Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸುಪ್ರೀಂ ತೀರ್ಪು: ಟೆಲಿಕಾಂ ಕ್ಷೇತ್ರಕ್ಕೂ ಏಟು
    • ಯುಪಿಎ ಪಲಾಯನವಾದ
      • Udayavani | Feb 02, 2012

        2ಜಿ ಲೈಸನ್ಸ್‌ ಹಂಚುವಾಗ ಎನ್‌ಡಿಎ ಸರ್ಕಾರ ರೂಪಿಸಿದ್ದ ನಿಯಮವನ್ನು ನಮ್ಮ ಸರ್ಕಾರ ಪಾಲಿಸಿತು ಎಂದು ಯುಪಿಎ ಹೇಳಿಕೊಳ್ಳುತ್ತಿದೆ. ಯಾರು ಮೊದಲು ಬಂದರೂ ಅವರಿಗೆ ಪರ ವಾನಗಿ ಕೊಡಿ ಎಂದು ಎನ್‌ಡಿಎ ಹೇಳಿರಲಿಲ್ಲ. ರಾಜಾ ಮಾಡಿದ್ದು ತಪ್ಪು ಎಂದು ಈಗಲಾದರೂ ಒಪ್ಪಿಕೊಳ್ಳಬೇಕು.

        ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆಯಲ್ಲಿ ನಡೆದ ಲಕ್ಷಾಂತರ ಕೋಟಿ ರೂ. ಅವ್ಯವಹಾರದಿಂದ ಮೈಗೆ ಎಣ್ಣೆ ಹಚ್ಚಿಕೊಂಡಂತೆ ಜಾರಿಕೊಳ್ಳುತ್ತಿದ್ದ ಯುಪಿಎ ಸರ್ಕಾರಕ್ಕೆ ಗುರುವಾರ ಹೊರಬಿದ್ದ ಸುಪ್ರೀಂಕೋರ್ಟ್‌ ತೀರ್ಪು ಮರ್ಮಾಘಾತ ನೀಡಿರುವುದು ನಿರೀಕ್ಷಿತವೇ. ಮಾಜಿ ಸಚಿವ ಎ.ರಾಜಾ ಹಂಚಿಕೆ ಮಾಡಿದ್ದ 122 2ಜಿ ಲೈಸನ್ಸ್‌ಗಳು ರದ್ದುಗೊಂಡಿರುವುದು ಸಣ್ಣ ವಿಷಯವಲ್ಲ. ದೂರಸಂಪರ್ಕ ಕ್ಷೇತ್ರ, ವಿದೇಶಿ ಹೂಡಿಕೆ, ದೇಶದ ಆರ್ಥಿಕತೆ, ಕೋಟ್ಯಂತರ ಜನಸಾಮಾನ್ಯರ ಮೊಬೈಲ್‌ ಸಂಪರ್ಕ, ಭವಿಷ್ಯದಲ್ಲಿ ಟೆಲಿಕಾಂ ಕಂಪನಿಗಳ ಕಾರ್ಯನಿರ್ವಹಣೆ ಹೀಗೆ ಹಲವಾರು ವಿಷಯಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ.

        ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ತಾತ್ಕಾಲಿಕವಾಗಿ ಪಾರಾದವರು ಗೃಹ ಸಚಿವ ಪಿ.ಚಿದಂಬರಂ. ಲೈಸನ್ಸ್‌ ಹಂಚಿಕೆಯಲ್ಲಿ ರಾಜಾ ಅಕ್ರಮ ಎಸಗುತ್ತಿದ್ದಾಗ ನೋಡಿಕೊಂಡು ಸುಮ್ಮನೆ ಕುಳಿತಿದ್ದರು ಎಂಬ ಆರೋಪದ ಮೇಲೆ ಅವರನ್ನೂ ತನಿಖೆಗೆ ಒಳಪಡಿಸಬೇಕೆಂದು ಈ ಹಗರಣ ಬಯಲಿಗೆಳೆದಿದ್ದ ಡಾ| ಸುಬ್ರಮಣಿಯನ್‌ ಸ್ವಾಮಿ ಮನವಿ ಮಾಡಿದ್ದರು. ಆ ಬಗ್ಗೆ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ವಿಚಾರಣಾ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವೆಂದರೆ ನ್ಯಾ| ಒ.ಪಿ.ಸೈನಿಯವರ ಸಿಬಿಐ ವಿಶೇಷ ನ್ಯಾಯಾಲಯ.

        2ಜಿ ತರಂಗಾಂತರ ಪರವಾನಗಿ ಹಂಚಿಕೆ ಮುಗಿದು, 3ಜಿಯೂ ಮುಗಿದು ಈಗ 4ಜಿ ಪರವಾನಗಿ ನೀಡುವ ಸಿದ್ಧತೆ ನಡೆಯುತ್ತಿರುವಾಗ ಮತ್ತೆ ಪೀಛೇ ಮೂಡ್‌ ಮಾಡಿ 2ಜಿ ಹಂಚಿಕೆ ರದ್ದುಪಡಿಸಿ ಮತ್ತೂಮ್ಮೆ ಹರಾಜು ಹಾಕಿ ಎಂದು ನ್ಯಾಯಾಲಯ ಹೇಳಿರುವುದು ಕೊಂಚ ವಿಚಿತ್ರವೆನ್ನಿಸಿದರೂ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ತರಲು ಇಂತಹ ಕ್ರಮಗಳು ಅಗತ್ಯ. ಇದು ಆಳುವ ಸರ್ಕಾರಕ್ಕೂ, ಅದರಲ್ಲಿರುವ ಭ್ರಷ್ಟರಿಂದ ದುರ್ಲಾಭ ಪಡೆದುಕೊಳ್ಳುವ ಖಾಸಗಿ ಕಂಪನಿಗಳಿಗೂ ನಿರ್ದಾಕ್ಷಿಣ್ಯ ಪಾಠ.

        ರಾಜಾ ಅಕ್ರಮ ಎಸಗಿರುವುದನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದ್ದರೂ, ರಾಜಾ ಯುಪಿಎ ಸರ್ಕಾರದಲ್ಲಿ ಕ್ಯಾಬಿನೆಟ್‌ ದರ್ಜೆಯ ಟೆಲಿಕಾಂ ಮಂತ್ರಿಯಾಗಿದ್ದರೂ, ಲೈಸನ್ಸ್‌ ಹಂಚುವಾಗ ಸಹಜವಾಗಿಯೇ ಪ್ರಧಾನಿ ಕಾರ್ಯಾಲಯ, ವಿತ್ತ ಸಚಿವಾಲಯ ಮತ್ತು ಅಧಿಕಾರಶಾಹಿಗಳ ನೆರವಿನಿಂದ ಕೆಲಸ ಮಾಡಿದ್ದರೂ ತೀರ್ಪು ಪ್ರಕಟವಾದ ನಂತರ ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಪತ್ರಿಕಾಗೋಷ್ಠಿ ನಡೆಸಿ "ನಮ್ಮದೇನೂ ತಪ್ಪಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನಿಂದ ಎನ್‌ಡಿಎ ಸರ್ಕಾರ ಮತ್ತು ಟ್ರಾಯ್‌ ಮಾಡಿದ್ದು ತಪ್ಪು ಎಂಬುದು ನಿರ್ಧಾರವಾಗಿದೆ' ಎಂದಿದ್ದು ತೀರಾ ನಗೆಪಾಟಲಿನ ಸಮರ್ಥನೆ. ನಿಜ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮವನ್ನು ಎನ್‌ಡಿಎ ಸರ್ಕಾರವೇ ರೂಪಿಸಿತ್ತು. ಆದರೆ, ಮೊದಲು ಬಂದವರು ಯಾರೇ ಆಗಿದ್ದರೂ ಅವರಿಗೆ ಲೈಸನ್ಸ್‌ ಕೊಡಿ ಎಂದು ಹೇಳಿರಲಿಲ್ಲ. ಇಲ್ಲಿ ಒಬ್ಬ ಮಂತ್ರಿಯಾಗಿ ರಾಜಾ ತಪ್ಪು ಮಾಡಿದ್ದಾರೆ. ಅಂದರೆ ಸರ್ಕಾರ ತಪ್ಪು ಮಾಡಿದಂತೆ. ಸಿಬಲ್‌ ಒಪ್ಪಿಕೊಳ್ಳದಿದ್ದರೂ ಅದು ತಪ್ಪೇ. ಟ್ರಾಯ್‌ ಮಾಡಿದ ಶಿಫಾರಸುಗಳನ್ನು ರಾಜಾ ಅನುಸರಿಸಿದರು ಅಷ್ಟೆ ಎಂಬ ಮತ್ತೂಂದು ಅಡ್ಡಾದಿಡ್ಡಿ ವಾದವನ್ನೂ ಸಿಬಲ್‌ ಮುಂದಿಟ್ಟಿದ್ದಾರೆ. ಟ್ರಾಯ್‌ ಹೇಳಿದ್ದನ್ನೆಲ್ಲ ದೂರಸಂಪರ್ಕ ಸಚಿವಾಲಯ ಕೇಳಬೇಕು ಎಂಬ ಯಾವ ನಿಯಮವೂ ಇಲ್ಲ.

        ಇನ್ನು ನಾಲ್ಕು ತಿಂಗಳು ಯಾವುದೇ ಲೈಸನ್ಸ್‌ ರದ್ದಾಗುವುದಿಲ್ಲವಾದರೂ ಅಷ್ಟರಲ್ಲಿ ಹೊಸ ಲೈಸನ್ಸ್‌ ಹಂಚಿಕೆಯಾಗಬೇಕು. ಸಹಜವಾಗಿಯೇ ಟೆಲಿಕಾಂ ಕಂಪನಿಗಳು ಈ ಹಿಂದಿಗಿಂತ ಹೆಚ್ಚಿನ ಬೆಲೆ ತೆರಬೇಕು. ಅಂದರೆ ಮೊಬೈಲ್‌ ಕರೆ ದರಗಳು ದುಬಾರಿಯಾಗುತ್ತವೆಯಾ? ಸದ್ಯ ಜನರ ಮುಂದಿರುವ  ಆತಂಕವದು. ಇದರ ಜೊತೆಗೆ, ಸರ್ಕಾರ ಹೇಳಿದಂತೆ ಕೇಳಿ ಲೈಸನ್ಸ್‌ ಪಡೆದಿದ್ದ ಕೆಲ ವಿದೇಶಿ ಕಂಪನಿಗಳು ರಾಜಾ ಮಾಡಿದ ತಪ್ಪಿನಿಂದಾಗಿ ಅದನ್ನು ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತಿವೆ. ಇನ್ನು ಮುಂದೆ ಭಾರತದ ಮಾರುಕಟ್ಟೆಗೆ ಕಾಲಿಡುವಾಗ ಅವು ಹತ್ತು ಸಲ ಯೋಚಿಸುತ್ತವೆ. ನಮ್ಮ ದೇಶದ ಬಗ್ಗೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಈ ಪ್ರಕರಣ ಕೆಟ್ಟ ಸಂದೇಶ ರವಾನಿಸಿದಂತಾಗಿದೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಇದು ಒಳ್ಳೆಯ ಶಕುನವಲ್ಲ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus