Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ನಾಯು ದೌರ್ಬಲ್ಯ - ಮಯಾಸ್ತೇನಿಯಾ ಗ್ರಾವಿಸ್‌
    • ಸ್ನಾಯು ದೌರ್ಬಲ್ಯ - ಮಯಾಸ್ತೇನಿಯಾ ಗ್ರಾವಿಸ್‌

      • ಡಾ| ಶಿವಾನಂದ ಪೈ ,ಎಂಡಿಡಿಎಂ,ಇಂಟರ್‌ವೆಂಶನಲ್‌ ನ್ಯುರಾಲಜಿಸ್ಟ್‌ ಹಾಗೂ ಸ್ಟ್ರೋಕ್‌ ಸ್ಪೆಶಿಯಲಿಸ್ಟ್‌ ವಿಭಾಗ, | Jan 29, 2012

        ಮಯಾಸ್ತೇನಿಯಾ ಗ್ರಾವಿಸ್‌ (Myasthenia  Gravis)

        ಅಂದರೆ, ಸ್ನಾಯುಗಳು ಬಹಳ ಬೇಗನೇ ದುರ್ಬಲಗೊಳ್ಳುವ ಒಂದು ಕಾಯಿಲೆ. ಸ್ನಾಯುಗಳ ಸಂಕುಚನಕ್ಕೆ ನರಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಆಧಾರದಲ್ಲಿ,  ಈ ತೊಂದರೆ ಉಂಟಾಗುತ್ತದೆ. ಸಾಮಾನ್ಯವಾಗಿ  ಕಣ್ಣುಗಳ ಸುತ್ತಲಿನ ಸ್ನಾಯುಗಳು ಈ ತೊಂದರೆಗೆ ಮೊದಲು ಈಡಾಗುತ್ತವೆ. ಈ ಕಾರಣದಿಂದಾಗಿ, ಕಣ್ಣು  ರೆಪ್ಪೆಗಳು ಜೋತುಬೀಳುತ್ತವೆ ಹಾಗೂ ವಸ್ತುಗಳು ಮತ್ತು ದೃಶ್ಯಗಳು  ಎರಡೆರಡಾಗಿ ಕಾಣಿಸುತ್ತವೆ. ಈ ತೊಂದರೆಗೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದೆ.

        ಪ್ರಧಾನ ಸ್ನಾಯುವಿನ ದುರ್ಬಲತೆ

        ಇದು ಮಯಾಸ್ತೇನಿಯಾ ಗ್ರಾವಿಸ್‌ ಎಂಬ ಪದದ  ಅರ್ಥ.  ಇದರ ಹೆಸರು ಸೂಚಿಸುವಷ್ಟೇನೂ ಈ ತೊಂದರೆ ತೀವ್ರವಾಗಿರದು. ಲಭ್ಯವಿರುವ  ಪರಿಣಾಮಕಾರಿ ಚಿಕಿತ್ಸೆ ಯಿಂದ ಬಹಳಷ್ಟು  ಜನರು  ಈ ರೋಗದೊಂದಿಗೆ ಸಹಜ ಜೀವನವನ್ನು ನಡೆಸುತ್ತಿದ್ದಾರೆ.

        ಸ್ನಾಯುಗಳ ಬಗೆಗಿನ ತಿಳಿವಳಿಕೆ

        ಪ್ರತಿ ಸ್ನಾಯುವೂ ಸಹ ನರಗಳಿಂದ ಆವೃತವಾಗಿರುತ್ತದೆ. ಈ ನರಗಳು ತುದಿಯಲ್ಲಿ ಸಣ್ಣಸಣ್ಣ  ಕವಲುಗಳಾಗಿದ್ದು , ಸ್ನಾಯು ತಂತುಗಳ ಜೊತೆಗೆ  ಹರಡಿಕೊಂಡಿರುತ್ತವೆ. ನರಗಳ ಕೊನೆ ಹಾಗೂ  ಸ್ನಾಯುಗಳ ಪದರದ ಮಧ್ಯೆ ಸಣ್ಣ  ಸ್ಥಳಾವಕಾಶವೊಂದು ಇರುತ್ತದೆ.  ಈ ಸ್ಥಳಾವಕಾಶಕ್ಕೆ  ನ್ಯೂರೋಮಸ್ಕಾéಲಾರ್‌  ಜಂಕ್ಷನ್‌ ಎಂದು ಹೆಸರು.

        ಮೆದುಳು ನರಗಳ ಮೂಲಕ ಸ್ನಾಯುವಿಗೆ ಸಂಕುಚಿಸಬೇಕು ಎಂಬ ಸಂದೇಶವನ್ನು  ರವಾನಿಸುತ್ತದೆ. ಆಗ, ನರಗಳ ತುದಿಯು ಅಸಿಟೈಲ್‌ಕೊಲೈನ್‌ (acetylcholine) ಎಂಬ ನರ ಪ್ರೇಷಕ (ನ್ಯೂರೋಟ್ರಾನ್ಸ್‌ ಮಿಟರ್‌) ರಾಸಾಯನಿಕವನ್ನು  ನರ-ಸ್ನಾಯು ಸಂ—ಯಲ್ಲಿ (ನ್ಯೂರೋಮಸ್ಕಾéಲಾರ್‌ ಜಂಕ್ಷನ್‌) ಬಿಡುಗಡೆ  ಮಾಡುತ್ತದೆ. ಈ ಅಸಿಟೈಲ್‌ಕೊಲೈನ್‌ ಸ್ನಾಯುವಿನ ಮೇಲಿರುವ ಗ್ರಾಹಕವನ್ನು  ಕೂಡಲೇ  ಅಂಟಿಕೊಳ್ಳುತ್ತದೆ. ಹಾಗೂ  ಸ್ನಾಯುವು  ಸಂಕುಚನಗೊಳ್ಳುವಂತೆ ಮಾಡುತ್ತದೆ.  ಪ್ರತಿಯೊಂದು ಸ್ನಾಯುವಿನ ತಂತುವಿನಲ್ಲಿ ಹಲವಾರು ಅಸಿಟೈಲ್‌ಕೊಲೈನ್‌ ಗ್ರಾಹಕಗಳಿರುತ್ತವೆ.

        ಮಯಾಸ್ತೇನಿಯಾ ಗ್ರಾವಿಸ್‌ ತೊಂದರೆ ಇರುವವರಲ್ಲಿ  ಯಾಕೆ ಹೀಗಾಗುತ್ತದೆ? ಕಾರಣವೇನು?

        ಮಯಾಸ್ತೇನಿಯಾ ಗ್ರಾವಿಸ್‌ ತೊಂದರೆ ಇರುವವರಲ್ಲಿ ನರಗಳಿಂದ ಸ್ನಾಯುಗಳಿಗೆ ಸಂದೇಶಗಳು ರವಾನೆಯಾಗುವ ಸಂದರ್ಭಗಳಲ್ಲಿ ತಪ್ಪುಗಳಾಗುತ್ತವೆ. ಸ್ನಾಯುಗಳು ಸರಿಯಾದ ರೀತಿಯಲ್ಲಿ ಸಂಕುಚನಗೊಳ್ಳುವುದಿಲ್ಲ. ಆ ಕಾರಣದಿಂದಾಗಿ, ಸ್ನಾಯುಗಳು ಬೇಗನೆ ನಿತ್ರಾಣಗೊಂಡು, ದುರ್ಬಲಗೊಳ್ಳುತ್ತವೆ.

        ದೇಹದಲ್ಲಿ ನಿರೋಧಕ ವ್ಯವಸ್ಥೆಯ ತೊಂದರೆಯಿಂದಾಗಿ ಈ ವೈಫಲ್ಯ ಉಂಟಾಗುತ್ತವೆ. ಮಯಾಸ್ತೇನಿಯಾ ಗ್ರಾವಿಸ್‌ ಎಂಬುದು ಒಂದು ಅನೈಚ್ಛಿಕ ಕಾಯಿಲೆ. ಅಂದರೆ ಇಲ್ಲಿ ದೇಹದ ನಿರೋಧಕ ವ್ಯವಸ್ಥೆಯು (ದೇಹವನ್ನು  ಸೋಂಕುಗಳಿಂದ ರಕ್ಷಿಸುವ ವ್ಯವಸ್ಥೆ) ಸ್ವತಃ ತನ್ನ ಮೇಲೆಯೇ ದಾಳಿ ಮಾಡುತ್ತದೆ. (ಇನ್ನಿತರ ಅನೈಚ್ಛಿಕ  ಕಾಯಿಲೆಗಳು - ಎಂದರೆ ಟೈಪ್‌  1ಡಯಾಬಿಟಿಸ್‌  ಹಾಗೂ ಥೈರಾಯಿಡ್‌ ಸಂಬಂ— ತೊಂದರೆಗಳು). ಮಯಾಸ್ತೇನಿಯಾ ಗ್ರಾವಿಸ್‌ ಇರುವ ಹೆಚ್ಚಿನ ಜನರಲ್ಲಿ  ಉತ್ಪತ್ತಿಯಾದ ಹೆಚ್ಚಿನ  ಪ್ರತಿಕಾಯಗಳು ಸ್ನಾಯುಗಳ ಮೇಲೆ ಇರುವ ಅಸಿಟೈಲ್‌ಕೊಲೈನ್‌ ಗ್ರಾಹಕವನ್ನು ತಡೆಯುತ್ತವೆ, ಅಥವಾ ವಿರೂಪಗೊಳಿಸುತ್ತವೆ ಅಥವಾ ನಾಶ ಮಾಡುತ್ತವೆ. ಆ ಬಳಿಕ, ಅಸಿಟೈಲ್‌ಕೊಲೈನ್‌ ಗ್ರಾಹಕವನ್ನು  ಅಂಟಿಕೊಳ್ಳುವಲ್ಲಿ  ವಿಫಲವಾಗುತ್ತದೆ. ಹಾಗಾಗಿ, ಸ್ನಾಯುವೂ ಸಹ ಸಂಕುಚನಗೊಳ್ಳುವಲ್ಲಿ  ವಿಫಲವಾಗುತ್ತದೆ.

        ಅಸಹಜ ಪ್ರತಿಕಾಯಗಳ ಉತ್ಪತ್ತಿಗೆ ಕಾರಣಗಳೇನು ?

        ದೇಹದ ರೋಗ ನಿರೋಧಕ ವ್ಯವಸ್ಥೆಯು,  ಸ್ನಾಯು ಗ್ರಾಹಕಗಳ  ವಿರುದ್ಧವಾಗಿ, ಅಸಹಜ ಪ್ರತಿಕಾಯಗಳನ್ನು  ಯಾಕೆ ಉತ್ಪತ್ತಿ ಮಾಡುತ್ತದೆ ಎಂಬ ಸಕಾರಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ದೇಹದ ವಿವಿಧ ಭಾಗಗಳಲ್ಲಿ  ಈ ರೀತಿಯ ಅಸಹಜ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಅವುಗಳೆಂದರೆ ಅಸ್ಥಿಮಜ್ಜೆ, ರಕ್ತ, ದುಗ§  ಗ್ರಂಥಿಗಳು, ಥೈಮಸ್‌ ಗ್ರಂಥಿ... ಇತ್ಯಾದಿ, ಹಾಗಿದ್ದರೂ, ಥೈಮಸ್‌ ಗ್ರಂಥಿಯು ಅಸಹಜ ಪ್ರತಿಕಾಯಗಳ ಪ್ರಮುಖ ಮೂಲವೆನಿಸಿದೆ.

        ಯಾರಿಗೆಲ್ಲಾ ಮಯಾಸ್ತೇನಿಯಾ  ಗ್ರಾವಿಸ್‌  ಉಂಟಾಗಬಹುದು?

        40 ವಯಸ್ಸಿನ ಕೆಳಗಿನ  ಮಹಿಳೆಯರಿಗೆ ಹಾಗೂ 60 ವರ್ಷ ಮೀರಿದ ಪುರುಷರಿಗೆ ಮಯಾಸ್ತೇನಿಯಾ  ಗ್ರಾವಿಸ್‌ ಅಗಬಹುದಾದ ಸಾಧ್ಯತೆ ಹೆಚ್ಚು . 20,000 ಜನರಲ್ಲಿ  ಸಾಧಾರಣವಾಗಿ ಒಬ್ಬರಿಗೆ  ಈ ತೊಂದರೆ ಕಾಣಿಸಿಕೊಳ್ಳಬಹುದು. ಪುರುಷರಿಗಿಂತಲೂ  ಮಹಿಳೆಯರಲ್ಲಿ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಮೂರುಪಟ್ಟು  ಹೆಚ್ಚು. ಇದೊಂದು ಆನುವಂಶಿಕ ತೊಂದರೆ ಅಲ್ಲದಿದ್ದರೂ, ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರಿಗೆ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

        ಮಯಾಸ್ತೇನಿಯಾ ಗ್ರಾವಿಸ್‌ನಲ್ಲಿ ಥೈಮಸ್‌ ಗ್ರಂಥಿಯ ಪಾತ್ರವೇನು?

        ಥೈಮಸ್‌ ಗ್ರಂಥಿ ಎಂಬುದು ಎದೆಯ ಮೇಲುಭಾಗದಲ್ಲಿ ಎದೆ ಗೂಡಿನ ಹಿಂಭಾಗದಲ್ಲಿರುವ ಒಂದು ಗ್ರಂಥಿ. ಅದು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಅವಿಭಾಜ್ಯ ಅಂಗ. ಮಯಾಸ್ತೇನಿಯಾ ಗ್ರಾವಿಸ್‌ ಇರುವ ಹೆಚ್ಚನವರಲ್ಲಿ ಥೈಮಸ್‌ ಗ್ರಂಥಿಯ ಅಸಹಜತೆಗಳಿರುತ್ತವೆ. 40 ವರ್ಷ ವಯಸ್ಸಿನೊಳಗೇ ಈ ತೊಂದರೆ ಇರುವವರಲ್ಲಂತೂ ಈ ಸಾಧ್ಯತೆಗಳು ಅತ್ಯಂತ ಹೆಚ್ಚು . ಥೈಮಸ್‌ ಗ್ರಂಥಿಯ ಪಾತ್ರವೇನೆಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆಯಾದರೂ, ಅಸಿಟೈಲ್‌ಕೊಲೈನ್‌ ಗ್ರಾಹಕಗಳ ವಿರುದ್ಧ ಪ್ರತಿಕಾಯಗಳನ್ನು ಬಡಿದೆಬ್ಬಿಸುವಲ್ಲಿ  ಥೈಮಸ್‌ ಗ್ರಂಥಿಯ ಪಾತ್ರವಿರುವುದಂತೂ ಬಹುತೇಕ ಖಚಿತವಾಗಿದೆ. ಕೆಲವರಿಗೆ ಶಸ್ತ್ರಕ್ರಿಯೆ ನಡೆಸಿ ಥೈಮಸ್‌ ಗ್ರಂಥಿಯನ್ನು ಕಿತ್ತುಹಾಕಿದಾಗ ಮಯಾಸ್ತೇನಿಯಾ ಗ್ರಾವಿಸ್‌ ತೊಂದರೆ ಗುಣವಾಗಿದೆ.

        ಕೆಲವು ಜನರಲ್ಲಿ ಅಪರೂಪಕ್ಕೆ ಮಯಾಸ್ತೇನಿಯಾ ಗ್ರಾವಿಸ್‌ ಇರುವಾಗ, ಥೈಮಸ್‌ ಗ್ರಂಥಿಯಲ್ಲಿ ಥೈಮೋಮಾ ಎಂಬ ಗಡ್ಡೆಯೊಂದು ಬೆಳೆಯುತ್ತದೆ. ಇದು ಹೆಚ್ಚಾಗಿ ಕ್ಯಾನ್ಸರ್‌ ಆಗಿರುವುದಿಲ್ಲವಾದರೂ ಅತ್ಯಪರೂಪವಾಗಿ ಕ್ಯಾನ್ಸರ್‌ ಆಗಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

        ಮಯಾಸ್ತೇನಿಯಾ ಗ್ರಾವಿಸ್‌ನ ಲಕ್ಷಣಗಳೇನು?

        ಬಹಳ ಪ್ರಮುಖವಾದ ಲಕ್ಷಣ ಎಂದರೆ, ಸ್ನಾಯು  ದುರ್ಬಲವಾಗುವುದು. ಸ್ನಾಯು ದುರ್ಬಲವಾಗುವ ಆಥವಾ ಕ್ಷೀಣಿಸುವ ಈ ಲಕ್ಷಣವು, ವ್ಯಕ್ತಿಯು ಹೆಚ್ಚು  ಚಟುವಟಿಕೆಯಲ್ಲಿ ತೊಡಗಿದಾಗ  ಹೆಚ್ಚಾಗಿ, ವಿಶ್ರಾಂತಿ ತೆಗೆದುಕೊಂಡರೆ ಕಡಿಮೆಯಾಗುತ್ತದೆ. ಈ ತೊಂದರೆಗೆ ಈಡಾದ ಸ್ನಾಯುವು ಬಹಳ ಬೇಗನೇ ಆಯಾಸಗೊಳ್ಳುತ್ತದೆ ಅಥವಾ ದುರ್ಬಲವಾಗುತ್ತದೆ. ಇದರ ಅರ್ಥ, ದಿನದ ಕೊನೆಯಲ್ಲಿ ಅಥವಾ ವ್ಯಾಯಾಮ ಮಾಡಿದ ನಂತರ ಮಯಾಸ್ತೇನಿಯಾ ಗ್ರಾವಿಸ್‌  ಲಕ್ಷಣಗಳು ತೀವ್ರವಾಗುತ್ತವೆ. ಬಾ—ತವಾದ ಸ್ನಾಯುವನ್ನು ಉಪಯೋಗಿಸಲು ಆರಂಭಿಸುವಾಗ, ಲಕ್ಷಣಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ. ಹಾಗಿದ್ದರೂ,  ವ್ಯಕ್ತಿಗೆ ಲಕ್ಷಣಗಳ ತೀವ್ರತೆಯಲ್ಲಿ  ವ್ಯತ್ಯಾಸವಿರಬಹುದು.

        * ಕಣ್ಣಿನ ಸುತ್ತಲಿನ ಸ್ನಾಯುಗಳನ್ನು  ನಿರಂತರವಾಗಿ ಉಪಯೋಗಿಸುವುದರಿಂದ, ಈ ಸ್ನಾಯುಗಳು ಮೊದಲು ಬಾ—ತವಾಗಿ, ಬಹಳ ಬೇಗನೆ ಆಯಾಸಗೊಳ್ಳುತ್ತವೆ. ಇದರಿಂದಾಗಿ  ಕಣ್ಣಿನ ರೆಪ್ಪೆಗಳು  ಪ್ರತಿಕಾಯಗಳ ಪ್ರಮಾಣ ಕಡಿಮೆ ಇರುವ ಕೆಲವರಲ್ಲಿ ಕೆಲವು ಸಲ ಮಾತ್ರವೇ ತೊಂದರೆಗೆ ಕಾರಣವಾದರೆ, ಪ್ರತಿಕಾಯಗಳ ಪ್ರಮಾಣ ಹೆಚ್ಚು ಇರುವವರಲ್ಲಿ ಕಣ್ಣಿನ  ಸುತ್ತಲಿನ ಸ್ನಾಯುಗಳು ಹೆಚ್ಚು ತೊಂದರೆಗೆ ಒಳಗಾಗುತ್ತವೆ. ಎರಡು ವರ್ಷಗಳಿಗಿಂತಲೂ ಹೆಚ್ಚು  ಸಮಯದಿಂದ ಕಣ್ಣಿನ ಸುತ್ತಲಿನ  ಸ್ನಾಯುಗಳು ಬಾ—ತವಾಗಿರುವ ಲಕ್ಷಣಗಳಿದ್ದರೆ, ಅದು ದೇಹದ ಇನ್ನಿತರ ಸ್ನಾಯುಗಳಿಗೂ ಹಬ್ಬುವ ಸಾಧ್ಯತೆಗಳಿವೆ. ಇದಕ್ಕೆ ಆಕ್ಯುಲಾರ್‌ ಮಯಾಸ್ತೇನಿಯಾ (ocular myasthenia) ಎಂದು ಹೆಸರು. ಇದು ಮಯಾಸ್ತೇನಿಯಾ ಗ್ರಾವಿಸ್‌ ಇರುವ 6 ಜನರಲ್ಲಿ ಒಬ್ಬರನ್ನು  ಬಾ—ಸಬಹುದು.

        * ಕೆಲವು ಸಲ ಮುಖ ಹಾಗೂ ಗಂಟಲಿನ ಸುತ್ತಲಿನ ಸ್ನಾಯುಗಳೂ ಸಹ ಈ ತೊಂದರೆಯಿಂದ ಬಾ—ತವಾಗುತ್ತವೆ. ಹೀಗಾದಾಗ, ಆಹಾರ ನುಂಗಲು ಕಷ್ಟವಾಗುವುದು, ಮಾತು ಅಸ್ಪಷ್ಟವಾಗುವುದು ಕಂಡುಬರಬಹುದು. ಇವು ಮಯಾಸ್ತೇನಿಯಾ ಗ್ರಾವಿಸ್‌ನ ಆರಂಭಿಕ ಲಕ್ಷಣಗಳಾಗಿರುತ್ತವೆ.

        * ತೋಳು, ಕೈ , ಕಾಲು, ಬೆರಳು ಹಾಗೂ ಕುತ್ತಿಗೆಗಳಲ್ಲಿ  ನಿಶ್ಶಕ್ತಿಯ ಲಕ್ಷಣಗಳು ಗೋಚರಿಸಬಹುದು.

        *ಕೆಲವು ಸಲ  ಎದೆಯ  ಸ್ನಾಯುಗಳಲ್ಲಿ  ನಿಶ್ಶಕ್ತಿ ಗೋಚರಿಸಬಹುದು. ಇದು ತೀವ್ರವಾದರೆ, ಇದರ ಪರಿಣಾಮವಾಗಿ ಮಯಾಸ್ತೇನಿಯಾ ಸ್ಥಿತಿ ಬಿಗಡಾಯಿಸ ಬಹುದು.   

        ಮಯಾಸ್ತೇನಿಯಾ ಗ್ರಾವಿಸ್‌ನ ತೀವ್ರತೆಯು ಸ್ನಾಯುವು ಯಾವ ಪ್ರಮಾಣದಲ್ಲಿ ಆಯಾಸಗೊಳ್ಳುತ್ತದೆ ಎಂಬುದನ್ನು  ಆಧರಿಸಿ ಸಾಧಾರಣದಿಂದ ಗಂಭೀರ ಪ್ರಮಾಣದವರೆಗೆ ಇರುತ್ತದೆ. ಸೋಂಕು  ಅಥವಾ ಒತ್ತಡಗಳು ತೊಂದರೆಯ ಲಕ್ಷಣಗಳನ್ನು ಇನ್ನಷ್ಟು ಬಿಗಡಾಯಿಸಬಹುದು.

        ಮಯಾಸ್ತೇನಿಯಾ ಗ್ರಾವಿಸ್‌ನ ತಪಾಸಣೆ ಹೇಗೆ ?

        ಬಹಳಷ್ಟು  ಸಂದರ್ಭಗಳಲ್ಲಿ   ಮಯಾಸ್ತೇನಿಯಾ ಗ್ರಾವಿಸ್‌ನ ತಪಾಸಣೆ ಹಾದಿ ತಪ್ಪಿ , ರೋಗ ಖಚಿತಗೊಳ್ಳುವಲ್ಲಿ  ವಿಳಂಬವಾಗುತ್ತದೆ. ಆದರೆ, ಇದು ಅಸಹಜವೇನೂ ಅಲ್ಲ.  ಯಾಕೆಂದರೆ,  ಸ್ನಾಯುಗಳ  ನಿಶ್ಯಕ್ತಿಯು ಬಹಳ ನಿಧಾನವಾಗಿ ಆರಂಭವಾಗುತ್ತದೆ ಹಾಗೂ ಆರಂಭದಲ್ಲಿ ಇದು ಬಹಳ ಸಣ್ಣ ಪ್ರಮಾಣಕ್ಕಿರುತ್ತದೆ. ವೈದ್ಯರು ಪರೀಕ್ಷೆ ಮಾಡಿದ ನಂತರ ನಿಮಗೆ ಸ್ನಾಯು  ದುರ್ಬಲತೆ ಇದೆ ಎಂಬುದನ್ನು ಪತ್ತೆ ಮಾಡಿ, ಅದಕ್ಕೆ ಕೆಲವು ಸೂಚನೆಗಳನ್ನು  ನೀಡಬಹುದು.

        ಕೆಳಗೆ ಹೇಳಿದಂತಹ ಕೆಲವು ಪರೀಕ್ಷೆಗಳನ್ನು  ಅವರು ಮಾಡಿಸಬಹುದು.

        * ಹೆಚ್ಚಿನ ಸಂದರ್ಭಗಳಲ್ಲಿ ರಕ್ತ ಪರೀಕ್ಷೆಯಿಂದ ಅಸಹಜ ಪ್ರತಿಕಾಯಗಳ ಪತ್ತೆಯಾಗುತ್ತದೆ ಹಾಗೂ ಮಯಾಸ್ತೇನಿಯಾ  ಗ್ರಾವಿಸ್‌ ಇರುವುದು ದೃಢವಾಗುತ್ತದೆ.

        *ತಪಾಸಣೆಯು ಅಷ್ಟೊಂದು ನಿಖರವಾಗಿಲ್ಲದ ಸಂದರ್ಭದಲ್ಲಿ, ಸ್ನಾಯು ಹಾಗೂ ನರಗಳ ಪರೀಕ್ಷೆಯ ಅಗತ್ಯ ಬೀಳಬಹುದು.

        *ಥೈಮಸ್‌ ಗ್ರಂಥಿಯ ಆಕಾರ ಹಾಗೂ ಗಾತ್ರವನ್ನು  ಲೆಕ್ಕ ಹಾಕಲು  ಎದೆಯ ಮೇಲಿನ ಭಾಗದ ಸ್ಕ್ಯಾನ್‌ ಮಾಡಿಸಿಕೊಳ್ಳಬೇಕಾಗಬಹುದು.

        * ಎದೆಯ  ಸ್ನಾಯುಗಳ ನಿಶ್ಯಕ್ತಿ ಇರುವವರಿಗೆ ಉಸಿರಾಟದ  ಪರೀಕ್ಷೆಗಳನ್ನು  ನಡೆಸಬೇಕಾಗಬಹುದು.

        ಮಯಾಸ್ತೇನಿಯಾ ಗ್ರಾವಿಸ್‌ಗೆ ಚಿಕಿತ್ಸೆ  ಏನು?

        ಹೆಚ್ಚಿನ  ಸಂದರ್ಭಗಳಲ್ಲಿ ಮಯಾಸ್ತೇನಿಯಾ ಗ್ರಾವಿಸ್‌ಗೆ ಪರಿಣಾಮಕಾರಿ ಚಿಕಿತ್ಸೆ  ಸಾಧ್ಯವಿದೆ.

        ಆಂಟಿಕಾಲಿನೆಸ್ಟೆರೇಸ್‌ ಔಷಧಿಗಳು (Anticholinesterase medicines )

        ಈ  ಔಷಧಿಯು ನರಗಳ  ತುದಿಯಿಂದ  ಬಿಡುಗಡೆಯಾದ ಅಸಿಟೈಲ್‌ಕೊಲೈನ್‌ ಒಡೆಯುವುದನ್ನು ನಿಧಾನಗೊಳಿಸುತ್ತದೆ. ಆಗ ಅಸಹಜ  ಪ್ರತಿಕಾಯಗಳ ವಿರುದ್ಧ ಹೋರಾಡಲು ಹೆಚ್ಚು ಅಸಿಟೈಲ್‌ಕೊಲೈನ್‌ಗಳು ಲಭ್ಯವಾಗಿ, ಸ್ನಾಯುಗ್ರಾಹಕಗಳು  ಸ್ನಾಯುವಿನ ಸಾಮರ್ಥ್ಯವನ್ನು  ಹೆಚ್ಚಿಸುತ್ತವೆ. ಕಾಯಿಲೆಯು  ಸಾಧಾರಣ ಮಟ್ಟದಲ್ಲಿದ್ದಾಗ ಹಾಗೂ ಪ್ರತಿಕಾಯಗಳ ಪ್ರಮಾಣವು  ಕಡಿಮೆ ಇದ್ದಾಗ, ಈ  ಔಷಧಿಯು  ಉತ್ತಮ ಪರಿಣಾಮವನ್ನು  ಬೀರುತ್ತದೆ. ಪಿರಿಡೋಸ್ಟಿಗೆ¾„ನ್‌ (Pyridostigmine) ಇದು ಹೆಚ್ಚಾಗಿ ಶಿಫಾರಸು  ಮಾಡುವಂತಹ  ಆಂಟಿಕಾಲಿನೆಸ್ಟೆರೇಸ್‌ ಔಷಧಿಯಾಗಿದೆ.

