Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

    'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Jan 13, 2012 | Comments 11 | ShareShare
------------------------------------------------------------------------------------
ಗಂಟು ( ಸಣ್ಣ ಕಥೆ )


ಗಂಟು

ಕೋಣೆಯಲ್ಲಿದ್ದ ಗಡಿಯಾರವನ್ನು ನೋಡಿದೆ. ಸಮಯ ಅದಾಗಲೇ ಎಂಟು ದಾಟಿತ್ತು. ಸಾಮಾನ್ಯವಾಗಿ ಈ ವೇಳೆಗೆ ನನ್ನ ಬೆಳಗ್ಗಿನ ಉಪಾಹಾರ ಆಗಿರುತ್ತಿತ್ತು. ಉಪಾಹಾರ ಸಿದ್ಧವಾಗುತ್ತಿದ್ದಂತೆಯೇ ಶಂಕರ ಅಥವಾ ಅವನ ಹೆಂಡತಿ ವೀಣಾ ಸೂಚನೆ ಕೊಡುತ್ತಿದ್ದರು. ಆ ಕ್ಷಣಕ್ಕೆ ನಾನು ಕೂಡ ಇನ್ಸುಲಿನ್‌ ಚುಚ್ಚಿಕೊಂಡು ಸಿದ್ಧವಾಗಿರುತ್ತಿದ್ದೆ. ಈಗ ಅಭ್ಯಾಸಬಲದಿಂದ ಇನ್ಸುಲಿನ್‌ ಚುಚ್ಚಿಕೊಂಡಾಗಿದೆ. ಅರ್ಧ ತಾಸಿನೊಳಗೆ ಉಪಾಹಾರ ತೆಗೆದುಕೊಳ್ಳಲೇಬೇಕು. ಏಕೆ ಹೀಗಾಯಿತು ?


ನಾನೇ ಹೊರಕ್ಕೆ ಬಂದೆ. ಶಂಕರನ ಸುಳಿವಿಲ್ಲ. ಮಕ್ಕಳು ಅದಾಗಲೇ ಶಾಲೆಗೆ ಹೋಗಿರುತ್ತಾರೆ. ""ವೀಣಾ...' ಅಂತ ಅಡುಗೆ ಕೋಣೆಯ ಕಡೆಗೆ ಮುಖಮಾಡಿ ಕರೆದೆ. ಪ್ರತ್ಯುತ್ತರವಿಲ್ಲ. ನೇರವಾಗಿ ಡೈನಿಂಗ್‌ ಹಾಲ್‌ಗೆ ಬಂದೆ. ವೀಣಾ ಒಳಗೆ ಕಾಣಿಸಿಕೊಂಡಳು. ""ತಿಂಡಿ ರೆಡಿ ಆಯ್ತಾ?' ದೇಹವನ್ನು ಹಿಡಿಯಾಗಿಸಿಕೊಂಡು ಕೇಳಿದೆ. ""ಮಾಡ್ತಾ ಇದ್ದೇನೆ. ರೆಡಿ ಆದರೆ ಕರೆಯುತ್ತೇನಲ್ಲಾ?' ಅವಳಿಂದ ಉತ್ತರ ಬಂತು. ಈ ರೀತಿಯ ಉಪೇಕ್ಷೆಯ ಧ್ವನಿಯನ್ನು ನಾನು ಕೇಳಿದವನಲ್ಲ. ""ಹಾಗೇನಿಲ್ಲ. ಇನ್ಸುಲಿನ್‌ ತೆಗೆದುಕೊಂಡು ಬಿಟ್ಟಿದ್ದೇನೆ' ಎಂದೆ ತಗ್ಗಿದ ಧ್ವನಿಯಲ್ಲಿ. ""ನೋಡಿ, ಬೆಳಗ್ಗೆ ನನಗೂ ಸಾಕಷ್ಟು ಕೆಲಸವಿದೆ. ಮಕ್ಕಳನ್ನು ಹೊರಡಿಸಬೇಕು. ಅವರಿಗೂ ಈ ದಿನ ಬೇಗ ಹೋಗಬೇಕಾಗಿತ್ತು. ಸ್ವಲ್ಪ ಎಜಸ್ಟ್‌ ಮಾಡ್ಕೊàಳ್ಳಿ' ಎಂದಳು ಪಟಪಟನೆ.


""ಹಾಗೇನಿಲ್ಲ. ನಿಧಾನಕ್ಕಾಗಲಿ. ಶಂಕರ ಏನು ಬೇಗ ಹೊರಟ?' ಎಂದು ಕೇಳಿದೆ. ""ನಿನ್ನೆಯೇ ಹೇಳಿದ್ದಾರಲ್ಲ. ಪ್ರಾರ್ಥನಾಗೆ ಎಂಜಿನಿಯರಿಂಗ್‌ ಓದಲು ಆಸೆ ಇದೆ ಅಂತ. ಪೇಮೆಂಟ್‌ ಸೀಟ್‌ಗಳಿಗೆ ಹಣ ಬೇಕಲ್ವಾ ? ಎಲ್ಲಾದರೂ ಸಾಲ ಸಿಗುತ್ತೇನೋ ಅಂತ ಹುಡುಕಿಕೊಂಡು ಹೋಗಿದ್ದಾರೆ' ಹೀಗೆ ಹೇಳುತ್ತಾ ಉಪ್ಪಿಟ್ಟು ಚಹಾ ತಂದು ಟೇಬಲ್‌ ಮೇಲೆ ಇಟ್ಟಳು. ನಿಜಕ್ಕಾದರೆ, ಕುಕ್ಕಿದಳು.


ಓಹ್‌... ನನಗೀಗ ಈ ತಿಂಡಿಯ ವಿಳಂಬದ ಗುಟ್ಟು ತಿಳಿದುಹೋಯಿತು. ಇದು ನಿನ್ನೆ ಸಂಜೆ ಸಂಜೆ ನಡೆದ ಘಟನೆ. ನಾನು ವಾಕಿಂಗ್‌ ಸಿದ್ಧತೆಯಲ್ಲಿದ್ದೆ. ಕಚೇರಿಯಿಂದ ಬಂದ ಶಂಕರ ಕಾಫಿ ಕುಡಿಯುತ್ತಿದ್ದವ ಹೊರಗೆ ಬಂದ. ""ದೊಡ್ಡಪ್ಪ... ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕಾಗಿದೆ' ಎಂದ ಬಾರಪ್ಪಾ ಅಂತ ಹತ್ತಿರ ಕರೆದೆ. ""ಬೇರೇನಿಲ್ಲ.. ಪ್ರಾರ್ಥನಾಗೆ ಮೆರಿಟ್‌ ಸೀಟ್‌ ಸಿಗಲಿಲ್ಲ. ಪೇಮೆಂಟ್‌ ಸೀಟ್‌. ಹಾಗಾಗಿ, ಸ್ವಲ್ಪ ಹಣ ಬೇಕು' ಅಂದ. ನನಗಿದು ಅನಿರೀಕ್ಷಿತವಾಗಿತ್ತು. ""ಎಷ್ಟು ಬೇಕಾಗಿತ್ತಪ್ಪಾ' ಅಂತ ಕೇಳಿದೆ. ""ಡೊನೇಶನ್‌ ಫೀಸ್‌, ಹಾಸ್ಟೆಲ್‌ ಫೀಸ್‌, ಬುಕ್ಸ್‌' ಅಂತ ಅರುವತ್ತು ಸಾವಿರ ರೂಪಾಯಿಬೇಕು. ನನ್ನ ಬಳಿ ಹತ್ತು ಸಾವಿರ ಇದೆ. ನೀವು ಐವತ್ತು ಸಾವಿರ ಕೊಟ್ಟರೆ ತಿಂಗಳು ತಿಂಗಳು ಅಂತ ಎಜೆಸ್ಟ್‌ ಮಾಡಿಕೊಳ್ಳಬಹುದು' ಅಂದ ನೇರವಾಗಿ.


""ಐವತ್ತು ಸಾವಿರ.. ಅಷ್ಟೊಂದು ಹಣ ಒಮ್ಮೆಲೇ ಎಲ್ಲಿಂದ ತರಲಿ ಶಂಕರ? ತತ್‌ಕ್ಷಣಕ್ಕೆ ಅಂತ ಎಸ್‌ಬಿ ಖಾತೆಯಲ್ಲಿ ಹತ್ತು ಸಾವಿರ ರೂಪಾಯಿ ಇದೆ. ಅಷ್ಟು ಕೊಡ್ಲಾ?' ಅಂತ ಕೇಳಿದೆ ನಾನು. ಆತನ ಮುಖದಲ್ಲಿ ನಿರಾಸೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ""ಎರಡು ದಿನದಲ್ಲಿ ಫೀಸ್‌ ಕಟ್ಟಲೇಬೇಕು ದೊಡ್ಡಪ್ಪಾ. ನಿಮ್ಮ ಫಿಕ್ಸೆಡ್‌ನ‌ಲ್ಲಿ ಇದೆಯಲ್ಲಾ... ಅದನ್ನು ತೆಗೆದು ಬಿಡಿ. ನಿಮ್ಮ ಸುಖ- ಕಷ್ಟದ ಜವಾಬ್ದಾರಿ ನಮ್ಮದೇ ಅಲ್ವಾ... ಈ ಕಷ್ಟಕಾಲಕ್ಕೆ ನೀವು ಸಹಾಯ ಮಾಡದಿದ್ದರೆ ಹೇಗೆ ? ಆ ಮಗುವಿನ ಭವಿಷ್ಯ ನಿಮ್ಮ ಕೈಯಲ್ಲೇ ಇದೆ. ಮತ್ತೆ ಯೋಚನೆ ಮಾಡಿ ಹೇಳಿ. ಎಡ್ಮಿಶನ್‌ ಅಂತೂ ಆಗಲೇ ಬೇಕು' ಎಂದ ಶಂಕರ್‌.


ನನಗಂತೂ ಏನೂ ತೋಚಿರಲಿಲ್ಲ. ನಿವೃತ್ತನಾದಾಗ ಸರ್ವೀಸ್‌, ಗ್ರಾಚುಯಿಟಿ ಅಂತ ಒಂದಿಷ್ಟು ಮೊತ್ತ ಸಿಕ್ಕಿದ್ದು ಹೌದು. ಇನ್ನುಳಿದ ಜೀವನಕ್ಕೆ ನನಗೆ ಇದೇ ಆಧಾರ ಅಲ್ವಾ...? ""ನಾಳೆ ನೋಡುವಾ ಶಂಕರಾ, ಬ್ಯಾಂಕಿನವರಲ್ಲಿ ಒಂದು ಮಾತು ಕೇಳಿ ನೋಡುತ್ತೇನೆ' ಅಂದಿದ್ದೆ. ಬಳಿಕ ನೆನಪಾಯಿತು. ಬ್ಯಾಂಕಿನಿಂದ‌ ಈಗ ತೆಗೆದರೆ ಯಾವುದೇ ಬಡ್ಡಿ ದೊರೆಯುವುದಿಲ್ಲ. ಸಿಕ್ಕಿದರೂ ಅದಕ್ಕೆ ಫಿಕ್ಸೆಡ್‌ ಡೆಪಾಸಿಟ್‌ ಅಥವಾ ಹಿರಿಯ ನಾಗರಿಕರ ಕೊಡುಗೆಗಳು ಅನ್ವಯಿಸುವುದಿಲ್ಲ. ""ಶಂಕರಾ, ಹತ್ತು ಸಾವಿರ ಕೊಡುತ್ತೇನೆ. ಉಳಿದದ್ದು ಎಜುಕೇಶನ್‌ ಲೋನ್‌ ತೆಗೆದುಕೋ. ನನ್ನ ಠೇವಣಿಯನ್ನು ಅದಕ್ಕೆ ಜಾಮೀನು ಮಾಡೋಣ' ಅಂದೆ. ಅವನಿಂದ ತತ್‌ಕ್ಷಣಕ್ಕೆ ಉತ್ತರ ಬರಲಿಲ್ಲ. ನಾನು ವಾಕಿಂಗ್‌ ಹೊರಟಿದ್ದೆ.


ನಿನ್ನೆಯ ಘಟನೆಗಳನ್ನು ಮೆಲುಕಾಡುತ್ತಾ ಉಪಾಹಾರ ಮುಗಿಸಿದೆ. ಉಪ್ಪಿಟ್ಟು ತಣ್ಣಗಿತ್ತು. ಚಹಾಕ್ಕೆ ಸಕ್ಕರೆ ಹಾಕಿದಂತಿತ್ತು. ಅದು ಕೂಡ ತಣ್ಣಗಾಗಿತ್ತು. ನಾನಂತೂ ಏನು ಕೊಟ್ಟರೂ ತಿನ್ನಬೇಕಿತ್ತು. ಏಕೆಂದರೆ, ಉಪಾಹಾರದ ಬಳಿಕ ಇನ್ನೊಂದು ಮಾತ್ರೆ ನುಂಗುವುದು ಅನಿವಾರ್ಯವಾಗಿತ್ತು. ನನ್ನ ಬದುಕಿನುದ್ದಕ್ಕೂ ಈ ಡಯಾಬಿಟಿಸ್‌ನ ಚಿತ್ರಹಿಂಸೆ ಸಂಗಾತಿಯಾಗಿಯೇ ಇರುವುದಲ್ಲ. ಏನು ಮಾಡೋಣ? ಕೈತೊಳೆದು ಹೊರಗೆ ಬರುತ್ತಿದ್ದಂತೆಯೇ ವೀಣಾ ಫೋನ್‌ನಲ್ಲಿ ಯಾರೊಂದಿಗೋ ಮಾತು ಆರಂಭಿಸಿದ್ದಳು. ""ಇಲ್ಲ, ಸಮಯವಿಲ್ಲ, ನಮ್ಮ ಬಳಿ ಹಣವಿಲ್ಲ. ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿಸದಿದ್ದರೆ ಪ್ರಾರ್ಥನಾ ಏನಾದರೂ ಮಾಡಿಕೊಳ್ಳುತ್ತಾಳೆಯೋ ಎಂಬ ಭಯ ಹೆಚ್ಚುತ್ತಿದೆ. ಟಿ.ವಿ.ಯಲ್ಲಂತೂ ದಿನಾಲೂ ಇಂಥದ್ದೇ ಸುದ್ದಿ.


ನಮಗೆ ಸಹಾಯ ಮಾಡಲು ಯಾರಿದ್ದಾರೆ ? ಸಹಾಯ ಮಾಡಲು ಸಾಧ್ಯವಿರುವವರಿಗೆ ಮನಸ್ಸು ಬೇಕಲ್ಲ? ನಮಗೆ ಮಾತ್ರ ಬಂಧು-ಬಳಗ, ಹಾಗೆಹೀಗೆ ಅಂತ ಪಾಪಪುಣ್ಯ. ಎಲ್ಲರದ್ದೂ ಸ್ವಾರ್ಥ. ಏನು ಮಾಡಲೂ ತೋಚುತ್ತಿಲ್ಲ..' ಅಂತೆಲ್ಲ ಅವಳು ಗಟ್ಟಿಯಾಗಿ ಹೇಳುತ್ತಿರುವುದು ಕೇಳಿಸಿತು. ಪೋನಿನ ಆಚೆ ಬದಿಯಲ್ಲಿ ಯಾರಾದರೂ ಇದ್ದರೋ ಇಲ್ಲವೋ ಗೊತ್ತಿಲ್ಲ. ಅವಳು ಹೇಳಬೇಕಾಗಿದ್ದುದು ನನಗೇ ಅನ್ನುವುದು ಅವಳ ವರಸೆಯಿಂದ ಗೊತ್ತಾಗಿ ಹೋಗಿತ್ತು. ನಾನು ಅದನ್ನು ಕೇಳಿಕೊಂಡೇ ಇಲ್ಲ ಎಂಬಂತೆ ನನ್ನ ಕೋಣೆಗೆ ಹೋದೆ. ನಾನು ನಿವೃತ್ತನಾಗಿ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಘಟನಾವಳಿ ಸ್ಮೃತಿಪಟಲದಲ್ಲಿ ಹಾದು ಹೋಗಲಾರಂಭಿಸಿತು.
* * * *

ನನ್ನ ಇಪ್ಪತ್ನಾಲ್ಕರ ಹರೆಯದಲ್ಲೇ ನನ್ನನ್ನು ಅಂಟಿಕೊಂಡದ್ದು ಮಧುಮೇಹ. ಅದು ಕೂಡ ತೀವ್ರ ಸ್ವರೂಪದಲ್ಲಿ ಒಂದೆರಡು ವರ್ಷಗಳಲ್ಲಿ ಇನ್ಸುಲಿನ್‌ ನನ್ನನ್ನು ಬಿಡದ ಸಂಗಾತಿಯಾಯಿತು. ಆಧುನಿಕ ಕಾಲಘಟ್ಟದಲ್ಲಿ ಸಾಕಷ್ಟು ಚಿಕಿತ್ಸಾಕ್ರಮಗಳಿವೆ. ಮಧುಮೇಹದ ನಿಯಂತ್ರಣ ಕೂಡ ಈಗ ಸುಲಭಸಾಧ್ಯ. ಆದರೆ, ನನ್ನ ವೃತ್ತಿಜೀವನ ಮಾತ್ರ ಇದಕ್ಕೆ ಪೂರಕ ಆಗಿರಲಿಲ್ಲ. ನಿರಂತರ ಪ್ರಯಾಣ, ತಡರಾತ್ರಿಗಳು, ತಡ ಮುಂಜಾನೆ, ವ್ಯಾಯಾಮರಾಹಿತ್ಯ, ಅನಪೇಕ್ಷಿತ ಆಹಾರ ಪದ್ಧತಿ ಇತ್ಯಾದಿಗಳಿಂದ ನನಗೆ ನಿಯಂತ್ರಣ ಸುಲಭವಾಗಲಿಲ್ಲ.


ಮಧುಮೇಹದ ಪಾರ್ಶ್ವ ಪರಿಣಾಮಗಳಿಗೂ ನಾನು ಬಲು ಬೇಗ ತುತ್ತಾಗಿಬಿಟ್ಟೆ. ಒತ್ತಡರಹಿತ ಜೀವನ ನಿರ್ವಹಿಸಬೇಕು ಎಂದು ಸಲಹೆ ಕೊಟ್ಟರು ವೈದ್ಯರು. ಆದರೆ, ನನ್ನ ವೃತ್ತಿಜೀವನದ ಪ್ರತಿ ಹಂತವೂ ಒತ್ತಡದಿಂದಲೇ ಕೂಡಿತ್ತು. ನನ್ನ ಸಂಸ್ಥೆಯ ಸಾರ್ವಜನಿಕ ಸಂಪರ್ಕ, ಹೊಸ ಉತ್ಪನ್ನಗಳ ಮಾರುಕಟ್ಟೆ ಟಂಡರ್‌ ಪ್ರಕ್ರಿಯೆ ಇತ್ಯಾದಿಗಳೆಲ್ಲ ನನ್ನ ಪ್ರಧಾನ ಕರ್ತವ್ಯಗಳಾಗಿದ್ದವು. ಪಾರ್ಟಿ ಇತ್ಯಾದಿಗಳು ನಡೆಯುತ್ತಲೇ ಇದ್ದವು. ಈ ಎಲ್ಲಾ ಹಿನ್ನೆಲೆಗಳಲ್ಲಿ ನಾನು ಮದುವೆಯಾಗದಿರಲು ನಿರ್ಧಾರ ಮಾಡಿದ್ದೆ. ನನ್ನ ಆರೋಗ್ಯದ ವೈಪರೀತ್ಯ ಈ ನಿರ್ಧಾರಕ್ಕೆ ಪೂರಕವಾಗಿತ್ತು. ಆದರೆ, ಮಧುಮೇಹವಿದ್ದರೂ ಅನೇಕ ಮಂದಿ ವಿವಾಹಿತರಾಗಿ ಸಮಾಧಾನದ, ಸಾಂಸಾರಿಕ ಸಂಬಂಧವನ್ನು ನಡೆಸುತ್ತಿರುವುದನ್ನು ಕಂಡಾಗ ನಾನು ಆಗ ಮಾಡಿದ ನಿರ್ಧಾರ ಸರಿಯಲ್ಲವೆಂದು ಈಗ ಅನೇಕ ಬಾರಿ ಅನಿಸುವುದಿದೆ.


ಇರಲಿ, ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತಿದೆ. ನನ್ನ ಹಳೆಯ ನಿರ್ಧಾರಕ್ಕೆ ಈಗ ಚಿಂತಿಸಿ ಏನು ಫಲ ? ಬದುಕಿನ ಬಂಡಿಯೇ ವಿಚಿತ್ರ. ಉಳಿದ ಎಲ್ಲಾ ಬಂಡಿಗಳಲ್ಲಿ ರಿವರ್ಸ್‌ ಗೇರ್‌ ಎಂಬ ಸೌಲಭ್ಯವಿದೆ. ಬಂದ ಹಾದಿಯಲ್ಲಿ ಆ ಮೂಲಕ ಹಿಂದೆ ಹೋಗಬಹುದು. ಆದರೆ, ಬದುಕಿನ ಬಂಡಿಯಲ್ಲಿ ಆ ಸೌಲಭ್ಯವಿಲ್ಲ. ಸಾಗಿ ಬಂದ ಹಾದಿಯನ್ನು ಹಿಂದಿರುಗಿ ನೋಡಬಹುದು ಅಷ್ಟೆ.


ಮನೆಯವರು ಸಾಕಷ್ಟು ಒತ್ತಾಯ ಮಾಡಿದರು. ಫಲ ದೊರೆಯದಾಗ ಅವರೂ ಸುಮ್ಮನಾದರು. ಹೀಗೆ ಸಾಗಿತು ನನ್ನ ಬದುಕು. ವೃತ್ತಿಯ ವೈವಿಧ್ಯದಿಂದ ಏಕಾಂಗಿತನ ಕಾಡಲಿಲ್ಲ. ಊಟ, ತಿಂಡಿಗಳಿಗೆ ಕಚೇರಿಯ ಮೆಸ್‌ ಸೌಲಭ್ಯವಿತ್ತು. ಕಚೇರಿಯ ಪಕ್ಕದಲ್ಲೇ ನನ್ನ ವಸತಿ ಕೂಡ. ಆದರೆ, ಮುಂದೇನು ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು ಕಚೇರಿಯಲ್ಲಿ ನನಗೆ ವಿದಾಯಕೂಟ ಏರ್ಪಡಿಸಿದಾಗ. ನಾಳೆಯಿಂದ ಎಲ್ಲಿಗೆ ಹೋಗೋಣ ಎಂಬ ಪ್ರಶ್ನೆ ಬೃಹದಾಕಾರ ತಳೆದು, ನನ್ನ ಎದುರು ಬಂದು ನಿಂತಿತ್ತು. ಪೂರ್ವಜರ ಮನೆ ಬೇರೆ ಕಾರಣಗಳಿಂದ ಬೇರೆಯವರ ಪಾಲಾಗಿತ್ತು. ಆ ಹಳ್ಳಿಮನೆಯ ಪಾಲು ದೊರೆತರೂ ಅಲ್ಲಿ ನನ್ನ ಔಷಧಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿರಲಿಲ್ಲ.


ಈ ವೇಳೆ, ದಿಢೀರನೆ ನನ್ನನ್ನು ಹುಡುಕಿಕೊಂಡು ಬಂದದ್ದು ನನ್ನ ಮಾವನ ಮಗ ಆನಂದ. ಬಾಲ್ಯದಿಂದಲೂ ಅವನು ನನ್ನನ್ನು ಅಣ್ಣ ಎಂದೇ ಕರೆಯುತ್ತಿದ್ದ. ಖಾಸಗಿ ಸಂಸ್ಥೆಯೊಂದರಲ್ಲಿ ಅವನ ಉದ್ಯೋಗ. ಕಚೇರಿಯ ವಸತಿಯನ್ನು ನಾನು ಬಿಡಲು ಒಂದು ತಿಂಗಳ ಕಾಲಾವಧಿಇತ್ತು. ಅಷ್ಟರೊಳಗೆ ಆನಂದ ಬಂದ. ಒಂದಿಷ್ಟು ಕುಶಲೋಪರಿ ನಡೆಯಿತು. ಬಳಿಕ ಅವನು, ""ಮುಂದೆ ಏನು ಮಾಡಬೇಕಂತ ನಿರ್ಧಾರ ಮಾಡಿದ್ದೀರಿ?' ಅಂತ ಕೇಳಿದ. ""ಇನ್ನು ಬೇರೆ ಕೆಲಸ ಅಂತ ಮಾಡುವುದಿಲ್ಲ. ಆರೋಗ್ಯ ಕೂಡ ಕೈಕೊಡುತ್ತಿದೆ. ಪೆನ್ಶನ್‌ ಅಂತ ತಿಂಗಳ ಖರ್ಚಿಗೆ ಸಾಕಾಗುವಷ್ಟು ಸಿಗುತ್ತದೆ. ಮತ್ತೆ ಗ್ರಾಚುಯಿಟಿ ಅಂತೆಲ್ಲಾ ಒಂದಿಷ್ಟು ಸಿಕ್ಕಿದೆ. ಬ್ಯಾಂಕಿನಲ್ಲಿ ಇಟ್ಟರೆ ಬಡ್ಡಿ ಬರುತ್ತದೆ. ಹೇಗೋ ಜೀವನ ಅಂತ ಸಾಗಬೇಕು... ""ನಾನು ನನ್ನ ಚಿಂತನೆಯನ್ನು ಅವನ ಮುಂದೆ ಬಿಡಿಸಿಟ್ಟೆ. ""ಅಣ್ಣಾ, ನೀವೇನೂ ತಪ್ಪು ತಿಳಿದುಕೊಳ್ಳುವುದಿಲ್ಲವೆಂದಾದರೆ ನನ್ನದೊಂದು ಸಲಹೆ ಇದೆ. ಹೇಳಬಹುದಾ?' ಅಂತ ಕೇಳಿದೆ. ನಾನು ಹೇಳುವಂತೆ ಸೂಚಿಸಿದೆ.


""ನೀವು ನನ್ನ ಮನೆಗೇ ಏಕೆ ಬರಬಾರದು ? ಅವಳು ಕೂಡ ಇದೇ ಮಾತನ್ನು ಹೇಳಿದ್ದಾಳೆ. ನಾವು ಮೂವರೇ ಮನೆಯಲ್ಲಿ ಇರುವುದು. ನಾಲ್ಕನೆಯವರಾಗಿ ನೀವೇನೂ ನಮಗೆ ಹೆಚ್ಚಲ್ಲ. ಪ್ರತ್ಯೇಕ ಒಂದು ಕೋಣೆ ಕೂಡ ಇದೆ. ನೀವು ಈ ಇಳಿ ವಯಸ್ಸಿನಲ್ಲಿ ಹಾಯಾಗಿ ಇರಬಹುದು. ನಮ್ಮ ಮಗ ಅರ್ಜುನ್‌ ನಿಮಗೆ ತುಂಬಾ ಇಷ್ಟವಾಗಬಹುದು. ನೀವು ಇನ್ನು ಒಂದೆರಡು ದಿನಗಳಲ್ಲಿ ಯೋಚನೆ ಮಾಡಿ ಹೇಳಿ. ಹಾnಂ... ಹಾಗಂತ ನಿಮಗೆ ಮುಜುಗರವಾಗುವುದಾದರೆ ಅವನ ಖರ್ಚಿಗೆ ಅಂತ ತಿಂಗಳಿಗೆ ಏನಾದರೂ ಕೊಟ್ಟುಬಿಡಿ. ನಿಜಕ್ಕಾದರೆ, ಅದರ ಅಗತ್ಯವಿಲ್ಲ. ಆದರೆ, ನಿಮ್ಮ ಸ್ವಾಭಿಮಾನಕ್ಕೆ ಅಡ್ಡಿಯಾಗಬಾರದು ಎಂಬ ಮಾತ್ರಕ್ಕೆ ಈ ಮಾತು ಹೇಳಿದೆ. ನೀವು ಒಪ್ಪಿಗೆ ಕೊಡುವಿರಾದರೆ ನಮಗೆ ತುಂಬಾ ಸಂತೋಷವಾಗುತ್ತದೆ' ಎಂದು ತುಂಬು ಅಭಿಮಾನದಿಂದ ಹೇಳಿದ. ನನಗೆ ಇದು ಆಶ್ಚರ್ಯಕರ ವಿದ್ಯಮಾನವಾಗಿತ್ತು. ಆದರೆ, ಮುಂದೇನು ಎಂಬ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳದಿರುವಾಗ ಈ ಅನಿರೀಕ್ಷಿತ ಬೆಳವಣಿಗೆ ಆಘಾತಕರವಾಗಿ ನಡೆದಿತ್ತು.


""ನಿನ್ನ ದೊಡ್ಡತನಕ್ಕೆ ನಾನು ಋಣಿಯಾಗಿದ್ದೇನೆ. ಎರಡು ದಿನ ಸಮಯ ಕೊಡು. ಯೋಚಿಸಿ ಹೇಳುತ್ತೇನೆ' ಅಂತ ಅವನನ್ನು ಬೀಳ್ಕೊಟ್ಟೆ. ಬಳಿಕದ ಎರಡು ದಿನಗಳು ನನ್ನ ಪಾಲಿಗೆ ನಿದ್ದೆ ಇಲ್ಲದ ದಿನಗಳಾಗಿ ಪರಿವರ್ತನೆಯಾದವು. ಈ ನಡುವೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ. ಯಾವುದೂ ಸರಿಯಾಗಿ ಕಂಡುಬರಲಿಲ್ಲ. ಆನಂದನ ಸಲಹೆಯೇ ಆಪ್ತವಾಗಿ ಕಂಡುಬರಲಾರಂಭಿಸಿತು. ಹಾಗಂತ ಸಲಹೆ ಅವನ ಕಡೆಯಿಂದಲೇ ಬಂದಿದೆ. ತಿಂಗಳಿಗೆ ಹೇಗಿದ್ದರೂ ನನ್ನ ಪೆನ್ಶನ್‌ ಮೊತ್ತವಿದೆ. ಆನಂದನಿಗೆ ಅದರಲ್ಲೇ ಕೊಟ್ಟರಾಯಿತು. ನನ್ನ ಭವಿಷ್ಯದ ದಿನಗಳು ಹೀಗೆ ಸುಲಭವಾಗಿ ಸಾಗಬಹುದು ಎಂದು ಮನಸ್ಸು ನಿರಾಳವಾಯಿತು.


ಎರಡು ದಿನ ಕಳೆದು ಅವನನ್ನು ಸಂಪರ್ಕಿಸಿದೆ. ಮರುದಿನ ಬಂದ. ನಾನು ಅವನ ಮನೆಗೆ ತೆರಳಿದೆ. ಸಾಮಾನ್ಯವಾದ ಮನೆ. ಆದರೆ, ಪ್ರಶಾಂತ ವಾತಾವರಣವಿತ್ತು. ಆನಂದನ ಹೆಂಡತಿ ಶಾಲಿನಿ. ಅವಳು ಕೂಡ ನಮ್ಮ ಕುಟುಂಬದವಳೇ. ಮಗ ಅರ್ಜುನ್‌ ಮುದ್ದಾಗಿದ್ದ. ನನ್ನ ಸಕ್ಕರೆ ತಾಪತ್ರಯಗಳನ್ನು ಅವಳ ಜತೆ ಹೇಳಿಕೊಂಡೆ. ""ನೀವೇನೂ ಚಿಂತೆ ಮಾಡಬೇಡಿ. ನಾನು ಅದೆಲ್ಲವನ್ನೂ ತಿಳಿದುಕೊಂಡಿದ್ದೇನೆ' ಎಂದು ಅವಳು ಹೇಳಿದಾಗ ನನ್ನಲ್ಲಿ ಮತ್ತಷ್ಟು ವಿಶ್ವಾಸ ತುಂಬಿಕೊಂಡಿತು. ಎರಡು ದಿನಗಳಲ್ಲಿ ನಾನು ಆ ಮನೆಗೆ ಸ್ಥಳಾಂತರಗೊಂಡೆ.


ಆನಂದನ ಮನೆಯ ಪಕ್ಕದಲ್ಲೇ ಬ್ಯಾಂಕ್‌ ಇತ್ತು. ನನ್ನ ಮೊತ್ತವನ್ನು ಅಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಆಗಿ ಇರಿಸಿದೆ. ಮಾಸಿಕ ಪಿಂಚಣಿಯನ್ನು ಕೂಡ ಅಲ್ಲಿಂದಲೇ ಪಡೆಯುವ ವ್ಯವಸ್ಥೆ ಮಾಡಿಕೊಂಡೆ. ಕೆಲವೇ ದಿನಗಳಲ್ಲಿ ಅರ್ಜುನ್‌ ನನಗೆ ಹೊಂದಿಕೊಂಡ. ಅವನ ಶಾಲಾ ಸಂಬಂಧಿತ ಚಟುವಟಿಕೆಗಳಲ್ಲಿ ನೆರವಾಗುವುದು ನನಗೆ ಹೊತ್ತು ಕಳೆಯುವುದಕ್ಕೂ ಅನುಕೂಲವಾಯಿತು. ನನ್ನ ಹಳೆಯ ಸಹೋದ್ಯೋಗಿಗಳು ಆಗಾಗ ಭೇಟಿಯಾಗುತ್ತಿದ್ದರು. ಹೀಗೆ, ಐದಾರು ತಿಂಗಳು ನೆಮ್ಮದಿಯಿಂದಲೇ ಸಾಗಿತು.


ಆ ದಿನ... ನನಗೆ ಪ್ರತಿಕ್ಷಣವೂ ನೆನಪಿದೆ. ಅಂದು ಮುಂಜಾನೆಯಿಂದಲೇ ಆನಂದ, ಶಾಲಿನಿ ಗಡಿಬಿಡಿಯ ರೀತಿಯಲ್ಲಿದ್ದರು. ಒಳಗೇ ಪಿಸುಮಾತು. ಒಮ್ಮೊಮ್ಮೆ ಏರುಧ್ವನಿ. ಅರ್ಜುನ್‌ನ ಮೇಲೆ ಕೋಪ. ಏನೋ ಸಮಸ್ಯೆ ಉಂಟಾಗಿದೆ ಅನಿಸಿತು ನನಗೆ. ನಾನಾಗಿ ಕೇಳುವುದು ಸರಿಯಲ್ಲ ಅಂತ ಹೊರಗೆ ಬಂದು ಕುಳಿತುಕೊಂಡೆ. ಆನಂದ ಅಲ್ಲಿಗೆ ಬಂದ. ""ಏನಾದರೂ ತೊಂದರೆಯಾಗಿದೆಯಾ ಆನಂದ?' ಅಂತ ಕೇಳಿದೆ.


""ನಮ್ಮ ತಾಪತ್ರಯ ಇದ್ದದ್ದೇ. ಅದರಲ್ಲಿ ನಿಮ್ಮನ್ನು ಎಳೆಯುವುದೇಕೆ?' ಅಂತ ಅವನೇ ಪ್ರಶ್ನಿಸಿದ. ""ನಾನೀಗ ನಿನ್ನ ಮನೆಯವನೇ ಅಲ್ಲವಾ? ಕಷ್ಟ-ಸುಖದಲ್ಲಿ ನನ್ನ ಪಾಲು ಕೂಡ ಇದೆ. ಏನು ಅಂತ ಹೇಳಿಬಿಡು' ಅಂದೆ.


""ಅಣ್ಣಾ, ನಾವು ಈ ಮನೆಯಲ್ಲಿ ಬಾಡಿಗೆಗೆ ಇರುವುದು ತಾನೆ? ಮುಂದಿನ ವಾರಕ್ಕೆ ಎಗ್ರಿಮೆಂಟ್‌ ಪೂರ್ಣವಾಗುತ್ತದೆ. ಮನೆ ಬಿಡಬೇಕು ಅಂತ ಮನೆಯ ಮಾಲಕ ಹೇಳಿ ಕಳುಹಿಸಿದ್ದಾನೆ. ಒಮ್ಮೆಲೇ ನಾವು ಹೋಗುವುದಾದರೂ ಎಲ್ಲಿಗೆ ? ನಿಮ್ಮ ಜವಾಬ್ದಾರಿಯೂ ನಮಗೆ ಇದೆಯಲ್ಲವೇ?' ಹೇಳುತ್ತಾ ನನ್ನ ಮುಖ ನೋಡಿದ. ಮತ್ತೆ ಮುಂದುವರಿಸಿದ, ""ಅಣ್ಣಾ, ಅವನು ಈ ಮನೆಯನ್ನು ಬೇಕಾದರೆೆ ಖರೀದಿಸಬಹುದು ಎಂಬ ಮಾತನ್ನು ಸೇರಿಸಿದ್ದಾನೆ. ಅವನಿಗೆ ಹಣದ ತುರ್ತು ಇದೆಯಂತೆ. ಆದರೆ, ನಾವು ತುರ್ತಾಗಿ ಅಷ್ಟು ಹಣ ತರುವುದಾದರೂ ಎಲ್ಲಿಂದ?' ನನಗೂ ಇದು ತೀವ್ರ ಇಕ್ಕಟ್ಟಿಗೆ ಬಂದ ಪ್ರಸಂಗ ಎಂಬಂತಾಯಿತು.


""ಅಣ್ಣಾ ನನಗೊಂದು ಯೋಚನೆ ಬಂದಿದೆ. ನಿಮ್ಮ ಫಿಕ್ಸೆಡ್‌ ಡೆಪಾಸಿಟ್‌ನಿಂದ ಮೊತ್ತ ಪಡೆಯೋಣವೇ? ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ. ಶಾಲಿನಿಯ ಹತ್ತಿರ ಸ್ವಲ್ಪ ಒಡವೆ ಇದೆ. ಅದನ್ನು ಅಡವಿಟ್ಟು ಉಳಿದ ಹಣ ಹೊಂದಿಸಿಕೊಳ್ಳುತ್ತೇನೆ. ಬೇರೆ ಬಾಡಿಗೆ ಮನೆ ಹುಡುಕಹುದು. ಆದರೆ, ಈಗ ಇರುವ ಮನೆ ನಿಮಗೆ ಕೂಡಾ ತುಂಬಾ ಅನುಕೂಲವಿದೆ. ಮತ್ತೆ, ನೀವು ದುಡಿದ ಹಣ. ನನಗೆ ಕೇಳುವ ಹಕ್ಕು ಇಲ್ಲ. ಬೇಕಾದರೆ, ಮನೆಯನ್ನು ಇಬ್ಬರ ಹೆಸರಿನಲ್ಲಿ ಒಟ್ಟಿಗೆ ರಿಜಿಸ್ಟಿÅ ಮಾಡಿಕೊಳ್ಳೋಣ' ಎಂದು ಒಂದೇ ಉಸಿರಿನಲ್ಲಿ ಹೇಳಿದ.


ನಾನು ಈ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಒಂದಿಷ್ಟು ಮೊತ್ತ ಬ್ಯಾಂಕಿನಲ್ಲಿ ಇರಿಸಿದ್ದು ಸತ್ಯ. ಮುಂದೆ ನನ್ನ ಆರೋಗ್ಯಕ್ಕೆ ಸಂಬಂಧಿಸಿ ಏನಾದರೂ ದೊಡ್ಡ ಸಮಸ್ಯೆ ಉಂಟಾದರೆ ಈ ಮೊತ್ತ ಇರಲಿ ಎಂಬುದು ನನ್ನ ಯೋಚನೆಯಾಗಿತ್ತು. ಆ ಸಂದರ್ಭದಲ್ಲಿ ನನ್ನ ಆಸ್ಪತ್ರೆಯ ವೆಚ್ಚವನ್ನು ಪೆನ್ಶನ್‌ ಮೊತ್ತದಲ್ಲಿ ಭರಿಸಲು ಸಾಧ್ಯವಾಗಲಿಕ್ಕಿಲ್ಲ ಎಂಬ ಯೋಚನೆಯು ನನ್ನದಾಗಿತ್ತು. ಅಂದ ಹಾಗೆ, ಈ ಮೊತ್ತವನ್ನು ಬ್ಯಾಂಕಿನಲ್ಲಿ ಇರಿಸುವಾಗ ಆನಂದನನ್ನೇ ನಾನು ನಾಮಿನಿಯನ್ನಾಗಿ ಮಾಡಿದ್ದೆ. ಇದು ಆನಂದನಿಗೂ ಗೊತ್ತಿತ್ತು.


""ನಾನು ಈ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಮಾಲಕನ ಬಳಿ ಒಂದು ತಿಂಗಳ ಸಮಯ ಕೇಳು. ಮತ್ತೆ ನಿರ್ಧಾರ ಮಾಡೋಣ' ಅಂದೆ. ಒಪ್ಪಿಕೊಂಡ. ವಾರ ಕಳೆಯಿತು. ""ಆನಂದ... ನನ್ನ ಆರೋಗ್ಯ ಯಾವಾಗ ಕೈಕೊಡುತ್ತದೆ ಅಂತ ತಿಳಿಯುವುದಿಲ್ಲ. ಆದ್ದರಿಂದ ಆಗ ನಾನು ನಿನಗೆ ಹೊರೆಯಾಗಬಾರದು. ನೀನು ಮನೆ ಖರೀದಿಗೆ ಸಾಲ ಪಡೆದುಕೊಳ್ಳು. ನನ್ನ ಠೇವಣಿಯ ಮೊತ್ತವನ್ನು ಜಾಮೀನು ಮಾಡಿಕೊಳ್ಳಬಹುದು' ಎಂದು ಹೇಳಿದೆ. ಅಂದಿನಿಂದ ಈ ಮನೆಯಲ್ಲಿ ನನ್ನ ಸ್ಥಾನ ಪ್ರಶ್ನಾರ್ಥಕವಾಗಿ ಕಾಣಿಸತೊಡಗಿತು. ಅರ್ಜುನ್‌ಗೆ ಕೂಡ ನನ್ನೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ದೊರೆಯುತ್ತಿರಲಿಲ್ಲ. ಈ ನಡುವೆ ದೂರದ ಸಂಬಂಧಿಯೋರ್ವರ ಮಗಳ ಮದುವೆಗಾಗಿ ನಾನು ತೆರಳುವ ಅವಕಾಶ ಬಂತು. ಅಲ್ಲಿ ನನ್ನನ್ನು ಶಂಕರ ಭೇಟಿಯಾದ. ನನ್ನ ಸಮಸ್ಯೆಗಳನ್ನು ಅವನಲ್ಲಿ ಸೂಕ್ಷ¾ವಾಗಿ ಹೇಳಿಕೊಂಡೆ. ಆನಂದ ಹಣ ಕೇಳಿರುವ ಸಂಗತಿಯನ್ನು ತಿಳಿಸದೆ, ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂದಷ್ಟೇ ಹೇಳಿದೆ.


""ದೊಡ್ಡಪ್ಪಾ ನಿಮ್ಮ ನೇರ ತಮ್ಮನ ಮಗ ನಾನು. ನೀವೇಕೆ ಆಗ ನನಗೆ ಹೇಳಲಿಲ್ಲ? ನಾನೇ ಬರುವವನಿದ್ದೆ. ಅಷ್ಟರಲ್ಲಿ ನೀವು ಆನಂದನ ಜತೆ ತೆರಳಿರುವ ಸಂಗತಿ ಗೊತ್ತಾಯಿತು. ನಾನೂ ಸುಮ್ಮನಿದ್ದೆ. ಇನ್ನು ನೀವು ಅಲ್ಲಿರುವುದು ಬೇಡ. ನನ್ನ ಮನೆಗೇ ಬಂದುಬಿಡಿ. ನಮ್ಮಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ' ಎಂದ ಶಂಕರ. ನನ್ನ ಬದುಕು ಯಾವ ರೀತಿಯ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಎಂದು ಅನಿಸತೊಡಗಿತು ನನಗೆ. ಆನಂದನಿಗಿಂತಲೂ ಶಂಕರ ನನಗೆ ನಿಕಟವಾಗಿದ್ದಾನೆ. ಅಣ್ಣನ ನಿಧನದವರೆಗೂ ನಾನು ಸಂಪರ್ಕಕದಲ್ಲಿದ್ದೆ. ಶಂಕರನನ್ನ ನಾನು ಆಟವಾಡಿಸಿದವನು ಕೂಡ. ಅವನ ಮಾತಲ್ಲಿ ಆತ್ಮೀಯತೆಯ ಚಿಲುಮೆ ನನಗೆ ಕಾಣಿಸಿತು. ನಾನು ಒಪ್ಪಿಕೊಂಡೆ.
ಆನಂದನ ಮನೆಯಿಂದ ಹೊರಡುವ ಕ್ಷಣ ಅಷ್ಟೇನೂ ಸುಲಭದ್ದಾಗಿರಲಿಲ್ಲ. ಸ್ವಲ್ಪ ಸಮಯವಾದರೂ ಆತ್ಮೀಯತೆಯಿಂದ ನೋಡಿಕೊಂಡವನು ತಾನೆ. ಶಾಲಿನಿಯಂತೂ ಕೊನೆಕೊನೆಗೆ ಮಾತನ್ನೂ ಆಡುತ್ತಿರಲಿಲ್ಲ. ಅರ್ಜುನ್‌ ದೂರದಲ್ಲಿಯೇ ನನ್ನನ್ನು ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ. ನನಗಂತೂ ಅವನನ್ನು ಬಿಟ್ಟು ಹೇಗಿರಲಿ ಅಂತ ಅನಿಸುತ್ತಲೇ ಇತ್ತು. ಈ ಆತ್ಮೀಯ ಸಂಬಂಧಗಳೆಲ್ಲ ಬೆಸೆದುಕೊಳ್ಳುವ ಪರಿಯೇ ಅದ್ಭುತ. ಈ ಸಂಬಂಧಗಳಿಂದ ಕಳಚಿಕೊಳ್ಳುವುದು ಅಂದರೆ ಕೂಡ ಅಷ್ಟೇ ಸಂಕಷ್ಟ. ""ನಿಮಗೆ ಹೆಚ್ಚು ಉಪಕಾರ ಮಾಡಲು ನನಗೆ ಸಾಧ್ಯವಾಗಲಿಲ್ಲ. ಆ ಒಂದು ಆರ್ಥಿಕ ಗಂಟು ನಂಬಿ ನನ್ನ ಜೀವನ ಉಳಿದಿದೆ. ಹಾಗಾಗಿ ಸ್ವಾರ್ಥಿಯಾಗಿದ್ದೇನೆಯೋ ಏನೋ' ಎಂದೆ ಆನಂದನಲ್ಲಿ. ಯಾರೂ ಮಾತನಾಡಲಿಲ್ಲ. ಶಂಕರನ ಮನೆಯಲ್ಲಿ ನಾನು ನೆಲೆಸುವುದು ಅನಿವಾರ್ಯವಾಯಿತು.
* * * *

ನಾನು ಊಹಿಸಿರದ ಸನ್ನಿವೇಶ ಈಗ ಎದುರಾಗಿದೆ. ಒಂದು ರೀತಿಯಲ್ಲಿ ಆನಂದನ ಮನೆಯಲ್ಲಿ ನಡೆದ ಘಟನೆಗಳ ಪುನರಾವರ್ತನೆ. ನನ್ನ ಬದುಕು ಏಕೆ ಹೀಗಾಗುತ್ತಿದೆ ? ಇದು ಸ್ವಯಂಕೃತ ಅಪರಾಧ. ನಾನು ಅನುಭವಿಸಲೇ ಬೇಕು. ಯೋಚಿಸುತ್ತಾ ಪತ್ರಿಕೆಯನ್ನು ತಿರುವಲಾರಂಭಿಸಿದೆ. ದಪ್ಪ ಅಕ್ಷರಗಳ ಜಾಹೀರಾತು ಕಾಣಿಸಿತು. ಅದು ವೃದ್ಧಾಶ್ರಮಕ್ಕೆ ಸಂಬಂಧಿಸಿದ ಜಾಹೀರಾತು. ಆರುವತ್ತು ವರ್ಷ ದಾಟಿದ, ಕುಟುಂಬಿಕರಾರೂ ಇಲ್ಲದವರು ಸೇರಿಕೊಳ್ಳಬಹುದು. ನಿವೃತ್ತರು ತಮ್ಮ ಪಿಂಚಣಿಯಿಂದ ಅಲ್ಲಿನ ತಮ್ಮ ಕನಿಷ್ಠ ವೆಚ್ಚ ಪಾವತಿಸಬಹುದು ಎಂಬೆಲ್ಲಾ ವಿವರಗಳಿದ್ದವು. ಇನ್ನು ನನಗೆ ಉಳಿದಿರುವುದು ಇದೊಂದೇ ದಾರಿ ಎಂಬ ನಿರ್ಧಾರಕ್ಕೆ ಬಂದೆ.


ಮರುದಿನ ಆ ಆಶ್ರಮಕ್ಕೆ ಭೇಟಿ ನೀಡಿದೆ. ಕಾರ್ಯದರ್ಶಿಯ ಜತೆ ಮಾತನಾಡಿದೆ. ಮರುದಿನವೇ ಬಂದು ಸೇರಿಕೊಳ್ಳುವಂತೆ ಸೂಚಿಸಿದರು. ಮತ್ತೆ ಎದುರಾದ ವಿದಾಯ ಪ್ರಸಂಗ. ಆನಂದನ ಮನೆಯಲ್ಲಿ ಕೊನೆಯ ದಿನ ಏನೆಲ್ಲಾ ಹೇಳಿದ್ದೆನೋ ಅದನ್ನು ಶಂಕರನ ಮನೆಯಲ್ಲಿ ಪುನರಾವರ್ತಿಸಿದೆ. ಇನ್ನೊಂದು ಸಂಬಂಧಿಯ ಮನೆಯಲ್ಲಿ ನಿಂತರೂ ಇದೇ ರೀತಿಯ ಸನ್ನಿವೇಶ ಪುನರಾವರ್ತಿಸಬಹುದು ಅಂತ ಅನಿಸಿತು.


ಈ ಬಾರಿ ಒಂದಿಷ್ಟು ನಿರ್ಲಿಪ್ತನಾಗಿಯೇ ಹೊರಟೆ. ಆಶ್ರಮಕ್ಕೆ ಬಂದೆ. ನನ್ನ ಒಂದಿಷ್ಟು ವಸ್ತುಗಳನ್ನು ಅಲ್ಲಿ ಇರಿಸಿದೆ. ಕಾರ್ಯದರ್ಶಿಯವರ ಕೊಠಡಿಗೆ ಬಂದೆ. ನನಗಾಗಿ ಸಿದ್ಧಪಡಿಸಲಾಗಿದ್ದ ವ್ಯವಸ್ಥೆಗಳ ಬಗ್ಗೆ ತಿಳಿಸಿದರು. ನಿರ್ದಿಷ್ಟ ಅರ್ಜಿ ಫಾರ್ಮ್ಗಳನ್ನು ಭರ್ತಿಗೊಳಿಸಿದೆ. ""ನನ್ನ ಕೊಠಡಿಗೆ ಹೋಗಬಹುದೇ?' ಎಂದು ಕೇಳಿದೆ. ""ಇನ್ನೊಂದು ಅರ್ಜಿ ಭರ್ತಿ ಮಾಡಬೇಕಿದೆ' ಎಂದರು ಕಾರ್ಯದರ್ಶಿ.


ಅರ್ಜಿಯನ್ನು ನನ್ನ ಎದುರು ಇಟ್ಟು ಹೇಳಿದರು: ""ರಾಯರೇ, ನಮ್ಮ ಆಶ್ರಮದಲ್ಲಿ ಒಂದು ನಿಯಮವಿದೆ. ವಾರಸುದಾರರಿಲ್ಲದ ಆಶ್ರಮ ನಿವಾಸಿಗಳು ಅವರ ಫಿಕ್ಸೆಡ್‌ ಡೆಪಾಸಿಟ್‌ ಇತ್ಯಾದಿ ಠೇವಣಿಗಳನ್ನು ಆಶ್ರಮದ ಹೆಸರಿನಲ್ಲಿ ಬರೆದುಕೊಡಬೇಕು...'

 

  • Other Blogs By ಮನೋಹರ ಪ್ರಸಾದ್‌
    • ಕಡಲ ಒಡಲು- ಬ್ಲಾಗ್‌ನಲ್ಲಿ ಮನೋಹರ ಪ್ರಸಾದ್‌ ಅವರು ಈ ಬಾರಿ ನಾಲ್ಕು ಕವನಗಳನ್ನು ಬರೆದಿದ್ದಾರೆ.
    • ಭರತಖಂಡದ ಬಲುದೊಡ್ಡ ಸಾಮ್ರಾಜ್ಯ. ಪೌದನಪುರ ಅದರ ಕೇಂದ್ರ. ಆದಿನಾಥನಿಗೆ ಯಶಸ್ವಿನಿ ಎಂಬ ಪತ್ನಿಯಲ್ಲಿ ಭರತನ ಸಹಿತ ನೂರು ಪುತ್ರರು, ಬ್ರಾಹ್ಮಿ ಎಂಬ ಪುತ್ರಿ. ಇನ್ನೋರ್ವ ಪತ್ನಿ ಸುನಂದಾದೇವಿಯಲ್ಲಿ ಜನಿಸಿದ್ದು ಬಾಹುಬಲಿ ಎಂಬ ಪುತ್ರ;
  • POSTED COMMENTS
  • pic
  • gantu
    Feb 16, 2012
    Author: vijandev1984@gmail.com

    wasthavakke thumba hattirawada kathee. chanagide.

  •  
  • pic
  • gantu
    Feb 07, 2012
    Author: dineshira@gmail.com

    wah.. sambandhada madye nalugidhavana paadu... spppr story sr....

  •  
  • pic
  • gantu
    Feb 04, 2012
    Author: satishira@gmail.com

    nice story sir

  •  
  • pic
  • Good Story
    Jan 29, 2012
    Author: sukeshnr@gmail.com

    Nice story on interesting subject..

  •  
  • pic
  • Short story
    Jan 17, 2012
    Author: Bundimutt57@gmail.com

    Short & sweet story. Mr. Manohar prasad excels as a writer also

  •  
  • pic
  • Short story
    Jan 17, 2012
    Author: Bundimutt57@gmail.com

    Short & sweet story. Mr. Manohar prasad excels as a writer also

  •  
  • pic

  • Jan 17, 2012
    Author: shivar13@yahoo.com

    Top story, thanks

  •  
  • pic

  • Jan 16, 2012
    Author: shivar13@yahoo.com

    Top story, thanks

  •  
  • pic
  • like ur writigs
    Jan 14, 2012
    Author: dr.ravirajsagar@gmail.com

    ur writings is very intrestin sir,,

  •  
  • pic

  • Jan 14, 2012
    Author: shahirajraokavoor@gmail.com

    Sir, nimma katha sankalana odhuva soubhagya kannadigarige yavaaga dhorakabhudhu?

  •  
  • pic
  • gantu
    Jan 13, 2012
    Author: vishookiran@gmail.com

    this is a very touching story the Dilemma of life and the opportunities are always there if you have the Gantu or even if you dont Have.Good one

  • Blog Archive
Keywords:   
From:
To:
  • POST YOUR COMMENTS
  • Name *
  •  
  • Subject
  • Email ID *
  •  
  • Comment *
  • Comments are moderated and will not be posted if found irrelevant or offensive.
image
  • Copyright @ 2009-2010 Udayavani.All rights reserved.
  • Designed & Hosted By 4cplus