಲಾದ ಆರೋಪ ಅವರನ್ನು ಬಿಗಿಯಾಗಿ ಸುತ್ತಿಕೊಂಡಿತು.

        ಮುಂದೆ ಮುಖ್ಯಮಂತ್ರಿಯಾದ ವೀರಪ್ಪ ಮೊಲಿ ಆ ಹಗರಣವನ್ನು ಸಿಬಿಐಗೆ ಒಪ್ಪಿಸಿದರು. ಈ ಕೇಸಿನಲ್ಲಿ ಬಂಗಾರಪ್ಪ ಅವರನ್ನು ಉಚ್ಚ ನ್ಯಾಯಾಲಯ ದೋಷಮುಕ್ತರೆಂದು ತೀರ್ಪು ನೀಡಿದ್ದು ಈಚೆಗಷ್ಟೇ.
        ಬಂಗಾರಪ್ಪ ಅವರು ಜೆಡಿಎಸ್‌ನಲ್ಲಿ ಎಚ್‌. ಡಿ. ದೇವೇಗೌಡರ ಮಕ್ಕಳಿಗೆ ಎರಡನೆಯ ಪಿಟೀಲುವಾದಕರಾಗಿ ಸಾಥ್‌ ನೀಡಿದ್ದು ದುರದೃಷ್ಟಕರ.

        ಜೆಡಿಎಸ್‌ನಲ್ಲೂ ಎಂ. ಸಿ. ನಾಣಯ್ಯ ಹಾಗೂ ಪಿ. ಜಿ. ಆರ್‌. ಸಿಂಧ್ಯಾರಂಥ ನುರಿತ ನಾಯಕರಿದ್ದರೂ ಜನಾಕರ್ಷಣೆಯ ನಾಡಿಮಿಡಿತ ಬಲ್ಲ ನಾಯಕನೊಬ್ಬನ ಅಗತ್ಯ ಜೆಡಿಎಸ್‌ಗೆ ತುಂಬಾ ಇತ್ತು.

        ಬಂಗಾರಪ್ಪ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಧನೆಯ ಸಮಾವೇಶ ಏರ್ಪಡಿಸಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಅವರ ಪತನ ಆರಂಭವಾಯಿತೆನ್ನಬೇಕು. ಈ ವೈಭವದ ಸಮಾವೇಶ ಅಕ್ಷರಶಃ ದುಂದುಗಾರಿಕೆಯೇ ಆಗಿತ್ತು.

        1983ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕ್ರಾಂತಿರಂಗ, ಜನತಾ ಪಕ್ಷದ ಕಿರಿಯ ಮಿತ್ರಘಟಕವಾಗಿದ್ದರೂ ರಾಜ್ಯದ ಮೊತ್ತಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗುವ ಕನಸನ್ನವರು ಕಂಡಿದ್ದರು. ಆದರೆ ಜನತಾ ಪಕ್ಷದ ನಾಯಕ ರಾಮಕೃಷ್ಣ ಹೆಗಡೆಯವರಿಗೆ ಪಕ್ಷದ ರಾಷ್ಟ್ರೀಯ ನಾಯಕರ ಬೆಂಬಲವಿದ್ದುದರಿಂದ ಹೆಗಡೆ ಅವರು ಈ ಪ್ರಯತ್ನದಲ್ಲಿ ಬಂಗಾರಪ್ಪ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.

        ಆದರೂ ಕರ್ನಾಟಕದ ಜ್ಞಾನಸಂಪನ್ನ ಮುಖ್ಯಮಂತ್ರಿಗಳಲ್ಲಿ ಬಂಗಾರಪ್ಪ ಒಬ್ಬರಾಗಿದ್ದ ರೆಂಬುದನ್ನು ನಾಡು ಮರೆಯುವಂತಿಲ್ಲ. ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್‌ ಪಕ್ಷ ಇವೆರಡರಲ್ಲಿ ಯಾವುದಾದರೂ ಒಂದರ ಮೇಲೆ ನಿಷ್ಠೆಯಿಟ್ಟಿದ್ದಲ್ಲಿ ಅವರು ಇನ್ನಷ್ಟು ಸಾಧಿಸಬಹುದಿತ್ತು.

        ಕರ್ನಾಟಕದ ಜನರಿಗೆ ಇನ್ನಷ್ಟು ಒಳ್ಳೆಯ ಸೇವೆ ನೀಡಬಹುದಿತ್ತು. ಬಿಜೆಪಿ ಸೇರಿದ್ದೇ ಅವರ ದೊಡ್ಡ ತಪ್ಪು. ಆ ಪಕ್ಷಕ್ಕೆ ಸೇರ್ಪಡೆಗೊಳ್ಳುವಾಗ ಅವರು ತಮ್ಮ ರಾಜಕೀಯ ಜೀವನದ ಹಿರಿತನವನ್ನು -ಸೀನಿಯಾರಿಟಿಯನ್ನು ಅದರ ಕಕ್ಷೆಯೊಳಗೆ ಒಯ್ಯಲಾರದೇ ಹೋದರು.

        ಪಕ್ಷಕ್ಕೆ ತಾನು ಅನಪೇಕ್ಷಿತ ವ್ಯಕ್ತಿಯಾಗಿ ಬಿಟ್ಟೆನೆಂಬ ಸತ್ಯವನ್ನು ಅವರು ಬೇಗನೇ ಅರ್ಥಮಾಡಿಕೊಂಡರು. "ನೆಲೆಯಾಗಿ ನೆಲಸಲಾರದವನು ಏನನ್ನೂ ಸಾಧಿಸಲಾರ' ಎಂಬ ಆಂಗ್ಲ ಗಾದೆ ಎಸ್‌. ಬಂಗಾರಪ್ಪ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus