Udayavani | Jan 03, 2012
ಒಂದು ದೇಶ ಎಷ್ಟು ಮುಂದುವರಿದಿದೆ ಎಂಬುದು ಅಲ್ಲಿನ ಶೌಚಾಲಯಗಳನ್ನು ನೋಡಿದರೆ ತಿಳಿಯುತ್ತದೆ ಎಂಬ ಮಾತಿದೆ.
ಈ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಭಾರತ, ಅದರಲ್ಲಿ ಕರ್ನಾಟಕ ಕೂಡ, ಬಹಳ ಹಿಂದುಳಿದಿದೆ.
ಭಾರತದಲ್ಲಿ ಟಾಯ್ಲೆಟ್‌ಗಳಿಗಿಂತ ಹೆಚ್ಚು ಮೊಬೈಲ್ ಫೋನ್‌ಗಳಿವೆ ಎಂದು ವರ್ಷದ ಹಿಂದೆ ವಿಶ್ವಸಂಸ್ಥೆ ಹೇಳಿದಾಗ ನಕ್ಕವರೇ ಹೆಚ್ಚು. ಆದರೆ, ಖಂಡಿತ ಅದು ತಮಾಷೆಯ ವಿಷಯವಾಗಿರಲಿಲ್ಲ. ಭಾರತದ ಜನಸಾಮಾನ್ಯರು ಮೊಬೈಲ್ ಫೋನ್ ಬಳಸುವಷ್ಟು ಮುಂದುವರಿದಿದ್ದಾರೆ, ಆದರೆ ಶೌಚಾಲಯ ಬಳಸದಷ್ಟು ಹಿಂದುಳಿದಿದ್ದಾರೆ ಎಂಬ ಅದರ ಹಿಂದಿನ ವ್ಯಂಗ್ಯವನ್ನು ಅನೇಕರು ಅರ್ಥ ಮಾಡಿಕೊಳ್ಳಲಿಲ್ಲ. ಅರ್ಥ ಮಾಡಿಕೊಂಡವರು ಅಲ್ಲಿಗೇ ಅದನ್ನು ಮರೆತರು.
ಮೊನ್ನೆ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಶೌಚಾಲಯಗಳ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು. ಟಾಯ್ಲೆಟ್ ಬೇಸಿನ್ ಹಿಡಿದುಕೊಂಡು ಅವರು ನಡೆಸಿದ ಪ್ರತಿಭಟನೆ, ಅವರು ಯಾವಾಗಲೂ ನಡೆಸುವ ವಿಭಿನ್ನ ಪ್ರತಿಭಟನೆಗಳಷ್ಟೇ ತಮಾಷೆಯಾಗಿ ಕಂಡಿತಾದರೂ, ಅದರ ಹಿಂದಿನ ಉದ್ದೇಶ ಬಹಳ ಗಂಭೀರವಾದುದು. "ಇಲ್ಲಿ ಮೂತ್ರ ವಿಸರ್ಜನೆ ಮಾಡುವಂತಿಲ್ಲ' ಎಂದು ಪಾಲಿಕೆ ಹಾಕುವ ಬೋರ್ಡ್ ಪಕ್ಕದಲ್ಲಿ "ಹಾಗಾದರೆ ಎಲ್ಲಿ ಮೂತ್ರ ವಿಸರ್ಜಿಸಬೇಕು, ಜಾಗ ತೋರಿಸಿ' ಎಂದು ಬೋರ್ಡ್ ಹಾಕುತ್ತೇವೆ ಎಂದು ವಾಟಾಳ್ ಹೇಳಿದರು. ಅವರ ಮಾತಿಗೆ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜನರ ಸಹಮತವಿದೆ.
ಶೌಚ ಹಾಗೂ ನೈರ್ಮಲ್ಯ ಬಹಳ ಮುಖ್ಯವಾದ ವಿಷಯಗಳು. ಮುಂದುವರಿದ ದೇಶಗಳಲ್ಲಿ ಅದೊಂದು ಸಮಸ್ಯೆಯಲ್ಲ. ಆದರೆ, ಮುಂದುವರಿಯುತ್ತಿರುವ ಹಾಗೂ ಹಿಂದುಳಿದ ದೇಶಗಳು ಅವುಗಳ ಬಗ್ಗೆ ಅತಿ ಹೆಚ್ಚಿನ ಗಮನ ಹರಿಸಿ ಎಂದು ವಿಶ್ವಸಂಸ್ಥೆ ಹಲವು ವರ್ಷಗಳಿಂದ ಹೇಳುತ್ತ ಬಂದಿದೆ. ಸರ್ಕಾರಗಳು ಕೂಡ ಈ ವಿಷಯದ ಬಗ್ಗೆ ತಮ್ಮ ಸಾಧನೆಯ ಅಂಕಿ ಅಂಶಗಳನ್ನು ದಂಡಿಯಾಗಿ ನೀಡುತ್ತವೆ. ಆದರೆ, ತಳಮಟ್ಟದಲ್ಲಿ ಆದ ಕೆಲಸ ಮಾತ್ರ ನಗಣ್ಯ.
ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂ. ಖರ್ಚುಮಾಡುತ್ತದೆ. ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳಲ್ಲಿ ಹೆಚ್ಚಿನವುಗಳ ಸ್ಥಿತಿ ಹೇಗಿದೆ ಅಂದರೆ, ಒಂದೋ ಅವು ಉದ್ಘಾಟನೆಗೆ ಕಾಯುತ್ತ ಬೀಗ ಹಾಕಿಕೊಂಡಿವೆ ಅಥವಾ ಉದ್ಘಾಟನೆಯಾಗಿ ನಿರ್ವಹಣೆಯಿಲ್ಲದೆ ಬೀಗ ಹಾಕಿಕೊಂಡಿವೆ. ಅಪರೂಪಕ್ಕೆ ತೆರೆದಿರುವ ಕೆಲವು ಕಡೆ ಮೂತ್ರ ವಿಸರ್ಜನೆಗೂ ದುಡ್ಡು ಕೇಳುತ್ತಾರೆ ಅಥವಾ ಅಲ್ಲಿ ಹನಿ ನೀರಿಗೆ ಗತಿಯಿರುವುದಿಲ್ಲ. ಪ್ರಮುಖ ನಗರಗಳ ಬಸ್‌ನಿಲ್ದಾಣಗಳನ್ನು ಹೊರತುಪಡಿಸಿ ರಸ್ತೆ ಬದಿ ಇರುವ ಹಾಗೂ ದೊಡ್ಡ ಹಳ್ಳಿಗಳಲ್ಲಿ ನಿರ್ಮಾಣವಾದ ಬಹುತೇಕ ಎಲ್ಲ ಸಾರ್ವಜನಿಕ ಶೌಚಾಲಯಗಳ ದುಸ್ಥಿತಿಯಿದು.
ಒಂದು ದೇಶ ಎಷ್ಟು ಮುಂದುವರಿದಿದೆ ಎಂಬುದು ಅಲ್ಲಿನ ಶೌಚಾಲಯಗಳನ್ನು ನೋಡಿದರೆ ತಿಳಿಯುತ್ತದೆ ಎಂಬ ಮಾತಿದೆ. ಈ ಹೇಳಿಕೆಯನ್ನು ಗಮನದಲ್ಲಿರಿಸಿಕೊಂಡರೆ ಭಾರತ, ಅದರಲ್ಲಿ ಕರ್ನಾಟಕ ಕೂಡ, ಬಹಳ ಹಿಂದುಳಿದಿದೆ.
ನಮ್ಮ ರಾಜ್ಯದಲ್ಲಿ ಇವತ್ತಿಗೂ ಶೇ.70ರಷ್ಟು ಜನರು ಬಯಲಿನಲ್ಲೇ ಶೌಚಕ್ಕೆ ಹೋಗುತ್ತಾರೆ. ಇದೊಂದು ಗಂಭೀರ ಸಮಸ್ಯೆಯಾಗಿ ಸರ್ಕಾರಕ್ಕೇಕೆ ಕಾಣುವುದಿಲ್ಲ? ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆ, ಬೇರೆ ಬೇರೆ ನಗರ-ಪಟ್ಟಣಗಳಲ್ಲಿ ನಗರಸಭೆ ಹಾಗೂ ಪುರಸಭೆಗಳು ಮತ್ತು ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್‌ಗಳು ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಜೊತೆಗೆ, ಜನರಿಗೆ ಮನೆಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದರ ಮಹತ್ವ ಏನು ಎಂಬುದನ್ನು ಅರಿವು ಮಾಡಿಸಿಕೊಡಬೇಕು. ಈ ಮಾತನ್ನು ನಾವು ಕೇಳತೊಡಗಿ ಹತ್ತಾರು ವರ್ಷಗಳು ಕಳೆದಿವೆ. ಈಗಲೂ ಇದನ್ನೇ ಹೇಳಬೇಕಾಗಿದೆ ಎಂಬುದು ವಿಪರ್ಯಾಸವಲ್ಲವೇ?
ಸರಿಯಾದ ನೈರ್ಮಲ್ಯ ವ್ಯವಸ್ಥೆಯಿದ್ದರೆ ಆರೋಗ್ಯಶೀಲ ಸಮಾಜವೊಂದು ನಿರ್ಮಾಣಗೊಳ್ಳುತ್ತದೆ. ಸೋಂಕು ರೋಗಗಳ ಹರಡು ವಿಕೆ ನಿಂತು ಹಲವರ ಪ್ರಾಣ ಉಳಿಯುತ್ತದೆ. ದಿನನಿತ್ಯದ ಮುಜುಗರದಿಂದ ಜನರು ಪಾರಾಗುತ್ತಾರೆ. ಮೇಲಾಗಿ, ದೇಶದ ಘನತೆಯ ಪ್ರಶ್ನೆಯಿದು.
ಮೊಬೈಲ್ ಫೋನ್ ಖರೀದಿಸಿ ಅದಕ್ಕೆ ಪ್ರತಿ ತಿಂಗಳು ಕರೆನ್ಸಿ ಹಾಕಿಸಲು ದುಡ್ಡಿದೆ, ಆದರೆ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಶಕ್ತಿಯಿಲ್ಲವೇ ಎಂಬ ಒಣತರ್ಕ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರಿಗೆ ಈ ಬಗ್ಗೆ ಅರಿವಿನ ಕೊರತೆಯಿದೆ. ಸರ್ಕಾರಕ್ಕೆ ಅರಿವಿದೆ ಆದರೆ ಮರೆವಿನ ರೋಗವಿದೆ. ಇವೆರಡನ್ನೂ ಸರಿಪಡಿಸಲು ಸಾಕಷ್ಟು ಕೆಲಸವಾಗಬೇಕಿದೆ.