ದಶಕದ ಹಿಂದೆ ಬಾಬೂಜಿ ಜರಾ ಧೀರೆ ಚಲೋ ಬಿಜಲಿ ಖಡೀ ಹೈ ಬಿಜಲಿ ಖಡೀ... ಎನ್ನುವ ಐಟಂ ಹಾಡಿಗೆ ಸೊಂಟ ಕುಲುಕಿಸಿ ಕುಣಿದು ಸಿನೆಮಾ ಪ್ರಿಯರ ಮೈಯಲ್ಲಿ ವಿದ್ಯುತ್ ಹರಿಸಿದ್ದ ಯಾನಾ ಗುಪ್ತ ಈಗ ಸಂತುಲಿತ ಜೀವನ ನಡೆಸುವುದು ಮತ್ತು ಪ್ರೀತಿಸುವುದು ಹೇಗೆಂದು ಪಾಠ ಹೇಳಲು ಬರುತ್ತಿದ್ದಾಳೆ. ತನ್ನದೇ ಜೀವನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಯಾನಾ ಬದುಕು ಮತ್ತು ಪ್ರೀತಿಯ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದಾಳೆ. ಯಾನಾಳಿಗೆ ಲೇಖಕಿಯಾಗಲು ಪ್ರೇರಣೆಯಾಗಿರುವುದು ಅವಳದ್ದೇ ಬದುಕು. ಅನುಭವದಿಂದ ಮಾತ್ರ ಸತ್ವಯುತವಾದ ಸಾಹಿತ್ಯ ಹುಟ್ಟುತ್ತದೆ ಎನ್ನುವ ಸಾಹಿತಿಗಳ ಮಾತನ್ನು ನಂಬುವುದಾದರೆ ಯಾನಾಳ ಪುಸ್ತಕವನ್ನು ಕೂಡ ಗಟ್ಟಿ ಸಾಹಿತ್ಯದ ಸಾಲಿಗೆ ಸೇರಿಸಿಕೊಳ್ಳಬಹುದು.ಬಳ್ಳಿಯಂತೆ ಬಳುಕುವ ದೇಹ ಹೊಂದಲು ಯಾನಾ ಡಯಟಿಂಗ್ ಮಾಡುತ್ತಿದ್ದಳು. ಎಲ್ಲೊ ಮಾಡೆಲಿಂಗ್ ಮತ್ತು ಕ್ಯಾಟ್‌ವಾಕ್ ಮಾಡಿಕೊಂಡು ಸುಖವಾಗಿದ್ದ ಯಾನಾಳಿಗೆ ಬಾಲಿವುಡ್ ಪ್ರವೇಶಿಸಿದ್ದೇ ತಡ ತೆಳು ಕಾಯ ಹೊಂದುವ ಹುಚ್ಚು ಅಂಟಿಕೊಂಡಿತು. ಹಾಗೇ ನೋಡಿದರೆ ಕರೀನಾಳಿಗಿಂತಲೂ ಮೊದಲು ಯಾನಾ ಸೈಜ್ ಜೀರೊ ಪರಿಕಲ್ಪನೆಯನ್ನು ಹುಡುಗಿಯರ ಮನಸ್ಸಿನಲ್ಲಿ ಬಿತ್ತಿದ್ದಳು. ಆದರೆ, ಈ ಪ್ರಯತ್ನದಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಡಯಟಿಂಗ್‌ನಿಂದಾಗಿ ಆಹಾರ ಏರುಪೇರಾಗಿ ಯಾನಾ ಇನ್ನಿಲ್ಲದ ಪಾಡು ಅನುಭವಿಸಬೇಕಾಯಿತು. ಕೊನೆಗೊಮ್ಮೆ ತನ್ನ ಮಾನಸಿಕ ಸ್ಥಿತಿಯನ್ನು ಸ್ಥಿಮಿತಕ್ಕೆ ತರಲು ಅವಳು ಬೌದ್ಧ ಸ್ತೂಪವನ್ನು ಸೇರಿಕೊಂಡಳು. ಅಲ್ಲಿನ ಶಾಂತ ಪರಿಸರ ಮತ್ತು ಬೌದ್ಧ ಭಿಕ್ಷುಗಳ ಒಡನಾಟದಿಂದ ದೇಹ ಮತ್ತು ಮನಸ್ಸು ಸರಿಯಾದ ಬಳಿಕ ಯಾನಾ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದಾಳೆ. ಹೀಗೆ, ಡಯಟಿಂಗ್‌ನಿಂದಾಗಿ ತಾನು ಅನುಭವಿಸಿದ ಸಂಕಷ್ಟವನ್ನು ಯಾನಾ ದೇಹವನ್ನು ಪ್ರೀತಿಸುತ್ತ ಆರೋಗ್ಯವಾಗಿ ಬದುಕುವುದು ಹೇಗೆ ಎನ್ನುವ ಮಾಹಿತಿಗಳೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾಳೆ. ""ಈ ಪುಸ್ತಕ ನನ್ನ ಅನುಭವ ಕಥನ. ಡಯಟಿಂಗ್ ಮಾಡುವ ಯುವತಿಯರಿಗೆ ನೆರವಾಗುವಂತಹ ಅನೇಕ ಸಲಹೆಗಳು ಇದರಲ್ಲಿವೆ. ಅನುಭವಗಳನ್ನು ಜನರ ಜತೆಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಇದು' ಎಂದು ಯಾನಾ ಬರೆದುಕೊಂಡಿದ್ದಾಳೆ.