        ಥೈಮೆಕ್ಟಮಿ (Thymectomy) (ಥೈಮಸ್‌ನ್ನು  ಶಸ್ತ್ರಕ್ರಿಯೆ ನಡೆಸಿ ತೆಗೆದು  ಹಾಕುವುದು)
        ಕೆಲವು ಸಂದರ್ಭಗಳಲ್ಲಿ  ಈ  ಆಯ್ಕೆಯೂ ಇರುತ್ತದೆ. ಥೈಮಸ್‌ನ್ನು ತೆಗೆದು ಹಾಕುವುದರಿಂದ, ಮಯಾಸ್ತೇನಿಯಾ ಗ್ರಾವಿಸ್‌ ಇರುವ 10 ರಲ್ಲಿ 7 ಜನರಿಗೆ  ಉತ್ತಮ  ಪರಿಣಾಮ ದೊರಕಬಹುದು.

        ಸ್ಟೀರಾಯ್ಡ  ಔಷಧೋಪಚಾರ

        ಪ್ರಡ್ನಿಸೋಲಾನ್‌ (prednisolone) ನಂತಹ ಸ್ಟೀರಾಯ್ಡ  ಔಷಧಿ ಗುಳಿಗೆಗಳನ್ನು  ಮಯಾಸ್ತೇನಿಯಾ ಗ್ರಾವಿಸ್‌ ಚಿಕಿತ್ಸೆಯಲ್ಲಿ  ಉಪಯೋಗಿಸುತ್ತಾರೆ. ಈ ಸ್ಟೀರಾಯ್ಡಗಳು  ದೇಹದಲ್ಲಿ  ಹೆಚ್ಚಿನ ಅಸಹಜ ಪ್ರತಿಕಾಯಗಳು ಉತ್ಪತ್ತಿಯಾಗದಂತೆ  ದೇಹದ  ಪ್ರತಿರೋಧಕ  ವ್ಯವಸ್ಥೆಯನ್ನು  ನಿಯಂತ್ರಿಸುತ್ತವೆ. ಕಣ್ಣಿನ ಸುತ್ತಲಿನ  ಸ್ನಾಯುಗಳು ಮಾತ್ರವೇ ಬಾ—ತವಾಗಿರುವ ಲಕ್ಷಣಗಳಿರುವ ಜನರು, ಎರಡು ದಿನಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ  ಈ ಔಷಧಿಯನ್ನು  ಸೇವಿಸಬಹುದು. ಕಣ್ಣಿನ ಸುತ್ತಲಿನ  ಸ್ನಾಯುಗಳಲ್ಲದೆ ಇನ್ನಿತರ  ಸ್ನಾಯುಗಳೂ ಬಾ—ತವಾಗಿದ್ದರೆ, ಆಗ ಹೆಚ್ಚು ಪ್ರಮಾಣದ ಔಷಧಿಯು ಅಗತ್ಯ. ರೋಗಲಕ್ಷಣಗಳನ್ನು ನಿಯಂತ್ರಣಕ್ಕೆ ತರಲು, ಕೆಲವು ತಿಂಗಳುಗಳ ಕಾಲ ಈ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗಬಹುದು. ಒಂದು ಸಲ ಲಕ್ಷಣಗಳು ನಿಯಂತ್ರಣಕ್ಕೆ ಬಂದ ನಂತರ ನಿಧಾನವಾಗಿ ಔಷಧಿಯ ಪ್ರಮಾಣವನ್ನು ತಗ್ಗಿಸಬಹುದು. ರೋಗನಿರೋಧಕ ವ್ಯವಸ್ಥೆಯ ಪ್ರಭಾವ ತಗ್ಗಿಸುವ (Immunosuppressant)ಔಷಧಿ ಇಲ್ಲಿ , ಆಝೋಥಿಯಪ್ರೈನ್‌ (azothiaprine) ಔಷಧಿಯನ್ನು ಸ್ಟೀರಾಯ್ಡ  ಜೊತೆ ಸೇವಿಸಲು  ಸೂಚಿಸುತ್ತಾರೆ. ಈ ಔಷಧಿಯು  ದೇಹದ  ರೋಗ ಪ್ರತಿರೋಧಕ  ವ್ಯವಸ್ಥೆಯನ್ನು  ನಿಯಂತ್ರಿಸಲು ಸಹಕಾರಿ.

