ಹರೀಶ ಬೊಳಂತಿಮೊಗರು | Feb 03, 2012
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಣ್ಣ ಹಳ್ಳಿ ಮಾಣಿಲ. ಒಂದು ಕಾಲದಲ್ಲಿ ಉದಯವಾಣಿ ಪತ್ರಿಕೆಯಿಂದ ಕುಗ್ರಾಮವೆಂದು ಗುರುತಿಸಲ್ಪಟ್ಟಿದ್ದ ಊರು. ಆ ವರದಿಯ ಫಲಶ್ರುತಿಯೆಂಬಂತೆ ಬಳಿಕ ಒಂದೊಂದೇ ಅಭಿವೃದ್ಧಿಯ ಬೆಳಕು ಈ ಹಳ್ಳಿಯನ್ನು ತುಂಬತೊಡಗಿದೆ. ಇತ್ತೀಚೆಗೆ ಮೋಹನದಾಸ ಸ್ವಾಮೀಜಿಗಳ ಶ್ರೀಧಾಮದ ಧಾರ್ಮಿಕ ಚಟುವಟಿಕೆಗಳು ಹಾಗೂ ಇಲ್ಲಿನ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಊರು ಹೆಸರು ಮಾಡುತ್ತಿದೆ.
ಡೆಂಬಳ ಬಾಲಕೃಷ್ಣ ಭಟ್ಟರು ಈ ಶಾಲೆಯ ಮುಖ್ಯೋಪಾಧ್ಯಾಯರು. ಸ್ವತಃ ಯಕ್ಷಗಾನ ಕಲಾವಿದರು. ವಿದ್ಯಾರ್ಥಿಯಾಗಿರುವಾಗಲೇ ಪಂಚವಟಿಯ ಖರಾಸುರ, ಅನಂತರ ಪುಂಡುವೇಷ, ರಾಜ ವೇಷ, ರಾಕ್ಷಸವೇಷ, ಹಾಸ್ಯಪಾತ್ರಗಳನ್ನು ಮಾಡಿದವರು. ಪರಶುರಾಮ, ಬಬ್ರುವಾಹನ, ಶೂರಪದ್ಮ, ರಾವಣ, ಬಾಹುಕ ಮೊದಲಾದವು ಅವರ ಪ್ರಸಿದ್ಧ ವೇಷಗಳು. ಯಕ್ಷಗಾನದ ಹವ್ಯಾಸದೊಂದಿಗೆ ಇವರು ಛದ್ಮವೇಷ, ವೇದಿಕೆ ನಿರ್ಮಾಣ, ಸಭಾಲಂಕಾರ ಮೊದಲಾದವುಗಳಲ್ಲಿ ಎಳವೆಯಿಂದಲೇ ಆಸಕ್ತಿ ತಾಳಿದ್ದರು.
ಮುರುವ ನಡುಮನೆ ಮಹಾಬಲ ಭಟ್ಟರ ಸಹಕಾರದಿಂದ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ 1976ರಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ತಮ್ಮ ಕಲಾಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಆಸಕ್ತಿಯಾಗಿ ರೂಪಿಸಿದರು. 1976 ರಿಂದ ಇಂದಿನವರೆಗೆ ಪ್ರತಿವರ್ಷ ಶಾಲಾ ಮಕ್ಕಳನ್ನೇ ತರಬೇತುಗೊಳಿಸಿ ಯಕ್ಷಗಾನ ಪ್ರದರ್ಶನ ನಡೆಸುತ್ತಿದ್ದಾರೆ. ಇತ್ತೀಚೆಗೆ "ಮಾಣಿಲ ವಿಷ್ಣುಮೂರ್ತಿ ಯಕ್ಷಗಾನ ಮಕ್ಕಳ ಮೇಳ' ಎಂಬ ತಂಡವನ್ನು ಹರೀಶ ಬೊಳಂತಿಮೊಗರು, ಗಣೇಶ ಆಚಾರ್ಯ ಕೊಂದಲ ಕೋಡಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಇವರ ಸಹಕಾರದೊಂದಿಗೆ ಆರಂಭಿಸಿ ಶಾಲೆಯ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಈ ತಂಡ ಈಗಾಗಲೇ ಜಿಲ್ಲೆಯಾದ್ಯಂತ 60ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದೆ.
ಛದ್ಮವೇಷದಲ್ಲೂ ತನಗಿದ್ದ ಆಸಕ್ತಿ ಮತ್ತು ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ಶಾಲೆಗೆ ಹಲವು ಗೌರವಗಳನ್ನು ತಂದುಕೊಟ್ಟಿದ್ದಾರೆ. ಬಾಹುಕ, ಉಗ್ರನರಸಿಂಹ, ಗಾಂಧೀಜಿ, ಯೇಸುಕ್ರಿಸ್ತ, ಕುವೆಂಪು ಮೊದಲಾದ ಛದ್ಮವೇಷಗಳು ಅಪಾರ ಜನಮನ್ನಣೆಗೆ ಪಾತ್ರ ವಾಗಿವೆ. ಪ್ರತಿಭಾಕಾರಂಜಿಯ ಕ್ಲಸ್ಟರ್, ತಾಲೂಕು ಮಟ್ಟಗಳಲ್ಲಿ ಬಹುಮಾನಗಳಿಗೆ ಶಾಲೆ ಪಾತ್ರವಾಗಿದೆ. ಪೌರಾಣಿಕ ನಾಟಕಗಳನ್ನು ಆಡಿಸುವುದರಲ್ಲಿ ಬಾಲಕೃಷ್ಣ ಭಟ್ಟರು ನಿಸ್ಸೀಮರು.
ಸಾಹಿತ್ಯದ ಒಲವು ವಿದ್ಯಾರ್ಥಿ ಗಳಲ್ಲಿ ಬೆಳೆಸುವುದಕ್ಕೆ ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಇವರು ಸಂಘಟಿಸುತ್ತಾ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಂಗಮದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದು ಅವುಗಳಲ್ಲಿ ಒಂದು. ಮಕ್ಕಳ ಕಥೆ, ಕತೆ, ಲೇಖನ, ಚಿತ್ರಗಳನ್ನೊಳಗೊಂಡ "ಸೌರಭ' ಎಂಬ ಕೈಬರಹದ ಪತ್ರಿಕೆಯನ್ನು ಸತತ 9 ವರ್ಷ ಗಳಿಂದ ಬಿಡುಗಡೆಗೊಳಿಸುತ್ತ ಬಂದಿದ್ದಾರೆ. ಈ ವರ್ಷ ಶಾಲೆಯ ಆರು ವಿದ್ಯಾರ್ಥಿಗಳ ಕವನ ಸಂಕಲನಗಳು ಏಕಕಾಲದಲ್ಲಿ ಬಿಡುಗಡೆಗೊಂಡಿದೆ ಎಂಬುದು ಬಾಲಕೃಷ್ಣ ಭಟ್ಟರು ಎಂಥ ಸಾಹಿತ್ಯಾ ಸಕ್ತ ವಾತಾವರಣವನ್ನು ರೂಪಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶೈಕ್ಷಣಿಕವಾಗಿಯೂ ಈ ಶಾಲೆ ಉತ್ತಮ ಫಲಿತಾಂಶ ತರುತ್ತಿರುವುದರಿಂದ ಊರವರು ದೂರದ ಶಾಲೆಗಳಿಗೆ ಮುಖ ಮಾಡದೇ ಇಲ್ಲಿಗೇ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದಾರೆ.
ಶಾಲೆಗೆ ಸಮರ್ಪಣಾ ಭಾವದಿಂದ ತನ್ನನ್ನು ಅರ್ಪಿಸಿಕೊಂಡ ಭಟ್ಟರು "ವಿದ್ಯಾರ್ಥಿಗಳು ಪಡೆಯುತ್ತಿರುವ ಗೌರವ, ಬಹುಮಾನಗಳು ನನಗೆ ಹೆಚ್ಚಿನ ಸಂತೋಷವನ್ನು ಕೊಡುತ್ತಿದೆ' ಎನ್ನುತ್ತಾರೆ. ಕಲಾವಿದನ ಮನಸ್ಸು, ಊರವರ ಸಹಕಾರವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಪ್ರಾಮಾಣಿಕತೆ, ದಣಿವಿರದ ಉತ್ಸಾಹ ಬಾಲಕೃಷ್ಣ ಭಟ್ಟರ ವೈಶಿಷ್ಟ್ಯ. ತನ್ನ ನಿರತ ಕ್ರಿಯಾಶೀಲತೆ, ಸೃಜನಶೀಲತೆಯ ಮೂಲಕ ಶಾಲೆಗೆ ಮತ್ತು ಊರಿಗೆ ಒಳ್ಳೆಯ ಹೆಸರು ತಂದುಕೊಟ್ಟ, ಈ ವರ್ಷ ನಿವೃತ್ತಿಗೊಳ್ಳಲಿರುವ ಡೆಂಬಳ ಬಾಲಕೃಷ್ಣ ಭಟ್ಟರಿಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಊರವರು ಸೇರಿ ಫೆ.4 ರಂದು ಸಾರ್ವಜನಿಕ ಸಮ್ಮಾನ ಸಮಾರಂಭ ಮಾಡುತ್ತಿದ್ದಾರೆ. ಭಟ್ಟರ ಕಾರ್ಯ ಉಳಿದ ಶಿಕ್ಷಕರಿಗೆ ಪ್ರೇರಕವಾಗಲಿ.