ಉಪಾಧ್ಯಾಯ ಮೂಡುಬೆಳ್ಳೆ | Feb 03, 2012
ಕಲೆಯು ಜನರ ಬಳಿಗೆ ಹೋಗಬೇಕು - ಆಗ ಕಲೆಯ ಬಳಿಗೆ ಜನರು ಬರುವರು ಎಂದು ಬಲ್ಲವರು ಹೇಳುತ್ತಾರೆ. ಇದನ್ನು ಕಾರ್ಯರೂಪಕ್ಕೆ ತರುವ ಕಲಾ ಕಾರ್ಯಕ್ರಮ ವೊಂದು ಇತ್ತೀಚೆಗೆ ಉಡುಪಿಯಲ್ಲಿ ನಡೆಯಿತು. ಚಿತ್ರಕಲೆ ಎಲ್ಲಾ ಜನರಿಗೂ ತಲುಪಬೇಕು. ನಾಡಿನ ಎಲ್ಲರಿಗೂ ಚಿತ್ರಕಲೆಯ ಪರಿಚಯವಾಗಬೇಕು ಮತ್ತು ಕಲಾಜಾಗೃತಿ ಮೂಡಬೇಕು. ಚಿತ್ರಕಲೆ ಕೇವಲ ಸ್ಪರ್ಧೆಗಳಿಗೆ ಮಾತ್ರ ಸೀಮಿತವಾಗಿರದೆ ಅದನ್ನು ಜೀವನಾಧಾರವಾಗಿಟ್ಟುಕೊಂಡು ಸಂಶೋಧನೆ ಮಾಡುವಂತಾಗಬೇಕು. ಕಲಾವಿದರು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಬೇಕು. ಪೈಂಟಿಂಗ್‌ಗಳನ್ನು ಜನಸಾಮಾನ್ಯರು ಖರೀದಿಸುವಂತಾಗಬೇಕು ಎಂಬಿತ್ಯಾದಿ ಧ್ಯೇಯೋದ್ದೇಶಗಳೊಂದಿಗೆ ಮನೆಮನೆಗೆ ಚಿತ್ರಕಲೆ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಉಡುಪಿಯ ಕಾರ್ಯನಿರತ ಕಲಾವಿದರೆಲ್ಲಾ ಒಟ್ಟು ಸೇರಿ ಒಂದು ದಿನದ ಕಲಾಶಿಬಿರ ನಡೆಸಿ ಹಲವು ಚಿತ್ರಕಲಾಕೃತಿಗಳನ್ನು ರಚಿಸಿ ಕಲಾಭಿಮಾನಿಗಳನ್ನು ಆಕರ್ಷಿಸಿದರು. ಜೊತೆಗೆ ಖ್ಯಾತ ಚಿತ್ರಕಲಾವಿದರಿಂದ ಕಲಾಪ್ರಾತ್ಯಕ್ಷಿಕೆ, ಕಲಾಪ್ರದರ್ಶನ, ಕಿರಿಯ ಕಲಾವಿದರಿಗೆ ಮಾರ್ಗದರ್ಶನ ಮತ್ತು ಚಿತ್ರಕಲಾ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿ ಮನೆಮನೆಗೆ ಚಿತ್ರಕಲೆಯ ಪ್ರಾರಂಭವನ್ನು ಮಾಡಿದರು. ಇನ್ನು ಪ್ರತಿ ತಿಂಗಳ ಭಾನುವಾರದಂದು ವಿವಿಧೆಡೆ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಉಡುಪಿ ಸುಬ್ರಹ್ಮಣ್ಯನಗರದ ಬಬ್ಬು ಸ್ವಾಮಿ ವಠಾರದಲ್ಲಿ ನಡೆದ ಈ ಕಲಾಕಾರ್ಯಕ್ರಮ ವನ್ನು ಮೇಘಾ ಫ್ರೆಂಡ್ಸ್ ಮತ್ತು ವಿಕಾಸ ಸಂಸ್ಥೆ ಯವರು ಪ್ರಾಯೋಜಿಸಿದ್ದರು. ಉಡುಪಿಯ ಸಕ್ರಿಯ ಚಿತ್ರಕಲಾವಿದರಾದ ಡಿ. ಎಲ್.ಆಚಾರ್ಯ, ಪಿ. ಎನ್.ಆಚಾರ್ಯ, ಭಾಸ್ಕರ್ ಎ. ಕೋಟ್ಯಾನ್, ಹಿತೇಶ್ ಭಂಡಾರಿ, ಸತ್ಯ ಶಂಕರ ರಾವ್, ಬಾಲು ಅಂಬಾಗಿಲು, ಅನಿಲ್ ಮಾಬೆನ್ ಮುಂತಾದವರು ಸ್ಥಳದಲ್ಲಿಯೇ ಚಿತ್ರ ರಚಿಸುವ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಹಲವಾರು ಕಲಾಸಕ್ತರು, ವಿದ್ಯಾರ್ಥಿಗಳು ಜಮಾಯಿಸಿ ಚಿತ್ರಕಲೆಯ ಬಗ್ಗೆ ಚಿತ್ರರಚನೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡಕೊಂಡರು. ಹಲವು ವಿದ್ಯಾರ್ಥಿಗಳು ಚಿತ್ರ ರಚಿಸುವ ಮೂಲಕ ಖುಷಿಪಟ್ಟರು, ಅನುಭವ ಗಳಿಸಿದರು. ಅವರ ಹೆತ್ತವರು ಅವರೊಡನೆ ಇದ್ದು ತಮ್ಮ ಮಕ್ಕಳ ಪ್ರತಿಭೆಯನ್ನು ಮನಗಂಡರು. ಹೀಗೆ ಕಾರ್ಯಕ್ರಮ ಕಲಾಮಯವಾಯಿತು.
ಕಲಾವಿದರು ಚಿತ್ರಕಲಾ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಿ ವಿವರಿಸಿದರು. ವಿವಿಧ ಮಾಧ್ಯಮಗಳಲ್ಲಿ ರಚಿಸುವ ಕ್ರಮವನ್ನು ವಿವರಿಸಿದರು. ಸ್ಕೆಚ್ ಹಾಕುವ ರೀತಿ, ಬಣ್ಣ ಕಲಸುವ ವಿಧಾನ, ಬ್ರಶ್ ಹಿಡಿಯುವ ರೀತಿ, ಹಂತಹಂತವಾಗಿ ಬಣ್ಣ ಸವರುವ ಕ್ರಮ, ಪೂರ್ಣಗೊಳಿಸುವ ವಿಧಾನ, ಮೌಂಟ್ ಮತ್ತು ಫ್ರೆàಂ ಹಾಕುವ ಕ್ರಮ ಇತ್ಯಾದಿ ವಿಷಯಗಳನ್ನು ಆಸಕ್ತರಿಗಾಗಿ ವಿವರಿಸಿದರು. ವಿದ್ಯಾರ್ಥಿಗಳಿಂದ ಅಲ್ಲಿಯೇ ಚಿತ್ರಮಾಡಿಸಿದರು. ವಿದ್ಯಾರ್ಥಿಗಳಿಗೆ ಸ್ಪೂ$ರ್ತಿಬರಲು ತಾವೂ ಕಲಾಕೃತಿ ರಚಿಸಿದರು. ಕಲಾವಿದ ಪಿ.ಎನ್.ಆಚಾರ್ಯರು ವರ್ಣ ರಂಜಿತ ಪ್ರಕೃತಿದೃಶ್ಯವನ್ನು ಸೃಜನಾತ್ಮಕ ರೀತಿಯಲ್ಲಿ ಮಾಡಿ ತೋರಿಸಿದರು. ಕಾಡಿನ ಮಧ್ಯೆ ಹರಿಯುತ್ತಿರುವ ತೊರೆಯ ನಿಸರ್ಗರಮ್ಯತೆಯನ್ನು ಭಾಸ್ಕರ ಕೋಟ್ಯಾನ್ ರೂಪಿಸಿದರು. ಹಿಮದ ತಪ್ಪಲ ನೀಲಮಯ ಪ್ರಕೃತಿಯನ್ನು ಹಿತೇಶ್ ಭಂಡಾರಿ ಚಿತ್ರಿಸಿದರು. ಪ್ರಳಯದ ಭೀಕರತೆಗೆ ಹೆದರಿ ಓಡುತ್ತಿರುವ ಜನರನ್ನು ಅನಿಲ್ ಮಾಬೆನ್ ಮನೋಜ್ಞವಾಗಿ ರೂಪಿಸಿದರು. ನೀರೆಯರು, ಗೋವಳರು, ಕೃಷ್ಣ ಬೆಣ್ಣೆ ಕದಿಯುವ ದೃಶ್ಯವನ್ನು ಸತ್ಯಶಂಕರ ರಾವ್ ಅಮೂರ್ತತೆಯ ಸ್ಪರ್ಶದೊಂದಿಗೆ ಚಿತ್ರಿಸಿದರು. ನವಿಲುಗರಿಯನ್ನು ಹಿಡಿದು ಕೊಂಡು ತನ್ನ ಪ್ರೇಮಜೀವನದ ಗತಕಾಲವನ್ನು ನೆನಪಿಸುತ್ತಿರುವ ರಾಧೆಯನ್ನು ಡಿ.ಎಲ್.ಆಚಾರ್ಯರು ರಮಣೀಯವಾಗಿ ರೂಪಿಸಿ ದರು. ಮಣ್ಣಿನೊಂದಿಗೆ ಆಟವಾಡುತ್ತಾ ಮಕ್ಕಳೊಂದಿಗೆ ಬೆರೆಯುತ್ತಾ ವಿವಿಧ ಕ್ಲೇ ಮಾಡೆಲಿಂಗ್‌ಗಳನ್ನು ಬಾಲು ಅಂಬಾಗಿಲು ರಚಿಸಿದರು. ಮಕ್ಕಳೂ ವಿವಿಧ
ಸೃಜನಶೀಲ ಮಾದರಿಗಳನ್ನು ರೂಪಿಸಿ ಖುಷಿಪಟ್ಟರು.
ಕಲಾವಿದರ ವಿವಿಧ ಮಾಧ್ಯಮದ ಚಿತ್ರಕಲಾಕೃತಿಗಳು ಅಲ್ಲಿ ಪ್ರದರ್ಶನ ಗೊಂಡಿದ್ದವು. ನಿಸರ್ಗದೃಶ್ಯಗಳು, ಭರತನಾಟ್ಯ - ಕಥಕ್ಕಳಿ - ಯಕ್ಷಗಾನ ಚಿತ್ರಗಳು, ಮತ್ತು ಪೌರಾಣಿಕ ಕಥಾನಕದೃಶ್ಯಗಳು ಆಕರ್ಷಕವಾಗಿದ್ದವು. ಒಂದಕ್ಕಿಂತ ಒಂದು ವೈಶಿಷ್ಟ್ಯಪೂರ್ಣವಾಗಿದ್ದವು. ಕಲಾಶಿಬಿರಕ್ಕೆ ಮೆರುಗನ್ನಿತ್ತವು. ಒಟ್ಟಿನಲ್ಲಿ ಮನೆಮನೆಗೆ ಚಿತ್ರಕಲೆಯ ಪ್ರಾರಂಭೋತ್ಸವ ಕಲಾತ್ಮಕವಾಗಿ ನಡೆದಿದೆ. ಜನಸಾಮಾನ್ಯರಲ್ಲಿ ಕಲೆಯ ಬಗ್ಗೆ ಅರಿವು ಮೂಡಿಸಿದೆ. ಇದು ನಿರಂತರವಾಗಲಿ. ವೈಶಿಷ್ಟ್ಯತೆಯೊಂದಿಗೆ ಮುಂದುವರಿಯಲಿ ಎಂದು ಹಾರೈಸೋಣ.