ಡಾ| ಜಿ. ಸುಬ್ರಾಯ ಭಟ್ ,ಪ್ರೊಫೆಸರ್ ಮತ್ತು ಮುಖ್ಯಸ್ಥರು,ಪೆರಿಯೊಡಾಂಟಿಕ್ಸ್ ವಿಭಾಗ, | Jan 29, 2012
ಬೇರೆ ಬೇರೆ ಕಾರಣಗಳಿಗೆ, ರೋಗಗಳಿಗೆ ಬೇರೆ ಬೇರೆ ಔಷಧಿಗಳ ಸೇವನೆ ಸಾಮಾನ್ಯ. ಈ ಔಷಧಿಗಳ ಸೇವನೆ, ರೋಗವನ್ನು ನಿಯಂತ್ರಣದಲ್ಲಿಡಲು ಅತೀ ಮುಖ್ಯವೂ ಕೂಡ. ಆದರೆ, ಈ ಔಷಧಿಗಳ ಸೇವನೆ, ದೇಹದ ಇತರ ಭಾಗಗಳ ಮೇಲೆ ಅಡ್ಡ ಪರಿಣಾಮ ಬೀರುವ ಹಾಗೆಯೆ, ವಸಡಿನ ಮೇಲೂ, ಬಾಯಿಯ ಮೇಲೂ ಅಡ್ಡ ಪರಿಣಾಮಗಳು ಕಾಣಬಹುದು. ಇದರ ಬಗ್ಗೆ ತಿಳಿದುಕೊಂಡರೆ, ಅದಕ್ಕೆ ದಂತವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಪಡೆಯಬಹುದು.
ವಸಡು ಊದಿಕೊಳ್ಳುವುದು

ಮೂಛೆರೋಗಗಳಿಗೆ ಸಾಮಾನ್ಯವಾಗಿ ನೀಡುವ ಔಷಧಿಯೆಂದರೆ, ಡೈಲಾಂಟಿನ್ ಸೋಡಿಯಂ ಅಥವಾ ಪಿನಿಟೊÂàನ್ ಸೋಡಿಯಂ (ಗಾರ್ಡಿನಲ್). ಇದು ವಸಡು ಊದಿಕೊಳ್ಳುವಂತೆ ಮಾಡುತ್ತದೆ. ಆದರೆ ಈ ಔಷಧಿ ತೆಗೆದುಕೊಳ್ಳುವ ಎಲ್ಲರಲ್ಲೂ ಇದು ಕಾಣದಿರಬಹುದು. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಆದರೆ, ವಸಡು ಊದಿಕೊಳ್ಳುವುದೇ ಆದರೆ, ಸಾಧಾರಣ ಔಷಧಿ ತೆಗೆದುಕೊಂಡು 3 ತಿಂಗಳಿನಿಂದ 9 ತಿಂಗಳ ಒಳಗೆ ಆ ತೊಂದರೆ ಕಾಣಿಸಿಕೊಳ್ಳುವುದು. ಮೊದಲು ಹಲ್ಲನ್ನು ಸ್ವಲ್ಪ ಸ್ವಲ್ಪವೇ ಪಸರಿಸಿ, ಕ್ರಮೇಣ ಹಲ್ಲನ್ನು ಸಂಪೂರ್ಣವಾಗಿ ಇದು ಸುತ್ತುವರಿಯುತ್ತದೆ. ಇದು ಹಲ್ಲಿನ ಜಗಿಯುವ ಭಾಗವನ್ನು ಕೂಡ ಸುತ್ತುವರಿದಾಗ, ಆಹಾರ ಜಗಿಯಲು, ತಿನ್ನಲು ಕಷ್ಟವಾಗಬಹುದು. ಮೊದಮೊದಲು, ವಸಡು ಮೃದುವಾಗಿರದೇ ಸಾಧಾರಣ ಪ್ರಮಾಣದಲ್ಲಿ ಗಟ್ಟಿಯಾಗಿರುತ್ತದೆ, ಆದರೆ ಕ್ರಮೇಣ, ಹಲ್ಲನ್ನು ಸ್ವತ್ಛಗೊಳಿಸಲಾಗದೇ, ವಸಡು ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ವಸಡಿನಿಂದ, ಬ್ರಶ್ ಮಾಡುವಾಗ ರಕ್ತ ಬರುವುದು ಕೂಡ ಕಾಣಿಸಿಕೊಳ್ಳಬಹುದು.
ಹೀಗೆಯೇ ರಕ್ತದೊತ್ತಡಕ್ಕೆ ನೀಡುವ ಕ್ಯಾಲ್ಸಿಯಂ ಚಾನಲ್ ಬ್ಲಾಕರ್ ಗುಂಪಿಗೆ ಸಂಬಂಧಪಟ್ಟ, ನಿಫಿದಿಫಿನ್, ನೈಟ್ರಾಡೀಪಿನ್, ಡಿಲ್ ಟಯಾಜೆಮ್, ಹೀಗೆ ಹಲವು ಔಷಧಿಗಳಿಂದ ಕೂಡ ವಸಡು ಊದಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಲ್ಲಿ, ಮೂತ್ರಪಿಂಡ ಕಸಿ ಮಾಡಿದವರಲ್ಲಿ ಅಥವಾ ಬೇರೆ ಇತರ ರೋಗಗಳಿಗೆ ಕೊಡುವ ದೇಹದ ರೋಗನಿರೋಧಕ ವ್ಯವಸ್ಥೆಯ ಬಲ ಕುಗ್ಗಿಸುವ (ಇಮ್ಯುನೋಸಪ್ರಸೆಂಟ್) ಗುಂಪಿಗೆ ಸಂಬಂಧಪಟ್ಟ ಔಷಧಿಗಳಾದ ಸ್ಲೆಕ್ಲೋಸೊ#ರಿನ್ ಸೇವನೆಯಿಂದ ಕೂಡ ವಸಡು ಊದಿಕೊಳ್ಳಬಹುದು. ಇದರಲ್ಲೂ , ಎಲ್ಲಾ ರೋಗಿಗಳಲ್ಲೂ ಈ ಔಷಧಿ ಸೇವನೆಯಿಂದ ವಸಡು ಊದಿಕೊಳ್ಳುವುದಿಲ್ಲವೆಂಬುದನ್ನು ನೆನಪಿಟ್ಟುಕೊಳ್ಳಬೇಕು.

ಹೀಗೆ ವಸಡು ಊದಿಕೊಳ್ಳುವುದೆಂದು, ರೋಗಗಳಿಗೆ ತೆಗೆದುಕೊಳ್ಳುವ ಔಷಧಿಯನ್ನು ಸೇವಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದ ರೋಗ ಉಲ್ಬಣಗೊಳ್ಳಬಹುದು. ಈ ಔಷಧಿಯ ಬದಲು, ವಸಡಿಗೆ ಕಡಿಮೆ ಅಡ್ಡ ಪರಿಣಾಮ ಬೀರುವ ಅಥವಾ ಪರಿಣಾಮ ಬೀರದೇ ಇರುವ ಬೇರೆ ಔಷಧಿಯನ್ನು ತೆಗೆದುಕೊಳ್ಳಬಹುದು. ಆದರೆ ಇದನ್ನು ನಿಮ್ಮ ವೈದ್ಯರ ಸಲಹೆ ಇಲ್ಲದೇ ಮಾಡಲಾಗದು. ಮತ್ತೆ ಕೆಲವರಲ್ಲಿ , ಇದು ಸಾಧ್ಯವಾಗದೇ ಇರಬಹುದು. ಅಂಥವರಿಗೆ ವಸಡು ಚಿಕಿತ್ಸೆ ಮಾಡಲಾಗುವುದು.
ಯಾವ ತರಹದ ವಸಡು ಚಿಕಿತ್ಸೆ ಸಾಧ್ಯ ?
ಇಂತಹ ವಸಡು ಊದಿಕೊಳ್ಳುವುದಕ್ಕೆ, ಎಲ್ಲಾ ವಸಡು ರೋಗಗಳಿಗೆ ಸಂಬಂಧಿಸಿದಂತೆ, ಹಲ್ಲನ್ನು ಮೊದಲು ಸ್ವತ್ಛಗೊಳಿಸಿ, ಆದಷ್ಟು ಕೆಂಪು ಬಣ್ಣಕ್ಕೆ ತಿರುಗಿರುವ ವಸಡನ್ನು ಆರೋಗ್ಯಕರ ವಸಡಿನ ಬಣ್ಣಕ್ಕೆ ಬರುವ ಹಾಗೇ ಮಾಡಲಾಗುವುದು. ಆ ನಂತರ, ಬೇರೆ ಬೇರೆ ಹಲ್ಲು ಪಂಕ್ತಿಗಳಿಗೆ ಬೇರೆ ಬೇರೆ ಸಮಯದಲ್ಲಿ ಒಂದು ಅಥವಾ ಎರಡು ವಾರಗಳ ಅಂತರದಲ್ಲಿ , ವಸಡಿನ ಶಸ್ತ್ರಚಿಕಿತ್ಸೆ ಮಾಡಿ, ಊದಿಕೊಂಡಿರುವ ವಸಡನ್ನು ಆರೋಗ್ಯಕರವಾದ ವಸಡು ಇರುವ ಹಾಗೆಯೇ ಮಾಡಲಾಗುವುದು. ಹೀಗೆ, ಎಲ್ಲಾ ಹಲ್ಲು ಪಂಕ್ತಿಗಳಿಗೆ ಮಾಡಿದ ನಂತರ, ವಸಡು ಎಲ್ಲಾ ಕಡೆ ಮೊದಲ ತರಹವೇ ಕಾಣುವುದು.
ಆದರೆ, ಇಲ್ಲಿಗೆ ಈ ಚಿಕಿತ್ಸೆ ನಿಲ್ಲದು. ಔಷಧಿ ಸೇವನೆ ನಿರಂತರವಿರುವುದರಿಂದ, ವಸಡು ಊದಿಕೊಳ್ಳುವಿಕೆ ಪುನಃ ಬರುವುದು ಸಂಭಾವ್ಯ. ಇದು ಹೀಗೆ ಬಾರದ ಹಾಗೆ, ಅಥವಾ ಆದಷ್ಟು ನಿಧಾನವಾಗಿ ಬರುವ ಹಾಗೆ ಮಾಡಬಹುದು. ಹಲ್ಲನ್ನು ಆದಷ್ಟು ಸ್ವತ್ಛ ವಾಗಿಟ್ಟುಕೊಂಡಲ್ಲಿ , ಈ ವಸಡು ಮತ್ತೆ ಪುನಃ ಊದಿಕೊಳ್ಳುವುದು ನಿಧಾನಗತಿಯಲ್ಲಿ ಆಗಬಹುದು. ಕೆಲವೊಮ್ಮೆ ವಸಡಿಗೆ ಒತ್ತಡ ಬೀಳುವ ಸಾಧನಗಳಿಂದ ವಸಡು ಊದಿಕೊಳ್ಳುವುದು ನಿಧಾನವಾಗಬಹುದು. ಫೋಲಿಕ್ ಆಮ್ಲದ ಮಾತ್ರೆಯ ನಿಯಮಿತ ಸೇವನೆಯಿಂದಲೂ, ಪಿನಿಟೋಯಿನ್ ಸೋಡಿಯಂ ಮಾತ್ರ ಸೇವಿಸುವವರಲ್ಲಿ ವಸಡು ಮತ್ತೆ ಪುನಃ ಊದಿಕೊಳ್ಳುವುದು ನಿಧಾನವಾಗಬಹುದು. ಆದರೆ, ಈ ಮಾತ್ರೆ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯು ಅತ್ಯಗತ್ಯ.
ಹೀಗೆಯೇ, ವಸಡು ಶಸ್ತ್ರಚಿಕಿತ್ಸೆ ಆಯಿತೆಂದು ಸುಮ್ಮನಿರದೇ, ದಂತವೈದ್ಯರು ಕರೆದಾಗ ಅವರನ್ನು ಸಂದರ್ಶಿಸುವುದು, ನೀವು ಮತ್ತೆ ಪುನಃ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಬಹುದು.