Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರಯೋಗಗಳಿಗೆ ಒಡ್ಡಿಕೊಂಡ ಯಶಸ್ವಿ ಸಂಗೀತೋತ್ಸವ
    • ರಾಗ ಸುಧಾರಸ ಸರಣಿ ಸಂಗೀತ ಕಾರ್ಯಕ್ರಮವು

      • ಪಿ. ಬಾಲಕೃಷ್ಣ ಸರಳಾಯ | Feb 03, 2012

        ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ವಿದ್ಯಾಭವನ  ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿಗಳ ಆಶ್ರಯದಲ್ಲಿ ಜ.8ರಿಂದ ಜ.11ರ ತನಕ ನಡೆದ ರಾಗ ಸುಧಾರಸ ಸರಣಿ ಸಂಗೀತ ಕಾರ್ಯಕ್ರಮವು ಹಲವಾರು ಕಾರಣಗಳಿಂದ ಯಶಸ್ವೀ ಸಂಗೀತೋತ್ಸವ ಎನಿಸಿಕೊಂಡಿತು.

        ಈ ಸಂಗೀತೋತ್ಸವವು ಜ.8ರಂದು ಮಾ| ನಾಗಕಿರಣ್‌ ನಾಯಕ್‌ ಇವರ ಹಿಂದೂಸ್ಥಾನಿ ಹಾಡುಗಾರಿಕೆಯಿಂದ ಪ್ರಾರಂಭಗೊಂಡು ಬಳಿಕ ರಾಜ್‌ಕೋಟ್‌ನ ಪಿಯು ಸರ್ಕೇಲ್‌ ಇವರ ಹಿಂದೂಸ್ಥಾನಿ ಗಾಯನದೊಂದಿಗೆ ಕಾರ್ಯಕ್ರಮ ಮುಂದುವರಿಯಿತು.

        ಮಧ್ಯಾಹ್ನ ನಡೆದ ಕರ್ನಾಟಕ ಜುಗಲ್‌ಬಂದಿ ಜಿಲ್ಲೆಯಲ್ಲೇ ನಡೆದ ಪ್ರಪ್ರಥಮ ಪ್ರಯೋಗ. ಪಟ್ಟಾಭಿರಾಮ ಪಂಡಿತ್‌ ಹಾಗೂ ಜಿ. ರವಿಕಿರಣ್‌ ಈರ್ವರೂ ಹೆಸರು ಮಾಡುತ್ತಿರುವ ಯುವ ಕಲಾವಿದರು, ಆದರೆ ಭಿನ್ನ ಶೈಲಿಗಳನ್ನು ರೂಢಿಸಿಕೊಂಡವರು. ಇದನ್ನು ಪಂಥವಾಗಿ ಸ್ವೀಕರಿಸಿದ ಈರ್ವರೂ ನೀಡಿದ ಪ್ರದರ್ಶನ ಶ್ರೋತೃಗಳಿಗೆ ವಿಶೇಷ ಅನುಭವವನ್ನು ನೀಡಿತು. ಶಂಕರಾಭರಣವನ್ನು ವಿಸ್ತಾರ ವಾಗಿ ತೆಗೆದುಕೊಂಡು ಈರ್ವರೂ ಹಂತ ಹಂತವಾಗಿ ನೀಡಿದ ಆಲಾಪನೆ ಹಾಗೂ ತಾನಂಗಳು ಆತ್ಮೀಯತೆಯ ಸ್ಪರ್ಧಾ ಮನೋಭಾವ ಅಂತರಂಗದಲ್ಲಿ ಹುದುಗಿರುವ ಅಮೂಲ್ಯ ರತ್ನರಾಶಿ ಯನ್ನು ಹೀಗೆ ಹೊರಚೆಲ್ಲ ಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿತ್ತು.

        ಅಚ್ಚುಕಟ್ಟಾಗಿ ನಡೆದ ಯುವಕಲಾ ಮಣಿ - 2012 ಪ್ರಶಸ್ತಿ ಪ್ರದಾನ ಸಮಾರಂಭದ ಅತಿಥಿಗಳು ಹದವರಿತು ಆಡಿದ ಮಾತು ಸಮಾರಂಭದ ಗೌರವ ವನ್ನು ಹೆಚ್ಚಿಸುವಂತಿತ್ತು. ಪ್ರಶಸ್ತಿ ಪಡೆದ ಬಳಿಕ "ಬಾಲ್ಯದಲ್ಲಿ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದ ನನ್ನನ್ನು ಈ ಮಟ್ಟಕ್ಕೆ ತರುವಲ್ಲಿ ನನ್ನ ಹೆತ್ತವರು ಪಟ್ಟ ಶ್ರಮದ ಅರಿವು ಈಗ ನನಗಾಗುತ್ತಿದೆ' ಎಂಬ ಪ್ರಾರ್ಥನಾ ಸಾಯಿ ನರಸಿಂಹನ್‌ ಅವರ ಮಾತು ಸಂಗೀತಾಭ್ಯಾಸಿ ಮಕ್ಕಳ ಹೆತ್ತವರಿಗೆ ಮುದ ನೀಡುವಂತೆ ಇತ್ತು.  ಎಲ್ಲರ ಬಹು ನಿರೀಕ್ಷೆಯ ಮೈಸೂರು ನಾಗರಾಜ ಹಾಗೂ ಪಂ| ಪ್ರವೀಣ್‌ ಗೋಡಿಡಿ ಜುಗಲ್‌ ಬಂದಿ ಕೇಳುಗರಿಗೆ ರಸದೌತಣವಾಯ್ತು.

        ಮರುದಿನ ನಡೆದ ನಾದಸ್ವರ - ಸಿತಾರ್‌ ಕಾರ್ಯಕ್ರಮ ಒಂದು ನೂತನ ಪ್ರಯೋಗ. ಎಲ್ಲಾ ದೃಷ್ಟಿ ಯಿಂದಲೂ ಭಿನ್ನ ವಾದ್ಯಗಳು ಇತ್ತೀಚಿಗಿನ ದಿನಗಳಲ್ಲಿ ವೇದಿಕೆಯಿಂದ ಮಾತ್ರವಲ್ಲ ಸಮಾಜದಿಂದಲೇ ಕಣ್ಮರೆಯಾಗುತ್ತಿರುವ ನಾದಸ್ವರ ವಾದ್ಯದ ನಿಜವಾದ ಸಾಮಾರ್ಥ್ಯವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಸಂಘಟಕರ ದೃಷ್ಟಿಯಿಂದ ಅತ್ಯಂತ ಯಶಸ್ವಿಯೇ ಸರಿ. ಘಟಾನುಘಟಿ ತಾಳವಾದ್ಯ ಕಲಾವಿದರಾದ ಅನೂರು ಅನಂತಕೃಷ್ಣ ಶರ್ಮ, ಡಿ. ಕೆ. ಸುರೇಶ್‌, ಡಾ|  ಕಾರ್ತಿಕ್‌ ಹಾಗೂ ವಿಶ್ವನಾಥ್‌ ನಾಕೋಡ್‌ ಸೇರಿಕೊಂಡು ನೀಡಿದ ಸುದೀರ್ಘ‌ ತನಿ ಆವರ್ತನದ ಬಳಿಕ ಶ್ರೋತೃಗಳಲ್ಲಿ ಮೂಡಿಬಂದ ಕೃತಜ್ಞತಾ ಭಾವ, ಪ್ರದರ್ಶನದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಮೂರನೇ ದಿನ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮ. ಭಕ್ತಿ ಸಂಗೀತ ಅಥವಾ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಾವುದಕ್ಕಾದರೂ ತನ್ನದೇ ಆದ ಶ್ರೋತೃವರ್ಗವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವುದು ವಿದ್ಯಾಭೂಷಣರ ಹೆಗ್ಗಳಿಕೆ, ಸ್ಪಷ್ಟ ಉಚ್ಚಾರ ಹಾಗೂ ಮಧುರ ನಾದ ಇವರ ಬತ್ತಳಿಕೆಯ ಪ್ರಮುಖ ಅಸ್ತ್ರಗಳು.

        ಕೊನೆಯ ದಿನ ನಡೆದುದು ಅತ್ಯಂತ ಸಾಂಪ್ರದಾಯಿಕ ಕರ್ನಾಟಕ ಸಂಗೀತ ಕಛೇರಿ. ಕೇರಳದ ಅಶ್ವತಿ ವಿನು ಇವರ ಹಾಡುಗಾರಿಕೆ. ನಾಲ್ಕು ದಿನಗಳೂ ಸಂಖ್ಯೆ ಹಾಗೂ ಗುಣಮಟ್ಟದ ದೃಷ್ಟಿ ಯಿಂದ ಸೇರಿದ ಉತ್ತಮ ಶ್ರೋತೃ ವರ್ಗ, ಕಛೇರಿಯನ್ನು ಅತ್ಯುತ್ತಮ ಮಟ್ಟಕ್ಕೆ ನಿಲ್ಲಿಸಬೇಕೆಂಬ ಕಲಾವಿದರ ಉತ್ಸಾಹ, ಕಾರ್ಯಕರ್ತರ ಕಾರ್ಯತತ್ಪರತೆ ಎಲ್ಲಕ್ಕಿಂತಲೂ ಹೆಚ್ಚಾಗಿ ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಇತರ ಪ್ರಾಯೋಜಕರ ಹಾಗೂ ದಾನಿಗಳ ಉದಾರ ಆರ್ಥಿಕ ದೇಣಿಗೆ ರಾಗ ಸುಧಾರಸದ ಯಶಸ್ವಿಗೆ ಮುಖ್ಯ ಕಾರಣವಾದ ಅಂಶಗಳು.    

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus