Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಂದಿನಿಂದ ವಿಧಾನಮಂಡಲ ಅಧಿವೇಶನ
    • ವ್ಯರ್ಥವಾಗದಿರಲಿ 8 ದಿನ
      • Udayavani | Jan 30, 2012

        ಹೆಸರಿಗೆ ಜ.30ರಿಂದ ಫೆ.10ರವರೆಗೆ 12ದಿನಗಳ ಕಾಲ ನಿಗದಿಯಾಗಿದ್ದರೂ, ಕಲಾಪ ನಡೆಯುವುದು 8 ದಿನ ಮಾತ್ರ. ಶನಿವಾರ, ಭಾನುವಾರ ಕಲಾಪಕ್ಕೆ ರಜೆ. ಈ ಎಂಟು ದಿನ ಗದ್ದಲಕ್ಕೆ ಬಲಿಯಾಗದೆ ಅರ್ಥಪೂರ್ಣ ಚರ್ಚೆ ನಡೆಯಲಿ.

        ರಾಜ್ಯದ 100 ತಾಲೂಕುಗಳಲ್ಲಿ ಬರ ಹಾಗೂ ಬೇಸಿಗೆಗೂ ಮುನ್ನವೇ ವಿದ್ಯುತ್‌ ಸಮಸ್ಯೆ ಕಾಡುವ ಆತಂಕ ಎದುರಾಗಿರುವ ಸಂದರ್ಭದಲ್ಲೇ ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಇದು ಈ ವರ್ಷದ ಮೊದಲ ಹಾಗೂ ಸದಾನಂದಗೌಡರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಎರಡನೇ ಅಧಿವೇಶನ. ಹೆಸರಿಗೆ ಜ.30ರಿಂದ ಫೆ.10ರವರೆಗೆ 12 ದಿನಗಳ ಕಾಲ ನಿಗದಿಯಾಗಿದ್ದರೂ, ಕಲಾಪ ನಡೆಯುವುದು 8 ದಿನ ಮಾತ್ರ. ಮೊದಲ ದಿನ ರಾಜ್ಯಪಾಲರ ಭಾಷಣ ಹಾಗೂ ಎರಡನೇ ದಿನ ಅಗಲಿದ ಗಣ್ಯರ ಸಂತಾಪ ಸೂಚನೆ ನಿಮಿತ್ತ ಕಲಾಪ ನಡೆಯುವ ಸಾಧ್ಯತೆ ಇಲ್ಲ. ಮಧ್ಯೆ ಶನಿವಾರ- ಭಾನುವಾರ ಬೇರೆ ಇದೆ. ನಂತರ ಉಳಿಯುವ ಎಂಟಕ್ಕೆ ಎಂಟೂ ದಿನವನ್ನು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಮ್ಮ ಜನಪ್ರತಿನಿಧಿಗಳು ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ.

        ವರ್ಷಾರಂಭದಲ್ಲಿ ರಾಜ್ಯಪಾಲರನ್ನು ಕರೆಸಿ, ಸರ್ಕಾರದ ಸಾಧನೆಗಳನ್ನು ಅವರ ಬಾಯಿಂದ ಹೇಳಿಸಿ, ಸಂಪ್ರದಾಯ ಪೂರೈಸುವ ಕೆಲಸಕ್ಕಷ್ಟೇ ರಾಜ್ಯ ಸರ್ಕಾರ ಅಧಿವೇಶನ ನಡೆಸುತ್ತಿರುವಂತಿದೆ. ಇನ್ನು ವಿಪಕ್ಷಗಳಂತೂ ಈ ಅಧಿವೇಶನಕ್ಕೆ ಪೂರ್ವ ತಯಾರಿ ಮಾಡಿದಂತೆ ಕಾಣುತ್ತಿಲ್ಲ. ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಕಷ್ಟ-ಕಾರ್ಪಣ್ಯಗಳನ್ನು ವಿಪಕ್ಷಗಳು ಆಲಿಸಿಲ್ಲ. ಆದಾಗ್ಯೂ ಲೋಕಾಯುಕ್ತ ನೇಮಕ, ಸ್ಪೀಕರ್‌ ಕೆ.ಜಿ. ಬೋಪಯ್ಯ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ಮಾಡಿದ ಟೀಕೆ, ಬರ, ವಿದ್ಯುತ್‌ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಹೀಗಾಗಿ ಗದ್ದಲ- ಕೋಲಾಹಲ ನಿರೀಕ್ಷಿತ.

        ಕಳೆದ ವರ್ಷ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಬೇಕಿದ್ದ ಭಾಷಣ ಗದ್ದಲದಲ್ಲೇ ಕಾಣೆಯಾಗಿತ್ತು. ಬಿಜೆಪಿ ನಾಯಕರು ರಾಜ್ಯಪಾಲರನ್ನು "ರಾಜಕೀಯ ಏಜೆಂಟ್‌' ಎಂದು ಟೀಕಿಸಿ, ಅವರಿಂದಲೇ ಭಾಷಣ ಮಾಡಿಸಿದ್ದರ ವಿರುದ್ಧ ವಿಪಕ್ಷಗಳು ಜೋರು ದನಿಯಲ್ಲಿ ಆಕ್ಷೇಪ ಎತ್ತಿದ್ದರಿಂದ ಕೋಲಾಹಲ ಉಂಟಾಗಿತ್ತು. ಭಾಷಣ ಆರಂಭಿಸಿದ ಹತ್ತೇ ನಿಮಿಷದೊಳಗೆ "ಓದಲಾಗಿದೆ' ಎಂದು ಹೇಳಿ ರಾಜ್ಯಪಾಲರು ಅಧಿವೇಶನದಿಂದ ಹೊರನಡೆದಿದ್ದರು. ಇದು ಕರ್ನಾಟಕ ವಿಧಾನಮಂಡಲ ಕಲಾಪದ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಈ ವರ್ಷ ಅಂತಹ ಪರಿಸ್ಥಿತಿ ಇಲ್ಲ. ಆದರೂ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಲೋಕಾಯುಕ್ತ ವಿಚಾರದಲ್ಲಿ ಜಟಾಪಟಿ ನಡೆಯುತ್ತಿರುವುದರಿಂದ, ಸರ್ಕಾರಿ ಭಾಷಣದಲ್ಲಿ ಲೋಕಾಯುಕ್ತ ಕುರಿತ ಉಲ್ಲೇಖ ಇದ್ದರೆ ರಾಜ್ಯಪಾಲರು ಏನು ಮಾಡುತ್ತಾರೆ ಎಂಬ ಕುತೂಹಲವಿದೆ.

        2004ರಲ್ಲಿ ಬಿಹಾರದಲ್ಲಿ ರಾಜ್ಯಪಾಲರಾಗಿದ್ದ ಕನ್ನಡಿಗ ರಾಮಾ ಜೋಯಿಸ್‌ ಅವರು ಸರ್ಕಾರ ಸಿದ್ಧಪಡಿಸಿದ್ದ ಗಣರಾಜ್ಯೋತ್ಸವ ಭಾಷಣದಲ್ಲಿ ತುಸು ಬದಲಾವಣೆ ಮಾಡಿಕೊಂಡು ಓದಿದ್ದರು. ರಾಜ್ಯಪಾಲ ಭಾರದ್ವಾಜ್‌ ಅವರೇನಾದರೂ ಸರ್ಕಾರಿ ಭಾಷಣದಲ್ಲಿ ಹಾಗೆ ಮಾಡಿದರೆ ಆಡಳಿತಾರೂಢ ಬಿಜೆಪಿ ಏನು ಮಾಡಬಹುದು ಎಂಬ ಪ್ರಶ್ನೆ ಇದೆ.

        ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು 14 ದಿನಗಳ ಸಮಯಾವಕಾಶ ಸಿಗದಿರುವುದರಿಂದ ಕಲಾಪವನ್ನೇ ವಿಸ್ತರಿಸಲು ಪ್ರತಿ ಪಕ್ಷ ಗಳು ಬೇಡಿಕೆ ಇಡಬಹುದು. ಸರ್ಕಾರ ಬಗ್ಗದಿದ್ದಲ್ಲಿ, ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಷಣದಲ್ಲಿ ಪ್ರಸ್ತಾಪವಾದ ಹಲವು ವಿಚಾರಗಳನ್ನು ಇಟ್ಟು ತರಾಟೆಗೆ ತೆಗೆದುಕೊಳ್ಳಬಹುದು. ಇದಕ್ಕೂ ಮೀರಿ ಬೇರೆ ರೀತಿ ನಡೆದುಕೊಂಡರೆ ಕಲಾಪ ವ್ಯರ್ಥವಾಗುವುದಂತೂ ನಿಶ್ಚಿತ.

        ಅಧಿವೇಶನ ಆರಂಭವಾಗುತ್ತಿದ್ದರೂ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ಸಭೆ ಕರೆಯದಿರುವುದನ್ನು ನೋಡಿದರೆ, ಸರ್ಕಾರಕ್ಕೆ ಅಧಿವೇಶನ ನಡೆಸುವ ಮನಸ್ಸಿದ್ದಂತೆ ಕಾಣುತ್ತಿಲ್ಲ. ಬಿಜೆಪಿಯಲ್ಲಿ ನಾಯಕತ್ವ ಭುಗಿಲೆದ್ದಿರುವ ಸಂದರ್ಭದಲ್ಲಿ ಆದಷ್ಟು ಕಡಮೆ ದಿನ ಅಧಿವೇಶನ ನಡೆದರೆ ಸಾಕು ಎಂಬ ಭಾವನೆ ಆ ಪಕ್ಷದಲ್ಲಿ ಇದ್ದಂತಿದೆ. ಶಾಸಕಾಂಗ ಪಕ್ಷದ ಸಭೆ ಕರೆದರೆ ಯಡಿಯೂರಪ್ಪ ಬೆಂಬಲಿಗರು ನಾಯಕತ್ವಕ್ಕಾಗಿ ಪಟ್ಟು ಹಿಡಿದು, ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಆಹಾರ ಒದಗಿಸಬಹುದು ಎಂಬ ಆತಂಕವೂ ಇದೆ. ಹೀಗಾಗಿ ಈ ಅಧಿವೇಶನದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತದೆ ಎಂಬ ಲಕ್ಷಣಗಳು ಕಂಡುಬರುತ್ತಿಲ್ಲ.

        ಒಂದು ದಿನ ಕಲಾಪ ನಡೆಸಲು ತೆರಿಗೆದಾರರ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆಡಳಿತ ಹಾಗೂ ಪ್ರತಿಪಕ್ಷಗಳು ಇದನ್ನು ಅರ್ಥಮಾಡಿಕೊಂಡು 8 ದಿನಗಳ ಅವಧಿಯಲ್ಲಿ ಬರ, ವಿದ್ಯುತ್‌ನಂತಹ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus