ಜಯದೇವ ಪ್ರಸಾದ ಮೊಳೆಯಾರ | Jan 29, 2012
ಪ್ರಧಾನಿ ಸಿಂಗರು ಜಿಡಿಪಿ ಹೆಚ್ಚಳ ಮಾಡಿ ಅಭಿವೃದ್ಧಿ ತಂದ್ರೆ, ಬೆಲೆಯೇರಿಕೆ ಸಿಕ್ಕಾಪಟ್ಟೆ ಆಯ್ತು ಸಾರ್ ಅಂತ ಗಲಾಟೆ ಮಾಡ್ತಾರೆ, ಬೆಲೆಯಿಳಿಕೆಗೆ ತೊಡಗಿದ್ರೆ ಗ್ರೋತೇ ಇಲ್ಲ ಅಂತ ಇಂಡಸ್ಟ್ರಿಯವ್ರು ಗಲಾಟೆ ಮಾಡ್ತಾರೆ, ಕೆಲ್ಸಾ ಇಲ್ಲ ಅಂತ ಜನ ಗಲಾಟೆ ಮಾಡ್ತಾರೆ. ಅಮೆರಿಕ ಯುರೋಪುಗಳು ಅದ್ವೂ .. ಬಚಾವ್.. ರುಪೀ, ಶೇರುಕಟ್ಟೆಗಳು ನಳನಳಿಸುತ್ತವೆ...
ನಗೂ ನಮ್ಮ ದೇಶದ ಪ್ರಧಾನಿ ಮನಮೋಹನ್ ಸಿಂಗರಿಗೂ ಹೆಚ್ಚು ವ್ಯತ್ಯಾಸ ಇಲ್ಲ. ನಾಗಾನಾಥ್ ಇದ್ದಿದ್ರೆ ಹಾಗಂದ ಕೂಡಲೇ ಕ್ಷಣಾರ್ಧದಲ್ಲಿ ನನಗೊಂದು ಬಿಳಿಗಡ್ಡ ಅಂಟಿಸಿ, ತಲೆಗೆ ಒಂದು ಹಳೇ ಲುಂಗಿ ಸುತ್ತಿ ಮುಖಕ್ಕೆ ಹ್ಯಾಪ ಕಳೆಯ ಲೇಪ ಕೊಟ್ಟು ಇಲ್ಲೇ ಕೆಳಗೆ ಒಂದು ಕಾಟೂìನ್ ಗೀಚಿ ಹಾಕ್ತಿದ್ರು ಮತ್ತು ಹಿಂದೆ ಗೋಡೆ ಯಲ್ಲಿ ಉದ್ದ ಮೂಗಿನ ಸೋನಿಯಾಜಿಯವರ ಪಟ ಕೂಡ ತೂಗು ಹಾಕ್ತಿದ್ರು. ಅದು ಬಿಡಿ. ನಾನೂ ಸಿಂಗರೂ ಒಂದೇ ರೀತಿ ಇರುವುದು ಲುಕ್ಕಿನಲ್ಲಿ ಅಲ್ಲ. ಸ್ಥಾನಮಾನಗಳಲ್ಲೂ ಅಲ್ಲ. ಒಂದೇ ಇರುವುದು ಪರಿಸ್ಥಿತಿಯಲ್ಲಿ!
ಪ್ರಧಾನಿ ಸಿಂಗರು ಜಿಡಿಪಿ ಹೆಚ್ಚಳ ಮಾಡಿ ಅಭಿವೃದ್ಧಿ ತಂದ್ರೆ, ಬೆಲೆಯೇರಿಕೆ ಸಿಕ್ಕಾಪಟ್ಟೆ ಆಯ್ತು ಸಾರ್ ಅಂತ ಗಲಾಟೆ ಮಾಡ್ತಾರೆ, ಬೆಲೆಯಿಳಿಕೆಗೆ ತೊಡಗಿದ್ರೆ ಗ್ರೋತೇ ಇಲ್ಲ ಅಂತ ಇಂಡಸ್ಟ್ರಿಯವ್ರು ಗಲಾಟೆ ಮಾಡ್ತಾರೆ, ಕೆಲ್ಸಾ ಇಲ್ಲ ಅಂತ ಜನ ಗಲಾಟೆ ಮಾಡ್ತಾರೆ. ಅಮೆರಿಕ ಯುರೋಪುಗಳು ಅದ್ವೂ.. ಬಚಾವ್.. ರುಪೀ, ಶೇರುಕಟ್ಟೆಗಳು ನಳನಳಿಸುತ್ತವೆ; ಅವು ಬಿದ್ವೂ, ರುಪೀ ಲಾಗಾ ಹೊಡುª ತೈಲದೊಂದಿಗೆ ಹಣದುಬ್ಬರವನ್ನೂ ಕೂಡ ಉಚಿತವಾಗಿ ಇಂಪೋರ್ಟ್ ಮಾಡಬೇಕಾಗಿ ಬರುತ್ತೆ. ಡೀಸಿಲ್-ರೇಶನ್-ಗೊಬ್ಬರ ಸಬ್ಸಿಡಿ ಕೊಡದಿದ್ರೆ ಮಮ್ತಾ ದೀದಿ ಕೋಪಿಸ್ಕೊಳ್ತಾರೆ, ಸರ್ಕಾರನೇ ಉರುಳುತ್ತೆ; ಸಬ್ಸಿಡಿ ಕೊಟ್ರೋ, ಸರಕಾರವೇ ಬೀದಿ ಬದಿ ನಿಂತು ಸಾಲ ಬೇಡೋ ಪರಿಸ್ಥಿತಿ ನಿರ್ಮಾಣ ಆಗುತ್ತೆ. ನಂಗೂ ಅಷ್ಟೆ, ಈ ಕುಡಿಕೆ ಪುರಾಣ ಆರಂಭ ಮಾಡಿದಾಗಿನಿಂದ ನನ್ನ ಪರಿಸ್ಥಿತಿಯೂ ಮನಮೋಹನವಾಗಿಬಿಟ್ಟಿದೆ. ಒಂದಿನ ರಾಯರು ಇಲ್ದಿದ್ರೆ "ಸಾರ್ ಇವತ್ತು ಗುರುಗುಂಟಿ ರಾಯರು ಯಾಕೆ ಬರ್ಲಿಲ್ಲ?' ಬಂದ್ರೆ "ಎಲ್ಲಿ ಬಹೂರಾಣಿ ಕಾಣಿಸ್ತಾನೆ ಇಲ್ವಲ್ಲ ಕೆಲವು ವಾರಗಳಿಂದ?' ಇಬ್ರೂ ಬಂದ್ರೆ "ಇವತ್ತು ಮ್ಯಾಟರ್ ಸ್ವಲ್ಪತೆಳುವಾಯೆ¤àನೋ?' ಮ್ಯಾಟರ್ ಉದ್ದ ಎಳೆª† "ಇದೇನ್ಸಾರ್ ಇವತ್ತು ನೇರವಾಗಿ ವಿಷಯಕ್ಕೆ ಬಂದಿದೀರಾ? ಇಂಟ್ರೊಡಕ್ಷನ್ನೇ ಇಲ್ಲ ಈ ಬಾರಿ?' ಹೀಗೆ ಹತ್ತು ಹಲವು ಜನರಿಂದ ಹನ್ನೊಂದು ಹಲವು ಫೀಡ್ ಬ್ಯಾಕ್!
ಮಂಗಳೂರಿನ ಬಡ್ಡಿಂಗ್ ಸಿಎ ಶರಣ್ಯಾ ಶರ್ಮರು ನಿಮಗೆ ಗೊತ್ತೇ ಇದೆ. ಕಳೆದ ವಾರದ "ಚಾಪ್ಟರ್ 6ಎ ಬಗ್ಗೆ ಕೊರೆತ ಓದಿದ ಶರಣ್ಯಾ "ರೀ ಸ್ವಾಮೀ ಮೊಳೆರಾಯರೇ, ಬರೇ ಹೂಡಿಕೆ ಆಧಾರಿತ ಕರ ವಿನಾಯಿತಿಯ ಬಗ್ಗೆ ಮಾತ್ರ ಬರ್ದಿದೀರಲ್ಲ? ಒಬ್ಬ ಸಾಮಾನ್ಯ ಸ್ಯಾಲರಿಮ್ಯಾನ್‌ಗೆ ಸಂಬಳದಲ್ಲೇ ಸಿಗುವ ಕರ ವಿನಾಯಿತಿಯ ಬಗ್ಗೆ ಯಾಕೆ ಬರೆದಿಲ್ಲ? ಸೆಕ್ಷನ್ 80 ಬಗ್ಗೆ ಕೊರೆತ ಕೇಳಿ ಕೇಳಿ ನನ್ನ ಈ ಇಕ್ಲೋತಾ ತಲೆ ಕುಂಬಾಗಿದೆ. ಆ ಹಳೆ ಪ್ಲೇಟ್ ಬಿಟ್ಟು ತಾಕತ್ತಿದ್ರೆ ಒಬ್ಟಾತನ ಸಂಬಳದ ಯಾವ ಯಾವ ಭಾಗಕ್ಕೆ ಕರ ವಿನಾಯಿತಿ ಸಿಗತ್ತೆ ಅನ್ನೋದರ ಬಗ್ಗೆ ಮೊಳೆ ಹೊಡೀರಿ ನೋಡ್ವಾ?' ಅಂತ ಒಂದು ಡೋಸ್ ಚುಚ್ಚಿದ್ದಾಳೆ. "ಯಪ್ಪಾ... ಯೆಂಡೆ ಭಗವಾನೆ...! ಈ ಕೂಸು ಒರುಪಾಡು ಶಲ್ಯವ...!'
ಒಬ್ಬ ಸಂಬಳ ಪಡೆಯುವ ವ್ಯಕ್ತಿಯ ಆದಾಯದಲ್ಲಿ ಬಹುತೇಕ ಈ ಕೆಳಗಿನ ಭಾಗಗಳು ಇರುತ್ತವೆ. ಅದರಲ್ಲಿ ಕೆಲವದರ ಮೇಲೆ ಕರ ಇದ್ದರೆ ಇನ್ನು ಕೆಲವದರ ಮೇಲೆ ಕರ ವಿನಾಯಿತಿ ಇರುತ್ತದೆ. ಕರ ವಿನಾಯಿತಿ ಎಂದರೆ ಅಂತಹ ವಿನಾಯಿತಿ ಮೊತ್ತವನ್ನು ನೇರವಾಗಿ ಆದಾಯದಿಂದ ಕಳೆಯುವುದು ಎಂದು ಅರ್ಥ. ಹಾಗಾಗಿ, ಇಲ್ಲಿ "ಕರ ವಿನಾಯಿತಿ'ಗಿಂತ "ಆದಾಯ ವಿನಾಯಿತಿ'ಯೇ ಹೆಚ್ಚು ಸೂಕ್ತ.
1. ಬೇಸಿಕ್ ಮತ್ತು ಡಿಎ:
ವ್ಯಕ್ತಿಯ ಬೇಸಿಕ್ ಸ್ಯಾಲರಿ ಮತ್ತು ಅದರ ಮೇಲೆ ಸಿಗುವ ಡಿಯರ್‌ನೆಸ್ ಅಲೊವೆನ್ಸ್ ಮಾತ್ರವಲ್ಲದೆ ಕಮಿಶನ್, ಬೋನಸ್, ಸಿಟಿ ಕಂಪೆನ್ಸೇಟರಿ ಅಲೊವೆನ್ಸ್, ಓಟಿ, ಲಂಚ್ ಭತ್ಯೆ ಇತ್ಯಾದಿ ಎಲ್ಲಾ ರೀತಿಯ ಆದಾಯಗಳೂ ಸಂಪೂರ್ಣವಾಗಿ ಕರಾರ್ಹ.
2. ಎಚ್‌ಆರ್‌ಎ (ಹೌಸ್ ರೆಂಟ್ ಅಲೊವೆನ್ಸ್):
ಇದು ಸಂಪೂರ್ಣವಾಗಿ ಕರಾರ್ಹವಲ್ಲ. ಭಾಗಶಃ ವಿನಾಯಿತಿ ಇದರಲ್ಲಿ ದೊರೆಯುತ್ತದೆ. ಇದರಲ್ಲಿ ಕರ ವಿನಾಯಿತಿ ಈ ಕೆಳಗಿನ ಫಾರ್ಮ್ಯುಲದಂತೆ ಇರುತ್ತದೆ.
1. ಕಂಪೆನಿಯಿಂದ ಪಡೆದ ಎಚ್‌ಆರ್‌ಎ
2. ಬೇಸಿಕ್ ಸಾಲರಿಯ ಶೇ.40 (4 ಮೆಟ್ರೋಗಳಲ್ಲಿ ಶೇ. 50)
3. ಬೇಸಿಕ್ಕಿನ ಶೇ. 10ಗಿಂತ ಜಾಸ್ತಿ ನೀಡಿದ ಮನೆ ಬಾಡಿಗೆ.
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತದ ಮೇಲೆ ಕರ ವಿನಾಯಿತಿ ಇರುತ್ತದೆ. ಅಷ್ಟು ಬಿಟ್ಟು ಬಾಕಿ ಎಚ್‌ಆರ್‌ಎ ಮೊತ್ತದ ಮೇಲೆ ತೆರಿಗೆ ಇರುತ್ತದೆ.
ಮೇಲಿನ ಫಾರ್ಮ್ಯುಲವನ್ನು ತಾಳ್ಮೆ ಮತ್ತು ಪುರುಸೊತ್ತಿನಿಂದ ಇನ್ನೊಂದೆರಡು ಬಾರಿ ಓದಬೇಕಾಗಿ ವಿನಂತಿ. ಹಾಗೆ ಪಾರಾಯಣ ಮಾಡಿದ ಮೇಲೂ ಅರ್ಥವಾಗದಿದ್ದರೆ ಬಿಟ್ಟು ಬಿಡಿ. ಜಾಸ್ತಿ ವರಿ ಮಾಡ್ಕೊàಬೇಡಿ. ಹೆಚ್ಚು ವರಿಗೆ ಹೆಚ್ಚು ವರಿ ವಿನಾಯಿತಿ ಸಿಗುವುದಿಲ್ಲ. ಸುಮ್ನೆ ಯಾಕೆ ಮಂಡೆ ಬಿಸಿ ಮಾಡ್ತೀರಿ, ಸುಮ್ನೆ ಲೆಕ್ಕಾಚಾರ ಹಾಕಿದ್ರೆ ಸಾಕು. ಅದ್ರ ಹಿಂದಿನ ಲಾಜಿಕ್-ಗೀಜಿಕ್ ಎಲ್ಲ ಯಾವೋನಿಗೆ ಬೇಕು ಸಾರ್? (ಅದನ್ನು ತಯಾರು ಮಾಡಿದವರಿಗೆ ಅರ್ಥ ಆಗಿದ್ದಿದ್ರೆ ಅದೇ ಸಂತೋಷ) ಇದಕ್ಕೆ ಬಾಡಿಗೆ ರಶೀದಿಗಳು ಬೇಕು. ಬಾಡಿಗೆ ಏರ್ಪಾಡು ಪತಿ-ಪತ್ನಿಯರ ನಡುವೆ ಬಿಟ್ಟು ಬೇರಾರೊಂದಿಗೂ ಓಕೆ.
3. ಕನ್ವೆಯನ್ಸ್ ಅಲೊವೆನ್ಸ್:
ಮಾಸಿಕ ರೂ. 800ರವರೆಗೆ ಮಾತ್ರ ಕರ ವಿನಾಯಿತಿ. ಈ ಹೆಡ್ಡಿನಡಿ ಉಳಿದ ಮೊತ್ತ ಕರಾರ್ಹ.
4. ಎಲ್‌ಟಿಎ (ಲೀವ್ ಟ್ರಾವೆಲ್ ಅಲೊವೆನ್ಸ್):
ನಾಲ್ಕು ಕ್ಯಾಲೆಂಡರ್ ವರ್ಷಗಳ ಅವಧಿಯಲ್ಲಿ ಯಾವುದೇ 2 ರಜಾ ಪ್ರಯಾಣಗಳ ಊಟ, ವಸತಿ ಇತ್ಯಾದಿ ಹೊರತುಪಡಿಸಿ ಬರೇ ಪ್ರಯಾಣ ವೆಚ್ಚಗಳಿಗೆ (ಸ್ವಂತ ಮತ್ತು ಆಶ್ರಿತ ಕುಟುಂಬದವ ರಿಗೆ) ಕರ ವಿನಾಯಿತಿ ಸಿಗುತ್ತದೆ. ಸದ್ರಿ ಕಾಲಾವಧಿ 2010-13.
5. ಮೆಡಿಕಲ್ ಅಲೊವೆನ್ಸ್:
ವರ್ಷಕ್ಕೆ ರೂ. 15,000ದ ವರೆಗೆ ಸ್ವಂತ ಮತ್ತು ಕುಟುಂಬದವರಿ ಗಾಗಿ ಮಾಡಿದ ಮೆಡಿಕಲ್ ವೆಚ್ಚದ ಮರುಪಾವತಿಗೆ ಕರ ವಿನಾಯಿತಿ ಲಭ್ಯ. ಇದಕ್ಕೆ ಬಿಲ್‌ಗಳನ್ನು ಉಳಿಸಿ ಕಂಪೆನಿಗೆ ಕೊಡಬೇಕಾಗುತ್ತದೆ.
6. ಸೌಲಭ್ಯಗಳು:
ಕಂಪೆನಿ ವತಿಯಿಂದ ಕಾರು, ಮನೆ, ಸುಲಭ ದರದ ಸಾಲ ಇತ್ಯಾದಿ ಎಲ್ಲಾ ರೀತಿಯ ಪರ್ಕ್ಸ್ ಅಥವಾ ಸೌಲಭ್ಯಗಳ ಮೌಲ್ಯವನ್ನು ಆದಾಯಕ್ಕೆ ಸೇರಿಸಿ ಅದರ ಮೇಲೆ ಕರ ಲೆಕ್ಕಾಚಾರ ಹಾಕಲಾಗುತ್ತದೆ.
7. ನೌಕರರ ಭದ್ರತೆ:
ಕಂಪೆನಿಯು ನೌಕರರ ಭದ್ರತೆಗಾಗಿ ಪಿಎಫ್, ಪೆನ್ಶನ್, ಗ್ರೂಪ್/ಮೆಡಿಕಲ್ ಇನ್ಶೂರೆನ್ಸ್ ಇತ್ಯಾದಿ ನಿಧಿಗಳಿಗೆ ನೀಡಿದ ಪ್ರೀಮಿಯಂಗಳ ಮೇಲೆ ನೌಕರರು ಕರ ತೆರಬೇಕಾಗಿಲ್ಲ.
ಅಟ್ಯಾಚ್‌ಮೆಂಟ್:
ಗುರುಗುಂಟಿ ರಾಯರ ಮಗರಾಯನ ಎಂಟ್ರಿ ಕಾಕು ರಂಗ ಭೂಮಿಯಲ್ಲಿ ಅಪರೂಪ. ಆದರೆ ಚಿನಿವಾರ ಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿದಾಗಲೆಲ್ಲಾ ರಾಯರ ಮನೆಯಲ್ಲಿ ನಡೆಯುವ ಗೋಲ್ಡ್-ವಾರ್‌ನಲ್ಲಿ ಕಡ್ಡಾಯವಾಗಿ ಆತನ ಉಪಸ್ಥಿತಿ ಇರಲೇ ಬೇಕು. ರಾಯರ ಮನೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ರೀತಿಯ ಹೂಡಿಕೆಯ ಪೂರ್ವಗ್ರಹ ಪೀಡಿತರೇ. ಬಹೂರಾಣಿಯು ಚಿನ್ನ, ಒಡವೆ, ಆಭರಣ ಅಂತ ಲಾಕರ್ ತುಂಬುವ ಕೆಲಸದಲ್ಲಿ ನಿರತಳಾದರೆ ಮಗರಾಯನಿಗೆ ಶೇರು ಹೋಮದ ಮೌಡ್ಯ ಸುಟ್ಟರೂ ಹೋಗುವುದಿಲ್ಲ. ರಾಯರಿಗೆ ಎಫಿ ಗಿಫಿ ಎಂಬ ಚಾರಿತ್ರಿಕ ಪೇಪರುಗಳಲ್ಲಿ ವಿಶ್ವಾಸವಾದರೂ ಒಮ್ಮೊಮ್ಮೆ ಭಾರೀ ಸುಪರ್ ಡ್ನೂಪರ್ ರಿಟರ್ನ್ ಕೊಡುವ ಮೋಸದ ಸ್ಕೀಮುಗಳಿಗೆ ಕಿವಿಗೊಂಡೆಯಾಗಿಸಿ ದುಡ್ಡು ಸುರಿಯುವ ಚಪಲ ವುಂಟು. ಹೂಡಿಕೆಯ ಯಾವುದೇ ಕಾಟವಿಲ್ಲದೆ ಬರೇ ಖರ್ಚು ಮಾಡುವುದರಲ್ಲಿಯೇ ಸಂತಸ ಕಾಣುವ ಪಾರಮಾರ್ಥಿಕ ತತ್ವಜ್ಞಾನಿ ಯೆಂದರೆ ಪುಟ್ಟು ಮಾತ್ರ. ಅಪ್ಪಅಮ್ಮ ಮಾಡುವ ಪ್ರತಿಯೊಂದು ಹೂಡಿಕೆಗೂ ಎಷ್ಟು ಲೇಯ್ಸ ಪ್ಯಾಕೆಟ್ ಬರಬಹುದು, ಎಷ್ಟು ಬೂಮರ್ ಗಮ್ ಅಗಿಯಬಹುದು ಎಂಬ ಲೆಕ್ಕಾಚಾರ ಮಾಡಿಯೇ ಗಣಿತದಲ್ಲಿ ಗಣ್ಯನಾದದ್ದು ನಮ್ಮ ಪುಟ್ಟು.
ಒಬಾಮಾ ಸರಕಾರದಲ್ಲಿ ಬೆನ್ ಬೆರ್ನಾಂಕೆ ಎಂಬ ಒಬ್ಬ ಮಹಾಪುರುಷನಿದ್ದಾನೆ. ಆತ ಅಮೆರಿಕದ ಡಾಲರ್ ಸಾಲದರವನ್ನು ಶೂನ್ಯ-ಸನಿಹ ಕನಿಷ್ಠದಲ್ಲಿ ಇನ್ನೂ ಮೂರು ವರ್ಷ ಇಡುವ ಪ್ರತಿಜ್ಞೆ ಮಾಡಿ ಚಿನ್ನದ ರೇಟಿಗೆ ಸ್ಟಿರಾಯಿಡ್ ಇಂಜೆಕ್ಷನ್ ಕೊಟ್ಟು ಭಾರತದ ಮಹಿಳಾಮಣಿಗಳ ಮೆಚ್ಚುಗೆಗೆ ಪಾತ್ರನಾಗಿ¨ªಾನೆ. "ಚಿನ್ನಕ್ಕೆ ರೇಟ್ ಜಾಸ್ತಿಯಾದರೆ ಮಹಿಳೆಯರಿಗೆ ಸಂತಸವೇಕಪ್ಪಾ? ಕಡಿಮೆಯಾದರೆ ಅಲ್ಲವೇ
ಸಂತಸವಾಗಬೇಕಾದದ್ದು?' ಎಂಬ ಅತ್ಯಂತ ದಡ್ಡ ಪ್ರಶ್ನೆ ಯನ್ನು ನೀವು ಕೇಳಬಹುದು. ಮಹಿಳೆಯರಿಗೆ ಸಂತಸ ಯಾಕೆಂದರೆ ಚಿನ್ನದ ಬೆಲೆ ಈ ಪಾಟಿ ವಿಷ ಏರಿದಂತೆ ಏರಿದರೆ ಮಾತ್ರ ಹುಟ್ಟಾ ಶೇರುದಾಸರಾದ ಗಂಡಸರು ಅದನ್ನು ಖರೀದಿಸಲು ಒಪ್ಪಿಗೆ ಕೊಡುತ್ತಾರೆ. ಇಲ್ದಿದ್ರೆ "ಅದೆಲ್ಲಾ ಡೆಡ್ ಇನ್ವೆಸ್ಟ್‌ಮೆಂಟ್, ರಿಟರ್ನ್ ಇಲ್ಲಾ, ನಿನಗೆ ತಲೆ ಸರಿ ಇಲ್ಲಾ' ಅಂತೆಲ್ಲಾ ಭಾಷಣ ಕುಟ್ಟುತ್ತಾರೆ. ಹಾಗಾಗಿ ಚಿನ್ನಕ್ಕೆ ಬೆಲೆ ಏರಿದಂತೆಲ್ಲಾ ಮಹಿಳೆಯರು ಬೀಗುತ್ತಾರೆ. ಇರುವ ಚಿನ್ನಕ್ಕೆ ಬೆಲೆಯೇರುವುದಲ್ಲದೆ ಹೊಸ ಖರೀದಿಗೆ ರಹದಾರಿ ಸಿಗುತ್ತದೆ. ಗಂಡಸರು ಭವಿಷ್ಯದಲ್ಲಾದರೂ ಅವರು ಹೇಳಿದಾಗ ಚಿನ್ನಕ್ಕೆ ದುಡ್ಡು ಬಿಚ್ಚಿ ಸರಿದಾರಿಗೆ ಬರುತ್ತಾರೆ.
ಈ ಬೆನ್ ಬೆರ್ನಾಂಕೆ ಎಂಬಾತ ಜೀವಂತ ಇರುವವರೆಗೆ ಚಿನ್ನದಲ್ಲಿ ದುಡ್ಡು ಹೂಡಲು ಯಾವುದೇ ಅಡ್ಡಿ ಇಲ್ಲ ಎಂಬ ಫರ್ಮಾನನ್ನು ಜಿಮ್ ರೋಜರ್ಸ್ ಎಂಬ ಚಿನ್ನದ ಸ್ಪೆಶಲಿಸ್ಟ್ ಈಗಾಗಲೇ ನೀಡಿ ವರ್ಲ್ಡ್ ಫೇಮಸ್ ಆಗಿ¨ªಾನೆ. ಎಸ್‌ಬಿ ಇಂಟರೆಸ್ಟ್ ಕೂಡ ನೀಡದೆ ಬಿದ್ದಲ್ಲೇ ನೂರು ವರುಷ ಬಿದ್ದಿದ್ದ ಚಿನ್ನಕ್ಕೆ ಕಳೆದ 5-10 ವರ್ಷಗಳಿಂದ ಸುವರ್ಣ ಯುಗ! ಎಲ್ಲಾ ಥಾಂಕ್ಸ್ ಟು ರಿಸೆಶನ್ ಆ್ಯಂಡ್ ಬೆನ್ ಬೆರ್ನಾಂಕೆ!