"ಆರಕ್ಷಕ' ಚಿತ್ರ ಈ ವಾರ ತೆರೆಕಾಣುತ್ತಿದೆ. ಒಂದು ಕಡೆ ಉಪೇಂದ್ರ ಇನ್ನೊಂದು ಕಡೆ ಪಿ.ವಾಸು. ಇಬ್ಬರೂ ಏನಾದರೊಂದು ವಿಭಿನ್ನತೆಗೆ ತುಡಿಯುವವರು. ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲವಿದೆ. "ಆಪ್ತಮಿತ್ರ', "ಆಪ್ತರಕ್ಷಕ' ಎರಡರಲ್ಲೂ ಭಿನ್ನತೆ ಮೆರೆದ ನಿರ್ದೇಶಕ ಪಿ. ವಾಸು "ಆರಕ್ಷಕ'ದಲ್ಲಿ ಏನು ಮಾಡಿದ್ದಾರೆಂಬ ಕುತೂಹಲ ಪ್ರೇಕ್ಷಕರಿಗಿದೆ. ಸಹಜವಾದ ಕುತೂಹಲ ನಟ ಉಪೇಂದ್ರ ಅವರಿಗೂ ಇತ್ತಂತೆ. ಪಿ.ವಾಸು ಅವರು ತುಂಬಾ ಚೆನ್ನಾಗಿ ಕಥೆ ಹೇಳಿದ್ದರಂತೆ. ಆದರೂ ಉಪ್ಪಿಗೆ ಶೂಟಿಂಗ್ ಸ್ಪಾಟ್‌ನಲ್ಲಿ ತುಂಬಾ ಡೌಟ್ ಬರುತ್ತಿತ್ತಂತೆ. ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿರಲಿಲ್ಲವಂತೆ. ಆದರೆ, ಮೊನ್ನೆ ಸಿನಿಮಾ ನೋಡಿದಾಗ ಮಾತ್ರ ಉಪ್ಪಿ ಫುಲ್ ಖುಷಿಯಾಗಿದ್ದಾರೆ. ಪಿ.ವಾಸು ಅವರ ಸಾಮರ್ಥ್ಯ ಏನು ಎಂಬುದು ಗೊತ್ತಾಗಿದೆ. ಅದೇ ಕಾರಣಕ್ಕೆ ಪಿ.ವಾಸು ಅವರ ಸಾಮರ್ಥ್ಯವನ್ನು ಕೊಂಡಾಡಿದರು ಉಪ್ಪಿ. "ಈ ಚಿತ್ರದಲ್ಲಿ ನಾನೇನಾದರೂ ಚೆನ್ನಾಗಿ ನಟಿಸಿದ್ದೇನೆ ಎಂದಾದರೆ ಅದರ ಕ್ರೆಡಿಟ್ ಪಿ.ವಾಸು ಅವರಿಗೆ ಸಲ್ಲುತ್ತದೆ. ಅವರ ಅನೇಕ ಚಿತ್ರಗಳನ್ನು ನೋಡಿದ್ದೆ. ಆದರೆ, ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ "ಆರಕ್ಷಕ' ನೋಡಿದಾಗ ಅವರೆಂಥ ನಿರ್ದೇಶಕ ಎಂಬುದು ಮನದಟ್ಟಾಯಿತು. ತುಂಬಾ ವಿಭಿನ್ನವಾದ ಸ್ಕ್ರಿಪ್ಟ್. ಇಂತಹ ಸ್ಕ್ರಿಪ್ಟ್ ಸುಲಭದಲ್ಲಿ ಸಿಗುವುದಿಲ್ಲ. ಆದರೆ ನನ್ನ ಅದೃಷ್ಟ ಸಿಕ್ಕಿದೆ. ಅದೇ ಧೈರ್ಯದಿಂದ ಇಷ್ಟು ವರ್ಷ ಬೆಳೆಸಿಕೊಂಡು ಬಂದಿದ್ದ ಕೂದಲು, ಗಡ್ಡವನ್ನು ಕಟ್ ಮಾಡಿ "ಹೇಗೇ ಬೇಕೋ ಹಾಗೆ ನನ್ನನ್ನು ಬಳಸಿಕೊಳ್ಳಿ' ಎಂದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿಬಂದಿದೆ' ಎಂದರು ಉಪ್ಪಿ.ಇದೇ ಮಾತಿಗೆ ಪೂರಕವಾಗಿ ಮಾತಿಗಿಳಿದ ಸಂಗೀತ ನಿರ್ದೇಶಕ ಗುರುಕಿರಣ್, "ನೀವು ಈ ಹಿಂದೆ ನೋಡಿದ ಉಪ್ಪಿಗೂ ಈ ಚಿತ್ರದಲ್ಲಿ ನೋಡುವ ಉಪ್ಪಿಗೂ ತುಂಬಾ ವತ್ಯಾಸವಿದೆ. ನನ್ನ ಪ್ರಕಾರ, ಉಪ್ಪಿ ಕೆರಿಯರ್‌ನಲ್ಲೇ ಇದೊಂದು ಭಿನ್ನ ಸಿನಿಮಾವಾಗಲಿದೆ. ಇನ್ನು ಡೌನ್‌ಲೋಡ್‌ನಲ್ಲಿ ಅಣ್ಣಾ ಹಜಾರೆ ಸಾಂಗ್ ನಂಬರ್ ವನ್‌ನಲ್ಲಿದೆ' ಎಂದರು. ನಾಯಕಿ ರಾಗಿಣಿಗೆ ಉಪ್ಪಿ ಜೊತೆ ನಟಿಸಿದ ಖುಷಿ. "ಈ ಚಿತ್ರದಲ್ಲಿ ನನಗೆ ತುಂಬಾ ಒಳ್ಳೆಯ ಪಾತ್ರವಿದೆ. ಅಷ್ಟೇ ಸೊಗಸಾದ ಹಾಡುಗಳಿವೆ. "ಆರಕ್ಷಕ' ಒಂದು ವಿಭಿನ್ನವಾದ ಚಿತ್ರವಾಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಉಪ್ಪಿ ಸರ್ ಸೂಪರ್‌ಸ್ಟಾರ್ ಆದರೂ ಯಾವುದೇ ಅಹಂ ಇಲ್ಲ' ಎನ್ನುತ್ತಾ ಮೈಕ್ ಇಟ್ಟರು ರಾಗಿಣಿ. ಅಂದಹಾಗೆ, ಚಿತ್ರದಲ್ಲಿ ಆದಿ ಲೋಕೇಶ್‌ಗೆ ಪ್ರಮುಖ ಪಾತ್ರವಿದೆಯಂತೆ. ತುಂಬಾ ಡಿಫರೆಂಟ್ ಆದ ಪಾತ್ರವಂತೆ. ಉಪೇಂದ್ರ ಹೇಳುವಂತೆ, "ಇಡೀ ಆರಕ್ಷಕ ಎಂಬ ಚಿತ್ರಕ್ಕೆ ಬೀಗ ಹಾಕಿದರೆ ಅದರ ಕೀ ಆದಿ ಲೋಕೇಶ್'.ನಿರ್ಮಾಪಕ ಕೃಷ್ಣ ಪ್ರಜ್ವಲ್‌ಗೆ ಸಿನಿಮಾ ನೋಡಿ ಖುಷಿಯಾಗಿದೆ. "ನಾನು ತುಂಬಾ ಇಷ್ಟಪಟ್ಟು ಸಿನಿಮಾ ಮಾಡುವವ. ಆರಕ್ಷಕನೂ ಅಷ್ಟೇ ತುಂಬಾ ಖುಷಿಯಿಂದ ಮಾಡಿದ್ದೇನೆ. ಅದಕ್ಕೆ ಸರಿಯಾಗಿ ಚಿತ್ರ ಮೂಡಿಬಂದಿದೆ' ಎಂದರು.