        ಜಂಟಿ ಔಷಧಿಗಳು  

         ಒಂದೇ ಔಷಧಿಯನ್ನು  ಉಪಯೋಗಿಸುವುದಕ್ಕಿಂತಲೂ, ಸ್ಟೀರಾಯ್ಡ  ಹಾಗೂ ಇಮ್ಯುನೋಸಪ್ರಸೆಂಟ್‌  ಔಷಧಿಗಳನ್ನು  ಜೊತೆಯಾಗಿ ಉಪಯೋಗಿಸುವುದು ಹೆಚ್ಚು  ಪರಿಣಾಮಕಾರಿ. ಮಾತ್ರವಲ್ಲ, ಇಮ್ಯುನೋಸ ಪ್ರಸೆಂಟ್‌ನ್ನು ಜೊತೆಯಾಗಿ  ಉಪಯೋಗಿಸುವುದರಿಂದ, ಸ್ಟೀರಾಯ್ಡ   ಪ್ರಮಾಣವನ್ನು ತಗ್ಗಿಸಿ ಅಡ್ಡ ಪರಿಣಾಮವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

        ಮಯಾಸ್ತೇನಿಯಾ  ಬಿಗಡಾಯಿಸುವಿಕೆ

        ಮಯಾಸ್ತೇನಿಯಾ ಬಿಗಡಾಯಿಸುವಿಕೆ (ಮಯಾಸ್ತೇನಿಯಾ  ಕ್ರೈಸಿಸ್‌) ಉಂಟಾಗುವುದು ಬಹಳ ಅಪರೂಪ. ಉಸಿರಾಟವನ್ನು  ನಿಯಂತ್ರಿಸುವ ಸ್ನಾಯುವು  ದುರ್ಬಲವಾದಾಗ ಉಸಿರಾಟವು ಕಷ್ಟವಾಗಿ, ಈ ರೀತಿ ಆಗುತ್ತದೆ. ಹೀಗಾದಾಗ , ಆಸ್ಪತ್ರೆಗೆ ದಾಖಲಾಗಿ, ಕೃತಕ ಉಸಿರಾಟ ಯಂತ್ರದ ಮೂಲಕ ರೋಗಿಯನ್ನು ಉಪಚರಿಸಬಹುದು.

        ಮಯಾಸ್ತೇನಿಯಾ ಸಂದರ್ಭದಲ್ಲಿ  ರೋಗಿಗೆ ಪ್ಲಾಸ್ಮಾ  ಮರುಪೂರಣ  ಮಾಡಲಾಗುತ್ತದೆ. ದಾನಿಯ ರಕ್ತದ ಪ್ರತಿಕಾಯ ರಹಿತ ಪ್ಲಾಸ್ಮಾವನ್ನು ರೋಗಿಗೆ  ನೀಡಲಾಗುತ್ತದೆ. ಅಲ್ಪಕಾಲದಲ್ಲಿಯೇ ಇದು ರೋಗಿಯ  ರಕ್ತದಲ್ಲಿರುವ ಅಸಹಜ ಪ್ರತಿಕಾಯಗಳನ್ನು  ತೆಗೆದುಹಾಕುತ್ತದೆ. ಆಗ  ಇನ್ನಿತರ   ಚಿಕಿತ್ಸೆಗಳನ್ನು  ಆರಂಭಿಸಲು ವೈದ್ಯರಿಗೆ ಸಮಯಾವಕಾಶ ದೊರೆಯುತ್ತದೆ. 

        ರೋಗದ ದೂರಗಾಮಿ ಪರಿಣಾಮಗಳೇನು?

        ಚಿಕಿತ್ಸೆ  ನೀಡದೇ  ಹೋದರೆ, ಮಯಾಸ್ತೇನಿಯಾ ಗ್ರಾವಿಸ್‌  ಗಂಭೀರ ವಾಗಬಹುದು; ಮಾರಣಾಂತಿಕವೂ  ಆಗಬಹುದು. ಸಕಾಲದಲ್ಲಿ ನೀಡ ಲಾದ ಚಿಕಿತ್ಸೆ  ಸಾಮಾನ್ಯವಾಗಿ  ಪರಿಣಾ ಮಕಾರಿಯಾಗಿರುತ್ತದೆ. ಹೆಚ್ಚಿನ ಜನರಲ್ಲಿ ಚಿಕಿತ್ಸೆಯಿಂದ  ರೋಗಲಕ್ಷಣಗಳು ಬಹುಮಟ್ಟಿಗೆ ಕಡಿಮೆಯಾಗುತ್ತವೆ. ಅಂತಹವರು  ರೋಗಲಕ್ಷಣ ಮುಕ್ತರಾಗಿ, ಸಹಜ  ಜೀವನವನ್ನು  ನಡೆಸಿಕೊಂಡು ಹೋಗಲು ಸಾಧ್ಯವಿದೆ. ಕೆಲವು ಸಂದರ್ಭಗಳಲ್ಲಿ  ಚಿಕಿತ್ಸೆಯು ಅಷ್ಟೊಂದು ಪರಿಣಾಮಕಾರಿ ಆಗದೇ ಹೋಗಬಹುದು. ಕೆಲವು ಸಲ ಅಲ್ಪ  ಕಾಲಕ್ಕಾಗಿ  ಮಯಾಸ್ತೇನಿಯಾ ಗ್ರಾವಿಸ್‌ ಕಣ್ಮರೆಯಾಗಬಹುದು. ಆಗ ಅದರರ್ಥ ಆ ಸಂದರ್ಭದಲ್ಲಿ ಔಷಧಿಯನ್ನು  ನಿಲ್ಲಿಸಬೇಕು ಎಂದು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus